ವಿಶ್ವ ತಾಯಂದಿರ ದಿನಕ್ಕಾಗಿ
ನನ್ನ ಅವ್ವನಿಗೊಂದು ಕವನ ನಮನ 💕🥰💕
(ನನ್ನ ಹೆತ್ತವ್ವನ ಪಾದಗಳಿಗೆ ಈ ಕವನ ಅರ್ಪಣೆ)
🌹ಎವ್ವಾ ನೀ ನನ್ನ ಜೀವ 🌹
ಎವ್ವ ಬೇ…
ನಿನ್ನ ಎನಂತ ವರ್ಣಿಸಲಿ???
ಪದವಿ-ಪದಕ-ಪದ ಮೀರಿದ
ಪುಣ್ಯಕೋಟಿ ನೀನವ್ವ
ನಿನ್ನ ಪ್ರೀತಿನ ಉಸಿರವ್ವ
ಈ ನನ್ನ ಜನುಮಕ
ನಿನ ಸೇವೆಯಾ ನೀಡು
ನನ್ನುಸಿರ ಕೊನೆತನಕ
ಬದುಕಿನುದ್ದಕ್ಕೂ ಬರೀ ನೋವುಂಡು ಬದುಕಿದಾಕಿ
ಮಕ್ಕಳ ಮಾರಿ ನೋಡಿ ಆಸೆನಾ ಅರಳಿಸಿಕೊಂಡಾಕಿ
ಎದ್ಯಾಗ ಸುಡೋ ಬೆಂಕಿ ಇಟಗೊಂಡ
ವಿಧಿಗೆ ಸೆಡ್ಡು ಹೊಡೆದು ನಿಂತಾಕಿ
ಬಂಡಿಗಲ್ಲಂತಾ ಕಷ್ಟಕ
ಹೆದರದ ಹೆಗಲ ಕೊಟ್ಟಾಕಿ||
ಬದುಕಿಗೆ ವಿಷ ಉಣಿಸಿದವರ ಎದುರು
ಎದ್ದು ನಿಂತು ಚಂದನ ಬಾಳೆ ನಡೆಸಿದಾಕಿ||
ಸುತ್ತ ಸಾವಿರ ವಿಷದ ಸೂಜಿಗಳಿದ್ರು ಕೆಚ್ಚೆದೆಯಲಿ ಕನಸಿನ ಬೀಜ ಬಿತ್ತಿದಾಕಿ||
ನನ್ನವ್ವ ನೀನು…ನನ ಜೀವ
ಬದುಕ ರಂಗಾಯಣದಲ್ಲಿ
ಎಲ್ಲಾ ಪಾತ್ರಗಳಿಗೂ
ಸೈ ಸೈ ಎನಿಸಿಕೊಂಡಾಕಿ||
ನೋವು ನಿರಾಸೆ ಹಾದಿಯೊಳಗ
ಗೆಲುವಿನ ಹೂ ಹಾಸಿದಾಕಿ||
ಬಂಗಾರ ಬೆಳ್ಳಿ ಹೊಲಾ ಮನಿ
ಎಲ್ಲಾನೂ ನಮ್ಮ ಕಣ್ಣಾಗ ಕಂಡಾಕಿ||
ಮಕ್ಕಳ ಮೆಟ್ಟಿಗಿ ಹತ್ತಲಿ ಅಂತ
ಜಿದ್ದಿನಿಂದ ದುಡದಾಕಿ ||
ನಮ್ಮವ್ವ ನೀನು ನನ್ನ ಜೀವ
ಗೋರಿ ಕಟ್ಟೋ ಜನರ ಮುಂದ
ಮಾರಿ ಎತ್ತಿ ನಡೆದಾಕಿ||
ಎವ್ವಾ ಸ್ವಲ್ಪ ಕೇಳು,
ನಿನ್ನ ಕಂದನ ತೊದಲ ಮಾತು
ಆ ದೇವರು ಕೂಡ ನಿನ್ನ ಸಮವಲ್ಲ
ಯಾಕಂದ್ರ ನಿನ್ನಂತ ಹಡೆದವ್ವ
ಅವನಿಗೂ ಇಲ್ಲ….
ಶ್ರೀಮತಿ ಮೀನಾಕ್ಷಿ ಸೂಡಿ
ಸಾಹಿತಿ
ಚನ್ನಮ್ಮನಕಿತ್ತೂರ.🥰