ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ ವೈವಿಧ್ಯತೆ..
ಶ್ರೀ ಕನಕದಾಸರು (1509-1609) ಕರ್ನಾಟಕದಲ್ಲಿ ಜನಪ್ರೀಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ದಾಂತಗಳಿಗೆ ಕಾಣಿಕೆಯಿತ್ತವರು,
ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.
ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ 1509 ರಲ್ಲಿ ಬೀರಪ್ಪ ಮತ್ತು ಬಚ್ಚಮ್ಮ ಎಂಬ ಕುರುಬ ಜಾತಿಗೆ ಸೇರಿದ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರ ಮೂಲ ಹೆಸು ತಿಮ್ಮಪ್ಪ. ತಂದೆ-ತಾಯಿ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತು ಹೆತ್ತ ಮಗನಾದುದರಿಂದ ತಿಮ್ಮಪ್ಪನಾಯಕನೆಂದು ಹೆಸರಿಟ್ಟರು. ಇವರ ತಂದೆ ಅಂದಿನ ವಿಜಯನಗರದ ಅರಸರ ದಣ್ಣಾಯಕತ್ವವನ್ನು ವಹಿಸಿಕೊಡು 78 ಹಳ್ಳಿಗಳ ಉಸ್ತುವಾರಿಕೆಯನ್ನು ನೋಡಿಕೊಳ್ಳುತ್ತಿದ್ದರು. ಅದರ ರಕ್ಷಣೆ ನೋಡಿಕೊಳ್ಳಲು ಮಗನಿಗೂ ಕೂಡ ಕ್ಷತ್ರಿಯೋಜಿತ ಸರ್ವ ವಿದ್ಯೆಯನ್ನು ಕಲಿಸಿ ಆ ಮಾಂಡಲೀಕ ಪದವಿಯ ನಿರ್ವಹಣೆಯನ್ನು ನೋಡಿಕೊಂಡು ಹೋಗುವಷ್ಟು ಸಮರ್ಥನನ್ನಾಗಿ ಮಾಡಿದ್ದರೆಂದು ತಿಳಿಯುತ್ತೇವೆ.
ತಿಮ್ಮಪ್ಪನಾಯಕನು ತನ್ನ ಅರಸರಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಪಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗಲೇ ತನಗೆ ದೊರೆತ ಕನಕವನ್ನು ಜನರಿಗೆ ದಾನ ಮಾಡಿ ಜೀವನದಲ್ಲಿ ನಡೆದ ಹಲವು ಘಟನೆಗಳು ಇವರನ್ನು ಹರಿದಾಸನಾಗುವತ್ತ ಪ್ರೇರೇಪಿಸುವಂತಾಯಿತು. ಅದರ ಪರಿಣಾಮವೇ ಆದಿಕೇಶವನ ದೇವಾಲಯ ಮತ್ತು ನರಸಿಂಹ ದೇವಾಲಯಗಳು ನಿರ್ಮಾಣವಾಗಿದ್ದನ್ನು ಇತಿಹಾಸದಿಂದ ತಿಳಿಯುತ್ತೇವೆ.
ಕನಕದಾಸರು 10 ನೆಯ ಶತಮಾನದಲ್ಲಿ ಆಗಿ ಹೋದ ಪಂಪನಂತೆ ಕವಿಯೂ ಆಗಿದ್ದು ಕಲಿಯೂ ಆಗಿದ್ದರು.
ಇವರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿ ಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯಾದಿಕೇಶವರಾಯ.
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು ಸುಳಾದಿಗಳು ಉಗಾಭೋಗಗಳನ್ನು ರಚಿಸಿರುವುದಲ್ಲದೇ ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮಂಡಿಗೆಗಳ ರೂಪದಲ್ಲಿ ನೀಡಿರುವರು.
ಇವರ ಮುಖ್ಯ ಕಾವ್ಯಕೃತಿಗಳು ಇಂತಿವೆ 1) ಮೋಹನ ತರಂಗಿಣಿ 2) ನಳಚರಿತ್ರೆ 3) ರಾಮಧ್ಯಾನ ಚರಿತೆ 4) ಹರಿಭಕ್ತಿ ಸಾರ 5) ನೃಸಿಂಹಸ್ತವ (ಉಪಲಬ್ಧವಿಲ್ಲ).
ಕನಕದಾಸರ ಕೀರ್ತನೆಗಳಲ್ಲಿ ಭಗವಂತನಲ್ಲಿ ನಂಬಿಗೆಯನ್ನು ನಾವು ಕಾಣುತ್ತೇವೆ. ಭಗವಂತನನ್ನು ಕಾಣಬೇಕೆಂಬ ಹಂಬಲವೇ ಭಕ್ತಿ. ಜೀವನದ ಯಾವುದೋ ಒಂದು ಘಟ್ಟದಲ್ಲಿ ಭಕ್ತನಾದ ವ್ಯಕ್ತಿ ತನ್ನ ಜೀವನದ ಘಟನೆಗಳನ್ನೆಲ್ಲ ನೆನಪಿಸಿಕೊಂಡು ತನ್ನ ಜೀವನ ಕೆಲವು ಹಂತದಲ್ಲಿ ವ್ಯರ್ಥವಾದ ಬಗ್ಗೆ ಕೊರಗುತ್ತಾನೆ. ಜೊತೆಗೆ ಅದಕ್ಕಾಗಿ ತಾನು ಏನು ಮಾಡಬಲ್ಲೆ ಎಂಬುದರತ್ತ ಚಿಂತನೆಯಲ್ಲಿ ಕೂಡ ತೊಡಗುತ್ತಾನೆ ಇಂಥಹ ಬದುಕಿಗೆ ಕನಕದಾಸರು ಕೂಡ ಹೊರತಲ್ಲ. ಅದಕ್ಕೆ ಅವರು ಬರೆದಿರುವ ಕೀರ್ತನೆಗಳನ್ನು ನೋಡಬಹುದಾಗಿದೆ.
ಭಕ್ತಿ ಇಲ್ಲದವನಿಗೆ ಮುಕ್ತಿ ಇಲ್ಲ.ಎಂಬುದು ಕನಕದಾಸರ ದೃಢವಾದ ನಿಲುಮೆ. ಈ ಕಾರಣದಿಂದಲೇ ಅವರು ತಮ್ಮನ್ನು ತಾವೇ ವಿಮರ್ಶಿಸಿಕೊಂಡಿದ್ದಾರೆ ಸಂತೈಸಿಕೊಂಡಿದ್ದಾರೆ. “ ದೀನ ನಾನು ಸಮಸ್ತ ಲೋಕಕೆ ದಾನಿ ನೀನು ವಿಚಾರಿಸಲು ಮತಿ ಹೀನ ನಾನು” ಎಂಬುದು ಮಹಾಭಕ್ತನ ವಿಚಾರ ಇಂಥವರಿಗೆ ಭಗವಂತ ಎಲ್ಲವನ್ನೂ ನೀಡಿ ಸಲಹುವನು ಎಂಬ ದೃಢ ವಿಶ್ವಾಸ ಇವರಿಗಿತ್ತು. ಅದಕ್ಕಾಗಿಯೇ ಇವರು ಗಾಬರಿಗೊಳ್ಳುವ ಮನಸ್ಸುಗಳಿಗೆ ಧೈರ್ಯ ಹೇಳಿದ್ದಾರೆ.
“ ತಲ್ಲಣಿಸದಿರು ಕಡ್ಯ ತಾಳು ಮನವೇ ಎನ್ನುತ್ತ ಬೆಟ್ಟದ ತುದಿಯಲ್ಲಿನ ಮರಕ್ಕೆ ನೀರು ಉಣಿಸುವವರು ಯಾರು? ಹುಟ್ಟಿಸಿದ ದೇವನೇ ಇದಕ್ಕೆ ಹೊಣೆಗಾರ. ಹಾಗಾಗಿ ಯಾರೂ ಚಿಂತಿಸಬೇಕಾದುದಿಲ್ಲ. ಎಂದಿರುವರು.
ಈ ದೇಹ ಈ ಜೀವನ ಈ ದೇಹಕ್ಕೆ ಸಂಬಂಧಿಸಿದ ಸುಖ-ದುಃಖ ಭಾವಗಳು ಎಲ್ಲವೂ ಭಗವಂತನವು. ಪಂಚೇಂದ್ರಿಯಗಳು ಅನುಭವಿಸುವ ಸುಖವೆಲ್ಲವೂ ಭಗವಂತನದೇ. ನಮ್ಮ ಅನುಭವವೆಂಬುದು ನೆಪ ಮಾತ್ರ ಯಾವ ಅನುಭವಗಳಿಗೂ ಮನುಷ್ಯರು ಸ್ವತಂತ್ರರಲ್ಲ. ಎಂಬ ಭಾವ ಇವರ ಕೀರ್ತನೆಗಳಲ್ಲಿ ಮೂಡಿ ಬಂದಿದೆ. ಭಗವಂತನನ್ನು ಮೆಚ್ಚಿಸಲು ನೇಮವಿಲ್ಲದ ಹೋಮ ಬೇಕಾಗಿಲ್ಲ ಎಂದು ಕಠೋರವಾಗಿ ನುಡಿದಿರುವರು. ಮನುಷ್ಯ ತನ್ನಷ್ಟಕ್ಕೆ ತಾನೇ ಜನಿಸಿದವನಲ್ಲ ಅದಕ್ಕೆ ಭಗವಂತನ ಪ್ರೇರಣೆಯೂ ಕಾರಣ ಎನ್ನುವ ಕನಕದಾಸರು ಭಗವಂತನನ್ನು ಒಡೆಯನೆಂದು ಆರಾಧಿಸುವುದೇ ದಾಸ್ಯಭಾವ ಎಂದು “ ದಾಸದಾಸರ ಮನೆಯ ದಾಸಾನುದಾಸ ನಾನು. ಶ್ರೀಪತಿ ರಂಗನೇ, ನಾನು ನಿನ್ನ ಮನೆಯ ದಾಸ.” ಎಂದಿರುವ ಕನಕದಾಸರು ಮಂಕುದಾಸ, ಮರಳುದಾಸ ಬಡದಾಸಾಳಿನ ಆಳಿನದಾಸನ ಅಡಿದಾಸ”ಎಂದು ತಮ್ಮನ್ನು ಗುರುತಿಸಿಕೊಂಡಿರುವರು. ಇಲ್ಲಿ ಕಂಡು ಬರುವ ಭಕ್ತಿಯ ತಾದಾತ್ಮ ದೊಡ್ಡದು. ಅಷ್ಟೇ ಅಲ್ಲದೇ ಇಂತಹ ದಾಸನಿಗೆ ಹರಿಯೊಂದಿಗೆ ಭಕ್ತಿಯ ಬಹಳ ಸಲುಗೆ “ ನಿನ್ನನ್ನು ಹೀಗೆಂದೆನೆ ? ಹಾಗೆಂದನೇ ? ಎಂದು ಕೇಳುತ್ತ ಹರಿಯ ಗುಣಾವಗುಣಗಳನ್ನು ಚಿತ್ರಿಸುತ್ತ ಅವನ ಸರ್ವೊತ್ಮಮತ್ವವನ್ನು ಸಾರಿ ಹೇಳಿರುವರು.
ಭಗವಂತನನ್ನು ಗೆಳೆಯನೆಂದು ಕಾಣುವ ಸಖ್ಯಭಾವದ ಕೀರ್ತನೆಗಳು ಕನಕದಾಸರ ಪದ್ಯಗಳಲ್ಲಿ ದೊರೆಯುತ್ತವೆ. ಮಾನವ ವಿಚಾರಶೀಲನಾಬೇಕು ಮೂಢನಾಗಬಾರದು, ಹರಿಹರರಲ್ಲಿ ಬೇಧ ಕೂಡದು, ಎಂಬ ಮಾತುಗಳು ಅವರ ಕೀರ್ತನೆಗಳಲ್ಲಿ ಬರುತ್ತವೆ. ”ನಾರಾಯಣ ಎಂಬ ನಾಮದ” ಎಂಬ ಪದ್ಯದಲ್ಲಿ “ನಾಲಿಗೆ ಎಂಬುದನ್ನು ಕೂರಿಗೆ ಮಾಡಿ ನಾರಾಯಣ ಎಂಬ ಬೀಜವನ್ನು ಬಿತ್ತಬೇಕು, ಹೃದಯವೇ ಹೊಲ, ದೇಹವೇ ನೇಗಿಲು. ಶ್ವಾಸ ನಿಃಶ್ವಾಸಗಳೆಂಬ ಎತ್ತುಗಳನ್ನು ಹೂಡಿ ಜ್ಞಾನವೆಂಬ ಹಗ್ಗದಲ್ಲಿ ನಿಯಂತ್ರಿಸಿ ನಾರಾಯಣ ಬೀಜವನ್ನು ಬಿತ್ತಬೇಕು ಎಂದು ಹೇಳಿರುವರಲ್ಲದೇ “ಎಲ್ಲಿರುವನೋ ರಂಗ” ಎಂಬ ಪದ್ಯದಲ್ಲಿ ದೇವರು ಸರ್ವಾಂತರ್ಯಾಮಿ, ಪ್ರಹ್ಲಾದನ ಕೋರಿಕೆ ಕಂಬದಲ್ಲಿ ಬಂದ ಸಾವಿನ ದವಡೆಯಲ್ಲಿದ್ದ ಅಜಮಿಳನಿಗೆ ಒಲಿದ ಮೊಸಳೆಯಿಂದ ಹಿಡಿಯಲ್ಪಟ್ಟ ಗಜಾಸುರನನ್ನು ರಕ್ಷಿಸಿದ. ಅಣು ಮಹತ್ತುಗಳಲ್ಲಿರುವ ಪರಿಪೂರ್ಣನು ದೇವರು ಎಲ್ಲಿದ್ದಾನೆ ಎಂಬ ಸಂಶಯ ಸಲ್ಲದು ಎಂದು ಉದಾಹರಣೆಗಳನ್ನು ನೀಡುತ್ತ ತಮ್ಮ ಭಕ್ತಿಯ ಪರಾಕಾಷ್ಠೆಯನ್ನು ಮೆರೆದಿರುವರು.
“ ಆರು ಬಾಳಿದರೇನು” ಎಂಬ ಪದ್ಯದಲ್ಲಿ ನಾರಾಯಣನ ನಾಮಸ್ಮರಣೆ ಮಾಡದಿದ್ದಲ್ಲಿ ಏನಿದ್ದರೂ ಎಷ್ಟಿದ್ದರೂ ವ್ಯರ್ಥ ಎಂಬುದನ್ನು ಹಲವು ದೈನಂದಿನ ಸಂಗತಿಗಳನ್ನು ಉದಾಹರಿಸುತ್ತ ತಿಳಿಸಿರುವರು. ಊಟ ಮಾಡಲು ಬಾರದವನಿಗೆ ಮೃಷ್ಟಾನ್ನ ಭೋಜನ ನಿಸ್ಪ್ರಯೋಜಕ. ಹಣ್ಣು ಬಿಡದ ಮರ ಹಾಳಾದರೆ ಏನೂ ತೊಂದರೆಯಿಲ್ಲ ಕಣ್ಣಿಲ್ಲದವನಿಗೆ ಕನ್ನಡಿಯ ಮಹತ್ವ ತಿಳಿಯದು, ಪುಣ್ಯವಿಲ್ಲದ ಪ್ರೌಢಿಮೆಗೆ ಬೆಲೆಯಿಲ್ಲ, ಪ್ರೀತಿಯನ್ನೇ ತಿಳಿಯದವರಿಗೆ ಮಕ್ಕಳಿದ್ದರೂ ವ್ಯರ್ಥ, ಸಣ್ಣ ಮನಸ್ಸುಳ್ಳ ಅರಸರ ಸೇವೆಗೂ ಬೆಲೆಯಿಲ್ಲ ಹಾಗೆಯೇ ಸ್ವಾಭಿಮಾನವಿಲ್ಲದವನ ಬದುಕಿಗೆ ಅರ್ಥವಿಲ್ಲ. ಎಂದೆಲ್ಲ ಹೇಳುತ್ತ ತನ್ನ ಆರಾಧ್ಯ ದೈವ ಕಾಗಿನೆಲೆಯಾದಿಕೇಶವನನ್ನು ಸ್ಮರಿಸದೇ ಇದ್ದರೆ ಏನೂ ಪ್ರಯೋಜನವಿಲ್ಲ ಎಂದು ಸೊಗಸಾಗಿ ಹೇಳಿರುವರು.