ಕಣ್ಣಮುಂದಿನ ದೇವರು ತಾಯಿ.
ಒಂದು ಸಲ ಸ್ವರ್ಗ ದಲ್ಲಿ ದೇವರು ಮಗುವೊಂದನ್ನು ಭೂಮಿಗೆ ಕಳಿಸಲು ಯೋಚಿಸಿದ. ಆಗ ಆ ಮಗು ನಾನು ಭೂಮಿಗೆ ಹೋಗಲಾರೆ.ನಿನ್ನ ಬಳಿ ಇರುವೆ. ನಿನ್ನ ಪ್ರೀತಿ ನನಗೆ ಭೂಮಿಯ ಮೇಲೆ ಯಾರೂ ಕೊಡಲಾರರು ನಾನು ಭೂಮಿಗೆ ಹೋಗಲಾರೆ ಎಂದು ಹಠ ಹಿಡಿಯಿತು. ಆಗ ದೇವರು ನನಗಿಂತ ಹೆಚ್ಚಾಗಿ ನಿನ್ನ ಪ್ರೀತಿಸುವ ಮಡಿಲೊಂದನು ನಿನಗೆ ನೀಡುವೆ. ನನ್ನ ರಕ್ಷೆ ನಿನ್ನ ಮೇಲೆ ಸದಾ ಇರುತ್ತದೆ ಹೋಗು ನೀನು ಕೂಡ ಒಂದು ಹೆಣ್ಣು ರೂಪವ ತಾಳಿ ಮತ್ತೊಂದು ಸ್ತ್ರೀ ಗೆ ಮಾದರಿಯ ಬದುಕು ನಡೆಸಿ ಮತ್ತೆ ಸ್ವರ್ಗಕ್ಕೆ ಬರುವಿಯಂತೆ ಎಂದು ಹೇಳಿ ಒಬ್ಬ ಮಮತಾಮಯಿ ತಾಯಿಯ ಗರ್ಭದಲ್ಲಿ ಆ ಮಗುವನ್ನು ಹಾಕಿದನು.
ಮಾತೆಯ ಮಡಿಲಲ್ಲಿ ನಗುವ ಕಂದನಾಗಿ ಜನಿಸಿದ ಆ ಮಗು ಮುಂದೆ ಸಮಾಜದ ಉತ್ತಮ ನಾರಿಯಾಗಿ ಸ್ತ್ರೀ ಕುಲಕ್ಕೆ ಮಾದರಿಯಾಗಿ ನೂರಾರು ಹೆಣ್ಣು ಮಕ್ಕಳ ಬದುಕಿನ ಮಾರ್ಗದರ್ಶಕಳಾಗಿ ಬಾಳಿ ಬದುಕಿದಳು.ಇದೊಂದು ಕಾಲ್ಪನಿಕ ಕತೆ..
ಆತ್ಮೀಯರೇ ತಾಯಿಯಂತೆ ಮಗಳು ನೂಲಿನಂತೆ ಸೀರೆ’ ಎಂಬ ಮಾತು ಚಾಲ್ತಿಯಲ್ಲಿದೆ. ಈ ಮಾತಿನ ಉದಾಹರಣೆ ಮೇಲಿನ ಕಲ್ಪನೆಯ ಕತೆ.
ಅವ್ವ ಎಂದರೆ ಪ್ರೀತಿ, ನಂಬಿಕೆ, ವಿಶ್ವಾಸ, ಧೈರ್ಯ, ಸೈರ್ಯ, ಬದುಕು, ಭರವಸೆ, ಬೆಳದಿಂಗಳು, ಪದಗಳಿಗೂ ನಿಲುಕದ ವ್ಯಕ್ತಿತ್ವದವಳು.
ಕುಟುಂಬದವರ ಸುಖಕ್ಕಾಗಿ ತನ್ನೆಲ್ಲ ಇಡೀ ಜೀವನವನ್ನೇ ಸವೆಸಿದವಳು, ಮಕ್ಕಳ ಸಂತೋಷಕ್ಕಾಗಿ ತನ್ನ ಖುಷಿಯನ್ನು ತ್ಯಾಗ ಮಾಡಿದವಳು. ತನ್ನ ನೋವನ್ನೆಲ್ಲ ಒಡಲೊಳಗೆ ಬಚ್ಚಿಟ್ಟು ನಲ್ಮೆಯ ನಗೆ ಸೂಸಿದವಳು, ಹರಸಿ ಹಾರೈಸಿದವಳು. ಅವಳ ತ್ಯಾಗ, ಪ್ರೀತಿಗೆ ನಾವೆಂದು ಚಿರರುಣಿ.
ನನ್ನ ತಾಯಿ ನಮಗೆ ಪ್ರತಿನಿತ್ಯ ಶಾಲೆಗೆ ಕಳಿಸುವುದರಿಂದ ಹಿಡಿದು ಶಾಲೆಯ ನಂತರ ಅವಧಿಯಲ್ಲಿ ನಮಗೆ ಹೊಂ ವರ್ಕ ಮಾಡಿಸಿ ಮಲಗುವ ವೇಳೆಯ ವರೆಗೂ ತನ್ನ ಎಲ್ಲಾ ದೈನಂದಿನ ಜೀವನದಲ್ಲಿ ನಮಗೆ ತೋರುವ ಕಾಳಜಿ ಅನನ್ಯ.
ಆದರೆ ತಂದೆ ನಮ್ಮನ್ನು ಶಾಲೆಗೆ ಕಳಿಸುವ ಮತ್ತು ಕರೆದುಕೊಂಡು ಬರುವ ಕಾರ್ಯ ಮಾತ್ರ ಮಾಡಿದರೆ ತನ್ನ ಜವಾಬ್ದಾರಿ ಮುಗಿಯಿತು ಎಂದುಕೊಂಡು ಜೀವನ ನಡೆಸುವರು. ಶಾಲೆಯ ಮನೆಗೆಲಸ ಏನು ನೀಡಿರುವರು ಎಂದು ಕೂಡ ಕೇಳುವಷ್ಟು ಬಿಡುವಿರದ ವ್ಯಕ್ತಿ. ಅದೇ ತಾಯಿ ತನ್ನೆಲ್ಲ ಕೆಲಸ ನಿರ್ವಹಿಸುವ ಜೊತೆಗೆ ಮಕ್ಕಳ ಗೃಹಪಾಠ ನೋಡಿ ನಮ್ಮ ತಪ್ಪು ಒಪ್ಪುಗಳನ್ನು ತಿಳಿಸಿ ಪ್ರೋತ್ಸಾಹ ನೀಡುವವಳು.ಅದಕ್ಕೆ ತಾಯಿ ಕರುಣಾಮಯಿ. ದಣಿವರಿಯದೇ ದುಡಿಯುವ ಅಮ್ಮ ಇಡೀ ಕುಟುಂಬ ವ್ಯವಸ್ಥೆಯ ಬೇರು.
ತಾಯಿಯ ಪ್ರೀತಿ, ತ್ಯಾಗಕ್ಕೆ ನಾವು ಏನೇ ಮಾಡಿದರೂ ಅದು ಕಡಿಮೆ ಆಗುತ್ತದೆ. ನಮ್ಮನ್ನು ಈ ಜಗತ್ತಿಗೆ ತರುವ ತಾಯಿಗೆ ಗೌರವ ಹಾಗೂ ಪ್ರೀತಿಯನ್ನು ತೋರಿಸಲು ನಮಗೆ ಯಾವುದೇ ವಿಶೇಷ ದಿನ ಅಗತ್ಯವಿಲ್ಲ. ಆದರೆ ತಾಯಂದಿರ ದಿನ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶ ನೀಡುತ್ತದೆ. ನನಗಂತೂ ನನ್ನ ತಾಯಿ ದೇವರು. ನಾವಿಂದು ಈ ಪ್ರಮಾಣದಲ್ಲಿ ಬೆಳೆದು ನಿಲ್ಲಲು ನನ್ನ ತಂದೆಯ ಕಾಳಜಿಗಿಂತ ನನ್ನ ತಾಯಿಯ ಕಾಳಜಿ ದೊಡ್ಡ ದು.
ಶಿಕ್ಷಕಿಯಾಗಿ ಉತ್ತಮ ಮಾರ್ಗದರ್ಶನ ನೀಡುವುದು ನನ್ನ ತಾಯಿ ಎಂದರೆ ಅತಿಶಯೋಕ್ತಿ ಆಗದು. ಮದರ್ಸ್ ಡೇ ಅಥವಾ ತಾಯಂದಿರ ದಿನವನ್ನು 1908ರಲ್ಲಿ ಅಮೆರಿಕದಲ್ಲಿ ಆಚರಿಸಲು ಶುರು ಮಾಡಲಾಯಿತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. 1905ರಲ್ಲಿ ಅನಾ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನ ಆಯ್ಕೆ ಮಾಡಿಕೊಂಡಿದ್ದರು. ಅವರು ಈ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು. ಬಳಿಕ ಅಮೆರಿಕದ ರಾಷ್ಟ್ರಪತಿ ಆಗಿದ್ದ ವುಡ್ರೋ ವಿಲ್ಸನ್ ಮೇ 9, 1914ರಂದು ಪ್ರತಿ ವರ್ಷ ಮೇ 2ನೇ ಭಾನುವಾರದಂದು ತಾಯಂದಿರ ದಿನ ಎಂದು ಆಚರಿಸಲಾಗುತ್ತದೆ ಎಂದು ಕಾನೂನನ್ನು ಜಾರಿಗೊಳಿಸಿದರು. ಈ ಕಾನೂನು ಜಾರಿ ಮಾಡಿದ ನಂತರ ಅಮೆರಿಕ, ಭಾರತ ಹಾಗೂ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.
ಆದರೆ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಲಂಡನ್ನಲ್ಲಿ ತಾಯಂದಿರ ದಿನವನ್ನು ಮಾರ್ಚ್ ತಿಂಗಳ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತದೆ. ಗ್ರೀಸ್ ದೇಶದಲ್ಲಿ ಫೆಬ್ರವರಿ 2ರಂದು ಆಚರಿಸಲಾಗುತ್ತದೆ
ತಾಯಿಯ ಕುರಿತು ಹೇಳಿಕೆಗಳು
“ನನ್ನ ಜೀವನ ನನ್ನ ತಾಯಿಯ ಮುಖವನ್ನು ನೋಡಿ ಪ್ರೀತಿಸುವುದರೊಂದಿಗೆ ಪ್ರಾರಂಭವಾಯಿತು”- ಜಾರ್ಜ್ ಎಲಿಯಟ್
“ನನ್ನನ್ನು ಈ ಮಟ್ಟಕ್ಕೆ ಬೆಳಿಸಿದ ನನ್ನ ದೇವತೆ ತಾಯಿಗೆ ನಾನು ಋಣಿಯಾಗಿದ್ದೇನೆ” – ಅಬ್ರಹಾಂ ಲಿಂಕನ್
“ನಾವು ಪ್ರೀತಿಯಿಂದ ಹುಟ್ಟಿದ್ದೇವೆ; ಆ ಪ್ರೀತಿ ನಮ್ಮ ತಾಯಿ”- ರೂಮಿ
ಚಿಕ್ಕ ಮಕ್ಕಳ ತುಟಿಗಳಲ್ಲಿ ಮತ್ತು ಹೃದಯದಲ್ಲಿ ತಾಯಿ ಎಂಬ ದೇವರ ಹೆಸರು ಮೊದಲು ಬರುತ್ತದೆ”-ವಿಲಿಯಂ ಮೇಕ್ಪೀಸ್ ಥಾಕ್ರೆ
“ನೀವು ನಿಮ್ಮ ತಾಯಿಯ ಕಣ್ಣುಗಳನ್ನು ನೋಡಿದಾಗ, ಅಲ್ಲಿ ಈ ಭೂಮಿಯ ಮೇಲೆ ನೀವು ಕಂಡುಕೊಳ್ಳಬಹುದಾದ ಶುದ್ಧ ಪ್ರೀತಿಯನ್ನು ಕಾಣುತ್ತೀರಿ”- ಮಿಚ್ ಆಲ್ಬೊಮ್
“ಅಳಲು ಉತ್ತಮ ಸ್ಥಳವೆಂದರೆ ತಾಯಿಯ ತೋಳುಗಳು”- ಜೋಡಿ ಪಿಕೌಲ್ಟ್
ಅಮ್ಮ ಪ್ರತ್ಯಕ್ಷ ದೇವರು. ತನ್ನ ಕುಟುಂಬ, ಮಕ್ಕಳಿಗಾಗಿ ಬದುಕನ್ನೇ ಮುಡಿಪಾಗಿಟ್ಟವರು ಅಮ್ಮ. ನಮಗೆ ಉತ್ತಮ ಸಂಸ್ಕಾರ ನೀಡಿ ನಮ್ಮ ಮುಂದಿನ ಪೀಳಿಗೆಗೆ ಕೂಡ ಉತ್ತಮ ಸಂಸ್ಕೃತಿ ಹಾಕಿಕೊಟ್ಟವಳು ಅಮ್ಮ. ಯಾವತ್ತೂ ಅವಳು ತನಗಾಗಿ ಯೋಚಿಸುವವಳೇ ಅಲ್ಲ. ಅನುಕ್ಷಣವೂ ಮಕ್ಕಳು, ಕುಟುಂಬ ಎಂದೇ ಯೋಚಿಸುತ್ತಿರುವ ತ್ಯಾಗಮಯಿ ಅಮ್ಮ.
ನನ್ನನ್ನು ಪೋಷಿಸಿ, ನನ್ನ ಒಳಿತಿಗಾಗಿ ಪ್ರಾರ್ಥಿಸಿ, ನನ್ನ ಬಗ್ಗೆಯೇ ಯೋಚಿಸಿ, ಸದಾ ಕಾಲ ನನಗೆ ಮಾರ್ಗದರ್ಶನ ನೀಡುತ್ತಾ, ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿ ನನ್ನ ತಂದೆಯ ನಿಧನ ಸಂದರ್ಭದಲ್ಲಿ ನಮಗೆ ಸಾಂತ್ವನ ಹೇಳಿ ತಂದೆಯ ಸ್ಥಾನವನ್ನು ತುಂಬಿದ… ಅಮ್ಮ… ನಾನು ನಿಮಗೆ ಸದಾ ಋಣಿ…
ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು
ನಂದಿನಿ ಸನಬಾಳ್
ಜಿಲ್ಲಾ ಪಿಸ್ಟ್ ಮುಖ್ಯಸ್ಥರು ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘ ಕಲಬುರಗಿ ಹಾಗೂ ಅಧ್ಯಕ್ಷರು ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ಕಲಬುರ್ಗಿ..