ಹೊಸ ವರುಷಕ್ಕೆ ಹೊಸ ಭರವಸೆಯ ಬದುಕು ಆರಂಭಿಸೋಣ..
ನಾವೆಲ್ಲರೂ ನಮ್ಮಲ್ಲಿ ನಾವೆಲ್ಲ ಒಂದು ಸಂಕಲ್ಪ ಮಾಡಿಕೊಳ್ಳಬೇಕು.
ದಿನವೂ ಬೆಳಿಗ್ಗೆ ಬೇಗನೆ ಏಳುವುದು.ಎದ್ದ ತಕ್ಷಣ ದೇವರ ಅಥವಾ ಕುಟುಂಬ ಸದಸ್ಯರ ಮುಖ ನೋಡುವ.ಕೇವಲ ಹತ್ತು ನಿಮಿಷ ಮೊಬೈಲ್ ಗೆ ಸಮಯ ಕೊಟ್ಟು, ಆತ್ಮೀಯರೊಂದಿಗೆ ಶುಭಾಶಯ ಹಂಚಿಕ್ಕೊಳ್ಳೋಣ.
ನಂತರ ಕಸ ಗುಡಿಸುವ, ರಂಗೋಲಿ ಬಿಡಿಸುವ ದೇವರ ಪೂಜೆ ಹಾಗೂ ಸಾಧ್ಯವಾದರೆ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ಪೂಜೆ ಹಾಗೂ 20 ಸುತ್ತು ಪ್ರದಕ್ಷಿಣೆ ಹಾಕುವದು.
ದಿನನಿತ್ಯದ ಅಡುಗೆ ಮಾಡುವ ಸಂದರ್ಭದಲ್ಲಿ ದೇವರ ಹಾಡು ಕೇಳುತ್ತ, ಹಾಗೆಯೇ ಸಿಕ್ಕ ಅಲ್ಪ ಸಮಯದಲ್ಲೇ ಆಕಾಶವಾಣಿ, FM ಕೇಳುವುದು. ಅಕ್ಕರೆಯಿಂದ ಮಾಡಿದ ಅಡುಗೆಯನ್ನು ಪ್ರೀತಿಯಿಂದ ಬಡಿಸುವದನ್ನು.ಮಕ್ಕಳಿಗೆ ಶುಭಾಶಯಗಳನ್ನು ಹೇಳುತ್ತ ಅವರನ್ನು ಎಬ್ಬಿಸಿ, ಸ್ನಾನದ ನಂತರ ದೇವರ ಎದುರಿಗೆ ಕೈಮುಗಿಯುವುದನ್ನು ಕಲಿಸುವುದು.
ಮನೆಯ ಹಿರಿಯರೊಡನೆ ಸಂಭಾಷಣೆ ಮಾಡುತ್ತ ತಿಂಡಿ ತಿನ್ನುವ ಅಭ್ಯಾಸ ಮಾಡಿ.ಖುಷಿಯಿಂದ ಮಕ್ಕಳಿಗೆ ಶಾಲೆಗೆ ಕಳುಹಿಸಿ,ನಾವು ಖುಷಿಯಿಂದ ನಮ್ಮ ನಮ್ಮ ಕರ್ತವ್ಯಕ್ಕೆ ಹೊರಡುವುದು.
ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಪ್ರಾಮಾಣಿಕತೆಯಿಂದ ಸೇವೆ ಮಾಡುವುದು.
ನಮ್ಮ ವಯಸ್ಸಿಗೆ ತಕ್ಕ ಉಡುಗೆ ತೊಡುಗೆ ಹಾಕಿಕೊಳ್ಳುವುದು.
ನಮ್ಮ ಕಾರ್ಯ ಕ್ಷೇತ್ರದಲ್ಲಿ ಯಾರೊಂದಿಗೂ ಅತೀ ಸಲುಗೆ ಬೇಡ. ಯಾರೊಂದಿಗೂ ವೈಮನಸ್ಸು ಕೂಡ ಮಾಡಿಕೊಳ್ಳುವುದು ಬೇಡ.
ಹಿರಿಯರನ್ನು ಗೌರವಿಸುವ, ಕಿರಿಯರನ್ನು ಪ್ರೋತ್ಸಾಹಿಸುವ ಕೆಲಸ ನಮ್ಮದಾಗಲಿ.
ಗೆಳೆಯರನ್ನು ಪ್ರೀತಿಸಿ, ವೈರಿಗಳಿಂದ ಎಚ್ಚರ ವಹಿಸಬೇಕು, ವೈರಿಗಳ ಟೀಕೆಗಳು ಅವು ನಾವು ಮಾಡಿದ ತಪ್ಪುಗಳು ಆಗಿರುತ್ತವೆ ನಮ್ಮ ತಪ್ಪು ತಿದ್ದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು.
ಅಡುಗೆ ಮನೆಯಲ್ಲಿ ಎಲ್ಲರ ಹಿತ ದೃಷ್ಟಿಯಿಂದ ಎಲ್ಲರಿಗೂ ಇಷ್ಟದ ಅಡುಗೆ ಇರಲಿ.ಮ್ಯಾಗಿ, ಬ್ರೆಡ್ ಜಾಮ್, ಪಿಜ್ಜಾ ಬರ್ಗರಗಳಿಂದ ದೂರ ಇರಿ.
ಹಬ್ಬ ಹರಿದಿನಗಳಲ್ಲಿ ವಿಶೇಷ ಅಡುಗೆ ಹಾಗೂ ಕುಟುಂಬ ಸಮೇತ ಪೂಜೆಯಲ್ಲಿ ಭಾಗವಹಿಸಿ.ಮಾಲ್ ನಲ್ಲಿ ಹೋದಾಗ ಅಗತ್ಯ ಇರುವ ಸಾಮಗ್ರಿಗಳನ್ನು ಮಾತ್ರ ಖರೀದಿಸಿ, ಇನ್ನೊಬ್ಬರನ್ನು ನೋಡಿ ವಿನಾಃ ಕಾರಣ ಅನಗತ್ಯ ಖರೀದಿ ಬೇಡ.ರಜಾ ದಿನಗಳಲ್ಲಿ ಎಲ್ಲರ ನೆಚ್ಚಿನ ತಾಣಗಳಿಗೆ ಭೇಟಿ ನೀಡಿ.
ಬಂಧು ಬಳಗದ ಕಾರ್ಯಕ್ರಮಗಳಿಗೆ ಮಕ್ಕಳೊಂದಿಗೆ ಹೋಗಿ.
ಬಂಧು ಬಳಗದ ಸಂಬಂಧಗಳ ಪರಿಚಯ ನಮ್ಮ ಮಕ್ಕಳಿಗೆ ಮಾಡಿಸಿ.
ಹೊರಾಂಗಣ ಆಟಗಳಿಗೆ ಪ್ರೋತ್ಸಾಹಿಸಿ.
ಮಾತೃ ಭಾಷೆಯ ಮಹತ್ವ ತಿಳಿಸಿ.ರಾಷ್ಟ್ರೀಯ ಹಬ್ಬಗಳ ಮಹತ್ವ ಹಾಗೂ ದೇಶವನ್ನು ಪ್ರೀತಿಸುವ ಗುಣ ನಮ್ಮ ಮಕ್ಕಳಿಗೆ ಕಲಿಸಿ.
ಓದುವುದನ್ನು ಕಲಿಸಿ ಓದಿನ ಮಹತ್ವವ ಅರಿಯುವುದನ್ನು ಕಲಿಸಿ.
ಶಾಲಾ ಕಾಲೇಜುಗಳಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಕಲಿಸಿ, ಮಕ್ಕಳಿಗೆ ಇಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡುವುದನ್ನು ಕಲಿಸಿ.
ಗೆದ್ದರೆ ಖುಷಿ ಪಡುವ ಹಾಗೂ ಸೋತರೆ ಅನುಭವ ಎನ್ನುವ ಮಾತನ್ನು ಕಲಿಸಿ.
ಸಜ್ಜನರ ಸಂಗ ಮಾಡುವುದನ್ನು ಕಲಿಸಿ, ದುರ್ಜನರಿಂದ ದೂರ ಇರುವುದನ್ನು ಕಲಿಸಿ.
ಕೆಟ್ಟದನ್ನು ವಿರೋಧಿಸುವ ಹಾಗೂ ಒಳ್ಳೆಯದನ್ನು ಸ್ವೀಕರಿಸುವ ಗುಣ ಕಲಿಸಿ.
ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಕಲಿಸಿ.
ಬದುಕು ಕಟ್ಟಿಕೊಳ್ಳೋದಕ್ಕೆ ತಾಳ್ಮೆ ಹಾಗೂ ಶ್ರಮಪಡುವುದನ್ನು ಕಲಿಸಿ.
ಜೀವನ ಸಂಗಾತಿಯ ಆಯ್ಕೆಯಲ್ಲಿ ಮೊದಲ ಆದ್ಯತೆ ಹಿರಿಯರಿಗೆ ಇರಲಿ, ನೀವು ಪ್ರೀತಿಸುವ ಹುಡುಗ/ಹುಡುಗಿ ನಿಮ್ಮ ನಿಜವಾದ ಬಾಳ ಸಂಗಾತಿಯಾಗಲು ಅರ್ಹರಿದ್ದಾರೆಯೆ? ಎನ್ನುವುದನ್ನು ಮೊದಲು ಅರಿತು ಕೊಳ್ಳಲು ಕಲಿಸಿ.
ಗಂಡ ಹೆಂಡತಿ, ಹೆಂಡತಿ ಗಂಡನಿಗೆ ಗೌರವಿಸುವ ಮನೋಭಾವ ಕಲಿಸಿ.
ವಿನಾಃ ಕಾರಣ ನಡೆಯುತ್ತಿರುವ ವಿಚ್ಚೇದನಗಳನ್ನು ತಡೆಗಟ್ಟುವುದನ್ನು ಕಲಿಸಿ.
ಹೆಣ್ಣನ್ನು ಗೌರವಿಸುವುದನ್ನು ಕಲಿಸಿ, ದಾನ ಧರ್ಮ ಮಾಡುವ ಹೃದಯ ಶ್ರೀಮಂತಿಕೆಯ ಗುಣ ಕಲಿಸಿ.
ಸರ್ವಧರ್ಮ ಸಹಿಷ್ಣುತೆಯನ್ನು ಕಲಿಸಿ. ಲಾಲಿ ಜೋಗುಳ ಜನಪದ ಕಲೆಗಳ ಬಗ್ಗೆ ಅರಿತುಕೊಳ್ಳಲು ಕಲಿಸಿ.
ರೋಷ ದ್ವೇಷಗಳನ್ನು ಬಿಟ್ಟು ಸರ್ವರೂ ಒಂದೇ ಎನ್ನುವ ಮೂಲಮಂತ್ರವನು ಕಲಿಸಿ.
ಪ್ರಕೃತಿಯನ್ನು ಪ್ರೀತಿಸುವುದನ್ನು ಕಲಿಸಿ,ಪ್ರಕೃತಿಯಲ್ಲಿರುವ ಜೀವರಾಶಿಗಳ ರಕ್ಷಣೆ ಮಾಡುವುದು ನಮ್ಮ ಧರ್ಮ ಎನ್ನುವುದನ್ನು ಕಲಿಸಿ.
ಸಮಯ ವ್ಯರ್ಥ ಮಾಡದೆ ಸಮಯ ಸದುಪಯೋಗ ಮಾಡುವುದನ್ನು ಕಲಿಸಿ.
ನನಗಾಗಿ ನನ್ನ ಕುಟುಂಬಕ್ಕಾಗಿ ಸಮಯ ಮೀಸಲು ಇಡುವುದನ್ನು ಕಲಿಸಿ.
ಆಡಂಬರದ ಪಾಶ್ಚಾತ್ಯ ಸಂಸ್ಕೃತಿಯಿಂದ ಹೊರಗೆ ಬಂದು, ನೈಜ ಜೀವನವನ್ನು ಬದುಕುವುದನ್ನು ಕಲಿಸಿ.
ಹೊಸ ವರುಷವನ್ನು ಹೊಸ ಹುಮ್ಮಸ್ಸಿನಿಂದ ಸ್ವಾಗತಿಸುವುದನ್ನು ನಾವೆಲ್ಲರೂ ಕಲಿಯೋಣ
ಹೊಸ ವರುಷ ಹೊಸ ಹರುಷ ತರಲಿ ನಿಮ್ಮ ಬಾಳಿನಲಿ.
ನಂದಿನಿ ಸನಬಾಳ್
ಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಳಾ
ಕಲಬುರಗಿ