ಇಂದು ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆ ಶಿರಹಟ್ಟಿಯಲ್ಲಿ ನಡೆದ ನೂತನವಾಗಿ ನೇಮಕಾತಿಯಾದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸ್ವಾಗತ ಸಮಾರಂಭ ಹಾಗೂ ಶೈಕ್ಷಣಿಕ ಕಾರ್ಯಗಾರ ದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ ಶ್ರೀ ಆರ್ ಎಸ್ ಬುರಡಿ ಉಪ ನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗದಗ. ಇವರು ಶಿಕ್ಷಕರನ್ನುದೇಶಿಸಿ ಭಾಷಣ ಮಾಡಿದರು.
ಅತಿ ಬದ್ಧತೆಯಿಂದ ಕೆಲಸ ಮಾಡುವ ವಿಜ್ಞಾನಿಯೊಬ್ಬ ತನ್ನ ಸಾಮರ್ಥ್ಯದ ಕೇವಲ ಶೇಕಡ 21ರಷ್ಟು ಮಾತ್ರ ಬಳಸುತ್ತಾನೆ ಎಂದು ಸಮೀಕ್ಷೆ ಹೇಳುತ್ತದೆ ಹಾಗಾಗಿ ಶಿಕ್ಷಕರು ತಮ್ಮಲ್ಲಿರುವ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಇದರೊಂದಿಗೆ ಇಂದಿನ ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕನುಗುಣವಾಗಿ ಶಿಕ್ಷಕರು ತಮ್ಮ ಜ್ಞಾನ ಕೌಶಲ ಹಾಗೂ ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳಬೇಕಾಗುತ್ತದೆ ಆದ್ದರಿಂದ ಶಿಕ್ಷಕರು ನಿರಂತರ ಅಧ್ಯಯನದಲ್ಲಿ ತೊಡಗಬೇಕಾಗುತ್ತದೆ ಹಾಗೂ ದೀಕ್ಷಾ ಆಪ್ ಪಿಎಂ ಇ ವಿದ್ಯಾ ಮುಂತಾದ ವೆಬ್ಸೈಟ್ಗಳ ಸಹಾಯದಿಂದ ವಿದ್ಯಾರ್ಥಿಗಳ ಕಲಿಕಾ ಅಗತ್ಯತೆಗಳನ್ನು ಪೂರೈಸಲು ಶ್ರಮಿಸಬೇಕಾಗಿದೆ ಎಂದು ಹೇಳಿದರು ಜೊತೆಗೆ ಶಿಕ್ಷಣ ಎಂಬುದು ಶಿಕ್ಷೆಯಲ್ಲ; ಶಿಸ್ತು ಹಾಗಾಗಿ ವಿದ್ಯಾರ್ಥಿಗಳಲ್ಲಿ ಧನಾತ್ಮಕ ವರ್ತನೆಗಳನ್ನು ಹಾಗೂ ಶಿಸ್ತನ್ನು ಮೂಡಿಸುವ ಮೂಲಕ ಅವರನ್ನು ಸಮಾಜಕ್ಕೆ, ದೇಶಕ್ಕೆ ಆಸ್ತಿಯನ್ನಾಗಿ ಮಾಡಬೇಕಾಗಿದೆ ಅಲ್ಲದೆ ಪ್ರತಿ ಮಗುವೂ ಭಿನ್ನ ಹಾಗಾಗಿ ಪ್ರತಿ ಮಗುವಿನ ಆಸಕ್ತಿ ಅಗತ್ಯತೆಗಳಿಗನುಗುಣವಾಗಿ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ ಎಂದು ಹೇಳಿದರು. ಪ್ರತಿ ಮಗುವಿನ ಭಾವನೆಗಳನ್ನು ಗೌರವಿಸುವುದನ್ನು ಶಿಕ್ಷಕರು ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಶಿಕ್ಷಣದ ಮೂಲ ಉದ್ದೇಶ ರಾಜ್ಯದ ಮಕ್ಕಳನ್ನು ನಿರ್ದಿಷ್ಟ ಜ್ಞಾನ ಕೌಶಲ ಮತ್ತು ಮೌಲ್ಯಗಳೊಂದಿಗೆ ಸಜ್ಜುಗೊಳಿಸುವುದಾಗಿದೆ ಎಂದು ಹೇಳಿದ ಮಾನ್ಯರು ಶಿಕ್ಷಕರಿಗೆ ಪಾಠದ ಉದ್ದೇಶವನ್ನು ಅರಿತು ಪೂರ್ವತಯಾರಿಯೊಂದಿಗೆ ಲಭ್ಯವಿರುವ ಕಲಿಕಾ ಬೋಧನೋಪಕರಣಗನ್ನು ಬಳಸಿಕೊಂಡು ಚಟುವಟಿಕೆಯಾಧಾರಿವಾಗಿ ಅರ್ಥಪೂರ್ಣ ಬೋಧನಾ ಕಲಿಕಾ ಪ್ರಕ್ರಿಯೆ ನಡೆಯಬೇಕು ಎಂದು ಸಲಹೆ ನೀಡಿದರು.
ಗುಣಾತ್ಮಕ ಶಿಕ್ಷಣವೆಂದರೇನು ಎಂಬ ಚರ್ಚೆಗೆ ಮುನ್ನಡಿಯಿಟ್ಟ ಮಾನ್ಯರು ಮಗುವಿನ ದೈಹಿಕ ಭಾವನಾತ್ಮಕ ಮಾನಸಿಕ ವರ್ತನಾತ್ಮಕ ಹಾಗೂ ಮನೋದೈಹಿಕ ಕೌಶಲಗಳು ಜೊತೆಗೆ ಸೃಜನಾತ್ಮಕತೆ, ಮೌಲ್ಯಗಳು,
ಸ್ವಯಂಶಿಸ್ತು,
ಕಲಿಕಾಂಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದು,
ಮಕ್ಕಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಚಟುವಟಿಕೆಯಾಧಾರಿತವಾಗಿ ಅನುಭವಗಳನ್ನು ಪಡೆಯುವುದು,
ಮುಖ್ಯವಾಗಿ ಮಗು ಕಲಿಯುವುದನ್ನು ಕಲಿಸುವುದು. ಹೀಗೆ ಅನೇಕ ಅಂಶಗಳನ್ನು ಶಿಕ್ಷಕರ ಮುಂದೆ ಮಂಡಿಸಿದರು.
ತದನಂತರ ಮಾತನಾಡಿದ ಶ್ರೀ ಎಚ್ ಎನ್ ನಾಣಕಿ ನಾಯಕ ಕ್ಷೇತ್ರಶಿಕ್ಷಣಾಧಿಕಾರಿಗಳು ಶಿರಹಟ್ಟಿ ಇವರು ಶಿಕ್ಷಕರು ಮಕ್ಕಳ ಬಗ್ಗೆ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು ಮಕ್ಕಳನ್ನು ಅವರು ಇರುವಂತೆಯೇ ಸ್ವೀಕರಿಸುವುದನ್ನು ಕಲಿಯಬೇಕು ಜೊತೆಗೆ ಮಕ್ಕಳಿಗೆ ಮಾದರಿಯಾಗುವಂತೆ ಶಿಕ್ಷಕರ ನಡೆಯಿರಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ನಂತರ ಇಡೀ ಕಾರ್ಯಗಾರದ ಮುಖ್ಯ ಭಾಗ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ಸಾಹಿತಿಗಳಾದ ಡಾ. ನಿಂಗು ಸೊಲಗಿ ತಮ್ಮ ಉಪನ್ಯಾಸ ಮಂಡಿಸಿ ಕಾಲಕಾಲಕ್ಕೆ ಬದಲಾದ ಸಾಂಸ್ಕೃತಿಕ ಆಯಾಮಗಳು ಹಾಗೂ ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಅಗತ್ಯವಾದ ಅಂಶಗಳನ್ನು ಹೇಳಿದರು.
ಕಲಿಕೆ ಎಂಬುದು ತಾಯಿಯ ಗರ್ಭದಿಂದಲೇ ಪ್ರಾರಂಭವಾಗಿ ವ್ಯಕ್ತಿಯ ಜೀವನದ ಕೊನೆಯ ಕ್ಷಣದವರೆಗೂ ನಡೆಯುತ್ತದೆ ಎಂದು ಹೇಳಿದ ಮಾನ್ಯರು ಡಿಪಿಇಪಿ ಯೋಜನೆ ಮಕ್ಕಳಲ್ಲಿ ಶಿಕ್ಷಕನು ಒಬ್ಬನಾಗಿ ಮಕ್ಕಳೊಂದಿಗೆ ಬೆರೆತು ಪಾಠ ಬೋಧನೆ ಮಾಡಲು ತಿಳಿಸುತ್ತದೆ ಎಂದು ಹೇಳಿದರು ಜೊತೆಗೆ ಆಧುನಿಕ ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಹಾಗೂ ಮುಂದೆ ಬರುವ ಕೃತಕ ಬುದ್ಧಿಮತ್ತೆ ಆಧಾರಿತವಾದ ಶಿಕ್ಷಣವನ್ನ ನೀಡಲು ಪ್ರತಿಯೊಬ್ಬ ಶಿಕ್ಷಕರು ತಮ್ಮನ್ನು ತಾವು ಅಪ್ಡೇಟ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು ಜೊತೆಗೆ ಎನ್ ಸಿ ಎಫ್ 2005 ಕಲಿಯುವುದನ್ನು ಕಲಿಸಬೇಕು ಎಂಬ ಅಂಶ ಹಾಗೂ ಕಲಿತದ್ದನ್ನ ಮಕ್ಕಳು ತಮ್ಮ ನಿಜ ಜೀವನದೊಂದಿಗೆ ಸಂಬಂಧಿಕರಿಸಿಕೊಳ್ಳಲು ಸಮರ್ಥರಾಗಬೇಕು ಎಂಬ ಅಂಶಗಳನ್ನು ಬಹಳಷ್ಟು ಮನದಟ್ಟಾಗಿ ಹೇಳಿದ ಡಾ. ನಿಂಗು ಸೊಲಗಿಯವರು ಶಿಕ್ಷಕರಾದ ನಾವು ಮಗುವಿನ ಸಹಜ ಚಟುವಟಿಕೆಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಅವರು ಆಡುವ ಮಕ್ಕಳಾಟದಲ್ಲಿ ವೈದ್ಯರು ಇರುತ್ತಾರೆ ಇಂಜಿನಿಯರ್ಗಳು ಇರುತ್ತಾರೆ ಎಂದು ಹೇಳುವುದರ ಜೊತೆಗೆ ಶಿಕ್ಷಣವೆಂದರೆ ಮಗುವಿನ ತಲೆಗೆ ವಿಷಯಗಳನ್ನು ತುಂಬುವುದಿಲ್ಲ ಕುತೂಹಲವನ್ನು ಕೆರಳಿಸುವುದಾಗಿದೆ ಎಂಬ ಅಲ್ಬರ್ಟ್ ಐನ್ಸ್ಟೀನ್ ರ ನುಡಿಯೊಂಧಿಗೆ ಶಿಕ್ಷಕರಾದ ನಾವು ಸಹನೆ, ಸಿಹಿಯಾದ ಮಾತುಗಾರಿಕೆ, ಎಲ್ಲರನ್ನೂ ಪ್ರೀತಿಸುವ ವಿಶಾಲ ಹೃದಯ ಹಾಗೂ ಸಂತೃಪ್ತಿಯನ್ನು ಹೊಂದಿರಬೇಕು ಎಂದು ಕಿವಿ ಮಾತನ್ನು ಹೇಳಿದರು.ಈ ಕಾರ್ಯಕ್ರಮದಲ್ಲಿ ಅವಳಿ ತಾಲೂಕುಗಳ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಜಿಲ್ಲಾ ಹಾಗೂ ತಾಲೂಕ ಜಿಪಿಟಿ ಸಂಘದ ಗೌರವಾಧ್ಯಕ್ಷರು ಹಾಗೂ ಅಧ್ಯಕ್ಷರು, ಕ್ಷೇತ್ರ ಸಮನ್ವಯಾಧಿಕಾರಿಗಳು ಅಕ್ಷರ ದಾಸೋಹ ನಿರ್ದೇಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಪಿ ಎಫ್ ಬಂತಿ ಗುರುಗಳು ಎಲ್ಲಾ ಜಿಪಿಟಿ ಗುರು ವೃಂದಕ್ಕೆ ಪ್ರೋತ್ಸಾಹವನ್ನು ನೀಡಿದರು.
ಈ ಕಾರ್ಯಕ್ರಮವನ್ನು ಶ್ರೀ ಬಿ ಎಸ್ ಗುಂಜಾಳ ಹಾಗೂ ರವಿ ಉಮಚಗಿ ಗುರುಗಳು ಅತ್ಯಂತ ಸೊಗಸಾಗಿ ನಿರೂಪಿಸಿದರು. ಶ್ರೀಮತಿ ವಿಶಾಲಾಕ್ಷಿ ಫಿರಂಗಿ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮವು ಜಿಪಿಟಿ ತಾಲೂಕು ಅಧ್ಯಕ್ಷರಾದ ಶ್ರೀಮತಿ ಭಾರತಿ ಬಿ.ಸಿ ಹಾಗೂ ಎಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.