9 ಹಾಗೂ 10 ನೇ ತರಗತಿ ಮಕ್ಕಳಿಗೂ ಮೊಟ್ಟೆ:ಶಿಕ್ಷಣ ಸಚಿವ ಮಧು ಬಂಗಾರಪ್ಪ.
ಬೆಂಗಳೂರು: ಪ್ರಾಥಮಿಕ ಶಾಲಾ ಮಕ್ಕಳಿಗೆ ಮಾತ್ರವಲ್ಲ, 9 ಹಾಗೂ 10 ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಮೊಟ್ಟೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬೆಂಗಳೂರಿನ ನಿವಾಸದಲ್ಲಿ ಗುರುವಾರ ಮಾತನಾಡಿದ ಅವರು, ವರ್ಷಕ್ಕೆ 42 ಬಾರಿ ಮೊಟ್ಟೆ ನೀಡಬೇಕು ಅಂತ ಹಿಂದಿನ ಸರ್ಕಾರ ನಿರ್ಧಾರ ಮಾಡಿತ್ತು. ನಾವು ಮೊಟ್ಟೆ ವಿತರಣೆ ತಡೆ ಹಿಡಿದಿಲ್ಲ ಎಂದು ಸ್ಪಷ್ಟಪಡಿಸಿದರು.
ವರ್ಷಕ್ಕೆ 42ಕ್ಕೂ ಹೆಚ್ಚು ಮೊಟ್ಟೆ : ವರ್ಷಕ್ಕೆ 42 ಮೊಟ್ಟೆಗಳನ್ನು ನೀಡುವುದನ್ನು ಹೆಚ್ಚಳ ಮಾಡುವುದಕ್ಕೂ ನಿರ್ಧಾರ ಮಾಡುತ್ತಿದ್ದೇವೆ. ಜೊತೆಗೆ 9 ಹಾಗೂ 10 ನೇ ತರಗತಿ ಮಕ್ಕಳಿಗೂ ಕೂಡ ಮೊಟ್ಟೆ ವಿತರಣೆ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರು. ಇನ್ನು ಹಾಲಿನ ಪೌಡರ್ ಬಗ್ಗೆ ದೂರಿನ ಕುರಿತು ಮಾತನಾಡಿ, ದೂರಿನ ಕುರಿತು ವರದಿ ಪಡೆದುಕೊಂಡು ನಾನು ಉತ್ತರ ಕೊಡುತ್ತೇನೆ ಎಂದು ಹೇಳಿದರು.
ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-8ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ.
ಮೊಟ್ಟೆ ಸ್ವೀಕರಿಸದ ಮಕ್ಕಳಿಗೆ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸುವಂತೆ ಸರ್ಕಾರ ಸೂಚಿಸಿದೆ. ಬಿಸಿಯೂಟದ ಜೊತೆಗೆ ಒಬ್ಬ ವಿದ್ಯಾರ್ಥಿಗೆ ವಾರದಲ್ಲಿ ಒಂದು ಮೊಟ್ಟೆ ವಿತರಣೆ ಮಾಡಲಾಗುತ್ತದೆ.
ಶಾಲಾ ಮಕ್ಕಳ ಬ್ಯಾಗ್ ತೂಕ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮಕ್ಕಳ ಬ್ಯಾಗ್ ಮೇಲೆ ಐದರಿಂದ 10 ಕೆಜಿ ತೂಕ ಇರುತ್ತದೆ. ಇದು ಬಹಳ ಬೇಸರದ ವಿಚಾರವಾಗಿದೆ. ಅವರ ಹೊರೆ ಕಡಿಮೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.