ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು..
ಧಾರವಾಡ ಜಿಲ್ಲೆಯ ನೌಕರರು ಕುಸ್ತಿ, ಟೇಬಲ್ ಟೆನ್ನಿಸ್, ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ; ರಾಷ್ಟ್ರಮಟ್ಟಕ್ಕೆ ಆಯ್ಕೆ; ವಿಜೇತರಿಗೆ ಅಭಿನಂದನೆ ತಿಳಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಿಇಓ ಟಿ.ಕೆ.ಸ್ವರೂಪ.
ಧಾರವಾಡ ಅ.29: ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘವು ತುಮಕೂರು ಮಹಾನಗರದಲ್ಲಿ ಅ.27 ರಿಂದ 29 ರವರೆಗೆ ಆಯೋಜಿಸಿರುವ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಧಾರವಾಡ ಸರಕಾರಿ ನೌಕರ ತಂಡಗಳು ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದ್ದು, ವಿಶೇಷವಾಗಿ
ಶಾಲಾ ಶಿಕ್ಷಣ ಇಲಾಖೆಯ ಪ್ರಕಾಶ ಕಂಬಳಿ ನಾಯಕತ್ವದ ಸಿರಿಗಂಧ ಕಲಾ ತಂಡವು ಬಿ.ಆರ್.ಸಿ ಆಗಿರುವ ಜಯಲಕ್ಷ್ಮಿ ಎಚ್. ಮತ್ತು ಸಹ ಕಲಾವಿಧರ ಸಮೂಹ ಜಾನಪದ ನೃತ್ಯವು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು, ರಾಷ್ಟಮಟ್ಟದ ಸ್ಪರ್ಧೆಗೆ ಆಯ್ಕೆ ಆಗುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ವಿಸಿದ್ದಾರೆ.
ಇವರ ಸಾಧನೆಯನ್ನು ಮೆಚ್ಚಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಸ್ವರೂಪ ಟಿ.ಕೆ, ಡಿಡಿಪಿಐ ಎಸ್.ಎಸ್.ಕೆಳದಿಮಠ ಮತ್ತು ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಅಭಿನಂದಿಸಿದ್ದಾರೆ.
ಸಿರಿಗಂಧ ಕಲಾ ತಂಡದ ಪ್ರಕಾಶ ಕಂಬಳಿ ಅವರ ಸಾಹಿತ್ಯ, ಹಾಡು ಮತ್ತು ನಿರ್ದೇಶನದಲ್ಲಿ ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಆಗಿರುವ ಜಯಲಕ್ಷ್ಮಿ ಎಚ್. ಹಾಗೂ ಸಹ ಕಲಾವಿಧರು ಉತ್ತರ ಕರ್ನಾಟಕದ ಪ್ರಸಿದ್ಧ ಜೋಗುತಿ ಯಲ್ಲಮ್ಮ ಹಾಡಿನೊಂದಿಗೆ ನೃತ್ಯ ಪ್ರದರ್ಶಿಸಿದರು. ಸಮೂಹ ಜಾನಪದ ನೃತ್ಯ ವಿಭಾಗದಲ್ಲಿ ಸುಮಾರು 34 ತಂಡಗಳು ಭಾಗವಹಿಸಿದ್ದವು. ಅವುಗಳಲ್ಲಿ ಉತ್ತಮ ಮತ್ತು ಪ್ರೇಕ್ಷಕರ ಮನಸೆಳೆಯುವಂತೆ ಪ್ರದರ್ಶನ ನೀಡಿದ್ದ ಧಾರವಾಡ ತಂಡವು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಹೆಮ್ಮೆ ಹೆಚ್ಚಿಸಿದೆ.
ಅದರಂತೆ ಇಲ್ಲಿಯವರೆಗೆ ಫಲಿತಾಂಶ ಪ್ರಕಟವಾಗಿರುವ ವಯಕ್ತಿಕ ಕ್ರೀಡೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಅನೇಕ ನೌಕರರು ಆಯ್ಕೆಯಾಗಿದ್ದು, ಆ ಪೈಕಿ ಧಾರವಾಡ ನ್ಯಾಯಾಂಗ ಇಲಾಖೆಯ ಉಪೇಂದ್ರ ಕೆರಕಲಮಟ್ಟಿ 86 ಕೆ.ಜಿ. ಮುಕ್ತ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ ಕಲಘಟಗಿಯ ರವೀಂದ್ರ ಅಲ್ಲಾಪುರ ಅವರು 67 ಕೆ.ಜಿ.ಗ್ರಿಕೊರೋಮನ್ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಶಾಲಾ ಶಿಕ್ಷಣ ಇಲಾಖೆಯ ಕುಂದಗೋಳದ ಶಶಿಧರ ಡಮ್ಮಳ್ಳಿ ಅವರು ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಆಗಿದ್ದಾರೆ.
ಮತ್ತು ಧಾರವಾಡ ಶಿಕ್ಷಕೀಯರ ತರಬೇತಿ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಪ್ರಕಾಶ ಕಂಬಳಿ ಅವರ ನೇತೃತ್ವದಲ್ಲಿ ಸಿರಿಗಂಧ ಕಲಾ ತಂಡವು ಏಳಕೋಟಿ ಮೈಲಾರ ಕುರಿತು ಪ್ರಸ್ತುತ ಪಡಿಸಿದ ಜಾನಪದ ಸಮೂಹ ಗೀತೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದೆ. ಧಾರವಾಡ ಆರೋಗ್ಯ ಇಲಾಖೆಯ ರೇಖಾ ಬಾಡಗಿ ಅವರು 55 ಕೆ.ಜಿ. ತೂಕದ ಮುಕ್ತ ಕುಸ್ತಿ ಮಹಿಳಾ ವಿಭಾಗದಲ್ಲಿ ದ್ವಿತೀಯ ಸ್ಥಾನ, ಶಾಲಾ ಶಿಕ್ಷಣ ಇಲಾಖೆಯ ಸರಸ್ವತಿ ಸುಣಗಾರ ಅವರು 50 ಕೆ.ಜಿ. ತೂಕದ ಮುಕ್ತ ಕುಸ್ತಿ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಮತ್ತು ಶಾಲಾ ಶಿಕ್ಷಣ ಇಲಾಖೆ ಹುಬ್ಬಳ್ಳಿಯ ನಾಗರಾಜ ಬಾಗುನವರ ಅವರು 83 ಕೆ.ಜಿ ಮುಕ್ತ ಕುಸ್ತಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಯ ಗಳಿಸಿ, ಜಿಲ್ಲೆಯ ಕೀರ್ತಿ ಹೆಚ್ಚಿಸಿರುವ ಎಲ್ಲ ವಿಜೇತ ನೌಕರರನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ., ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ ಸರಶೆಟ್ಟಿ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು ಮತ್ತು ಜಿಲ್ಲೆಯ ಎಲ್ಲ ನೌಕರರು ಅಭಿನಂದಿಸಿದ್ದಾರೆ.