ಸುವರ್ಣಸೌಧ ಬೆಳಗಾವಿ: ವಿಧಾನ ಪರಿಷತ್: ಸರ್ಕಾರಿ ನೌಕರರ ವೇತನ ಪರಿಷ್ಕರಿಸಲು ರಚಿಸಿರುವ 7ನೇ ವೇತನ ಆಯೋಗದ ವರದಿಯನ್ನು ಪಡೆದು ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಭಾನಾಯಕ ಎನ್.ಎಸ್. ಬೋಸರಾಜು ನೀಡಿದ ಉತ್ತರ ತೃಪ್ತಿಕರವಾಗಿಲ್ಲ. ಮುಖ್ಯಮಂತ್ರಿಯೇ ಸದನಕ್ಕೆ ಬಂದು ಉತ್ತರ ನೀಡಬೇಕು ಎಂದು ಪಟ್ಟು ಹಿಡಿದು ಬಿಜೆಪಿ, ಜೆಡಿಎಸ್ ಸದಸ್ಯರು ಸಭಾತ್ಯಾಗ ನಡೆಸಿದರು.
ನಿಯಮ 330ರಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ‘ಆಯೋಗದ ವರದಿ ಸಿದ್ಧವಾಗಿದ್ದರೂ, ವಿನಾ ಕಾರಣ ಆಯೋಗದ ಅವಧಿ ವಿಸ್ತರಿಸಲಾಗಿದೆ. ಸರ್ಕಾರದಲ್ಲಿ ದುಡ್ಡಿಲ್ಲ. ವೇತನ ಪರಿಷ್ಕರಿಸಲು ಮನಸ್ಸಿಲ್ಲ’ ಎಂದು ದೂರಿದರು. ಅವರ ಮಾತುಗಳಿಗೆ ಬಿಜೆಪಿ, ಜೆಡಿಎಸ್ ಸದಸ್ಯರು ದನಿಗೂಡಿಸಿದರು.
ಉತ್ತರ ನೀಡಿದ ಎನ್.ಎಸ್. ಬೋಸರಾಜು, ‘ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ 15ರವರೆಗೆ ವಿಸ್ತರಿಸಲಾಗಿದೆ. ಸರ್ಕಾರ ಆಯೋಗದ ಅಂತಿಮ ವರದಿಯ ನಿರೀಕ್ಷೆಯಲ್ಲಿದೆ. ಆದಷ್ಟು ಬೇಗ ವರದಿ ಪಡೆದು ಸಾಧಕ-ಬಾಧಕಗಳನ್ನು ನೋಡಿಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.
ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಭಾಪತಿ ಪೀಠದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ, ಜೆಡಿಎಸ್ ಸದಸ್ಯರು, ‘ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಮೋಸ ಮಾಡುತ್ತಿದೆ’ ಎಂದು ಘೋಷಣೆ ಕೂಗಿದರು. ಬಿಜೆಪಿಯ ಎಸ್.ವಿ. ಸಂಕನೂರ, ಚಿದಾನಂದಗೌಡ, ತೇಜಸ್ವಿನಿಗೌಡ, ಶಶಿಲ್ ಜಿ. ನಮೋಶಿ, ಜೆಡಿಎಸ್ನ ಎಸ್.ಎಲ್. ಬೋಜೇಗೌಡ ದನಿಗೂಡಿಸಿದರು.
‘ವೇತನ ಪರಿಷ್ಕರಣೆ ಬಗ್ಗೆ ಒಂದು ವಾರಗಳ ಕಾಲ ಸುದೀರ್ಘ ಚರ್ಚೆ ಆಗಬೇಕು’ ಎಂದು ಎಚ್. ವಿಶ್ವನಾಥ್ ಸಲಹೆ ನೀಡಿದರು.