ಅಮ್ಮನ ಪ್ರೀತಿ ಬರಿದಾಗದ ಖಜಾನೆ.
ಅಮ್ಮಾ…ಎಂದರೆ ಅದೇನೋ ಗೊತ್ತಿಲ್ಲದ ಭಾವನೆಗಳು ಹೆಗಲೇರಿ ಕೂರುತ್ತವೆ. ಅದೆಷ್ಟೇ ಕಷ್ಟಗಳಿದ್ದರು ಅವುಗಳನ್ನ ಮರೆಸುವ ಔಷಧಿಯಂತೆ ಅಮ್ಮನ ಅಪ್ಪುಗೆ ಮತ್ತು ಮುದ್ದುಗರೆವ ಮಾತುಗಳು ಮರೆಸಿಬಿಡುತ್ತವೆ. ಹೌದು ನಾವಿಂದು ಭೂಮಿಯ ಮೇಲೆ ಇದ್ದೇವೆ ಎಂದರೆ ಅದಕ್ಕೆ ಕಾರಣ ಅಮ್ಮ. ದೇವರಿಗೂ ದೇವರಾದವಳು ಆಕೆ. ಪ್ರಪಂಚ ಕಾಣದ ಜೀವಗಳಿಗೆ ಜೀವ ತುಂಬಿದಾಕೆ. ನವಮಾಸಗಳು ಹೊತ್ತು ಗರ್ಭವೆಂಬ ಗುಡಿಯಲ್ಲಿ ರಕ್ತದ ಅಭಿಷೇಕ ಮಾಡಿ, ಕಂದನನ್ನು ಕಾಣುವ ತವಕ ಹಾಗೂ ಜಗತ್ತಿಗೆ ನಮ್ಮನ್ನು ಪರಿಚಯಿಸಲು ಅದೆಷ್ಟು ನೋವುಂಡಿರುವಳೋ ಅದು ಆಕೆಗೆ ಮಾತ್ರ ಗೊತ್ತು. ತನ್ನ ನೋವಿನ ಕಣ್ಣೀರನ್ನು ಸೀರೆಯ ಸೇರಗಲ್ಲೆ ಒರೆಸಿ ನಕ್ಕು ನಮ್ಮ ಮುಖದಲ್ಲಿ ನಗು ಕಾಣುವ ಏಕೈಕ ಜೀವ ಎಂದರೆ ಅದು ಅಮ್ಮ ಮಾತ್ರ.
ಅಮ್ಮ ಅದೊಂದು ಪ್ರಪಂಚದ ಬ್ರ್ಯಾಂಡ್ ನೇಮ್. ಬಿದ್ದಾಗ ಮೊದಲು ನಾವು ಅನ್ನೋದೇ ಅಮ್ಮಾ ಅಂತ ಯಾಕೆ ಅಂದ್ರೆ ನೋವು ಮರೆಸುವ ಶಕ್ತಿ ಆ ಪದಕ್ಕಿದೆ. ಆಭರಣಗಳಿಲ್ಲದೆ ಹೊಳೆದವಳು. ಅಷ್ಟೈಶ್ವರ್ಯಗಳ ಅವಶ್ಯಕತೆ ಇಲ್ಲದೆ ಶ್ರೀಮಂತ ಪ್ರೀತಿ ಉಣಿಸಿದವಳು. ಯಾವ ಪದವಿಗಳನ್ನು ಪಡೆಯದ ಆಕೆ ಅಮ್ಮನೆಂಬ ಪದವಿಯನ್ನು ಪಡೆದು ನಿವೃತ್ತಿ ಇಲ್ಲದೆ ಬದುಕಿನ ಕೊನೆಯ ಕ್ಷಣದವರೆಗೂ ಅಮ್ಮನ ಕಾರ್ಯ ನಿರ್ವಹಿಸುವ ಒಂದೇ ಒಂದು ಜೀವ ಎಂದರೆ ಅದು ಅಮ್ಮ ಮಾತ್ರ. ಹೌದು! ಇದ್ದಾಗ ಕೆಲವರಿಗೆ ಅಮ್ಮನ ಬೆಲೆ ತಿಳಿದಿರುವುದಿಲ್ಲ, ಕಳೆದುಕೊಂಡಾಗ ಅಮ್ಮನನ್ನು ಬಯಸುವರು ಎಲ್ಲ ಇನ್ನೂ ಕೆಲವರು ಇದ್ದು ಇಲ್ಲದಂತೆ ಕಾಣುವರು ಇಲ್ಲಿ ಕೇಳಿ ಒಮ್ಮೆ ಆಕೆಯ ಪ್ರೀತಿ ಕಳೆದುಕೊಂಡರೆ ನೀವ್ ಎಷ್ಟು ಕೋಟಿಗೆ ಬದುಕಿದರು ಅಂತಹ ಬದುಕು ಮತ್ತು ಬಾಳು ಬಾಳೇ ಅಲ್ಲ ಬದಲಿಗೆ ಹಾಳು. ಆ ಜೀವ ಕಂದಾ ನೀನು ಚನ್ನಾಗಿರಬೇಕು ಅಂತ ಹರಸಿದರೆ ನೀನು ಎಲ್ಲೇ ಹೋದರೂ ಗೆದ್ದು ಬರ್ತೀಯ ಯಾಕಂದ್ರೆ ಯಾವುದೇ ಕಲ್ಮಶ ಇರದ ಜೀವ ಎಂದರೆ ಅದು ಅಮ್ಮ ಮಾತ್ರ.
ಅಮ್ಮನೆಂದರೆ ಅಮ್ಮನ ಪ್ರೀತಿ ಎಂದರೆ ಅದೊಂದು ನಮ್ಮ ಖಾಲಿಯೇ ಆಗದ ಮನೆಯ ಬ್ಯಾಂಕ್ ಖಜಾನೆ. ಅವಳಿಗೆ ನಾವು ಚಿಕ್ಕವರಿದ್ದಾಗ ದೇಕುತ್ತಾ ಹೊಸ್ತಿಲು ದಾಟಿದರೂ ನನ್ನ ಮಗು ಇವತ್ತು ಹೊಸ್ತಿಲು ದಾಟಿತು ಎಂದು ಖುಷಿಪಟ್ಟು ತನ್ನೊಳಗೆ ಊರಣ ಸವಿಯುವ ಸವಿಗಾರ್ತಿ ಆಕೆ. ಬಿದ್ದು ಗಾಯ ಮಾಡಕೊಂಡರೆ ಊದಿ ಸೆರಗರಿದು ಬಟ್ಟೆ ಕಟ್ಟಿ ಈ ಹಾಳು ನೆಲ ಡೊಂಕಿದೆ ನನ್ನ ಮಗುಗೆ ನೋವು ಕೊಡಬೇಕಾ ಎಂದು ಬೈದು ಇಲ್ಲ ಕಂದಾ ಏನಾಗಲ್ಲ ಅನ್ನೋ ಮಾತಿನ ಮಾತಲ್ಲೇ ಜಾದು ಮಾಡಿದ ಜಾದೂಗಾರ್ತಿ ಅವಳು. ನಾವ್ ಕಂಡ ಕನಸುಗಳಿಗೆ ರೆಕ್ಕೆ ಕಟ್ಟಿದ ಮಾಯಾಗರ್ತಿ ಅವಳು. ನಾವು ಪುಟ್ಟ ಪುಟ್ಟ ಅಂಬೆಗಾಲನ್ನಿರಿಸುವಾಗ ಅದನ್ನು ಹಿಗ್ಗಿ ಸಂಭ್ರಮಿಸಿದವಳು. ಅರ್ಥವೇ ಆಗದಿರುವ ನಮ್ಮ ತಿಕ್ಕಲು ತಿಕ್ಕಲು ಮಾತಿಗೆ ತಲೆದೂಗಿ ನಕ್ಕು ಮಾತು ಕಲಿಸಿಕೊಟ್ಟವಳು. ನಮ್ಮ ಕಾಗಿಕಾಲ್ ಗುಬ್ಬಿಕಾಲ್ ನ ಬರಹಗಳನ್ನು ಓದಲು ಬಾರದಿದ್ರೂ ಶಭಾಷ್ ಇನ್ನೂ ಚನ್ನಾಗಿ ಬರಿ ನೀನು ಬರಿತಿಯ ಅಬ್ಬಬ್ಬಾ! ನನ್ನ ಕಂದಮ್ಮನ ಅಕ್ಷರಗಳು ಮುತ್ತನ್ನು ಪೋಣಿಸಿದಂತಿವೆ ಎಂದು ಬರೆಯಲು ಪ್ರೇರೇಪಿಸಿದವಳು. ನಮ್ಮ ಸಣ್ಣ ಪುಟ್ಟ ಗೆಲುವನ್ನು ಸಂಭ್ರಮಿಸಿದವಳು. ಸಣ್ಣ ಪುಟ್ಟ ಪ್ರಶಸ್ತಿ ಬಂದಾಗಲೂ ಊರೆಲ್ಲ ನನ್ ಮಗು ಗೆದ್ದು ಬಂದಿದೆ ಎಂದು ಹೇಳಿಕೊಂಡು ದೃಷ್ಟಿ ತೆಗೆದು ಕಾಡಿಗೆ ತೀಡಿ ಜಗತ್ತಿನ ಅತ್ಯಂತ ಅದ್ಭುತವೇ ನನ್ನ ಮಗು ಎಂದು ಬೀಗಿದವಳು.ಅಪ್ಪ ಗದರಿದಾಗ ತಲೆ ನೇವರಿಸಿ ಮುತ್ತಿಟ್ಟು ಇರ್ಲಿ ಬಾ ನಿಮ್ಮಪ್ಪ ಹಂಗೆ ಅಂತ ನಮ್ಮದೇ ತಪ್ಪಿದ್ರೂ ಅಪ್ಪನನ್ನು ತಪ್ಪಿತಸ್ತನಂತೆ ಮಾಡಿ ನಾವ್ ಮಾಡಿದ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿ ತಿಳಿ ಹೇಳಿ ನಗುತ್ತಲೇ ಅದು ಹಾಗಲ್ಲ ಹೀಗೆ ಅಂತ ಸರಿ ದಾರಿಗೆ ಸರಿದೂಗಿಸಿದ ನ್ಯಾಯದೇವತೆ ಅಮ್ಮ.
ಉಫ್! ಪದಗಳು ಕೂಡ ಅಮ್ಮನೆಂಬ ಪದ ಕೇಳಿದೊಡನೆ ಶರಣಾದಂತಿವೆ. ಜಗತ್ತಿನ ಅತ್ಯಂತ ನೆಮ್ಮದಿ ಮತ್ತು ಸೌಂದರ್ಯ ರಾಶಿ ಇರುವುದು ಅವಳ ಮಡಿಲು ಮತ್ತು ಮೊಗದಲ್ಲಿ ಮಾತ್ರ. ಅಂತಹ ತಾಯಿಯರ ಮನಸ್ಸು ನೋಯಿಸದೆ ಅವರನ್ನರಿತು ನಡೆಯಬೇಕು. ಇಂದು ನಮ್ಮ ಸ್ಟೇಟಸ್ ಗಳಲ್ಲಿ HAPPY MOTHERS DAY ಅಂತ ಹಾಕಿಕೊಳ್ಳೋದಲ್ಲ ಬದಲಿಗೆ ನಮ್ಮ ಬದುಕಿನ ಸ್ಟೇಟಸ್ ನಲ್ಲಿ ಅವರಿಗೊಂದು ಸ್ಟೇಟಸ್ ಕೊಡಿ. ಅವರನ್ನ ಸದಾ ಕಾಲ ನಗ್ತಾ ಇರುವಂತೆ ನೋಡಿಕೊಳ್ಳೋ ಜವಾಬ್ದಾರಿ ಪ್ರತಿ ಮಕ್ಕಳ ಹೆಗಲ ಮೇಲಿದೆ. ನಮ್ಮ ದೇಹದ ರಕ್ತ ಬಸಿದು ಅವಳ ಪಾದಕಮಲಗಳಿಗೆ ಲೇಪಿಸಿದರು ಅವಳ ಋಣ ತೀರಿಸಲು ಸಾಧ್ಯವಿಲ್ಲ. ಅವಳಚ್ಚಿದ ಮನ ಮೆಚ್ಚಿದ ಮನ ಮನೆಯ ದೀಪ ಇಂದಿಗೂ ಬೆಳಕಾಗಿ ಪ್ರಜ್ವಲಿಸುತ್ತಿದೆ. Essence of life… ಜಗತ್ತಿನಲ್ಲಿ ಸ್ವಾರ್ಥವಿಲ್ಲದೆ ಮಕ್ಕಳಿಗಾಗಿ ಜೀವ ತೇಯುವ ಎಲ್ಲ ತಾಯಂದಿರಿಗೆ ವಿಶ್ವ ತಾಯಂದಿರ ದಿನಾಚರಣೆಯ ಶುಭಾಶಯಗಳು.
✍🏻ಮೇಘನ ಜಿ
ಸಂಶೋಧನಾರ್ಥಿ