ಶಿಕ್ಷಕಿಯುಬ್ಬರಿಗೆ ಬರೊಬ್ಬರಿ 4 ಕೋಟಿ ರೂಪಾಯಿ ವಂಚನೆ!! ದೇಶದ ಗಮನ ಸೆಳೆದಿದ್ದ ಶಿಕ್ಷಕಿ ಪ್ರಕರಣ..
ಈ ಸಂಬಂಧ ಸರ್ಕಾರಿ ನೌಕರ ಸೇರಿ ನಾಲ್ವರು ಆರೋಪಿಗಳು ಅರೆಸ್ಟ್..
ಏನಿದು ಪ್ರಕರಣ ನೀವೆ ನೋಡಿ..
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಸದಸ್ಯ ಹುದ್ದೆಗೆ ನೇಮಕ ಮಾಡಿಸುವುದಾಗಿ ಹೇಳಿ ಚಿತ್ರಕಲಾ ಶಿಕ್ಷಕಿಯೊಬ್ಬರಿಂದ ₹ 4.10 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಸರ್ಕಾರಿ ನೌಕರ ಸೇರಿ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿಯ ಶಾಲೆಯೊಂದರ ಶಿಕ್ಷಕಿ ನೀಲಮ್ಮ ಬೆಳಮಗಿ ಅವರು ವಂಚನೆ ಬಗ್ಗೆ ದೂರು ನೀಡಿದ್ದರು. ಅದರನ್ವಯ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಿ ಕಮಿಷನರ್ ಬಿ. ದಯಾನಂದ್ ಆದೇಶ ಹೊರಡಿಸಿದ್ದರು.
‘₹ 5 ಕೋಟಿಗೆ ಒಪ್ಪಂದ ಮಾಡಿಕೊಂಡು, ಮುಂಗಡವಾಗಿ ಶಿಕ್ಷಕಿಯಿಂದ ₹ 4.10 ಕೋಟಿ ಪಡೆದು ವಂಚಿಸಲಾಗಿತ್ತು. ಆರೋಪಿಗಳಾದ ತಾವರೆಕೆರೆಯ ರಿಯಾಜ್ ಅಹ್ಮದ್ (41), ಮಲ್ಲೇಶ್ವರದ ಯೂಸುಫ್ ಸುಬ್ಬೆಕಟ್ಟೆ (47), ಕನಕಪುರ ತಾಲ್ಲೂಕಿನ ಹಾರೋಶಿವನಹಳ್ಳಿಯ ರುದ್ರೇಶ್ (35) ಹಾಗೂ ಚಿಕ್ಕಮಗಳೂರು ಕಳಸ ತಾಲ್ಲೂಕಿನ ಸಿ. ಚಂದ್ರಪ್ಪ (44) ಅವರನ್ನು ಬಂಧಿಸಲಾಗಿದೆ. ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಬಿ. ದಯಾನಂದ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಆರೋಪಿ ಚಂದ್ರಪ್ಪ, ತೋಟಗಾರಿಕೆ ಇಲಾಖೆ ನೌಕರ. ರಿಯಾಜ್ ಅಹ್ಮದ್, ನೌಕರರ ವರ್ಗಾವಣೆ ದಂಧೆಯಲ್ಲೂ ಭಾಗಿಯಾಗಿದ್ದ ಮಾಹಿತಿ ಇದೆ. ಇನ್ನೊಬ್ಬ ಆರೋಪಿ ಯೂಸುಫ್, ಮಲ್ಲೇಶ್ವರದಲ್ಲಿರುವ ಕಂಪನಿಯೊಂದರ ಮಾಲೀಕ. ಮತ್ತೊಬ್ಬ ಆರೋಪಿ ರುದ್ರೇಶ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದನೆಂಬ ಮಾಹಿತಿ ಲಭ್ಯವಾಗಿದೆ’ ಎಂದು ಹೇಳಿದರು.
ನರೇಂದ್ರ ಮೋದಿ ಪರಿಚಯಸ್ಥನೆಂದು ನಂಬಿಕೆ: ‘ದೂರುದಾರ ನೀಲಮ್ಮ ಅವರಿಗೆ ಕೆಪಿಎಸ್ಸಿ ಸದಸ್ಯೆ ಆಗಬೇಕೆಂಬ ಆಸೆ ಇತ್ತು. ಇದಕ್ಕಾಗಿ ಹಲವು ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಸದಸ್ಯೆ ಆಗಲು ಅರ್ಹರಲ್ಲವೆಂದು ಅವರು ಹೇಳಿದ್ದರು. ಪಟ್ಟು ಬಿಡದ ನೀಲಮ್ಮ, ಪರಿಚಯಸ್ಥರೊಬ್ಬರ ಬಳಿ ವಿಷಯ ಹಂಚಿಕೊಂಡಿದ್ದರು’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.
‘ನೀಲಮ್ಮ ಅವರಿಗೆ ಪರಿಚಯಸ್ಥರ ಮೂಲಕ ರಿಯಾಜ್ ಅಹ್ಮದ್ ಪರಿಚಯವಾಗಿತ್ತು. ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಹೋದರ ನನಗೆ ಪರಿಚಯದವರು. ಅವರಿಗೆ ಹೇಳಿ ನಿಮಗೆ ಕೆಪಿಎಸ್ಸಿ ಹುದ್ದೆಗೆ ನೇಮಕ ಮಾಡಿಸುತ್ತೇವೆ. ಅದಕ್ಕೆ ₹ 15 ಕೋಟಿಯಿಂದ ₹ 20 ಕೋಟಿ ಖರ್ಚಾಗುತ್ತದೆ’ ಎಂಬುದಾಗಿ ತಿಳಿಸಿದ್ದ.’
‘ಯೂಸುಫ್ ಸುಬ್ಬೆಕಟ್ಟೆಯನ್ನೇ ನರೇಂದ್ರ ಮೋದಿ ಸಂಬಂಧಿ ಎಂಬುದಾಗಿ ಹೇಳಿದ್ದ ರಿಯಾಜ್, ಆತನನ್ನು ಶಿಕ್ಷಕಿಗೆ ಪರಿಚಯ ಮಾಡಿಸಿದ್ದ. ನಂತರ, ಇತರೆ ಆರೋಪಿಗಳ ಜೊತೆ ಸೇರಿ ಶಿಕ್ಷಕಿ ಜೊತೆ ಮಾತುಕತೆ ನಡೆಸಿದ್ದ. ಆರೋಪಿಗಳು ಹಾಗೂ ದೂರುದಾರರ ನಡುವೆ ಹುದ್ದೆ ನೇಮಕಕ್ಕೆ ₹ 5 ಕೋಟಿಗೆ ಒಪ್ಪಂದವಾಗಿತ್ತು’ ಎಂದು ಪೊಲೀಸರು ಹೇಳಿದರು.
‘ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಸಹಿಗಳನ್ನು ನಕಲು ಮಾಡಿದ್ದ ಆರೋಪಿಗಳು, ನೇಮಕಾತಿ ಆದೇಶ ಪ್ರತಿ ಸೃಷ್ಟಿಸಿದ್ದರು. ಮುಖ್ಯಮಂತ್ರಿ ಟಿಪ್ಪಣಿ, ನಡಾವಳಿ ಹಾಗೂ ಅವರ ನಕಲಿ ಸಹಿ ಮಾಡಿರುವ ಶಿಫಾರಸು ಪತ್ರವನ್ನೂ ತಯಾರಿಸಿದ್ದರು. ರಾಜ್ಯಪಾಲರ ನಕಲಿ ಸಹಿ ಸಮೇತ ಸುಳ್ಳು ರಾಜ್ಯಪತ್ರವನ್ನೂ ಸೃಷ್ಟಿಸಿ, ಶಿಕ್ಷಕಿಗೆ ತೋರಿಸಿದ್ದರು. ಇದನ್ನೆಲ್ಲ ನಂಬಿದ್ದ ಶಿಕ್ಷಕಿ, ಆರೋಪಿಗಳ ಖಾತೆಗೆ ಹಂತ ಹಂತವಾಗಿ ₹ 4.10 ಕೋಟಿ ಹಾಕಿದ್ದರು’ ಎಂದು ಪೊಲೀಸರು ತಿಳಿಸಿದರು.
‘ನೇಮಕಾತಿ ಆದೇಶ ಸಿಗುತ್ತಿದ್ದಂತೆ ಶಿಕ್ಷಕಿ ಖುಷಿಯಿಂದ ಕೆಪಿಎಸ್ಸಿ ಕಚೇರಿಗೆ ಹೋಗಿದ್ದರು. ಪತ್ರ ಪರಿಶೀಲಿಸಿದ್ದ ಅಧಿಕಾರಿಗಳು, ನಕಲಿ ಎಂಬುದಾಗಿ ಹೇಳಿದ್ದರು. ಬಳಿಕವೇ ಅವರು ಠಾಣೆಗೆ ದೂರು ನೀಡಿದ್ದರು. ನಾಲ್ವರು ಆರೋಪಿಗಳನ್ನು ಬಂಧಿಸಿ ₹ 40 ಲಕ್ಷ ನಗದು ಹಾಗೂ ನಾಲ್ಕು ಮೊಬೈಲ್ ಜಪ್ತಿ ಮಾಡಲಾಗಿದೆ. ನಾಲ್ವರನ್ನೂ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಹೇಳಿದರು.