ಮರೆಯಲಾಗದ ಮಹಾನುಭಾವರು
ಬದುಕಿನ ಭವಣೆಯ ಮೀರಿ ನಿಂತ
ಮಹಾನುಭಾವ ತಲ್ಲೂರ ರಾಯನಗೌಡರು
ನೆನಪು ಮತ್ತೆ ಮತ್ತೆ ಬರುತಿದೆ
ಸ್ವಾತಂತ್ರ್ಯ ಸಮಾಜವಾದಿಗಳ ನೆನಪಿನೊಳಗೆ
ಚಿತ್ತಿ ನಕ್ಷತ್ರ ನಾಲ್ಕನೆಯ ಚರಣ
ಪೆಬ್ರುವರಿ ೨೮. ೧೯೧೦
ಧರೆಯೊಳು ತಲ್ಲೂರ ಗ್ರಾಮದ
ಶರಣ ದಂಪತಿ ಲಿಂಗನಗೌಡ-ಬಸಮ್ಮ
ಉದರದೊಳು ಮೂಡಿದ ನಕ್ಷತ್ರವಿದು
ಬಾಲ್ಯದೊಳು ತಾಯಿಯ ಅಗಲಿಕೆಯ
ನೋವು ಉಂಡು ಅಜ್ಜಿಯ ಆಶ್ರಯದಿ
ಬೆಳೆಯುತಲಿ ಶಿಕ್ಷಣ ಪಡೆಯಿತು
ಸ್ವಾತಂತ್ರ್ಯದ ದಿನಗಳಲಿ
ಮಹಾತ್ಮಾ ಗಾಂಧೀಜಿಯವರ ಪ್ರಭಾವ ವಲಯದಿ
ಉಕ್ಕುತ ಸ್ವಾತಂತ್ರ್ಯ ಹೋರಾಟದ ಕಿಚ್ಚು
ಎಲ್.ಎಲ್.ಬಿ.ಕಲಿಕೆಯ ತಿಲಾಂಜಲಿ
ದುಮ್ಮಿಕ್ಕಿ ಸ್ವಾತಂತ್ರ್ಯ ಹೋರಾಟದೊಳು
ತಲೆಮರೆಸಿಕೊಂಡು ಕುರುಬನ ವೇಷದೊಳು
ಕುಟುಂಬದ ಸಂಪರ್ಕ ಸಾಧಿಸುತ
ಬ್ರಿಟಿಷರಿಗೆ ಸಿಂಹಸ್ವಪ್ನವಾಗುತ
ಜನರ ಮನದಲಿ ಬೇರೂರಿ
ಗುಡ್ಡಗಾಡುಗಳಲಿ ತಂಡದೊಡನೆ
ತಿರುಗುತಲಿ ಮೊಳಗಿಸುತ ಸ್ವಾತಂತ್ರ್ಯದ ಕಿಚ್ಚು
ದೇಸಗತಿಗಳ ವಿರುದ್ದ ಬೋರ್ಗರೆದ ರಾಯನಗೌಡ
ಕಷ್ಟ ಸುಖಗಳ ನಡುವೆ
ಸ್ವಾತಂತ್ರ್ಯದ ಹೋರಾಟದೊಳು
ಜೈಲು ಸೇರಿತು ಹೋರಾಟದ ಜೀವ
ಸ್ವಾತಂತ್ರ್ಯ ಪಡೆಯುತ ಮರಳಿತು
ಸುಮ್ಮನೇ ಕೂರದ ಮನಸು ಹೊರಳಿತು
ಕಿತ್ತೂರ ಇತಿಹಾಸದೆಡೆಗೆ
ಬೈಲಹೊಂಗಲದೊಳು ಉದಯಿಸಿತು
ಕಿತ್ತೂರ ರಾಣಿ ಚನ್ನಮ್ಮ ವಿಶ್ವಸ್ಥ ಮಂಡಲ
ಹುಡುಕಿ ತಗೆಯಿತು ಸಂಶೋಧಕನ ತೆರದಿ
ಕಿತ್ತೂರ ಇತಿಹಾಸ ಸಾಗರದಾಚೆಗೂ ಪಯಣಿಸಿ
ಭಾರತಕೆ ತಂದಿತು ಕಿತ್ತೂರ ಶೋಧ
ಬಹುಮುಖ ವ್ಯಕ್ತಿತ್ವದ ರಾಯನಗೌಡ
ಸಮಾಜಮುಖಿಯಾಗಿ ರಾಜಕೀಯದೊಳು
ಆಸಕ್ತಿ ಬೆಳೆಸುತಲಿ ಚುನಾವಣೆಯ ಹೊಸ್ತಿಲು
ತುಳಿಯುತ ಪರಾಜಯ ಕಾಣುತ
ಜನಪದ ಸಾಹಿತ್ಯದೊಳು ಕಂಡಿತು ಹೊಸ ಬೆಳಕು
ದೇಶಗತಿ ಊರಿನ ಜನನಾಯಕ
ವಿವಿಧ ಸಂಘ ಸಂಸ್ಥೆಗಳ ಅಧಿಪತಿ
ಸಮಾಜಮುಖಿ ಸೇವೆಗೈಯುತ
ಕರ್ನಾಟಕ ಏಕೀಕರಣದ ಕಿಚ್ಚಿನಲಿ
ಪಾ.ಪು.ರವರ ಒಡನಾಟದೊಳು
ಏಕೀಕರಣದೊಳು ನೀಡುತ ಕೊಡುಗೆಯ
ಜನಪರ ಪ್ರಗತಿಗೆ ಹಗಲಿರುಳು
ಸೇವೆಗೈಯುತಲಿ ರೈತರ ಕಣ್ಮಣಿ
ಬಿಚ್ಚು ಮಾತಿನ ಬಂಟ.ಮಡದಿ ಬಸಮ್ಮಳ ಹೃದಯವಂತ
ಮರೆಯಲಾಗದ ಮಹಾನುಭಾವ ನಮ್ಮ ರಾಯನಗೌಡರು
ಕಿತ್ತೂರು ನಾಡಿಗೆ ಹೊಸ ಅಧ್ಯಾಯ
ದೊರಕಿಸಿದ ಮಹಾನುಭಾವರಾಗಿರುವಿರಿ
ಅರಿಯದಾಯಿತು ಈ ನಾಡು
ತಮ್ಮ ಸೇವೆಗಳ ಕುರುಹುಗಳ
ಜೀವಿತದ ಕೊನೆಯ ಅವಧಿಗಳು
ಗುರುತಿಸದ ಜ್ಞಾನ ಪ್ರಭೆ ಮಂಕಾದ ಹೃದಯ
ನಕ್ಷತ್ರದ ತೆರೆದಿ ೩೦ ಸಪ್ಟೆಂಬರ್ ೧೯೮೨ ರಂದು ಲೀನವಾಯಿತು
ಸ್ಮರಣೆಗಳ ಲೋಕದಲಿ ನಮ್ಮನ್ನೆಲ್ಲ ಅಗಲಿ.
ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦ ೮೯೭೧೧೧೭೪೪೨