ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರನ್ನು ಅಮಾನತ್ ಮಾಡಿ ಆದೇಶ ಮಾಡಿದ ಶಿಕ್ಷಣ ಇಲಾಖೆ..
ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕಾದ ಇವರೆ ದಾರಿ ತಪ್ಪಿದ್ರೆ ಹೇಗೆ?
ಯಾರಿವರು?ಯಾವ ಜಿಲ್ಲೆ? ಇಲ್ಲಿದೆ ನೋಡಿ ಮಾಹಿತಿ..
ವಿಜಯಪುರ: ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಸುಗಮವಾಗಿ ನಿರ್ವಹಿಸುವಲ್ಲಿ ವಿಫಲರಾದ ಮತ್ತು ಕರ್ತವ್ಯ ಲೋಪ ಆರೋಪದ ಮೇಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ ಅವರನ್ನು ಅಮಾನತುಗೊಳಿಸಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ, ವೆಬ್ ಕಾಸ್ಟಿಂಗ್ ವ್ಯವಸ್ಥೆ ಸರಿಯಾಗಿ ಮಾಡಿಲ್ಲ.
ಪರೀಕ್ಷೆ ನಕಲಿಗೆ ಅವಕಾಶ ನೀಡಿದ ಆರೋಪವೂ ಅವರ ಮೇಲಿದೆ. ಹೊರ್ತಿಯ ರೇವಣ ಸಿದ್ದೇಶ್ವರ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರ ಹಾಗೂ ಕಾರಜೋಳದ ರಾಣಿ ಚನ್ನಮ್ಮ ವಸತಿ ಶಾಲೆಯ ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿಗಳನ್ನು ತಪಾಸಣೆ ಮಾಡದೇ ಬಿಟ್ಟಿರುವುದು ಮತ್ತು ಪರೀಕ್ಷಾ ಕೇಂದ್ರದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಗುಂಪುಗೂಡಿ ನಕಲು ಮಾಡಲು ಸಹಕರಿಸಿರುವುದು ವಿಚಾರಣೆ ವೇಳೆ ಸಾಬೀತಾಗಿದೆ.
ಈ ಬಗ್ಗೆ ವಿವರಣಾತ್ಮಕ ವರದಿ ನೀಡುವಂತೆ ಸೂಚಿಸಿದರೂ ಸೂಕ್ತ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಹಿರಿಯ ಅಧಿಕಾರಿಗಳು ಕರೆ ಮಾಡಿದರೂ ಸ್ವೀಕರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಬಾಕಿ ಇರಿಸಿ, ಸೇವೆಯಿಂದ ಅಮಾನತು ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.