ಶಿಕ್ಷಣ ಇಲಾಖೆ ಅಧಿಕಾರಿಗಳು ಆದರ್ಶವಾಗಿರಬೇಕು :ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ..
ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಅಭಿನಂದನಾ ಗಂಥ ಬಿಡುಗಡೆ..
ಧಾರವಾಡ: ಉತ್ಕೃಷ್ಟ ಮಾನವ ಸಂಪನ್ಮೂಲವನ್ನು ರಾಷ್ಟ್ರ ಸೇವೆಗೆ ಸಮರ್ಪಿಸುವ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆದರ್ಶಪ್ರಾಯರಾಗಿರಬೇಕೆಂದು ಕರ್ನಾಟಕ ವಿಧಾನ ಪರಿಷತ್ತ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಕ.ವಿ.ವ. ಸಂಘದಲ್ಲಿ ರವಿವಾರ ಗಜಾನನ ಮನ್ನಿಕೇರಿ ಅಭಿನಂದನಾ ಸಮಿತಿ ಹಾಗೂ ಚಿನ್ಮಯ ಪ್ರಕಾಶನ ಜಂಟಿಯಾಗಿ ಹಮ್ಮಿಕೊಂಡಿದ್ದ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೆಶಕ ಗಜಾನನ ಮನ್ನಿಕೇರಿ ಅವರ ಅಭಿನಂದನೆ ಹಾಗೂ ಅಭಿನಂದನಾ ಗ್ರಂಥದ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಲಾಖೆಯ ಗೌರವಕ್ಕೆ ಎಂದಿಗೂ ಚ್ಯುತಿ ಬಾರದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ಮಾಡಬೇಕಾಗುತ್ತದೆ. ಶೈಕ್ಷಣಿಕ ಗುಣಮಟ್ಟ ಎತ್ತರಿಸುವಲ್ಲಿ ಅಧಿಕಾರಿಗಳು ಪಾರದರ್ಶಕ ನೆಲೆಯಲ್ಲಿ ಕಾರ್ಯ ಮಾಡಿದಾಗ ಶಾಲಾ ಶಿಕ್ಷಣ ಇಲಾಖೆಯನ್ನು ಸಮಾಜವು ಗೌರವದಿಂದ ಕಾಣುತ್ತದೆ ಎಂದರು.
ಅಕ್ಷರದೊಳಗಿನ ನಕ್ಷತ್ರ : ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಹುದ್ದೆಯವರೆಗೆ ಕಾರ್ಯನಿರ್ವಹಿಸಿರುವ ಗಜಾನನ ಮನ್ನಿಕೇರಿ ಅವರು ಕ್ರಿಯಾಶೀಲವಾಗಿದ್ದು, ಇಲಾಖೆಯ ಗೌರವ ಹೆಚ್ಚಿಸಿದ್ದಾರೆ. ಇಂದು ಬಿಡುಗಡೆಯಾದ ಅಭಿನಂದನಾ ಗ್ರಂಥ ‘ಅಕ್ಷರದೊಳಗಿನ ನಕ್ಷತ್ರ’ ಕೃತಿ ಅವರ ವೃತ್ತಿ ಬದುಕನ್ನು ಅನಾವರಣಗೊಳಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಮತ್ತು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಮಾತನಾಡಿ, ಗಜಾನನ ಮನ್ನಿಕೇರಿ ಅವರು ಇಲಾಖೆಗೆ ಶ್ರೇಷ್ಠ ಸೇವೆಯನ್ನು ಸಲ್ಲಿಸಿದ್ದಾರೆ. ಅವರು ಕೇವಲ ಬೆಳಗಾವಿ, ಧಾರವಾಡ, ವಿಜಯಪುರಕ್ಕೆ ಮಾತ್ರ ಸೀಮಿತವಾಗದೇ, ರಾಜ್ಯದ ವಿವಿಧ ಭಾಗಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳವಣಿಗೆಗೆ ಅನುಪಮ ಸೇವೆ ಸಲ್ಲಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ದ ಸಿಲ್ವರ್ ಪ್ರಶಸ್ತಿ ಪಡೆದಿರುವ ಮನ್ನಿಕೇರಿ ಅವರು ಮುಂದೆ ಗೋಲ್ಕನ್ ಸ್ಟಾರ್ ಪ್ರಶಸ್ತಿಗೂ ಭಾಜನರಾಗುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಗಜಾನನ ಮನ್ನಿಕೇರಿ ಅವರು ಶಿಕ್ಷಣ ಇಲಾಖೆಗೆ ದೊಡ್ಡ ಶಕ್ತಿಯಾಗಿದ್ದರು. ಯೋಜನೆಗಳ ಅನುಷ್ಠಾನ, ಸಂಘಟನೆಯೊಂದಿಗೆ ಜನಮನ್ನಣೆಯನ್ನು ಗಳಿಸಿದ್ದರು ಎಂದರು.
ಅಭಿನಂದನೆ : ಗಜಾನನ ಮನ್ನಿಕೇರಿ ಅವರ ಮಾತೋಶ್ರೀ 97 ವರ್ಷದ ಬಸಲಿಂಗಮ್ಮ ಮನ್ನಿಕೇರಿ ಅವರನ್ನು ಗೌರವಿಸಿದ ನಂತರ ಗಜಾನನ ಮನ್ನಿಕೇರಿ ಅವರಿಗೆ ಅಭಿನಂದನಾ ಸಮಿತಿಯಿಂದ ಬಿನ್ನವತ್ತಳೆಯನ್ನು ಅರ್ಪಿಸಿ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಶಿಕ್ಷಣ ಇಲಾಖೆ, ಶಿಕ್ಷರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳಿಂದಲೂ ಮನ್ನಿಕೇರಿ ಅವರನ್ನು ಗೌರವಿಸಲಾಯಿತು. ಪ್ರೊ. ಧನವಂತ ಹಾಜವಗೋಳ, ಡಾ.ಎಸ್.ಆರ್. ರಾಮನಗೌಡರ, ಸುನಂದಾ ಮನ್ನಿಕೇರಿ ಇತರರು ಇದ್ದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗಜಾನನ ಮನ್ನಿಕೇರಿ, ಒಟ್ಟು 37 ವರ್ಷಗಳ ಶಿಕ್ಷಣ ಇಲಾಖೆಯ ಸೇವೆಯು ತಮಗೆ ಸಂತೃಪ್ತಿಯನ್ನು ತಂದಿದ್ದು, ಸೇವಾವಧಿಯಲ್ಲಿ ಹೊಗಳಿಕೆ ಮತ್ತು ತೆಗಳಿಕೆಗಳನ್ನು ಸಮನಾಗಿ ಸ್ವೀಕರಿಸಿ ವೃತ್ತಿಯ ಘನತೆಯನ್ನು ಹೆಚ್ಚಿಸಲು ಶ್ರಮಿಸಿದ್ದೇನೆ ಎಂದರು.
ಹಿರಿಯ ವೈದ್ಯ ಡಾ.ಎಸ್.ಆರ್. ರಾಮನಗೌಡರ ಕುರಿತ ‘ಸಂತ ವೈದ್ಯ’ ಕೃತಿಯನ್ನು ಕ.ವಿ.ವಿ. ಕುಲಪತಿ ಪ್ರೊ. ಕೆ.ಬಿ. ಗುಡಸಿ ಬಿಡುಗಡೆಗೊಳಿಸಿ ಮಾತನಾಡಿದರು. ಗೋಕಾಕದ ಪ್ರೊ. ಗಂಗಾಧರ ಮಳಗಿ ಗ್ರಂಥ ಪರಿಚಯ ಮಾಡಿದರು, ಪ್ರೊ. ಚಂದ್ರಶೇಖರ ಅಕ್ಕಿ, ಪ್ರೊ. ಎಸ್.ಎಸ್. ಪಟಗುಂದಿ, ಡಾ ಬಾಳಪ್ಪ ಚಿನಗುಡಿ ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಅಧ್ಯಕ್ಷತೆವಹಿಸಿದ್ದರು. ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹಾಗೂ ಗೋಕಾಕ ಶೂನ್ಯ ಸಂಪಾದನಾಮಠದ ಮುರುಘರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಡಿಡಿಪಿಐ ಎಂ.ಜಿ. ದಾಸರ ಸ್ವಾಗತಿಸಿದರು. ಗುರುಮೂರ್ತಿ ಯರಗಂಬಳಿಮಠ ಮತ್ತು ರಾಜು ಭೂಶೆಟ್ಟಿ ನಿರೂಪಿಸಿದರು. ಸಿ.ವೈ. ತುಬಾಕಿ ವಂದಿಸಿದರು.