ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ 22 ನೇ ಅವಧಿಗೆ ಮಹಾಪೌರರಾಗಿ ವೀಣಾ ಚೇತನ ಬರದ್ವಾಡ ಹಾಗೂ ಉಪಮಹಾಪೌರರಾಗಿ ಸತೀಶ ಸುರೇಂದ್ರ ಹಾನಗಲ್ ಆಯ್ಕೆ ಆಗಿದ್ದಾರೆ: ಫಲಿತಾಂಶ ಘೋಷಿಸಿದ ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ
ಧಾರವಾಡ .20; ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ 22 ನೆ ಅವಧಿಗೆ ಮಹಾಪೌರರಾಗಿ 49 ನೇ ವಾರ್ಡ್ ಸದಸ್ಯೆ ವೀಣಾ ಚೇತನ ಬರದ್ವಾಡ ಅವರು ಅತಿ ಹೆಚ್ಚು (46) ಮತಗಳನ್ನು ಪಡೆದು ಆಯ್ಕೆ ಆಗಿದ್ದಾರೆ ಮತ್ತು ಪಾಲಿಕೆಯ 32 ನೇ ವಾರ್ಡ್ ಸದಸ್ಯ ಸತೀಶ ಸುರೇಂದ್ರ ಹಾನಗಲ್ ಅವರು ಉಪಮಹಾಪೌರರಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧ್ಯಕ್ಷಾಧಿಕಾರಿ ಆಗಿದ್ದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ ಅವರು ಪ್ರಕಟಿಸಿದರು.
ಮಹಾಪೌರ ಮತ್ತು ಉಪ ಮಹಾಪೌರ ಚುನಾವಣೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾಯಿಸಿದರು.
ಮಹಾಪೌರ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾನಗರಪಾಲಿಕೆಯ 59 ನೆ ವಾರ್ಡ್ ಸದಸ್ಯೆ ಸುವರ್ಣಾ ಕಲ್ಲಕುಂಟಲಾ ಅವರು 37 ಮತಗಳನ್ನು ಮತ್ತು ಮಹಾನಗರಪಾಲಿಕೆಯ 76 ನೇ ವಾರ್ಡ್ ಸದಸ್ಯೆ ವಹೀದಾಖಾನಂ ಅಲ್ಲಾಭಕ್ಷ ಕಿತ್ತೂರ ಅವರು 03 ಮತಗಳನ್ನು ಪಡೆದಿದ್ದಾರೆ ಎಂದು ಅವರು ಪ್ರಕಟಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ 22 ನೇ ಅವಧಿಗೆ ಉಪಮಹಾಪೌರರಾಗಿ ಪಾಲಿಕೆಯ 32 ನೇ ವಾರ್ಡ್ ಸದಸ್ಯ ಸತೀಶ ಸುರೇಂದ್ರ ಹಾನಗಲ್ ಅವರು ಅತಿ ಹೆಚ್ಚು (46) ಮತಗಳನ್ನು ಪಡೆಯುವ ಮೂಲಕ ಆಯ್ಕೆ ಆಗಿದ್ದಾರೆ ಎಂದು ಅವರು ತಿಳಿಸಿದರು.
ಮಹಾಪೌರ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾನಗರಪಾಲಿಕೆಯ 04 ವಾರ್ಡ್ ಸದಸ್ಯ ರಾಜಶೇಖರ ಕಮತಿ ಅವರು 37 ಮತಗಳನ್ನು ಪಡೆದಿದ್ದಾರೆ ಮತ್ತು ಇನ್ನೊರ್ವ ಸ್ಪರ್ಧಾಳು ಪಾಲಿಕೆಯ 71 ವಾರ್ಡ್ ಸದಸ್ಯ ನಜೀರ ಅಹ್ಮದ ಮೆಹಬೂಬಸಾಬ ಹೊನ್ಯಾಳ ಅವರು 03 ಮತಗಳನ್ನು ಪಡೆದಿದ್ದಾರೆ ಎಂದು ಪ್ರಕಟಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಗೆ ಪಾಲಿಕೆ ಸದಸ್ಯರು, ಲೋಕಸಭಾ ಸದಸ್ಯರು, ಶಾಸಕರು ಮತ್ತು ವಿಧಾನ ಪರಿಷತ್ತು ಸದಸ್ಯರು ಸೇರಿ ಒಟ್ಟು 89 ಜನ ಮತದಾರರು ಇದ್ದು, ಇಂದಿನ ಮಹಾಪೌರ ಮತ್ತು ಉಪಮಹಾಪೌರ ಚುನಾವಣೆಯಲ್ಲಿ 86 ಜನರು ಪಾಲ್ಗೊಂಡಿದ್ದರು. ಮತ್ತು ವಿಧಾನ ಪರಿಷತ್ತು ಸದಸ್ಯರಾಗಿರುವ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಶಾಸಕರಾದ ವಿನಯ ಕುಲಕರ್ಣಿ ಮತ್ತು ಮಹಾನಗರಪಾಲಿಕೆಯ 54 ನೇ ವಾರ್ಡ ಸದಸ್ಯೆ ಸರಸ್ವತಿ ದೊಂಗಡಿ ಅವರು ಗೈರುಹಾಜರಾಗಿದ್ದರು.