ಜಾತಿ, ಧರ್ಮದ ನಿಜವಾದ ವ್ಯಾಖ್ಯಾನ
ಪ್ರಸ್ತುತ ಲೇಖನದ ಶೀರ್ಷಿಕೆಯು ಇವತ್ತಿನ ಸಂದರ್ಭದಲ್ಲಿ ಬೇರೆ ದಾರಿ ಹಿಡಿದು ಮಾನವ ಕುಲದಲ್ಲಿ ಹಗೆತನದ ಪರಮಾವಧಿ ಹೆಚ್ಚಾಗಿ ಕಾಣುತ್ತಿದೆ. ಸಮಾಜ ನಿರ್ಮಾಣ ಮಾಡಲು ಹೊರಡಬೇಕಾದ ಮನುಜ ಸಮಾಜದಲ್ಲಿ ಮತ್ತಷ್ಟು ಅಸಮಾನತೆಯ ಭಾವನೆಗಳು ಹೆಚ್ಚಿಸುತ್ತಿದ್ದಾನೆ. ಇದಕ್ಕೆ ಕಾರಣ ಏನೆಂದು ಹುಡುಕುವುದು ಸಮಂಜಸವಲ್ಲ. ಎಲ್ಲ ಪರಿಸ್ಥಿತಿಗೆ ನಾವೇ ಹೊಣೆ. ಮಗುವಿಗೆ ತಿಳುವಳಿಕೆ ಬರುವಷ್ಟರಲ್ಲಿ ನೀನು ಈ ಜಾತಿ, ಧರ್ಮಕ್ಕೆ ಸೇರಿದವನು ಎಂದು ಹೇಳಿ ಆತನ ಚಿಕ್ಕ ವಯಸ್ಸಿನಲ್ಲಿಯೇ ಹೆಗಲ ಮೇಲೆ ದ್ವೇಷ ಭಾವನೆಯ ಮೂಟೆ ಹತ್ತಿಸಿಬಿಡುತ್ತಿದ್ದೇವೆ. ಅಲ್ಲಿಂದ ಆ ಮಗು ಕಲಿಯುತ್ತಿದ್ದು ಕೇವಲ ಜಾತಿ, ಧರ್ಮ, ದ್ವೇಷ, ಮೋಸ, ವಂಚನೆ. ಇವತ್ತಿನ ಯಾವುದೇ ಶಾಖೆಯಲ್ಲಿ ಹೋದರೆ ಜಾತಿ, ಧರ್ಮದ ಬೇರುಬಿಟ್ಟಿವೆ. ಹಾಗಾದರೆ ಈ ವ್ಯವಸ್ಥೆ ಇಲ್ಲದ ಪರಿಸರ ಎಲ್ಲಿದೆ ಎಂದು ಪರಿಭಾವಿಸುದಕ್ಕಿಂತ ಈ ಪರಿಸರ ಎಲ್ಲ ಕಡೆಯು ಹರಡಿಕೊಂಡಿದೆ ಎಂದು ತಿಳಿದರೆ ತಪ್ಪಾಗಲಾರದು. ಆದರೆ ಇವತ್ತಿನ ಸಂದರ್ಭದಲ್ಲಿ ಮನುಕುಲಕ್ಕೆ ಜಾತಿ ಧರ್ಮದ ವ್ಯಾಖ್ಯಾನ ತಿಳಿಸಿ ಅರಿವು ಮುಡಿಸುವುದು ಅದೊಂದು ಸಾಹಸದ ಕೆಲಸ.
ಜಾತಿ, ಧರ್ಮದ ವ್ಯಾಖ್ಯಾನ:
ಪ್ರಸ್ತುತ ಜಾತಿ ಎಂದರೆ ನಾನು ಮೇಲು, ನಾನು ಕೀಳು ಎಂಬ ಭಾವನೆ. ಧರ್ಮ ಎಂದರೆ ನಿನ್ನ ಸಂಸ್ಕೃತಿ ಕೀಳು, ನನ್ನ ಸಂಸ್ಕೃತಿ ಮೇಲು ಅಷ್ಟೇ ಇದರ ವ್ಯಾಖ್ಯಾನ ಎಂದು ಎಲ್ಲರೂ ನಂಬಿದ್ದುಂಟು. ಆದರೆ ಈ ದಾರಿಯೇ ಸರಿ ಎಂದು ಎಲ್ಲರನ್ನೂ ತಪ್ಪು ದಾರಿಗೆ ಎಳೆಯುತ್ತಿರುವವರು ಶಿಕ್ಷಣವಂತರೆ ನೆನಪಿರಲಿ. ಸರ್ಕಾರ ಕೂಡ ಗದ್ದುಗೇರುವುದು ಜಾತಿ, ಧರ್ಮದಿಂದ! ಅವರ ಪ್ರತಿಯೊಂದು ಆಡಳಿತ ಮತ್ತು ಯೋಜನಾಕ್ರಮವೂ ಜಾತಿ, ಧರ್ಮದ ಆಧಾರದ ಮೇಲೆ ಎಂದು ನಾವೆಲ್ಲ ಮರೆಯುವಂತಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಈಗ ಶಿಕ್ಷಣದಲ್ಲಿಯೂ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸೌಕರ್ಯಗಳನ್ನು ನೀಡಿ ಯುವ ವೋಟಿನ ರಾಜಕಾರಣ ಪ್ರಾರಂಭಮಾಡಿದೆ. ಇವರ ಹೊಲಸು ಆಡಳಿತದಿಂದ ಎಷ್ಟು ಬಡ ಜನ ಶಿಕ್ಷಣವನ್ನು ಬಿಡುವ ಪರಿಸ್ಥಿತಿಯಲ್ಲಿದ್ದಾರೆ, ಕೆಲ ಜನ ಶಿಕ್ಷಣವೇ ಬೇಡವೆಂದು ಬಿಟ್ಟು ಹೋದವರು ಇದ್ದಾರೆ. ಸರಿ ಪಾಪ ಸರ್ಕಾರಕ್ಕೆ ಇದೆಲ್ಲ ಸಣ್ಣ ಮಾತಲ್ಲವೇ. ಇದಿರಲಿ ಇವತ್ತಿನ ಸಮಾಜದಲ್ಲಿ ಅವಿವೇಕಿಯನ್ನು ನಾಯಕನನ್ನಾಗಿ ಮಾಡಿ ನಮ್ಮ ಜಾತಿ ಮೇಲು, ನಿಮ್ಮ ಧರ್ಮ ಕೀಳು ಎಂದು ಸಮುದಾಯ ಸಮುದಾಯಗಳ ನಡುವೆ ಹೊಡೆದಾಡಿಸಿ ಎಷ್ಟು ಪ್ರಾಣ ಕಳೆದುಕೊಂಡು ಅನಾಹುತಗಳಾಗಿದ್ದು ಕೆಲವೇ ತಿಂಗಳು, ವರ್ಷದ ಹಿಂದೆ ನಾವೆಲ್ಲ ನೋಡಿದ್ದೇವೆ. ಆದರೆ ಇನ್ನೂ ಈ ಹೆಸರಿನ ಮೇಲೆ ಅನಾಹುತಗಳಾಗುವ ಮುನ್ನ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ.
ವಸ್ತುತಃ ಜಾತಿ ಮತ್ತು ಧರ್ಮದ ನಿಜವಾದ ವ್ಯಾಖ್ಯಾನ ಇದಲ್ಲ. ತಮ್ಮ ಕಾಯಕದ ಮೂಲಕ ಗುರುತಿಸಿಕೊಳ್ಳುವ ಜಾತಿ ಹಾಗೂ ತನ್ನ ನಡೆ-ನುಡಿ ಮೂಲಕ ಗುರುತಿಸಿಕೊಳ್ಳುವುದೇ ಧರ್ಮ. ಇದರಲ್ಲಿ ಯಾವುದೇ ಗೊಂದಲಬೇಡ ಉದಾಹರಣೆಗೆ ರಾಮ ತಾನು ರಾಜ್ಯಭಾರ ಮಾಡುವ ಸಂದರ್ಭದಲ್ಲಿ ಅಲ್ಲಿ ಎಲ್ಲ ಜಾತಿಯ ಜನರಿದ್ದರು [ ಬಡಿಗ, ಕಮ್ಮಾರ, ಚಮ್ಮಾರ, ಕ್ಷೌರಿಕ, ಕೃಷಿಕ, ಬಳಿಗಾರ, ಪತ್ತಾರ,]. ಇಲ್ಲಿ ಜಾತಿ ಎಂಬುವುದು ಯಾವುದೋ ಒಂದು ಸಮಾಜವನ್ನು ಬಟ್ಟು ಮಾಡಿ ತೋರಿಸುವುದಲ್ಲ. ಕಾಯಕದ ಮೇಲೆ ಆತನನ್ನು ಗುರುತಿಸಲಾಗುತ್ತಿತ್ತು. ಈ ಒಂದು ವ್ಯವಸ್ಥೆಯನ್ನು ಪ್ರೊ. ಎಸ್. ಕೆ. ನಾರಾಯಣಾಚಾರ್ಯ’ಅವರು Professional Harmoni ಎಂದು ಕರೆದಿದ್ದಾರೆ. ರಾಮನ ಆಳ್ವಿಕೆಯಲ್ಲಿ ಎಲ್ಲ ಜನರಿದ್ದರು ಅಷ್ಟೇ ಅಲ್ಲ ಅವರ ಕಷ್ಟ ಆಲಿಸಲು ರಾಮ ಸ್ವತಃ ಸಾಮಾನ್ಯ ವೇಷ ಧರಿಸಿ ಜನರ ಕಷ್ಟದ ಬಗ್ಗೆ ತಿಳಿದುಕೊಳ್ಳುತ್ತಿದ್ದ ಇದಕ್ಕಾಗಿ ಪೌರದ ಜನ ದಶರಥಕ್ಕಿಂತಲೂ ರಾಮನನ್ನು ಹಾಡಿ ಹೊಗಳಿದ್ದಾರೆ ಈ ಕಾರಣಕ್ಕಾಗಿಯೇ ಮಹಾತ್ಮ ಗಾಂಧಿಜೀ ನಮ್ಮ ಭಾರತವನ್ನು ‘ರಾಮರಾಜ್ಯದ’ ಕನಸು ಕಂಡವರು. ಈಗ ನಾವು ಜಾತಿಯನ್ನು ಒಂದು ಸಮುದಾಯ ಎಂದು ಭಾವಿಸುವುದನ್ನು ಬಿಟ್ಟು ಕಾಯಕವೇ ಜಾತಿ, ವೃತ್ತಿಯನ್ನು ಯಾವನು ಬೇಕಾದರೂ ಯಾವ ವೃತ್ತಿಯನ್ನು ಮಾಡಬಹುದು ಇದುವೇ ಜಾತಿ. ಈ ಕಾರಣಕ್ಕಾಗಿ ಪಂಪ “ಮನುಷ್ಯ ಕುಲಂ ತಾನೊಂದೇ ವಲಂ” ಎಂದು ಹೇಳಿದ. ಅಷ್ಟೇ ಅಲ್ಲ ಮುಂಬರುವ ವಚನಕಾರರು, ಕೀರ್ತನಕಾರರು, ತತ್ವಪದಕಾರರು ಜಾತಿಯ ನಿಜವಾದ ವ್ಯಾಖ್ಯಾನ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದವರು.
ಇನ್ನೂ ಧರ್ಮ ಎಂದರೆ ನುಡಿದಂತೆ ನಡೆಯುವುದು, ನಡೆದಂತೆ ಬಾಳಿ ತೋರಿಸುವುದು ನಿಜವಾದ ಧರ್ಮ. ಕಷ್ಟದ ಸಮಯದಲ್ಲಿದ್ದವರಿಗೆ ಆಸರೆಯಾಗಿ ನಿಲ್ಲುವುದೇ ಧರ್ಮ. ಇದರ ಹೊರತು ಮತ್ತಾವ ಧರ್ಮ? ಧರ್ಮರಾಜ ತಾನು ರಾಜಭಾರ ಮಾಡುವ ಸಂದರ್ಭದಲ್ಲಿ ಹಿರಿಯರಬಳಿ ಹೋಗಿ ರಾಜ್ಯವನ್ನು ಹೇಗೆ ಆಳಲಿ ಎಂದಾಗ ಆಗ ಅವರು ಹೇಳಿದ್ದು ಒಂದೇ ಅಪಾ ಎಲ್ಲರೂ ದೇವರ ಮಕ್ಕಳು. ಯಾರು ಅನ್ಯಾಯದಿಂದ ಅಧರ್ಮದ ಮಾರ್ಗದಲ್ಲಿ ಯಾರು ನಡೆಯುತ್ತಾರೋ ಅವರಿಗೆ ಶಿಕ್ಷೆ ಕೊಡು, ಯಾರು ದಾನ, ದಯೆಯ ಮೂಲಕ ಧರ್ಮದ ದಾರಿಯಲ್ಲಿ ನಡೆಯುವರೋ ಅವರನ್ನು ರಕ್ಷಣೆ ಕೊಡು ಎಂದು ಹೇಳುತ್ತಾರೆ. ಧರ್ಮ ಎನ್ನುವುದು ದಯೆ, ಕರುಣೆ, ಮಮಕಾರ, ಪ್ರೀತಿ, ಕಾರುಣ್ಯದಿಂದ ಕೂಡಿರುತ್ತದೆ. ಅಣ್ಣ ಬಸವಣ್ಣ ಕೂಡ ದಯವಿಲ್ಲದ ಧರ್ಮ ಯಾವುದಯ್ಯ ಎಂದು ಹೇಳಿಲ್ಲವೇ. ಹೀಗೆ ಎಲ್ಲರೊಂದಿಗೆ ಒಟ್ಟಾಗಿ ಸಹಬಾಳ್ವೆಯಿಂದ ಇರುವುದೇ ಧರ್ಮ. ಯಾರು ಹಗೆತನದಿಂದ ವಾಮಮಾರ್ಗದಲ್ಲಿ ನಡೆಯುವರು, ಯಾರು ತಮ್ಮ ರಾಷ್ಟ್ರದ ಸಂಸ್ಕೃತಿಯನ್ನು ಮರೆಯುವರೋ, ದ್ವೇಷಿಸುವರೋ ಅವರೆಲ್ಲ ಅಧರ್ಮಿಗಳೆ ಎಂದು ಭಾವಿಸಬೇಕು.
ಆದರೆ ಇವತ್ತಿನ ಸಂದರ್ಭದಲ್ಲಿ ಜಾತಿ, ಧರ್ಮದ ತಾತ್ವಿಕ ವ್ಯಾಖ್ಯಾನವನ್ನು ಗಾಳಿಗೆ ತೂರಿ ತಮ್ಮ ತಮ್ಮ ಮನತೊಚಿದಂತೆ ಜಾತಿ, ಧರ್ಮದ ನಿಲುವನ್ನು ನಿರ್ಮಿಸಿ. ನಾಡಿನ, ರಾಷ್ಟ್ರದ ಜನಮನದಲ್ಲಿ ಹಗೆತನದ ಭಾವ ತುಂಬಿ ಒಬ್ಬರಿಗೊಬ್ಬರು ಆಗದಂತೆ ಮಾಡುವುದೇ ಜಾತಿ, ಧರ್ಮದ ನಿಜವಾದ ವ್ಯಾಖ್ಯಾನವಾಗಿದೆ. ನಮ್ಮೆಲ್ಲ ಅಹಂಮಿನ ಅಮಲಿನಲ್ಲಿ ತೇಲಿ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಈ ಲೇಖನದ ಮುಖಾಂತರ ತಿಳಿದುಕೊಳ್ಳುವುದು ಇಷ್ಟೇ ಕುಲ, ಕುಲ, ಧರ್ಮದ ಹೆಸರಿನಲ್ಲಿ ಹೊಡೆದಾಡದೆ ‘ವಿಶ್ವಮಾನವನಾಗಿ ’ ಬದುಕಿ, ಬಾಳಿ ತೋರಿಸಬೇಕಿದೆ. ನಮ್ಮ ಶಾಸ್ತ್ರಕಾರರು ನೀನು ಯಾವುದನ್ನು ಮಾಡುತ್ತೀಯೋ ಅದನ್ನು ತಿಳಿದು ಮಾಡು ಎಂದು ಹೇಳಿದ್ದುಂಟು. ಹೀಗಾಗಿ ನಾವೆಲ್ಲ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದಾಗ ಮನುಷ್ಯ ಮನುಷ್ಯನಾಗಿ ಉಳಿಯುವನು.
ನಾವೆಲ್ಲಾ ಭಾರತೀಯರೆಂಬ ಭಾವ ಮೂಡಲಿ
ನಮ್ಮಲ್ಲಿಯ ಭೇದ ಪ್ರಭು ದೂರ ಮಾಡಲಿ…
– ಅಮರ ಯರಗಟ್ಟಿಕರ
– ಸಂಶೋಧನಾರ್ಥಿ,
– ರಾ.ಚ.ವಿ.ವಿ. ಬೆಳಗಾವಿ