2024_2025ನೇ ಸಾಲಿನ ಶಾಲಾ ಕರ್ತವ್ಯ ಹಾಗೂ ರಜೆ ದಿನಗಳ ಪಟ್ಟಿ ಬಿಡುಗಡೆ..
ಶಿಕ್ಷಣ ಇಲಾಖೆ ಆಯುಕ್ತರಿಂದ ಮಹತ್ವದ ಮಾಹಿತಿ..
ಬೆಂಗಳೂರು : 2023-24ನೇ ಶೈಕ್ಷಣಿಕ ಸಾಲಿನ ಚಟುವಟಿಕೆಗಳು ಮುಕ್ತಾಯವಾಗುತ್ತಿರುವ ಹಿನ್ನೆಲೆ ಶಿಕ್ಷಣ ಇಲಾಖೆ 2024-25 ನೇ ಸಾಲಿನ ಶಾಲಾ ಕರ್ತವ್ಯ, ರಜೆ ದಿನಗಳ ಪಟ್ಟಿ ಬಿಡುಗಡೆ ಮಾಡಿ ಸುತ್ತೋಲೆ ಹೊರಡಿಸಿದೆ.
ಏನಿದೆ ಸುತ್ತೋಲೆಯಲ್ಲಿ..?
ಮುಂದಿನ 2024-253 ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗುವುದರಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕ್ರಿಯಾಯೋಜನೆ/ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ.
ಸದರಿ ಮಾರ್ಗಸೂಚಿಯಲ್ಲಿ ವಾರ್ಷಿಕ/ಮಾಹೆವಾರು ಪಾಠ ಹಂಚಿಕೆ, ಪಠೇತರ ಚಟುವಟಿಕೆಗಳು, ಗುಣಮಟ್ಟದ ಶಿಕ್ಷಣಕ್ಕಾಗಿ ಫಲಿತಾಂಶಮುಖಿ ಚಟುವಟಿಕೆಗಳು, ಸಂಭ್ರಮ ಶನಿವಾರ (ನೋ ಬ್ಯಾಗ್ ಡೇ) ಆಯೋಜನೆಗೆ ಪೂರಕವಾದ ಪಠ್ಯಾಧಾರಿತ ಚಟುವಟಿಕೆ ಬ್ಯಾಂಕ್ ನಿರ್ವಹಣೆ ಹಾಗೂ ವಿವಿಧ ಶಾಲಾ ಹಂತದ CCE (ಪರೀಕ್ಷೆಗಳು/ ಮೌಲ್ಯಂಕನ, ವಿಶ್ಲೇಷಣೆ) ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯವಾಗುವಂತೆ ಯೋಜಿಸಿ, ಸಿದ್ಧಪಡಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ಧತೆಗಾಗಿ ದಿನಾಂಕ: 29.05.2024 ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿದೆ. ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ಪ್ರಯುಕ್ತ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ಸೂಚಿಸಿದೆ.