ಕಾಯಕ ಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಸಂಭ್ರಮ.
ಜಾತ್ರೆ, ಪರಿಸೆ, ಹಬ್ಬ ಹರಿದಿನಗಳೆಲ್ಲವೂ ಆಯಾ ಪ್ರಾದೇಶಿಕತೆಯ ಸೊಗಡನ್ನು ಸೂಚಿಸುತ್ತವೆ. ಆಯಾ ಪ್ರದೇಶದ ವಿಶೇಷತೆ, ಗತವೈಭವವನ್ನು ಮರಳಿಸುತ್ತವೆ. ಅದೆಷ್ಟೇ ತಂತ್ರಜ್ಞಾನ ಬೆಳೆದರೂ ಅದೆಷ್ಟೋ ಜಗತ್ತು ಮುಂದುವರೆದಿದ್ದರೂ ಸಾಂಪ್ರದಾಯಕತೆಯಲ್ಲಿ ಸುತಾರಾಂ ರಾಜಿಯಾಗದ ಜನರು ಹಬ್ಬ ಹರಿದಿನಗಳನ್ನು ಚಾಚು ತಪ್ಪದೆ ಆಚರಿಸುವ ವಿಶೇಷ ಸಂಧರ್ಭಗಳನ್ನು ಕಾಣಬಹುದು. ಅಂತಹ ವಾರ್ಷಿಕಾವರ್ತನ ಜಾತ್ರೆ, ಹಬ್ಬ, ಹರಿದಿನಗಳನ್ನು ಜನರು ತಮ್ಮ ಊರಿನ, ತಮ್ಮ ಮನೆಯ ಸಾಂಪ್ರದಾಯಕತೆ, ಪೂರ್ವಜರಿಂದ ನಡೆದು ಬಂದ ದಾರಿ ಎಂದು ತಿಳಿದು ತಮ್ಮ ಊರಿನ ಹೃದಯಭಾಗದಲ್ಲಿ ಅವುಗಳನ್ನು ಆಚರಿಸುವ ಬಗೆ ತೀರಾ ಭಿನ್ನವಾಗಿರುತ್ತವೆ. ಅಂತಹ ಜಾತ್ರೆಗಳಲ್ಲಿ ನಾಯಕನಹಟ್ಟಿಯ ಜಾತ್ರೆ, ತೇರು ವಿಶೇಷವೆಂದೇ ಹೇಳಬಹುದು.
ನಾಯಕನಹಟ್ಟಿಯು ಚಿತ್ರದುರ್ಗ ಜಿಲ್ಲೆಯಲ್ಲಿ ಕಂಡುಬರುವ ಪುಣ್ಯ ಕ್ಷೇತ್ರವೆಂದೇ ಹೇಳಬಹುದು. ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ , (ಸರಿ ಸುಮಾರು 15 ಅಥವಾ 16 ನೇ ಶತಮಾನದಲ್ಲಿ ಕಂಡುಬರುತ್ತಾರೆ ಎಂದು ಹೇಳಲಾಗುತ್ತದೆ.)ತಿಪ್ಪೇಸ್ವಾಮಿ , ತಿಪ್ಪೇಶ ಅಥವಾ ತಿಪ್ಪೇರುದ್ರಸ್ವಾಮಿ ಎಂದೂ ಸಹ ಕರೆಯುತ್ತಾರೆ. ಗುರು ತಿಪ್ಪೆರುದ್ರಸ್ವಾಮಿಯನ್ನು ಭಾರತೀಯ ಹಿಂದೂ ಆಧ್ಯಾತ್ಮಿಕ ಗುರು ಮತ್ತು ಸಮಾಜ ಸುಧಾರಕರಕರು ಎಂದು ಸಹ ಕರೆಯಲಾಗುತ್ತದೆ.
ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿಯ ಜನನ ಮೂಲವನ್ನು ನೋಡಿದಾಗ ಎಲ್ಲಿಯೂ ನಿಖರವಾಗಿ ತಿಳಿದುಬರುವುದಿಲ್ಲ, ಆದರೆ ಮೌಖಿಕ ಪರಂಪರೆ, ಜನಪದರ ಮೂಲದಂತೆ ಪಂಚಗಣಾಧೀಶರಲ್ಲಿ ಒಬ್ಬರೆಂದು ಹೇಳಲಾಗುತ್ತದೆ. ದಂತಕಥೆಯ ಪ್ರಕಾರ ತಿಪ್ಪೇರುದ್ರಸ್ವಾಮಿಯು ಗಣಾಧೀಶ್ವರರಲ್ಲಿ (ಪಂಚ ಗಣಾಧೀಶ್ವರ) ಒಬ್ಬನ ಅವತಾರವಾಗಿದ್ದು, ಅವರು ಮೂಲತಃ ಶೈವಧರ್ಮವನ್ನು (ಶಿವನ ಆರಾಧನೆ) ಭಗವಾನ್ ಶಿವನೇ ಆದೇಶಿಸಿದಂತೆ ಹರಡಲು ಭೂಮಿಗೆ ಬಂದರೆಂಬ ನಂಬಿಕೆ ಇದೆ. ಈ ಐದು ಗುರುಗಳು ಆ ನಿರ್ದಿಷ್ಟ ಪ್ರದೇಶದಲ್ಲಿ ಶಿವಧರ್ಮವನ್ನು ಹರಡುವ ಉದ್ದೇಶದಿಂದ ವಿವಿಧ ಕಾಲಘಟ್ಟಗಳಲ್ಲಿ ಭಾರತದ ವಿವಿಧ ಸ್ಥಳಗಳಲ್ಲಿ ಪುನರ್ಜನ್ಮ ಪಡೆದರು ಅವರಲ್ಲಿ ನಾಯಕನಹಟ್ಟಿ ಶ್ರೀ ಗುರು ತಿಪ್ಪೆರುದ್ರರು ಒಬ್ಬರೆಂದು ನಂಬಲಾಗುತ್ತದೆ.
ತಿಪ್ಪೇರುದ್ರರು ಭೂಮಿಯಲ್ಲಿ ಮೊದಲು ನೆಲೆಸಿದ ಸ್ಥಳ
ಗಣಾಧೀಶರಲ್ಲಿ ಒಬ್ಬರಾದ ತಿಪ್ಪೇರುದ್ರಸ್ವಾಮಿಗಳು ಮೊದಲು ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮುರು ತಾಲೂಕಿನ ಕೊಂಡ್ಲಹಳ್ಳಿ ಗ್ರಾಮದಿಂದ ಒಂದು ಕಿ ಮೀ ನ ಸ್ಥಳವೊಂದರ ಬಳಿ ವಿಶ್ರಾಂತಿಗೆಂದು ಕುಳಿತಾಗ ಅಲ್ಲಿ ದನಗಾಹಿ ಹುಡುಗನೊಬ್ಬ ಹಿಂಡು ಹಿಂಡು ದನಗಳೊಟ್ಟಿಗೆ ನೀರಿಗಾಗಿ ಹುಡುಕಾಡುತ್ತಿರುವ ಸಮಯದಲ್ಲಿ ಸ್ವಾಮಿಗಳು ಏನನ್ನು ಹುಡುಕುತ್ತಲಿರುವೆ ಎಂದು ದನಗಾಹಿ ಹುಡುಗನನ್ನು ಕೇಳಿದೊಡನೆ ಅವನು ನೀರು, ನೀರನ್ನು ಹುಡುಕುತ್ತಿರುವೆ ಎನ್ನುತ್ತಾನೆ. ನಂತರ ಎಷ್ಟು ಹುಡುಕಿದರೂ ನೀರು ಸಿಗದ ಸಂಧರ್ಭದಲ್ಲಿ ಆ ದನಗಳನ್ನು ಹುಯ್ ಎನ್ನುತ್ತಾ ಮತ್ತೆ ಮುಂದೆ ಸಪ್ಪೆಮೊರೆ ಹಾಕಿ ಆ ಹುಡುಗ ಹೊರಟಿದ್ದನ್ನು ನೋಡಿ ಇಲ್ನೋಡು ಮಗು ಎಂದ ತಿಪ್ಪೇರುದ್ರಸ್ವಾಮಿಗಳು ತನ್ನ ಜೋಳಿಗೆಯಿಂದ ಬೆತ್ತ(ಬೆತ್ತದ ಕೋಲು)ತೆಗೆದು ಒಂದು ಗೆರೆ ಎಳೆದರಂತೆ ಆ ಗೆರೆ ಎಳೆದ ಮರುಕ್ಷಣವೇ ನೀರಿನ ಚಿಲುಮೆ ಚಿಮ್ಮಿತೆಂಬ ನಂಬಿಕೆ ಮತ್ತು ಅದರಿಂದ ಆ ಕ್ಷೇತ್ರವನ್ನು ಬಿಳಿನೀರು ಚಿಲುಮೆ ಎಂದು ಕರೆಯುವರು ಎಂಬ ಪ್ರತೀತಿಯನ್ನು ಇಂದಿಗೂ ಕಾಣಬಹುದು. ಅಷ್ಟು ಮಾತ್ರವಲ್ಲದೆ ಕೊಂಡ್ಲಹಳ್ಳಿ ಬಿಳೀನಿರು ಚಿಲುಮೆ ಗುರುತಿಪ್ಪೇರುದ್ರಸ್ವಾಮಿ ಎಂದೇ ಪ್ರಖ್ಯಾತಿ ಪಡೆದು ನೆಲೆಸಿರುವ ತಿಪ್ಪೆರುದ್ರಸ್ವಾಮಿಯನ್ನು ಮೂಲ ಸ್ವಾಮಿ ನೆಲೆಸಿರುವ ಸ್ಥಳವೆಂದು ಸ್ಥಳೀಯರು ಮತ್ತು ಆ ಪುಣ್ಯ ಕ್ಷೇತ್ರಕ್ಕೆ ಬರುವವರು ಹೇಳುತ್ತಾರೆ. ಮತ್ತು ಇಂದಿಗೂ ಬಿಳಿನೀರು ಚಿಲುಮೆ ಇಂದು ಬಾವಿಯಾಗಿದೆ ಅಲ್ಲಿ ನಿತ್ಯವೂ ಸ್ವಾಮಿಯ ಪೂಜೆ, ಪುನಸ್ಕಾರ ನಡೆಯುತ್ತದೆ ಹಾಗೂ ಭಕ್ತರು ಸಹ ಅಪಾರ ಸಂಖ್ಯೆಯಲ್ಲಿ ಅಲ್ಲಿಗೆ ಬಂದು ಹೋಗುತ್ತಾರೆ.
ನಾಯಕನ ಹಟ್ಟಿಯಲ್ಲಿ ತಿಪ್ಪೇರುದ್ರ ಸ್ವಾಮಿಯ ನೆಲೆಸುವಿಕೆ
ಕೊಂಡ್ಲಹಳ್ಳಿಯ ಬಿಳಿನೀರು ಚಿಲುಮೆ ಪುಣ್ಯ ಕ್ಷೇತ್ರದಿಂದ ನಾಯಕನಹಟ್ಟಿಗೆ ಕಾಲ್ನಡಿಗೆಯ ಮೂಲಕ ಸಂಚರಿಸಿ ಗುರು ತಿಪ್ಪೇರುದ್ರಸ್ವಾಮಿಗಳು ಆಗಮಿಸುತ್ತಾರೆ. ಆ ದಿನ ರಾತ್ರಿಯಾದ ಕಾರಣ ನೆಲೆಸಲು ಸ್ಥಳವನ್ನು ಹುಡುಕುವ ಸ್ವಾಮಿಗಳು ಅಲ್ಲೇ ಇದ್ದ ಮಾರಮ್ಮನ ಗುಡಿಬಳಿ ತೆರಳಿ ನನಗೆ ಈ ದಿನ ರಾತ್ರಿ ಇಲ್ಲಿ ನೆಲೆಸಲು ಅವಕಾಶ ನೀಡಿ ಎಂದು ಕೇಳಿಕೊಳ್ಳುತ್ತಾರೆ ಆದರೆ ಮಾರಮ್ಮಳು ಕೆಂಡಮಂಡಲಾಗಿ ಒಳಗೆ ಹೆಜ್ಜೆ ಇಡಬೇಡ ಎಂದು ತಡೆಯಾಜ್ಞೆ ಒಡ್ದುತ್ತಾಳೆ ಆದರೆ ತಿಪ್ಪೇರುದ್ರೇಶನು ಯಾಕಮ್ಮ ನಾನು ನಿನ್ನ ಮಗನೆಂದು ತಿಳಿ ಎನ್ನುತ್ತಾರೆ. ಮಾರಮ್ಮಳು ಮಗನೆಂದೇ ಭಾವಿಸಿರುವೆನಾದರೂ ನೀನು ಜೋಳಿಗೆ ಹಿಡಿದು ಬೆತ್ತದಾರಿಯದವನು ನಿನಗೆ ಪ್ರವೇಶವಿಲ್ಲ ಒಳಗೆ, ಬರುವುದಾದರೆ ಜೋಳಿಗೆ, ಬೆತ್ತ ಹೊರಗಿರಿಸಿ ಮಗನಾಗಿ ಬಾ ಎನ್ನುತಾಳೆ. ತಿಪ್ಪೇರುದ್ರೇಶನು ಸರಿ ಅಮ್ಮಾ ಎಂದು ಜೋಳಿಗೆ ಬೆತ್ತ ಹೊರಗಿರಿಸಿ ಆ ದಿನ ವಿಶ್ರಾಂತಿ ಪಡೆದ ತಿಪ್ಪೇಶನು ಬೆಳಗಾಗುತ್ತಲೇ ಮಾರಮ್ಮನಿಗೆ ತಿಳಿಸದೇ ಬೆತ್ತ ಜೋಳಿಗೆ ಹಿಡಿದು ಹೊರಗೆ ನಡೆಯುತ್ತಾರೆ ಆದರೆ ಆ ದೇವಿಯ ಗುಡಿಯ ತುಂಬಾ ಬೆತ್ತ ಜೋಳಿಗೆ ತುಂಬಿರುತ್ತವೆ ಇದನ್ನು ಕಂಡ ಮಾರಮ್ಮಳು ಕೋಪಗೊಂಡು ಆ ಗುಡಿಯನ್ನೇ ಬಿಟ್ಟು ಹೋರಾಡುತ್ತಾಳೆ. ನಂತರ ಅದೇ ಗುಡಿಯಲ್ಲಿ ಶಿವಲಿಂಗ ನೆಲೆಸಿರುವುದನ್ನು ಕಾಣಬಹುದು. ಇಂದಿಗೂ ಮಾರಮ್ಮ ಈ ಘಟನೆಯ ನಂತರ ಊರ ಬೇರೆ ಸ್ಥಳದಲ್ಲಿ ನೆಲೆಸಿದ್ದಾಳೆ, ಪಕ್ಕದ ಯಾವುದೋ ಹಳ್ಳಿಯಲ್ಲಿ ನೆಲೆಸಿದ್ದಾಳೆ ಮತ್ತು ಇದಾದ ನಂತರ ಆಕೆ ಹನ್ನೆರಡು ವರ್ಷಕ್ಕೊಮ್ಮೆ ರಕ್ತದೋಳಿ ಹರಿಸುತ್ತೇನೆಂಬ ಶಾಪವಿತ್ತಳು ಅದರಂತೆ ಹನ್ನೆರಡು ವರ್ಷಕ್ಕೊಮ್ಮೆ ಇಂದಿಗೂ ಆಕೆ ತಿಪ್ಪೇರುದ್ರೇಶನ ಗುಡಿಗೆ ಬರುತ್ತಾಳೆ ಆಕೆಗೆ ಕೋಪ ಹೆಚ್ಚೆಂದು ಕೋಪ ತಡೆಯಲು ಗುಡಿಯ ಸುತ್ತಲೂ ಕಳ್ಳೆ ಹಾಕಲಾಗುತ್ತದೆ ಮತ್ತು ಪ್ರಾಣಿಹಿಂಸೆ ಮಹಾಪಾಪ ಎಂದು ತಿಳಿದು ಅದರ ಕಾಯಿದೆಯೂ ಬಂದಿರುವ ಹಿನ್ನೆಲೆಯಲ್ಲಿ ಆಚರಣೆ ಬಿಡಲಾಗುವುದಿಲ್ಲವೆಂದು ಕುಂಕುಮ ಕಲಿಸಿದ ಕೆಂಪು ನೀರನ್ನು ಆಕೆಯ ಪದಕ್ಕೆರಚಿ ಆಕೆಯನ್ನು ತಣಿಸುವ ಪ್ರತೀತಿಯೂ ಇದೆ.
ಈ ಘಟನೆಯ ನಂತರ ಅಲ್ಲಿನ ಆಳ್ವಿಕೆ ನಡೆಸುತ್ತಿದ್ದ ಕೆಂಪಯ್ಯಶೆಟ್ಟಿ ಎಂಬುವವನು ಮೆರವಣಿಗೆ ಹೊರಟಿದ್ದನು ಆಗ ಜನರೆಲ್ಲರೂ ದಾರಿ ಬಿಡಿ, ದಾರಿ ಬಿಡಿ ಎಂದು ಕೂಗುತ್ತ ಆತನ ಮೇಲೆ ಹೂ ಗಳನ್ನು ಎರಚುತ್ತ ಬಹುಪರಾಕ್ ಹೇಳುತ್ತಿದ್ದರಿಂದ ಈ ವ್ಯಕ್ತಿ ಯಾರೆಂದು ನೋಡಬೇಕು ಎಂದುಕೊಂಡ ಶ್ರೀ ಗುರು ತಿಪ್ಪೇರುದ್ರೇಶನು ಅಲ್ಲೇ ಇದ್ದ ಪಕ್ಕದ ಒಂದು ಸಗಣಿಯ ರಾಶಿ ತಿಪ್ಪೆ ಮೇಲೆ ನಿಲ್ಲುತ್ತಾರೆ. ಇದನ್ನು ನೋಡಿದ ಕೆಂಪಯ್ಯಶೆಟ್ಟಿಯೂ ಯಾರಪ್ಪ ನೀನು? ಯಾವೂರು ನಿನ್ನ ಹೆಸರೇನು ಎಂದು ಕೇಳುತ್ತಾನೆ! ಅದಕ್ಕೆ ತಿಪ್ಪೇಶನು ಉತ್ತರಿಸದೆ ನನಗೆ ಗೊತ್ತಿಲ್ಲ ಎನ್ನುತ್ತಾರೆ. ಇದನ್ನು ಕೇಳಿದ ಕೆಂಪಯ್ಯ ಶೆಟ್ಟಿ ನಗುತ್ತಾ ಓಹೋ ಈತನಿಗೆ ಈತನ ಹೆಸರು ಗೊತ್ತಿಲ್ಲವಂತೆ ನೋಡಿ ಎಂದು ನಗುತ್ತಾ ನೀನು ತಿಪ್ಪೆಯ ಮೇಲೆ ನಿಂತಿರುವುದರಿಂದ ತಿಪ್ಪೇಶ ಎಂದು ನಿನ್ನನ್ನು ಕರೆಯುತ್ತೇನೆ ಎನ್ನುತ್ತಾನೆ. ಅದರಂತೆ ಅಂದಿನಿಂದ ತಿಪ್ಪೇಶನಿಗೆ ತಿಪ್ಪೆರುದ್ರೇಶ ಎಂಬ ಹೆಸರು ಬಂದಿತು ಎಂಬ ಕಥೆಗಳಿವೆ. ಇದಾದ ನಂತರ ಕೆಂಪಯ್ಯ ಶೆಟ್ಟಿ ಅವರು ತಿಪ್ಪೇಶನನ್ನು ಜೊತೆಗೆ ಕರೆದುಕೊಂಡು ಓಡಾಡುತ್ತಿದ್ದರು ಹೀಗೆ ಮಳೆಗಾಲದ ಕೊರತೆಯಿಂದಾಗಿ ಕೆರೆ ಬಾವಿಗಳಲ್ಲಿ ನೀರು ಹೋಗಿದ್ದ ಕಾರಣ ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನರಿಗೆ ಆ ದಿನ ಅಯ್ಯೋ ಪಾಪ ಜನರು ನೀರಿಲ್ಲದೆ ಕೊರಗುತ್ತಿದ್ದಾರೆ ಎಂದು ಕೆಂಪಯ್ಯಶೆಟ್ಟಿ ಹೇಳಿದೊಡನೆ ತಿಪ್ಪೇಶನು ಇದು ಮಳೆ ಬಂತು ಎಂದೊಡನೆ ಭೂಮಿಗೆ ಮಳೆ ಬಿತ್ತು ಎಂಬ ನಂಬಿಕೆ ಇದೆ. ಅದರಂತೆ ತಿಪ್ಪೇಶನ ಪರಸೆ(ಜಾತ್ರೆ)ಯಂದು ಇಂದಿಗೂ ಮಳೆ ಹನಿ ಬಿದ್ದೆ ಬೀಳುತ್ತದೆ ಎಂಬ ನಂಬಿಕೆ ಜನರಿಗೆ ಇದೆ. ಈ ಪವಾಡವನ್ನು ನೋಡಿದ ಕೆಂಪಯ್ಯ ಶೆಟ್ಟಿ ನೀನು ಸಾಮಾನ್ಯನಲ್ಲ ಅಸಾಮಾನ್ಯನು ಇಂದಿನಿಂದ ನೀನು ತಿಪ್ಪೇಶನನಲ್ಲ ತಿಪ್ಪೇರುದ್ರೇಶ ಎಂದು ಹೇಳುತ್ತಾನೆ. ಆ ದಿನದಿಂದ ತಿಪ್ಪೇರುದ್ರೇಷಣೆ ಹೇಳಿದಂತೆ ಕೆಂಪಯ್ಯ ಶೆಟ್ಟಿ ಕೇಳಲು ಪ್ರಾರಂಭಿಸುತ್ತಾನೆ. ತಿಪ್ಪೆ ರುದ್ರೇಶ್ವರ ಆಸೆಯಂತೆ ಅಲ್ಲಿ ಒಳಮಟದಲ್ಲಿ ತಿಪ್ಪೇರುದ್ರೇಶನ್ನು ನೆಲೆಸಿದ್ದಾನೆ ಎಂಬ ನಂಬಿಕೆಯಿದೆ.
ನಾಯಕನಹಟ್ಟಿ ಪುಣ್ಯಕ್ಷೇತ್ರವು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ. ನಾಯಕನಹಟ್ಟಿಯಲ್ಲಿ ತಿಪ್ಪೇರುದ್ರೇಶನ ಜೀವಿತ ಕಾಲಕ್ಕೆ ಸಂಬಂಧಿಸಿದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ದತ್ತಿ ಇಲಾಖೆಯು ( ಕರ್ನಾಟಕ ಸರ್ಕಾರ) ದೇವಾಲಯದ ಮಾಹಿತಿ ವ್ಯವಸ್ಥೆಯ ವೆಬ್ಸೈಟ್ ನಲ್ಲಿ 15 ನೇ ಮತ್ತು 16 ನೇ ಶತಮಾನದ ನಡುವಿನ ಸ್ಥೂಲ ಅವಧಿ ಎಂಬುದಾಗಿ ಉಲ್ಲೇಖಿಸಿರುವುದನ್ನು ಕಾಣಬಹುದು.
ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ಶಿವನ ಆರಾಧನೆಯನ್ನು ಬೋಧಿಸುವ ಸಲುವಾಗಿ ಮತ್ತು ಶಿವನ ಮಹಿಮೆಯನ್ನು ಭೂ ಲೋಕಕ್ಕೆ ತಿಳಿಸುವ ಸಲವಾಗಿ ಬಂದಿರುತ್ತಾರೆ ಅವರ ಆ ಬೋಧನೆಯ ಹಿನ್ನೆಲೆಯ ಪ್ರಮುಖ ಅಂಶವೆಂದರೆ ಒಳ್ಳೆಯ ಕೆಲಸ ಆಲೋಚನೆ ಮಾಡಿದಲ್ಲಿ ಶಿವನು ಸದಾ ನೆಲೆಸಿರುತ್ತಾನೆ ಎಂದು ಒಂದಾಗಿತ್ತು ಮತ್ತು ಮಾಡಿದವರಿಗೆ ನೀಡು ಭಿಕ್ಷೆ ಎಂಬ ಕಾಯಕ ತತ್ವವನ್ನು ಸಾರುವುದಾಗಿತ್ತು ‘ಕಾಯಕವೇ ಕೈಲಾಸ’ – ಕೆಲಸವೇ ಆರಾಧನೆ ಎಂದು ಉಪದೇಶಿಸಿ ಸಾರುವ ಸಲುವಾಗಿ ಕಾಲ್ನಡಿಗೆಯ ಮುಖಾಂತರ ಮನೆಮನೆಗೂ ತೆರಳಿ ಕಷ್ಟ ಕಾರ್ಪಣ್ಯಗಳನ್ನು ಕಳೆದು ಅವರಿಗೆ ಒಳಿತಿನ ಮಾರ್ಗವನ್ನು ತೋರುತ್ತಿದ್ದರು. ಅವರ ಜೀವಿತಾವಧಿಯಲ್ಲಿ, ಅವರು ತಮ್ಮ ಧಾರ್ಮಿಕ ಕಾರ್ಯದ ಹೊರತಾಗಿ, ನಾಯಕನಹಟ್ಟಿಯ ಸುತ್ತಮುತ್ತಲಿನ ನೀರಿನ ಸಂಗ್ರಹಾಗಾರಗಳ ರಚನೆ ಮತ್ತು ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಅವುಗಳಲ್ಲಿ ಕೆಲವು ಬರಪೀಡಿತ ಪ್ರದೇಶದಲ್ಲಿ ನೀರನ್ನು ಸಂಗ್ರಹಿಸಲು ಮತ್ತು ನೀರನ್ನು ಒದಗಿಸಿ ಜನರಿಗೆ ಕಷ್ಟ ಕಾರ್ಪಣ್ಯಗಳನ್ನು ಬೆಳೆಯುವ ಕೆಲಸವನ್ನು ಮಾಡಿದರು.
ಶ್ರೀ ಗುರು ತಿಪ್ಪೇರುದ್ರೇಶನ ಪವಾಡಗಳು
ನಿಡಿಗಲ್ ಮಹಾರಾಣಿಗೆ ಸಂತಾನ ಫಲ
ತನ್ನ ವಂಶೋದ್ಧಾರಕನ ನಿರೀಕ್ಷೆಯಲ್ಲಿದ್ದ ನಿಡಿಗಲ್ ಮಹಾರಾಣಿಗೆ ಸದಾಕಾಲ ಸೋಲು ಕಾಣುತ್ತಿತ್ತು. ತನ್ನ ವಂಶ ಬೆಳೆಯುವುದಿಲ್ಲ ಎಂಬ ಭಯದಿಂದ ಆಕೆ ಪ್ರಾಣ ಕಳೆದುಕೊಳ್ಳಲು ಸಿದ್ದಳಾಗಿದ್ದಳು, ರಾಜ ಮನೆತನದಲ್ಲಿ ಪುತ್ರ ಸಂತಾನವಿಲ್ಲವೆಂದರೆ ಅದು ಅವಮಾನ ಎಂಬುದು ಅಲ್ಲಿನವರ ಅಭಿಪ್ರಾಯವಾಗಿತ್ತು ಹಾಗಾಗಿ ಆಕೆ ಸದಾ ಚಿಂತಾ ಭ್ರಾಂತಳಾಗಿರುತ್ತಿದ್ದಳು ಇದನ್ನು ಕಂಡ ಒಬ್ಬ ಸಾಮಾನ್ಯ ಹೆಣ್ಣು ಮಗಳಳೊಬ್ಬಳು ಆಕೆಯ ಕಿವಿ ಬಳಿ ಹೋಗಿ ತಿಪ್ಪೆ ರುದ್ರ ಎಂಬ ಸ್ವಾಮಿಗಳಿದ್ದಾರೆ, ಅವರ ಬಳಿ ನಿಮ್ಮ ಸಂತಾನದ ಕುರಿತಾಗಿ ಸಮಸ್ಯೆಯನ್ನು ಒಮ್ಮೆ ಯಾಕೆ ಹೇಳಬಾರದು ಎಂದಾಗ ಆಕೆ ತಿಪ್ಪೇರುದ್ರೇಶನನ್ನು ಭೇಟಿಯಾಗುತ್ತಾಳೆ. ನಂತರ ತಿಪ್ಪೆ ರುದ್ರೇಷನು ಶಿವನ ಪೂಜೆಯನ್ನು ಭಕ್ತಿಯಿಂದ ಮಾಡಲು ತಿಳಿಸಿ ಒಣಕೊಬ್ಬರಿಯ ಪುಡಿ ಮತ್ತು ವಿಭೂತಿಯನ್ನು ಶಿವನ ಧ್ಯಾನದಿಂದ ಮಂತ್ರಿಸಿ ಆಕೆಗೆ ಅದನ್ನು ಸೇವಿಸಲು ಹೇಳುತ್ತಾರೆ. ಅವರ ಆಶೀರ್ವಾದದ ನಂತರ ನಿಡಿಗಲ್ಲ ಮಹಾರಾಣಿಗೆ ಒಂದು ಗಂಡು ಸಂತಾನ ಪ್ರಾಪ್ತಿಯಗುತ್ತದೆ.
ಮಾಡಿದವರಿಗೆ ನೀಡು ಭಿಕ್ಷೆ
ಜನರು ನಾಯಕನಹಟ್ಟಿ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಿದ ಕಾರಣ ನಾಯಕನಹಟ್ಟಿಯ ಸುತ್ತಮುತ್ತಲಿ ಕೆರೆಗಳನ್ನು ಭಾವಿಗಳನ್ನು ತೋರಿಸುವ ಕಾಯಕವನ್ನು ತಿಪ್ಪೇರುದ್ದೇಶ ಮಾಡಿಸುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ಕಾಯಕಕ್ಕೆ ಬರುವ ಎಲ್ಲ ಕೆಲಸಗಾರರಿಗೂ ಮಾಡಿದವರಿಗೆ ನೀಡು ಭಿಕ್ಷೆ ಎಂಬ ಆಧಾರದಲ್ಲಿ ನಾಣ್ಯಗಳನ್ನು ನೀಡುತ್ತಿದ್ದರು. ಒಮ್ಮೆ ಹೇಗೆ ಗರ್ಭಿಣಿ ಹೆಣ್ಣು ಮಗಳಿಗೆ ಹೆಚ್ಚು ನಾಣ್ಯವನ್ನು ತಿಪ್ಪೆ ರುದ್ರೇಶ್ವರ ನೀಡಿದ್ದಕ್ಕೆ ಆ ಹೆಣ್ಣು ಮಗಳಿಗೆ ಹೆಚ್ಚು ನೀಡಿದಿರಿ ಏಕೆ ಎಂದು ಪ್ರಶ್ನಿಸಿದಾಗ ಅದಕ್ಕೆ ತಿಪ್ಪೆ ರುದ್ರಿಷರು ಹೀಗೆ ಹೇಳುತ್ತಾರೆ. ನೀವು ಒಬ್ಬರೇ ಒಬ್ಬರೇ ಕೆಲಸ ಮಾಡಿದ್ದೀರಿ ಆದರೆ ಆಕೆ ಗರ್ಭಿಣಿ, ತನ್ನ ಗರ್ಭದಲ್ಲಿರುವ ಮಗುವಿನ ವೇತನವನ್ನು ನಾನು ನೀಡಿದ್ದೇನೆ, ಆಕೆ ಮಾತ್ರ ಇಲ್ಲಿ ಶ್ರಮಿಸಿದ್ದಲ್ಲ ಗರ್ಭದ ಒಳಗಿನ ಮಗುವು ಶ್ರಮಿಸಿದೆ ಕಾರಣ ಹೆಚ್ಚು ನಾಣ್ಯ ನೀಡಲಾಗಿದೆ ಎಂದು ಹೇಳುತ್ತಾರೆ, ಇದರಿಂದ ಶ್ರಮಿಕರು ತೃಪ್ತರಾಗುವಂತೆ ರುದ್ರೇಶನು ಗಮನಹರಿಸಿದಲ್ಲದೆ ಕಾಯಕದ ಮಹತ್ವ ಹೆಚ್ಚಿಸಿದರು ಎಂಬ ನಂಬಿಕೆ ಜನರದು.
ಬತ್ತಿದ ಬಾವಿಗೆ ನೀರು
ನಿರಂತರ ತೇಲ್ವೆ ಬಾವಿಯಲ್ಲಿ ನೀರಿದ್ದು ನೀರು ಒಮ್ಮಿಂದೊಮ್ಮೆಗೆ ಬತ್ತಿ ಹೋದ ಕಾರಣ ಜನರು ಬಾವಿಯಲ್ಲಿ ನೀರಿಲ್ಲ, ತೊಂದರೆಯಾಗುತ್ತಿದೆ ಎಂದು ಗೋಳಾಡುತ್ತಿದ್ದ ಕಾರಣ ಆಗಿಂದಾಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಅವರು ಪಣಿಯಪ್ಪನಿಗೆ ತಿಳಿಸಿ ತಕ್ಷಣವೇ ಪೂಜೆಯನ್ನು ಏರ್ಪಡಿಸಿ, ಪೂಜೆಯ ನಂತರ ಹೂವು ಹಣ್ಣು ಹಾಲು ತುಪ್ಪ ಬಾವಿಯಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ಸಮರ್ಪಿಸಿದ ಮರುಕ್ಷಣವೇ ನೀರು ಹುಕ್ಕಿದ ಪವಾಡವೊಂದು ಸಹ ನಡೆಯಿತು.
ಸತ್ತ ಎಮ್ಮೆ ಬದುಕಿಸಿದ ಪವಾಡ
ಒಬ್ಬ ಹೆಣ್ಣು ಮಗಳು ನನ್ನ ಮನೆಯ ಆರ್ಥಿಕ ಸ್ಥಿತಿಯನ್ನು ಎಮ್ಮೆಯಿಂದ ಬಂದ ಹಾಲನ್ನು ಕರೆದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಳು. ಹೀಗಿರುವಾಗ ಆ ಎಮ್ಮೆಯೂ ಆಕೆಯ ಬಳಿ ಮಾತನಾಡುತ್ತಿತ್ತು ಎಂದು ಜನರು ಹೇಳುತ್ತಾರೆ. ಆ ಎಮ್ಮೆ ಒಮ್ಮೆ ಆ ಹೆಣ್ಣು ಮಗಳನ್ನು ಮೇಲಿಂದ ಮೇಲೆ ಕರೆಯುತ್ತಿದ್ದ ಕಾರಣ ಆಕೆ ಕೋಪಗೊಂಡು ನಿನ್ನ ಬಾಯಾದರೂ ಸೇಯಬಾರದ(ಹೋಗಬಾರದ) ಎಂದು ಶಪಿಸಿದಳಂತೆ ಆಗಿನಿಂದ ಆ ಎಮ್ಮೆಗೆ ಬಾಯಿ ಹೋಯಿತು ನಂತರ ಈ ಮನೆಗಾಗಿ ನಾನು ಹಾಲುಣಿಸಿದೆ ಆದರೆ ತನ್ನ ಸಲಹುವ ತಾಯಿಯೇ ನನಗೆ ಬಾಯಿ ಸೇದಲಿ ಎಂದಳೆಂದು ಚಿಂತೆಗೆ ಬಿದ್ದು ಎಮ್ಮೆಯೂ ತೀರಿಹೋಯಿತಂತೆ. ಇದಾದ ನಂತರ ಹೆಣ್ಣು ಮಗಳ ಆರ್ಥಿಕ ಸ್ಥಿತಿ ಕುಂದಿ ಅವಳ ಮಗು ಹಸಿವಿನಿಂದ ಒದ್ದಾಡಿದರು ಒಂದು ಹನಿ ಹಾಲು ಯಾವ ಮನೆಯಲ್ಲೂ ಸಿಗುವುದಿಲ್ಲ, ಆಗ ಆಕೆ ಸತ್ತ ಎಮ್ಮೆಗೆ ಕಣ್ಣೀರಿಟ್ಟು ಮಗುವಿನೊಂದಿಗೆ ಕೆರೆಗೆ ಹಾರಲು ಹೋಗುತ್ತಾಳೆ, ಅದೇ ಸಂದರ್ಭದಲ್ಲಿ ಎದುರಾದ ಶ್ರೀ ಗುರುಗಳು ತನಗೆ ಒಂದು ಲೋಟ ಹಾಲನ್ನು ಕೊಡುವಂತೆ ಕೇಳುತ್ತಾರೆ ಆದರೆ ಆಕೆ ನನ್ನ ಹೆಮ್ಮೆ ಸತ್ತುಹೋಗಿದೆ ಎಂದು ಅಳುತ್ತಾ ಹೇಳುತ್ತಾಳೆ, ಇದನ್ನು ಕೇಳಿದ ಶ್ರೀಗಳು ಇಲ್ಲ ನಿನ್ನ ಹೆಮ್ಮೆ ಬದುಕಿಯೇ ಇದೆ ನೀನು ಸುಳ್ಳು ಹೇಳುತ್ತಿರುವೆ ಎಂದು ಹೇಳುತ್ತಾರೆ. ಆದರೆ ಆಕೆ ನಿಜವಾಗಿಯೂ ಗುರುಗಳೇ ನನ್ನ ಹೆಮ್ಮೆ ಸತ್ತು ಹೋಗಿದೆ ಎಂದು ಹೇಳುತ್ತಾಳೆ ಇದಾದ ನಂತರ ಹೋಗಿ ಹಾಲು ಕರೆದು ತಾ ನಿನ್ನ ಎಮ್ಮೆ ಜೀವಂತವಿದೆ ಎಂದು ಸ್ವಾಮಿಗಳು ಹೇಳಿದಾಗ ಆ ಎಮ್ಮೆ ಮತ್ತೆ ಜೀವ ಪಡೆದು ಹಾಲು ನೀಡಿತೆಂಬ ಪ್ರತೀತಿ ಮತ್ತು ಇಂದಿಗೂ ಶ್ರೀ ಗುರುವಿಗೆ ಬಹುತೇಕ ಭಕ್ತರು ತಮ್ಮ ಮನೆಯಲ್ಲಿ ಹಸು, ಎಮ್ಮೆ ಕರು ಹಾಕಿದ ಬಳಿಕ ಮೊದಲ ಮಡಿ ಹಾಲು (ಗಿಣ್ಣು)ವನ್ನು ಶ್ರೀಗುರುಗಳಿಗೆ ಅರ್ಪಿಸುವ ವಾಡಿಕೆಯನ್ನು ಇಂದಿಗೂ ಬೆಳೆಸಿಕೊಂಡು ಬಂದಿರುವ ಪರಂಪರೆಯನ್ನು ಕಾಣಬಹುದು.
ಪಣಿಯಪ್ಪನಿಗೆ ಕಣ್ಣು ತೆರೆಸಿದ ಶ್ರೀಗುರು ತಿಪ್ಪೇರುದ್ರೇಶ
ಒಮ್ಮೆ ತಮ್ಮ ಮನೆಯ ಪೂಜೆಗಾಗಿ ಪಣಿಯಪ್ಪ ಶ್ರೀ ಗುರುಗಳಿಗೆ ಆಹ್ವಾನವನ್ನು ನೀಡಿರುತ್ತಾರೆ. ಅದೇ ಸಂದರ್ಭದಲ್ಲಿ ದಲಿತರು ಒಬ್ಬರು ತಮ್ಮ ಮನೆಗೆ ಪೂಜೆಗಾಗಿ ಹಾಗೂ ಆಹ್ವಾನ ನೀಡುತ್ತಾರೆ. ಮನಸ್ಸು ಮಡಿವಂತಿಕೆ ಮತ್ತು ಶುದ್ದತೆಯಿಂದ ಕೂಡಿದ್ದ ಅವರ ಮನೆಗೆ ಶ್ರೀ ಗುರುಗಳು ಭಿನ್ನಕ್ಕೆ (ಪೂಜೆ)ಎಂದು ತೆರಳುತ್ತಾರೆ. ಅದೇ ಸಂದರ್ಭದಲ್ಲಿ ಪಣಿಯಪ್ಪ ತಾನು ಅಹ್ವಾನ ನೀಡಿದ್ದರು ಇನ್ನೂ ಗುರುಗಳು ಬಂದಿಲ್ಲ ಎಂದು ದಲಿತರ ಮನೆಯ ಮುಂದೆ ಹಾದು ಹೋಗುವ ಸಂದರ್ಭದಲ್ಲಿ ಅವರ ಮನೆಯಲ್ಲಿ ಶ್ರೀ ಗುರುಗಳನ್ನು ನೋಡಿಬಿಡುತ್ತಾರೆ. ತಕ್ಷಣವೇ ಪಣಿಯಪ್ಪನು ಗುರುಗಳೇ ಇದು ಅನ್ಯಾಯ ದಲಿತರ ಮನೆಗೆ ನೀವು ಪೂಜೆಗೆ ತೆರಳಿದ್ದೀರಿ, ನಾನು ಆಹ್ವಾನಿಸಿದ ನಂತರ ಮಡಿ ಮೈಲಿಗೆಯಿಂದ ನೀವು ಅಲ್ಲಿಗೆ ಬರಬೇಕಿತ್ತು, ಈ ದಲಿತರ ಮನೆಗೆ ಬಂದಿದ್ದೀರಿ ಎಂದು ರೋಷದಿಂದ ಕೇಳುತ್ತಾರೆ, ಅದಕ್ಕೆ ಶ್ರೀಗಳು ನಗುತ್ತಾ ನಿನ್ನ ಮನೆಯಲ್ಲೂ ನಾನಿದ್ದೇನೆ ಎಂದು ಹೇಳುತ್ತಾರೆ. ಎರಡೆರಡು ಕಡೆ ನೀವು ಹೇಗೆ ಇರಲು ಸಾಧ್ಯ ಎಂದು ಪಡಿಯಪ್ಪನು ಓಡಿ ಹೋಗಿ ತನ್ನ ಮನೆಯಲ್ಲಿ ನೋಡುತ್ತಾನೆ ಆದರೆ ಶ್ರೀಗಳು ಏಕಕಾಲಕ್ಕೆ ದಲಿತರ ಮನೆಯಲ್ಲೂ ಮತ್ತು ಪಣಿಯಪ್ಪನ ಮನೆಯಲ್ಲಿಯೂ ಪೂಜೆಗೆಯ್ಯುತ್ತಿರುತ್ತಾರೆ. ಇದನ್ನು ಕಂಡ ಪಣಿಯಪ್ಪ ಮಹಾಮಹಿಮರಾದ ನಿಮ್ಮನ್ನು ನಾನು ನಿಂದಿಸಿದೆ, ಕ್ಷಮಿಸಿ ಗುರುಗಳೇ ಎಂದು ಕ್ಷಮೆ ಯಾಚಿಸುತ್ತಾನೆ. ಶ್ರೀ ಗುರುಗಳು ಪಣಿಯಪ್ಪನಿಗೆ ಆತ್ಮಲಿಂಗವನ್ನು ಕರುಣಿಸುತ್ತಾರೆ. ಆಗ ಶ್ರೀ ಗುರುಗಳು ಹೇಳುತ್ತಾರೆ ಜಾತಿ ಸಂಕೋಲೆಗಳನ್ನು ನಾವು ಮಾಡಿಕೊಂಡಿದ್ದೇವೆ, ಜಾತಿಗಳು ಜಗಳಗಳನ್ನು ತಂದಿಡುತ್ತವೆ, ಪ್ರೀತಿ ವಿಶ್ವಾಸ ಬದುಕನ್ನು ಅದ್ಭುತಗೊಳಿಸುತ್ತದೆ ಎಂದು ಹೇಳಿ ಜಾತಿ ಸಂಕೋಲೆಯನ್ನು ಮುರಿಯುತ್ತಾರೆ. ಅಂದಿನಿಂದ ಶ್ರೀ ಗುರುಗಳನ್ನು ಎಲ್ಲ ಜಾತಿಯವರು ಜಾತಿ ಪಕ್ಕಕ್ಕಿರಿಸಿ ಎಲ್ಲರನ್ನೂ ಪ್ರೀತಿಯಿಂದ ಕಾಣಲು ಪ್ರಾರಂಭಿಸುತ್ತಾರೆ.
ಬರಗಾಲದಲ್ಲಿ ಹಸಿವು ನೀಗಿಸಿದ ಶ್ರೀಗುರು ತಿಪ್ಪೆರುದ್ರೇಶ
ಗಂಗಮಾಳಮ್ಮ ಎಂಬ ಹೆಣ್ಣುಮಗಳೊಬ್ಬಳು ನನ್ನ ಮಗು ಹಸಿವೆ ಎಂದು ಒದ್ದಾಡುತ್ತಿದೆ, ನನ್ನ ಹೊಟ್ಟೆಗೂ ಹಿಟ್ಟಿಲ್ಲ, ದೇಹಬಸಿದರು ಹನಿ ಎದೆ ಹಾಲಿಲ್ಲ ಮಗುವು ಹಸಿವಿನಿಂದಲೇ ಸಾಯುತ್ತದೇನೋ ಗುರುಗಳೆ ಒಮ್ಮೆ ಬರಗಾಲ ಬಂದು ಜನರು ಹಸಿವಿಯಿಂದ ಒದ್ದಾಡುತ್ತಿದ್ದಾರೆ ಏನು ಮಾಡುವುದು ಶ್ರೀ ಗುರುಗಳೇ ಎಂದು ಕೇಳಿದಾಗ ಶ್ರೀ ಗುರುಗಳು ಒಂದು ಸೇರು ಕಾಳನ್ನು ನೀಡಿ ಇದನ್ನು ನಿಮ್ಮ ಮನೆಯ ವಾಡೆವಿನ(ಕಾಳು ಅಡಗಿಸಿಡುವ ವಾಡೆವು)ಲ್ಲಿ ಹಾಕು ಎಂದು ಹೇಳುತ್ತಾರೆ. ಅದನ್ನು ಅದರೊಳಗೆ ಹಾಕಿದ ನಂತರ ಮೇಲ್ಭಾಗವನ್ನು ಮುಚ್ಚಬೇಕು ಜೊತೆಗೆ ಅದನ್ನು ಯಾವುದೇ ಕಾರಣಕ್ಕೂ ತೆರೆಯಬಾರದು. ಬಂದ ಊರಿನ ಜನರೆಲ್ಲರಿಗೂ ಹಸಿವನ್ನು ನೀಗಿಸುವ ಅಕ್ಷಯ ಪಾತ್ರೆಯದಾಗುತ್ತದೆ ಎಂದು ಹೇಳುತ್ತಾರೆ. ಅದರಂತೆ ಶ್ರೀಗಳು ಹೇಳಿದ ಹಾಗೆ ಗಂಗಮಾಳಮ್ಮಳು ಮಾಡುತ್ತಾಳೆ ಹೀಗೆ ಊರಿನ ಜನರೆಲ್ಲರೂ ಬಂದು ಆಕೆಯ ಬಳಿ ಕಾಳು ತೆಗೆದುಕೊಂಡು ಹೋಗಿ ಆಹಾರ ತಯಾರಿಸಿಕೊಂಡು ಸೇವಿಸಿ ಹಸಿವನ್ನು ನೀಗಿಸಿಕೊಳ್ಳುತ್ತಾರೆ. ಹೀಗೆ ಬಹುತೇಕ ದಿನಗಳು ಕಳೆಯಿತು ಆದರೆ ಆಕೆಯ ಮನೆಯ ಪಕ್ಕದಲ್ಲಿ ಇದ್ದ ಮತ್ತೊಬ್ಬ ಹೆಣ್ಣು ಮಗಳು ಎಷ್ಟು ತೆಗೆದರೂ ಇದರಿಂದ ಕಾಡು ಬರುತ್ತಲೇ ಇದೆ, ಇದನ್ನು ತೆಗೆದರೆ ಮತ್ತಷ್ಟು ಬರಬಹುದು ಎಂದು ಮತ್ತು ಶ್ರೀಮಂತರು ಆಗಬಹುದು ಎಂದು ಹೇಳುತ್ತಾಳೆ. ಗಂಗಮಾಳಮ್ಮಳಿಗೆ ಅಷ್ಟು ತಿಳುವಳಿಕೆ ಇರದ ಕಾರಣ ಆಕೆ ಅದನ್ನು ತೆಗೆದುಬಿಡುತ್ತಾಳೆ ಅದೆಲ್ಲವೂ ಬೂದಿಯಾಗಿ ಹೋಗಿಬಿಡುತ್ತದೆ. ನಂತರ ಗುರುಗಳ ಬಳಿ ಬಂದಾಗ ನಡೆದ ಘಟನೆಯನ್ನು ಆಕೆ ವಿವರಿಸುತ್ತಾಳೆ ಆದರಿಸಿ ಗುರುಗಳು ಅತಿ ಆಸೆ ಗತಿಗೇಡು ಎಂಬ ಪಾಠವನ್ನು ಆಕೆಗೆ ಮನವರಿಕೆ ಮಾಡಿ ಕಳುಹಿಸುತ್ತಾರೆ.
ಹಟ್ಟಿಯ ದೊರೆ ಮಲ್ಲಪ್ಪ ನಾಯಕ ಶ್ರೀಗಳಿಗೆ ರಾಜ್ಯತ್ಯಾಗ ಮಾಡಿದ್ದು.
ಶ್ರೀ ಗುರುಗಳು ಬತ್ತಿದ ಬಾವಿಯಲ್ಲಿ ನೀರು ತರಿಸಿದ ನಂತರ, ಊರ ಸುತ್ತಮುತ್ತಲಿನಲ್ಲಿ ಕೆರೆಗಳು ಬಾವಿಗಳು ನಿರ್ಮಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಿದ ನಂತರ, ಸತ್ತ ಹೆಮ್ಮೆಯನ್ನು ಬದುಕಿಸಿದ ನಂತರ, ಏಕಾಂತ ಗುಹೆಯಲ್ಲಿ ನಂದಿಯನ್ನು ಸ್ಥಾಪಿಸಿ ಶಿವ ಧ್ಯಾನವನ್ನು ಮಾಡಿದ ಶ್ರೀ ಗುರುಗಳಿಗಾಗಿ ನೀವು ಸಾಮಾನ್ಯರಲ್ಲ ಹಟ್ಟಿಯ ದೊರೆಮಲ್ಲಪ್ಪ ನಾಯಕ ಶ್ರೀ ಗಳಿಗೆ ರಾಜ್ಯ ತ್ಯಾಗ ಮಾಡಿದ್ದನ್ನು ಸಹ ಕಾಣಬಹುದು.
ಹೀಗೆ ಸಾಕಷ್ಟು ಪವಾಡವನ್ನು ಗೈದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಟ್ಟದಲ್ಲಿ ನೆಲೆಸುತ್ತಾರೆ. ನಂತರ ಹೊರಮಠದಲ್ಲಿ ಜೀವಂತ ಸಮಾಧಿಯನ್ನು ಹೊಂದುತ್ತಾರೆ. ಇಂದಿಗೂ ಸಾಕಷ್ಟು ಭಕ್ತರು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯನ್ನು ಆರಾಧ್ಯ ದೈವವೆಂದು ಪೂಜಿಸುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ ಚಿತ್ರ ನಕ್ಷತ್ರ ಫಾಲ್ಗುಣ ಬಹುಳ ದಿನದಂದು, ತಿಪ್ಪೇರುದ್ರಸ್ವಾಮಿಯು ಜೀವಂತ ಸಮಾಧಿ ಸ್ವೀಕರಿಸಿದರು ಎಂದು ಹೇಳಲಾಗುತ್ತದೆ, ಅವರ ಇಚ್ಛೆಯಂತೆ ಅವರನ್ನು ಜೀವಂತವಾಗಿ ಸಮಾಧಿ ಮಾಡಲಾಯಿತು. ಶ್ರೀ ಗುರುಗಳಿಗೆ ಕರ್ನಾಟಕ , ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಲಕ್ಷಾಂತರ ಜನರು ಭಕ್ತರಿದ್ದು ಅವರನ್ನು ದೇವರು, ಮಹಾಮಹಿಮರು ಎಂದು ಪ್ರತಿವರ್ಷ ಮಾರ್ಚ್ ತಿಂಗಳಿನಲ್ಲಿ ಚಿತ್ತ ನಕ್ಷತ್ರದ ಸಮಯದಲ್ಲೇ ತೇರನ್ನು ಎಳೆಯುತ್ತಾರೆ.
ಹೀಗೆ ಪವಾಡ ಮತ್ತು ಅಭಿವೃದ್ಧಿ ಕಾಯಕದ ಕೆಲಸ ಮಾಡಿದ ಶ್ರೀ ಗುರುಗಳು ನಾಯಕನಹಟ್ಟಿ ಶ್ರೀ ಗುರು ತಿಪ್ಪೆರುದ್ರಸ್ವಾಮೀಯೆಂದೇ ಪ್ರಖ್ಯಾತಿ ಪಡೆಯುತ್ತಾರೆ. ಮಧ್ಯ ಕರ್ನಾಟಕದ ಪ್ರಸಿದ್ಧ ಪ್ರಮುಖ ಜಾತ್ರೆ ಎಂದು ಪ್ರಖ್ಯಾತಿಯಾಗಿರುವ ನಾಯಕನಹಟ್ಟಿ ಕ್ಷೇತ್ರದಲ್ಲಿ ಒಟ್ಟು ಒಂಭತ್ತು ದಿನಗಳ ಕಾಲ ನಡೆಯುವ ನಾಯಕನಹಟ್ಟಿ ಪುಣ್ಯ ಕ್ಷೇತ್ರದ ಈ ಪರಸೆಯು ಸಾವಿರಾರು ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ. ಪ್ರಾರಂಭದಲ್ಲಿ ರಥೋತ್ಸವದ ಸಿದ್ಧತಾ ಕಾರ್ಯ ಆರಂಭಗೊಳ್ಳುತ್ತದೆ. ದಕ್ಷಿಣ ಭಾರತದಲ್ಲೇ ಎರಡನೇ ಅತಿ ದೊಡ್ಡ ರಥ ಎಂಬ ಖ್ಯಾತಿ ಪಡೆದಿರುವ ತಿಪ್ಪೇರುದ್ರಸ್ವಾಮಿ ರಥವನ್ನು ಸಿದ್ಧಪಡಿಸುವ ಕಾರ್ಯ ನಡೆಯುತ್ತದೆ. ಒಂಭತ್ತು ಅಂತಸ್ತುಗಳನ್ನು ಹೊಂದಿರುವ ಈ ರಥ ಸುಮಾರು 100 ಟನ್ ತೂಕದಿಂದ ಕೂಡಿದ್ದು, 70 ಅಡಿ ಎತ್ತರ ಇರುವ ರಥವನ್ನು ಜಾತ್ರೆಯ ದಿನ ಸುಮಾರು ಒಂದು ಕಿ.ಮೀ. ದೂರದವರೆಗೆ ಎಳೆಯಲಾಗುತ್ತದೆ. ಪಂಚಗಾಲಿಯ ಈ ರಥ ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಜಾತ್ರೆ ದಿನವನ್ನು ನಿಗದಿ ಮಾಡುವ ಮುನ್ನ ಜಂಗಮರು,ಗೌಡರು, ಗೊಂಚಿಗಾರರು,ಮಡಿವಾಳರು ಹೀಗೆ ಪ್ರತಿಯೊಬ್ಬ ಸಮುದಾಯದವರು ಸಹ ಊರಿನ ಮುಖಂಡರು ಎಲ್ಲರೂ ಒಂದೆಡೆ ಸೇರಿ ನಿಗದಿಪಡಿಸುತ್ತಾರೆ. ಇದಾದ ನಂತರ ಮರುದಿನ ತೇರಿನ ಗಾಲಿಯನ್ನು ಹೊರಗೆ ಹಾಕಲಾಗುತ್ತದೆ, ಅಂದು ಗುಗ್ಗರಿ ಹಬ್ಬ, ಗಾಲಿ ಪೂಜೆ, ಹೂವಿನ ಪೂಜೆ ಹೇಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ನಂತರ ತೇರನ್ನು ಸಿದ್ದಪಡಿಸಲು ಮುಂದಾಗುತ್ತಾರೆ. ಇದಾದ ನಂತರ ಒಂದು ದಿನ ಸರ್ಪ ವಾಹನೋತ್ಸವವನ್ನು ಸಿದ್ಧಪಡಿಸಿ ಪಲ್ಲಕ್ಕಿಯಲ್ಲಿ ಉತ್ಸವ ನಡೆಸಲಾಗುತ್ತದೆ, ಇದಾದ ಎರಡನೆಯ ದಿನ ಮಯೂರ ವಾಹನೋತ್ಸವ ಎಂದು ಮಾಡಲಾಗುತ್ತದೆ ಇಲ್ಲಿ ನವಿಲಿನ ಅಲಂಕಾರದ ಮೂಲಕ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಪಲ್ಲಕ್ಕಿ ಮಹೋತ್ಸವವನ್ನು ಮಾಡುತ್ತಾರೆ, ಇದಾದ ಮೂರನೇ ದಿನ ಗಜವಾಹನೋತ್ಸವವನ್ನು ಸಿದ್ಧಪಡಿಸಿ ಆನೆಯ ಪಲ್ಲಕ್ಕಿಯ ಮೇಲೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಉತ್ಸವವನ್ನು ನಡೆಸಲಾಗುತ್ತದೆ, ಇದಾದ ನಾಲ್ಕನೆಯ ದಿನ ಸಿಂಹವಾಹನೋತ್ಸವವನ್ನು ಮಾಡಲಾಗುತ್ತದೆ ಸಿಂಹದ ಮೇಲೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಉತ್ಸವವನ್ನು ನಡೆಸಲಾಗುತ್ತದೆ. ಇದಾದ ಐದನೆಯ ದಿನ ಅಶ್ವವಾಹನೋತ್ಸವವೆಂದು ನಡೆಸಲಾಗುತ್ತದೆ, ಇಲ್ಲಿ ಕುದುರೆಯ ಮೇಲೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಅಲಂಕಾರವನ್ನು ಮಾಡಿ ಪಲ್ಲಕ್ಕಿಯ ಉತ್ಸವವನ್ನು ನಡೆಸಲಾಗುತ್ತದೆ. ಇದಾದ ಮರುದಿನ ಮತ್ತೆ ಹೂವಿನ ಪಲ್ಲಕ್ಕಿ ಉತ್ಸವವನ್ನು ನಡೆಸಲಾಗುತ್ತದೆ. ನಂತರ ಮಹಾಗಣಪತಿ ಪೂಜೆ ಅದಾದ ಬಳಿಕೆ ತೇರನ್ನು ಎಳೆಯುತ್ತಾರೆ. ಅಲ್ಲಿನ ಮತ್ತೊಂದು ವಿಶೇಷವೆಂದರೆ ಕೊಬ್ಬರಿ ಸುಡುವ ಪದ್ಧತಿ. ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ಒಣಕೊಬ್ಬರಿ ಸುಟ್ಟಿರುವುದು ಬಲು ಇಷ್ಟ. ಆದ್ದರಿಂದ ಭಕ್ತರು ಒಣಕೊಬ್ಬರಿಯನ್ನು ಸುಡುವ ವಾಡಿಕೆಯನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಒಣ ಕೊಬ್ಬರಿಯ ಎರಡು ಬಟ್ಟಲಿನಲ್ಲಿ ಒಂದು ಬಟ್ಟಲನ್ನು ಸಂಪೂರ್ಣವಾಗಿ ಸುಟ್ಟು ಬಿಡುತ್ತಾರೆ. ಮತ್ತೊಂದು ಬಟ್ಟಲು ಅರೆ ಬರೆ ಸುಟ್ಟು ಸ್ವಾಮಿಯ ಪ್ರಸಾದವೆಂದು ಸ್ವೀಕರಿಸುತ್ತಾರೆ. ಅಲ್ಲಿ ಕೊಬ್ಬರಿ ಸುಟ್ಟ ಬೂದಿಯನ್ನು ತಂದು ಆಧಾರವೆಂದು ಧರಿಸುವ ಭಕ್ತರು ಇದ್ದಾರೆ ಜೊತೆಗೆ ಮೈಕೈ ನೋವು, ಅನಾರೋಗ್ಯದಿಂದ ಬಳಲುತ್ತಿರುವವರು ನೀರಿನಲ್ಲಿ ಬೆರೆಸಿ ಕುಡಿಯುವ ಮತ್ತು ಅದರಿಂದ ನಾವು ರೋಗ ಮುಕ್ತರಾಗುತ್ತೇವೆ ಎಂಬ ನಂಬಿಕೆ ಜನರದ್ದು. ಹೀಗೆ ನಾಯಕನಹಟ್ಟಿ ಕ್ಷೇತ್ರವು ಹತ್ತು ಹಲವು ಅದ್ಭುತಗಳಿಂದ ಕೂಡಿದ್ದು ಅಲ್ಲಿ ನಿತ್ಯವೂ ದಾಸೋಹ ನಡೆಯುತ್ತದೆ. ಹಾಗೆ ಯಾವುದೇ ಧರ್ಮ, ಜಾತಿ, ಎಂಬ ಭೇದ ಭಾವವಿಲ್ಲದೆ ಸರ್ವ ಜನಾಂಗೀಯ ಶಾಂತಿಯ ತೋಟ ಎಂಬಂತೆ ಎಲ್ಲ ಧಾರ್ಮಿಯರು, ಜಾತಿಯವರು ಸೇರಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ರಥೋತ್ಸವಕ್ಕೆ ಸಾಕ್ಷಿಯಾಗುತ್ತಾರೆ. ಹೊರಮಠ ಮತ್ತು ಒಳಮಠದಲ್ಲಿ ಎಲ್ಲ ಜನಾಂಗದವರಿಗೂ ಪ್ರವೇಶವಿರುವುದನ್ನು ಕಾಣಬಹುದು. ದಾಸೋಹದ ಪಂಕ್ತಿ ಸಾಲಿನಲ್ಲೂ ಯಾವ ಬೇಧ ಭಾವವಿಲ್ಲದೆ ಪ್ರಸಾದವನ್ನು ಭಕ್ತರು ಸ್ವೀಕರಿಸುತ್ತಾರೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಮತ್ತೊಂದು ಅಚ್ಚರಿ ಎಂದರೆ ಹುಂಡಿಗೆ ಹಾಕಿದ ಹಣ ದೇವರಿಗೆ ಸಲ್ಲುತ್ತದೆ, ದೇವರ ಅಭಿವೃದ್ಧಿ ಕಾರ್ಯಕ್ಕೆ ಸಲ್ಲುತ್ತದೆ ಹಾಗಾಗಿ ನಿಮ್ಮ ಹಣವನ್ನು ಆರತಿ ತಟ್ಟೆಗೆ ಹಾಕುವ ಬದಲು ಹುಂಡಿ(ಡಬ್ಬಿ)ಗೆ ಹಾಕಿ ಎಂದು ಬರೆದು ಹಾಕಿರುವುದನ್ನು ಕಂಡರೆ ಮತ್ತಷ್ಟು ಎಲ್ಲರು ಅಚ್ಚರಿಗೊಳಗಾಗುತ್ತಾರೆ. ಹೀಗೆ ನಾಯಕನಹಟ್ಟಿಯ ಪುಣ್ಯ ಕ್ಷೇತ್ರವು ನಂಬಿ ಬಂದ ಭಕ್ತರ ಪಾಲಿಗೆ ವರಕರುಣಿಸುವ ಪುಣ್ಯ ತಳವೆಂದು ಭಕ್ತರು ನಂಬುವ ಪ್ರತೀತಿಗಳನ್ನು ಕಾಣಬಹುದು. ದೇವರು ಎಂದರೆ ನನ್ನ ಪಾಲಿಗೆ ಕಾಯಕ, ನಿಷ್ಠೆ, ಸತ್ಯ, ನೀತಿ ಅಲ್ಲದೆ ಬೇರೇನಲ್ಲ ಪಾವನ ದೈವಗಳು ಅದೇನೇ ಇರಲಿ ದೇವರು, ಭಕ್ತಿ ಎಂಬ ಪರಿಕಲ್ಪನೆಗಳು ಇರದೇ ಹೋಗಿದ್ದರೆ ಮನುಷ್ಯ ಮತ್ತಷ್ಟು ಸ್ವಾರ್ಥಿಯಾಗುತ್ತಿದ್ದನೇನೋ? ಇಂದಿಗೂ ಮನುಷ್ಯನಲ್ಲಿ ಕಿಂಚಿತ್ ಆದರೂ ಒಳ್ಳೆತನಗಳನ್ನು ಉಳಿಸಿಕೊಳ್ಳಲು ದೇವರು ಎಂಬ ಅದ್ಭುತವೇ ಕಾರಣವಾಗಿದೆ ಎಂಬುದು ನನ್ನ ನಂಬಿಕೆ. ಒಟ್ಟಿನಲ್ಲಿ ನಾಯಕನಹಟ್ಟಿ ಪುಣ್ಯಕ್ಷೇತ್ರ ಇಡೀ ಮಧ್ಯ ಕರ್ನಾಟಕದ ಪ್ರಸಿದ್ಧ ಪ್ರಮುಖ ಜಾತ್ರೆ ಎಂಬ ಪ್ರಖ್ಯಾತಿಯನ್ನು ಇಂದಿಗೂ ಎಂದೆಂದಿಗೂ ಹೊಂದಿದೆ ಎಂಬುದೇ ವಿಶೇಷ. ಸಾಧ್ಯವಾದರೆ ಆ ಪುಣ್ಯಕ್ಷೇತ್ರಕ್ಕೊಮ್ಮೆ ನೀವು ಭೇಟಿ ಕೊಡಿ.
✍🏻ಡಾ ಮೇಘನಾ ಜಿ
ಉಪನ್ಯಾಸಕರು ಮತ್ತು ಸಂಯೋಜಕರು
ಸಮಾಜಶಾಸ್ತ್ರ ಅಧ್ಯಯನ ವಿಭಾಗ
ರಾಯಚೂರು ವಿಶ್ವವಿದ್ಯಾಲಯ, ರಾಯಚೂರು.