ಶಿಕ್ಷಣ ಕ್ಷೇತ್ರಕ್ಕೆ ಕಳೆದ ಹತ್ತು ವರ್ಷದಿಂದ ಅನುದಾನ ಕಡಿತ:ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ..
ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ
ಗುಲ್ಬರ್ಗ:
ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಹೇಳಿದರು.
ಈಗಾಗಲೆ ರಾಜ್ಯದಲ್ಲಿ ಎರಡು ವರ್ಷದ ಹಿಂದೆ ಎನ್.ಇ.ಪಿ.
ಜಾರಿ ಮಾಡಲಾಗಿದೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಶಿಕ್ಷಣ ತಜ್ಞರ ಸಭೆ ಕರೆದು ಸಾಧಕ-ಬಾಧಕ ಚರ್ಚಿಸಿಯೇ ಎಸ್.ಇ.ಪಿ. ಜಾರಿಗೆ ತರಲಾಗುವುದು ಎಂದರು.
ಪ್ರಸ್ತುತ ರಾಜ್ಯದಲ್ಲಿ 32 ಸರ್ಕಾರಿ ವಿಶ್ವವಿದ್ಯಾಲಯಗಳಿದ್ದು, ಗುಲಬರ್ಗಾ ವಿ.ವಿ. ಸೇರಿದಂತೆ ಒಟ್ಟಾರೆ 15 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಉಪನ್ಯಾಸಕ ಹುದ್ದೆ ಭರ್ತಿಗೆ ಮುಂದಿನ ದಿನದಲ್ಲಿ ಕ್ರಮ ವಹಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣ ಸೇರಿ ಶಿಕ್ಷಣ ಕ್ಷೇತ್ರಕ್ಕೆ ಒಟ್ಟಾರೆ ಶೇ.6ರಷ್ಟು ಅನುದಾನ ಆಯವ್ಯಯದಲ್ಲಿ ಹಂಚಿಕೆ ಮಾಡಲಾಗುತ್ತದೆ. ಇದರಲ್ಲಿ ಉನ್ನತ ಶಿಕ್ಷಣಕ್ಕೆ ಲಭ್ಯವಾಗುವುದು ಶೇ.1.70 ರಷ್ಟು ಮಾತ್ರ. ಹಂಚಿಕೆಯಾದ ಅನುದಾನದಲ್ಲಿ ಶೇ.88ರಷ್ಟು ಉಪನ್ಯಾಸಕರ ಸಂಬಳಕ್ಕೆ ವಿನಿಯೋಗಿಸಲಾಗುತ್ತಿದೆ. ಇನ್ನು ರಾಜ್ಯದಲ್ಲಿ ಕಳೆದ 10 ವರ್ಷದಿಂದ ಇಲಾಖೆಗೆ ಹಂಚಿಕೆಯಾಗುವ ಅನುದಾನದಲ್ಲಿ ಹೆಚ್ಚಳ ಮಾಡಿಲ್ಲ. ಇದರಿಂದ ಶೈಕ್ಷಣಿಕ ಚಟುವಟಿಕೆ ಗುಣಪಡಿಸಲು ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬರುವಂತಹ ಆಯವ್ಯಯದಲ್ಲಿ ಇಲಾಖೆಗೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ ಎಂದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಡಿ ‘ಯುವ ನಿಧಿ’ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, 2022-23ನೇ ಸಾಲಿನಲ್ಲಿ ಪದವಿ ಪಡೆದು 6 ತಿಂಗಳ ವರೆಗೆ ಉದ್ಯೋಗ ಸಿಗದಿದ್ದಲ್ಲಿ ಆಗ ಈ ಯೋಜನೆಯ ಲಾಭ ಪಡೆಯಲು ಅರ್ಹರಿರುತ್ತಾರೆ. ಇದು ಗರಿಷ್ಠ 2 ವರ್ಷಕ್ಕೆ ಸೀಮಿತವಾಗಿ ಮಾಹೆಯಾನ 1,500 ರಿಂದ 3,000 ರೂ. ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಒಂದು ವೇಳೆ ಉದ್ಯೋಗ ದೊರಕಿದಲ್ಲಿ ಈ ಯೋಜನೆಯಿಂದ ಅಂತಹ ಅಭ್ಯರ್ಥಿಗಳನ್ನು ಕೈಬಿಡಲಾಗುವುದು ಎಂದು ಸ್ಪಷ್ಠಪಡಿಸಿದರು.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕುಲಪತಿಗಳ ಸಭೆ
ಉನ್ನತ ಶಿಕ್ಷಣ ಸುಧಾರಣೆ ಮತ್ತು ವಿ.ವಿ. ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ತಾವು ಸಚಿವರಾದ ನಂತರ ರಾಜ್ಯದ ವಿ.ವಿ. ಕುಲಪತಿಗಳೊಂದಿಗೆ ಒಂದು ಸುತ್ತಿನ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ವಿ.ವಿ.ಯಲ್ಲಿನ ನೇಮಕಾತಿ, ಶೈಕ್ಷಣಿಕ ಕ್ಷೇತ್ರದ ಬಲವರ್ಧನೆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿ.ಸಿ.ಗಳ ಸಭೆ ಕರೆದು ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು. ಇನ್ನು ಗುಲಬರ್ಗಾ ವಿ.ವಿ.ಯಲ್ಲಿನ 137 ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿರುವುದನ್ನು ತಾವು ಪರಿಶೀಲಿಸುವುದಾಗಿ ಸಚಿವ ಡಾ.ಎಂ.ಸಿ.ಸುಧಾಕರ್ ಇದೇ ಸಂದರ್ಭದಲ್ಲಿ ತಿಳಿಸಿದರು.