ಕೋವಿಡನಲ್ಲಿ ತಂದೆ ಕಳೆದುಕೊಂಡ ವೇದಾಂತ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ…
ಆರ್ಥಿಕ ಮುಗ್ಗಟ್ಟಿನಲ್ಲಿದ್ದ ವೇದಾಂತಗೆ ನೆರವಾಗಿದ್ದು, ಸಿದ್ದು ಗ್ಯಾರೆಂಟಿ,ಮೋದಿ ಕಿಸಾನ ಸನ್ಮಾನ
ಇದು ವೇದಾಂತ ಯಶೋಗಾಧೆ..
ವಿಜಯಪುರ: ಕೋವಿಡ್ನಲ್ಲಿ ತಂದೆ ಕಳೆದುಕೊಂಡ ವೇದಾಂತ್, ತಾಯಿಯ ಆಸೆಯಂತೆ ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ಕ್ಷೌರಿಕನ ಪುತ್ರನ ಅನುಪಮ ಸಾಧನೆಗೆ ರಾಜ್ಯವ್ಯಾಪಿ ಮೆಚ್ಚುಗೆಗೆಳ ಮಹಾಪೂರವೇ ಹರಿದುಬರುತ್ತಿದೆ.
ಸಾಧನೆಗೆ ಬಡತನವಾಗಲಿ, ಕಷ್ಟಗಳಾಗಲಿ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕೋವಿಡ್ನಲ್ಲಿ ಅಸುನೀಗದ ಕ್ಷೌರಿಕನ ಪುತ್ರನೋರ್ವನ ಸಾಧನೆಯೇ ಸಾಕ್ಷಿ. ಇದು ಅನೇಕರಿಗೆ ಮಾದರಿಯೂ ಆಗಿದೆ. ಇಲ್ಲಿನ ಬಿಎಲ್ ಡಿಇ ಸಂಸ್ಥೆಯ ಎಸ್ಎಸ್ ಕಾಲೇಜಿನ ವಿದ್ಯಾರ್ಥಿ ವೇದಾಂತ ಜ್ಞಾನೋಬಾ ನಾವಿ, ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮಾದರಿಯಾಗಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಲಬೀಳಗಿ ಗ್ರಾಮದ ವೇದಾಂತ ಜ್ಞಾನೋಬಾ ನಾವಿ ಶೇ. 99.33 ರಷ್ಟು ಅಂಕ ಪಡೆದು ಈ ಸಾಧನೆ ಮೆರೆದಿದ್ದಾರೆ. ಕ್ಷೌರಿಕ ವೃತ್ತಿ ಮಾಡಿಕೊಂಡಿದ್ದ ತಂದೆ ಕೊವಿಡ್ನಲ್ಲಿ ನಿಧನ ಹೊಂದಿದರು. ಇಬ್ಬರು ಸಹೋದರಿಯರಿದ್ದು, ತಾಯಿಯೇ ದುಡಿದು ವೇದಾಂತ್ ಅವರನ್ನು ಓದಿಸುತ್ತಿದ್ದಾರೆ. ಕಷ್ಟಪಟ್ಟು- ಇಷ್ಟಪಟ್ಟು ಓದುತ್ತಿರುವ ವೇದಾಂತ ದ್ವಿತೀಯ ಪಿಯುಸಿಯಲ್ಲಿ ಇದೀಗ ಉತ್ತಮ ಫಸಲು ತೆಗೆದಿದ್ದು, ಮುಂದೆ ಪದವಿ ಪ್ರವೇಶ ಪಡೆದು ಕೆಎಎಸ್ ಇಲ್ಲವೇ ಐಎಎಸ್ ಮಾಡುವ ಗುರಿ ಹೊಂದಿದ್ದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ವೇದಾಂತ ನಾವಿ, ತಂದೆಯನ್ನು ಕಳೆದುಕೊಂಡ ಬಳಿಕ ನನ್ನ ಕುಟುಂಬ ಭಾರಿ ಆರ್ಥಿಕ ಸಂಕಷ್ಟದಲ್ಲಿತ್ತು. ಆದರೆ ಪ್ರಧಾನಿ ಮೋದಿ ಅವರ ಸರ್ಕಾರ ಭೂಮಿ ಹೊಂದಿರುವ ರೈತರ ಖಾತೆಗೆ ಜಮೆ ಮಾಡಿದ ಕಿಸಾನ್ ಸಮ್ಮಾನ ಯೋಜನೆಯ ಹಣ ನಮ್ಮ ಕುಟುಂಬದ ಆರ್ಥಿಕ ಶಕ್ತಿಗೆ ನೆರವಾಯಿತು ಎಂದು ಸ್ಮರಿಸುತ್ತಾರೆ.
ಮತ್ತೊಂದೆಡೆ ಕಳೆದ ವರ್ಷದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ನಮ್ಮ ಕುಟುಂಬಕ್ಕೆ ಸಹಕಾರಿ ಆಗಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಹಣ ನಮ್ಮ ಕುಟುಂಬಕ್ಕೆ ಸಾಕಷ್ಟು ನೆರವಾಗಿದೆ.
ನಮ್ಮ ತಾಯಿಯ ಬ್ಯಾಂಕ್ ಖಾತೆಗೆ ಜಮೆಯಾದ ಗೃಹಲಕ್ಷ್ಮೀ ಯೋಜನೆ ಹಣ ನನ್ನ ಓದಿಗೆ ಹೆಚ್ಚು ಪ್ರಯೋಜನಕಾರಿ ಆಯ್ತು. ಸರ್ಕಾರದ ಯೋಜನೆಗಳಿಂದ ನಮ್ಮ ಕುಟುಂಬಕ್ಕೆ ಬಂದ ನೆರವಿನ ಹಣ ನನ್ನ ಶೈಕ್ಷಣಿಕ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ವೇದಾಂತ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.