ಗುರು ಪೂರ್ಣಿಮೆ
ಜ್ಞಾನ, ಶಿಕ್ಷಣ ಅಥವಾ ಕೌಶಲ್ಯದ ರೂಪದಲ್ಲಿ ನಾವು ಯಾರ ಆಶೀರ್ವಾದವನ್ನು ಪಡೆಯುತ್ತೇವೆಯೋ ಅವರನ್ನು ಗೌರವಿಸಲು ಮೀಸಲಾದ ದಿನ ಈ ಗುರು ಪೂರ್ಣಿಮಾ ದಿನವಾಗಿದೆ.ವೇದವ್ಯಾಸರು ಆಷಾಢ ಮಾಸದ ಹುಣ್ಣಿಮೆಯಂದು ಜನಿಸಿದರು. ಮಹಾಭಾರತ ಮಹಾಕಾವ್ಯವನ್ನು ರಚಿಸಿದವರು ವೇದವ್ಯಾಸರು. ಕುತೂಹಲಕಾರಿಯಾಗಿ, ಇದು ವೇದವ್ಯಾಸರಿಂದ ಬರೆದ ಗಣೇಶನಿಂದ ನಿರೂಪಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ.ವೇದವ್ಯಾಸರು ಪರಂಪರೆಯನ್ನು ಅವರ ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತು ಅವರು ಮುಂದುವರಿಸಿದರು. ವೇದವ್ಯಾಸರ ಜನ್ಮದಿನವನ್ನು ಆಷಾಢ ಪೂರ್ಣಿಮೆಯಂದು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ.
ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧನು ಜ್ಞಾನೋದಯವನ್ನು ಪಡೆದ ನಂತರ ಸಾರನಾಥದಲ್ಲಿ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ಕಾರಣ ಬೌದ್ಧ ಧರ್ಮದ ಅನುಯಾಯಿಗಳಿಗೆ ಗುರು ಪೂರ್ಣಿಮಾ ಪ್ರಮುಖ ದಿನವಾಗಿದೆ. ಬೌದ್ಧರು ಗೌತಮ ಬುದ್ಧನಿಗೆ ಗೌರವ ಸಲ್ಲಿಸಲು ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ.
ಗುರುಪೂರ್ಣಿಮೆಯಂದು ಚಾತುರ್ಮಾಸ ಆರಂಭವಾಗುತ್ತದೆ. ರೈತರಿಗೆ ಈ ದಿನ ಅತ್ಯಂತ ಮಹತ್ವದ್ದಾಗಿದೆ. ಮಳೆಗಾಲದ ಪ್ರಾರಂಭವನ್ನು ಸೂಚಿಸುವ ಗುರುಪೂರ್ಣಿಮೆ ದವಸ ಧಾನ್ಯಗಳ ಬೆಳೆಯುವಿಕೆ ಅತೀ ಮುಖ್ಯವಾದ ಸಮಯವಾಗಿದೆ.ಬೇಸಿಗೆಯ ತಾಪದಿಂದ ತಂಪಿನ ಅನುಭೂತಿಯನ್ನು ನಮಗೆ ನೀಡುವ ಮಾನ್ಸೂನ್ ಅಥವಾ ಮಳೆಗಾಲ ನಿಮ್ಮ ಆಧ್ಯಾತ್ಮಿಕ ಪಾಠಗಳನ್ನು ಪ್ರಾರಂಭಿಸಲು ಮುಖ್ಯವಾದ ದಿನಗಳಾಗಿವೆ. ಆದ್ದರಿಂದ ಗುರುಪೂರ್ಣಿಮೆಯಂದು ಸ್ವಲ್ಪ ಹೊತ್ತನ್ನು ಗುರುವಿಗಾಗಿ ಮೀಸಲಿಟ್ಟು ನಿಮ್ಮನ್ನು ಜ್ಞಾನದ ಕಡೆಗೆ ಕೊಂಡೊಯ್ದ ಆ ಮಹಾನ್ ಚೇತನಕ್ಕೆ ನಮಸ್ಕರಿಸಿ.ನಾನು ನನ್ನ ಜೀವನದಲ್ಲಿ ಮಾರ್ಗದರ್ಶನ ಮಾಡಿದ ನನ್ನ ತಾಯಿ ಮತ್ತು ವಿಜ್ಞಾನ ಶಿಕ್ಷಕರನ್ನು ಈ ದಿನ ಸ್ಮರಿಸುವೆನು.ಇಂದಿಗೂ ನನ್ನ ತಾಯಿ ನನಗೆ ಮೊದಲ ಗುರುವಾಗಿರುವರು.ಅವರ ಸಲಹೆ ಇಂದಿಗೂ ಪಡೆಯುತ್ತ ಅವರ ಮಾರ್ಗದರ್ಶನದಲ್ಲಿ ನನ್ನ ಜೀವನವನ್ನು ರೂಪಿಸಿಕೊಳ್ಳುತ್ತಿರುವೆನು,
ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಗುರು ಅನ್ನುವ ಶಬ್ದ ಗು ಮತ್ತು ರು ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ.ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ.
ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ.
ನನ್ನ ನೆಚ್ಚಿನ ಶಿಕ್ಷಕಿ ನನ್ನಮ್ಮ
ಶ್ರೀಮತಿ ರಾಜೇಶ್ವರಿ ಪುಟ್ಟರಾಜ ಶಂಭುಶಂಕರ,
ನಿವೃತ್ತ ಶಿಕ್ಷಕಿ, ಪಾರ್ವತಿ ಹಿರಿಯ ಪ್ರಾಥಮಿಕ ಶಾಲೆ ರಾಜೇಶ್ವರ,
ತಾಲ್ಲೂಕು– ಬಸವ ಕಲ್ಯಾಣ, ಜಿಲ್ಲೆ– ಬೀದರ್
ಈ ಅಂಕಣದ ವಿಶೇಷವೆಂದರೆ ಇಲ್ಲಿ ನನ್ನ ಅಚ್ಚುಮೆಚ್ಚಿನ ಶಿಕ್ಷಕಿ ನಮ್ಮ ತಾಯಿ ಆಗಿದ್ದಾರೆ. ಮನೆಯಲ್ಲಿ ಪ್ರೀತಿ, ವಾತ್ಸಲ್ಯ, ಸಲುಗೆಯಿಂದ ನಮ್ಮ ಜತೆ ಇರುತ್ತಿದ್ದ ನಮ್ಮ ತಾಯಿ ಶಾಲೆಯಲ್ಲಿಯೇ ಬೇರೆ ರೂಪ.
ಅಲ್ಲಿ ಕೇವಲ ಶಿಕ್ಷಕಿಯಾಗಿ ಇರುತ್ತಿದ್ದರು. ನನ್ನ ಮಗಳು ಎಂದು ಯಾವುದೇ ಕಾರಣಕ್ಕೂ ಹೇಳಿಕೊಂಡಿರಲಿಲ್ಲ. ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಂತೆಯೇ ನಮಗೂ ಬೋಧನೆ ಮಾಡಿದರು. ನಾನು ನೋಡಿದ ಕರುಣಾಮಯಿ ಶಿಕ್ಷಕಿ ಅವರು.
ಬಡವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಅವರು ಹಿಂದುಳಿಯಲು ಕಾರಣ ಹುಡುಕಿ ಅವರಿಗೆ ಆರ್ಥಿಕ ಸಹಾಯ ಮಾಡಿ ವಿಶೇಷ ಕಾಳಜಿಯಿಂದ ಪಾಠ ಬೋಧನೆ ಮಾಡುತ್ತಿದ್ದರು.
ಇಂಗ್ಲಿಷ್ ಕ್ಲಿಷ್ಟಕರ ಎಂದು ಹೇಳುತ್ತಿದ್ದ ಆ ಸಮಯದಲ್ಲಿ ಮಕ್ಕಳಿಗೆ ಸುಲಲಿತವಾಗಿ ಇಂಗ್ಲಿಷ್ ಪಾಠ ಬೋಧನೆ ಮಾಡುತ್ತಿದ್ದರು. ಪ್ರತಿ ಪಾಠದ ಮಾಡೆಲ್ ರೀಡಿಂಗ್, ಭಾಷಾಭ್ಯಾಸ ಹಾಗೂ ಸಂಪೂರ್ಣ ಪಾಠ ಮಕ್ಕಳಿಗೆ ಮನವರಿಕೆ ಮಾಡಿ ಮುಂದಿನ ಪಾಠಕ್ಕೆ ಹೋಗುತ್ತಿದ್ದರು.
ಮಕ್ಕಳಿಗೆ ಯಾವುದೇ ರೀತಿಯಿಂದ ಶಿಕ್ಷಿಸದೇ ಕಣ್ಣು ಸಣ್ಣೆಯಿಂದಲೇ ತಿದ್ದಿ ತೀಡಿ ಪಾಠ ಬೋಧನೆ ಮಾಡುತ್ತಿದ್ದರು. ಮನೆಯಲ್ಲಿ ಕೂಡ ಒಳ್ಳೆಯ ನಡೆತೆ, ಒಳ್ಳೆಯ ಅಭ್ಯಾಸ, ಮೃದು ಸ್ವಭಾವದಿಂದ ದೊಡ್ಡ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಬಂದವರು.
ಶ್ರೀಮಂತ ಮನೆತನದಿಂದ ಬಂದವರಾದರೂ ಯಾವುದೇ ಅಹಂ ಇರಲಿಲ್ಲ. ಏಳು ಜನ ಮಕ್ಕಳು, ಗಂಡನ ಅನಾರೋಗ್ಯದ ಸಮಸ್ಯೆ ಹಾಗೂ ಖಾಸಗಿ ಶಾಲೆಯ ಕಟ್ಟುನಿಟ್ಟಾದ ಪರಿಸರದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಸಮಯ ಪ್ರಜ್ಞೆಯೊಂದಿಗೆ ನಿಷ್ಠೆಯಿಂದ ಕೆಲಸ ಮಾಡಿದವರು.
ಮನೆಯ ಸಮಸ್ಯೆಯನ್ನು ಮನೆಯಲ್ಲಿ ಮಾತ್ರ ಬಿಟ್ಟು, ಶಾಲೆಯಲ್ಲಿ ಶಿಕ್ಷಕಕಿಯಾಗಿ ಅಚ್ಚುಕಟ್ಟಿನ ಉಡುಗೆ ತೊಡುಗೆ ವಿದ್ಯಾರ್ಥಿಗಳು ಮೆಚ್ಚುವಂಥ ಮಾತೃ ಹೃದಯಿ ಆಗಿದ್ದರು. ಮಕ್ಕಳಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಇಂಗ್ಲಿಷ್ ಬೋಧಿಸುತ್ತಿದ್ದರು. ಇಂದಿಗೂ ನಾವು ಅವರ ಮಾದರಿ ಅನುಸರಿಸಿ ನಾವು ಪಾಠ ಬೋಧನೆ ಮಾಡುತ್ತೇವೆ. ಇವತ್ತಿಗೂ ನಾವು ಯಾವುದೇ ತಪ್ಪು ಮಾಡಿದಾಗ, ಅಥವಾ ಅಶಿಸ್ತಿನಿಂದ ವರ್ತಿಸಿದಾಗ ನಮಗೆ ಬುದ್ಧಿ ಹೇಳುತ್ತಾರೆ.
ಶಿಸ್ತು ಮತ್ತು ಸಮಯಪ್ರಜ್ಞೆ, ಇತರರೊಂದಿಗೆ ಒಳ್ಳೆಯ ಸಂಬಂಧ ಇವೆಲ್ಲವೂ ಇವರಿಂದ ಕಲಿಯುವಂಥವು. ಇದರ ಮಾರ್ಗದರ್ಶನ ಪಡೆದು ನಾವು ಇದನ್ನೇ ಪಾಲಿಸಿಕೊಳ್ಳುತ್ತ ಬಂದಿದ್ದೇವೆ. ೩೦ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಮ್ಮ ತಂದೆಯನ್ನು ಮಗುವಿನ ಹಾಗೆ ಆರೈಕೆ ಮಾಡಿದ್ದು, ಆದರ್ಶವಾದ ನನ್ನ ತಾಯಿ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಶಾಲೆಯ ಜವಾಬ್ದಾರಿ, ದೊಡ್ಡ ಕುಟುಂಬದ ಜವಾಬ್ದಾರಿ ಜತೆಗೆ ಸಮಾಜದಲ್ಲಿ ಒಬ್ಬ ಆದರ್ಶ ಮಹಿಳೆಯಾಗಿ ಉತ್ತಮ ಶಿಕ್ಷಕಿ ಆಗಿ ಹೊರಹೊಮ್ಮಿದ್ದಾರೆ. ಒಬ್ಬ ಆದರ್ಶ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ ನನ್ನ ತಾಯಿಗೆ ನನ್ನ ಒಂದು ಸಲಾಂ……….
ನಾನು ಕಂಡ ಅಪರೂಪದ ವಿಜ್ಞಾನ ಶಿಕ್ಷಕರು
ವೈ.ವಿ.ವಿರುಪಾಕ್ಷಪ್ಪ, ಶಿವಮೊಗ್ಗ,
ನಿವೃತ್ತ ವಿಜ್ಞಾನ ಶಿಕ್ಷಕರು,
ಸತ್ಯಾಶ್ರಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ, ರಾಜೇಶ್ವರ,
ತಾಲ್ಲೂಕು- ಬಸವ ಕಲ್ಯಾಣ, ಜಿಲ್ಲೆ- ಬೀದರ್.
ಸದಾ ಯೋಚನಾಶೀಲರಾಗಿದ್ದ ಅವರು ಪ್ರೌಢಶಾಲೆ ವಿಜ್ಞಾನ ಶಿಕ್ಷಕರಾಗಿದ್ದು ಪಠ್ಯಪುಸ್ತಕವಿಲ್ಲದೇ ಪಾಠ ಬೋಧನೆ ಮಾಡುತ್ತಿದ್ದರು. ತಮ್ಮದೇ ಶೈಲಿಯಲ್ಲಿ ಪಾಠ ಬೋಧನೆ ಮಾಡಿ, ವಿದ್ಯಾರ್ಥಿಗಳಿಗೆ ಶಾಶ್ವತ ಕಲಿಕೆ ಹೇಳಿಕೊಡುತ್ತಿದ್ದರು.
ಇವರು ಬೋಧನೆ ಮಾಡುವ ಶೈಲಿ ಅದ್ಭುತವಾಗಿ ಇರುತ್ತಿತ್ತು. ವಿಜ್ಞಾನ ಪ್ರತಿ ಪಾಠವನ್ನೂ ಪ್ರಾಯೋಗಿಕವಾಗಿ ಹೇಳುತ್ತಿದ್ದರು. ಮಕ್ಕಳ ಮನಸ್ಸಿನಲ್ಲಿ ವಿಜ್ಞಾನ ಜ್ಞಾನ ಉಳಿಯುವಂತೆ ಪಾಠಕ್ಕೆ ಪೂರಕವಾದ ಪ್ರಶ್ನೋತ್ತರ ಹಾಗೂ ಕಿರುಪರೀಕ್ಷೆ ತೆಗೆದುಕೊಳ್ಳುತ್ತಿದ್ದರು. ಯಾವುದೇ ಕಾರಣಕ್ಕೂ ಯಾವುದೇ ವಿದ್ಯಾರ್ಥಿ ಇವರ ಪಾಠ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ.
ಪ್ರೌಢಶಾಲೆಯ ವಿದ್ಯಾರ್ಥಿಗಳ ಮನಸ್ಸು ಅರಿತ ಇವರು ಪರೀಕ್ಷೆಗೂ ಮುಂಚೆಯೇ ವಿದ್ಯಾರ್ಥಿಗಳ ಫಲಿತಾಂಶ ಹೇಳುತ್ತಿದ್ದರು. ಪ್ರೌಢಶಾಲೆಯಲ್ಲಿ ದಾರಿ ತಪ್ಪಿದ ಹಾಗೂ ತಪ್ಪುವ ಹಂತದಲ್ಲಿ ಇರುವ ವಿದ್ಯಾರ್ಥಿಗಳಿಗೆ ಯಾವುದೇ ಛಡಿ ಏಟು ಇಲ್ಲದೇ, ತಮ್ಮದೇ ಶೈಲಿಯಲ್ಲಿ ಮೃದುವಾಗಿ ತಿದ್ದಿ ತೀಡುತ್ತಿದ್ದರು. ಯಾವುದೇ ವಿದ್ಯಾರ್ಥಿ ತಪ್ಪು ಹೆಜ್ಜೆ ಇಟ್ಟಿದ್ದರೆ ಈ ಶಿಕ್ಷಕರ ಮಾತುಗಳಿಂದ ಸುಧಾರಿಸಿಕೊಳ್ಳುತ್ತಿದ್ದರು.
ಕಠೋರ ಹಾಗೂ ಮೊಂಡುತನದ ವಿದ್ಯಾರ್ಥಿಗಳಿಗೆ ಮಾತಿನಿಂದಲೇ ಹೊಡೆಯುತ್ತಿದ್ದರು. ವೈ.ವಿ. ಸರ್ ಎಂದರೆ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕ ಆಗಿದ್ದರು. ಎಲ್ಲ ತರದ ವಿದ್ಯಾರ್ಥಿಗಳ ಮನಸ್ಥಿತಿ ಅರಿತ ಇವರು, ಭವಿಷ್ಯ ಹೇಳುತ್ತಿದ್ದರು. ಅದು ನಿಜವಾಗಿದ್ದನ್ನೂ ನಾವು ನೋಡಿದ್ದೇವೆ.
ಕೇವಲ ಪಾಠಕ್ಕೆ ಸೀಮತಿವಾಗದೇ ಆಟ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹುರುದುಂಬಿಸುತ್ತಿದ್ದರು. ಒಳ್ಳೆಯ ಜೀವನಶೈಲಿ ಇವರದ್ದಾಗಿದ್ದು, ಶಿವಮೊಗ್ಗ ಜಿಲ್ಲೆಯಿಂದ ಬೀದರ್ ಜಿಲ್ಲೆಗೆ ಬಂದು ತಮ್ಮ ಜೀವನ ಪ್ರಾರಂಭಿಸಿದವರು.
ತುಂಬ ಗೌರವಸ್ಥ ಕುಟುಂಬದಿಂದ ಬಂದ ಇವರು ಒಳ್ಳೆಯ ಆದರ್ಶ ವ್ಯಕ್ತಿ. ಇಂಥ ಸಂದರ್ಭದಲ್ಲಿ ತಮ್ಮ ಒಬ್ಬನೇ ಮಗ ಬೇರೆ ವಿದ್ಯಾರ್ಥಿಗಳಿಂದ ಪ್ರಚೋದನೆಗೊಂಡು ಒಂದು ಹುಡುಗಿಗೆ ಬರೆದ ಪ್ರೇಮಪತ್ರ ಹಾಗೂ ಆ ಹುಡುಗಿ ಈ ಹುಡುಗನನ್ನು ಶಿಕ್ಷಕಿಸಿದ ಆ ಕ್ಷಣ ಇಡೀ ಊರಿನವರ ಎದುರಿಗೆ ಸರ್ ತಲೆ ತಗ್ಗಿಸುವಂತೆ ಆಗಿತ್ತು. ಆ ಒಂದು ಕಹಿ ಘಟನೆಯಲ್ಲಿ ತಮ್ಮನ್ನು ತಾವು ಕಳೆದುಕೊಂಡ ಹಾಗೆ ವರ್ತಿಸುತ್ತಿದ್ದರು. ಕೆಲದಿನಗಳ ನಂತರ ತಮ್ಮ ಮಗನನ್ನು ಶಾಲೆಗೆ ಕಳುಹಿಸದೇ ಮನೆಯಲ್ಲಿ ಕೂಡಿಸಿ ಮನೆಯಲ್ಲಿ ಮಾರ್ಗದರ್ಶನ ಮಾಡಿ, ಪರೀಕ್ಷೆಯಲ್ಲಿ ಬೀದರ್ ಜಿಲ್ಲೆಗೆ ಪ್ರಥಮ ಸ್ಥಾನ ಬರುವಂತೆ ಮಾರ್ಗದರ್ಶನ ಕೊಟ್ಟು ಎಲ್ಲರ ಮೆಚ್ಚಿಗೆಗೆ ಕಾರಣವಾದರು.
ಇವರ ಪಾಠ ಬೋಧನೆಯನ್ನೇ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇವರ ಆದರ್ಶ ಮಾರ್ಗದಲ್ಲೇ ನಮ್ಮ ಸೇವೆ ನೀಡುತ್ತ ಬರುತ್ತಿದ್ದೇವೆ………..
ಶ್ರೀಮತಿ ನಂದಿನಿ ಸನಬಾಳ್, ವಿಜ್ಞಾನ ಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಳಾ. ತಾಲೂಕ ಹಾಗೂ ಜಿಲ್ಲೆ ಕಲಬುರ್ಗಿ