ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣ ಕೌನ್ಸೆಲಿಂಗ್‌ನಲ್ಲಿ ಸ್ಥಳ ನಿಯುಕ್ತಿಗೊಂಡ ಶಿಕ್ಷಕರಿಗೆ ಮಾತ್ರ ಆನ್‌ಲೈನ್‌ನಲ್ಲಿ ಹೊಸದಾಗಿ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಜೂನ್ 26ರ ವರೆಗೆ ಸಮಯಾವಕಾಶ ನೀಡಲಾಗಿದೆ.
ಹೊಸದಾಗಿ ಸ್ಥಳ ನಿಯುಕ್ತಿಗೊಂಡ ಹೆಚ್ಚುವರಿ ಶಿಕ್ಷಕರಿಗೆ ಆದ್ಯತಾ ಕ್ಲೇಮ್ ಮಾಡಿಕೊಳ್ಳಲು ಇದು ಕೊನೆಯ ಅವಕಾಶ ಎಂದು ಶಾಲಾ ಶಿಕ್ಷಣ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಸ್ವೀಕೃತವಾದ ಅರ್ಜಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲಿ ಅಂಗೀಕರಿಸಲು ಅಥವಾ ತಿರಸ್ಕರಿಸಲು ಜೂನ್ 27 ಕೊನೆದ ದಿನವಾಗಿದೆ. ಅನಂತರ ಯಾವುದೇ ಬದಲಾವಣೆಗೆ ಅವಕಾಶವಿಲ್ಲ ಎಂದು ಶಾಲಾ ಶಿಕ್ಷಣ ಆಯುಕ್ತ ಆರ್. ವಿಶಾಲ್ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
7,450 ಶಿಕ್ಷಕರು ಹೊಸ ಸ್ಥಳಕ್ಕೆ ನಿಯುಕ್ತಿ
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಈವರೆಗೆ ಒಟ್ಟು 7,450 ಶಿಕ್ಷಕರು ಹೊಸ ಸ್ಥಳಕ್ಕೆ ನಿಯುಕ್ತಿಗೊಂಡಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಪ್ರಾಥಮಿಕ ಶಾಲೆಯಲ್ಲಿ 1,077 ಮುಖ್ಯ ಶಿಕ್ಷಕರು, 4,296 ಸಹಾಯಕ ಶಿಕ್ಷಕರು, 52 ಕಲಾ ಶಿಕ್ಷಕರು ಮತ್ತು 771 ದೈಹಿಕ ಶಿಕ್ಷಕರು ಸ್ಥಳ ನಿಯುಕ್ತಿಗೊಂಡಿದ್ದಾರೆ. ಹೈಸ್ಕೂಲಿನಲ್ಲಿ 537 ಮುಖ್ಯ ಶಿಕ್ಷಕರು, 710 ಕಲಾ ಶಿಕ್ಷಕರು ಮತ್ತು ಮೂವರು ದೈಹಿಕ ಶಿಕ್ಷಕರು ಸ್ಥಳ ನಿಯುಕ್ತಿಗೊಂಡಿದ್ದಾರೆ.