ಕಾಶಿ ಜ್ಞಾನ ಪೀಠದಲ್ಲಿ ಜರುಗಿದ ಸ್ಕಂದ ಜಯಂತಿಯಲ್ಲಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರ ನುಡಿ
‘ಮಹಾಜ್ಞಾನಿ ಸ್ಕಂದ ವೀರಶೈವರ ಗೋತ್ರಪುರುಷ’
ವಾರಾಣಾಸಿ(ಉ.ಪ್ರ.):ಶಿವನ ಪುತ್ರನಾಗಿರುವ ಸ್ಕಂದನು ಮಹಾಪರಾಕ್ರಮಿಯಾಗಿದ್ದಂತೆ ಮಹಾಜ್ಞಾನಿಯೂ ಆಗಿದ್ದು, ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಗೋತ್ರಪುರುಷನಾಗಿ ಆದಿಯಲ್ಲಿ ಶಿವಧರ್ಮೋತ್ತರ ಸಿದ್ಧಾಂತವನ್ನು ಪ್ರತಿಪಾದಿಸಿ ಕೀರ್ತಿಶೇಷನಾಗಿದ್ದಾನೆ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಗುರುವಾರ ಇಲ್ಲಿಯ ತಮ್ಮ ಧರ್ಮಪೀಠದಲ್ಲಿ ಹಮ್ಮಿಕೊಂಡಿದ್ದ 6 ದಿನಗಳ ‘ಸ್ಕಂದ ಜಯಂತಿ ಮಹೋತ್ಸವ’ದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುತ್ತಿದ್ದರು. ತನ್ನ ಶರೀರದ ತೇಜಸ್ಸಿನಿಂದ ರಾಕ್ಷಸರೆಲ್ಲರನ್ನು ಸಂಹಾರ ಮಾಡುವ ಸಾಮರ್ಥ್ಯವನ್ನು ಹೊಂದಿದ್ದ ಸ್ಕಂದನ ಕುರಿತು ಮಹರ್ಷಿ ವ್ಯಾಸರು ಸ್ಕಂದನ ಜನ್ಮ ಕಥೆಯನ್ನು ಸ್ಕಂದಪುರಾಣ, ಬ್ರಹ್ಮಾಂಡ ಪುರಾಣ, ವಾಯು ಪುರಾಣ ಮತ್ತು ಮಹಾಭಾರತದ ಅನುಶಾಸನ ಪರ್ವದಲ್ಲಿ ಪ್ರಸಂಗಾನುಸಾರವಾಗಿ ವಿವರಿಸಿದ್ದಾರೆ. ಮಹಾಕವಿ ಕಾಳಿದಾಸನು ಕುಮಾರಸಂಭವ ಮಹಾಕಾವ್ಯದಲ್ಲಿ ಸ್ಕಂದನನ್ನು ವಿಶೇಷವಾಗಿ ವರ್ಣಿಸಿದ್ದಾನೆ. ಕಾರ್ತಿಕೇಯ, ಸೇನಾನಿ, ಶರಜನ್ಮಾ, ಷಡಾನನ, ಗುಹ, ಶಿಖಿವಾಹನ, ತಾರಕಾರಿ, ಕುಮಾರ, ಷಾಣ್ಮಾತುರ, ಶರವಣ, ಸುಬ್ರಹ್ಮಣ್ಯ, ಮುರುಗನ್ ಮುಂತಾದ ಅನೇಕ ಹೆಸರುಗಳಿಂದ ಸ್ಕಂದನನ್ನು ಕರೆಯಲಾಗುತ್ತದೆ ಎಂದು ಹೇಳಿದರು.
*ಸ್ಕಂದಷಷ್ಠಿ ಆಚರಣೆ :* ತಾರಕಾಸುರನು ಶಿವಸುತನಿಂದಲೇ ತನಗೆ ಮರಣ ಬರಬೇಕೆಂದು ಬೇಡಿಕೊಂಡಿದ್ದರಿಂದ ಸ್ಕಂದನ ಜನ್ಮವಾಗಿದ್ದು, ಕಾರ್ತಿಕ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿಯ ದಿನವೇ ತಾರಕಾಸುರನನ್ನು ಸ್ಕಂದನು ಸಂಹಾರ ಮಾಡಿದ್ದರಿಂದ ಇದು ಅವನ ವಿಜಯ ದಿವಸವಾಗಿ ‘ಸ್ಕಂದ ಷಷ್ಠಿ’ ಎಂದು ಪ್ರಸಿದ್ಧಿ ಪಡೆಯಿತು. ಜಾತಿ, ಮತ, ಧರ್ಮ ಪಂಥಗಳ ಭೇದ-ಭಾವವಿಲ್ಲದೇ ಸರ್ವರೂ ಸ್ಕಂದನ ಉಪಾಸನೆಯನ್ನು ಮಾಡುತ್ತಾರೆ ಎಂದರು.
ಶಿವಧರ್ಮೋತ್ತರ ಸಿದ್ಧಾಂತ : ಸ್ಕಂದನು ಶಿವನ ಮಹಿಮೆಯನ್ನು ಅತ್ಯಂತ ಉತ್ಕೃಷ್ಟವಾಗಿ ಪ್ರತಿಪಾದಿಸಿದ್ದು, ಅಗಸ್ತ್ಯ ಮಹರ್ಷಿಗಳಿಗೆ ಶ್ರೀಜಗದ್ಗುರು ರೇಣುಕಾಚಾರ್ಯರು ಉಪದೇಶ ಮಾಡುವುದಕ್ಕಿಂತ ಮೊದಲೇ ‘ಶಿವಧರ್ಮೋತ್ತರ ಸಿದ್ಧಾಂತ’ವನ್ನು ಸ್ಕಂದನು ಪ್ರತಿಪಾದಿಸಿದ್ದಾನೆ. ಶಿವನ ತೊಡೆಯ ಮೇಲೆ ಕುಳಿತುಕೊಂಡೇ ಸರ್ವಜ್ಞನಾದ ಶಿವನಿಗೆ ಓಂಕಾರದ ಅರ್ಥವನ್ನು ಬೋಧಿಸಿದ ಮಹಾಜ್ಞಾನಿ ಸ್ಕಂದನು ಶಿವನ ಪಂಚಮುಖ ಸಂಜಾತರಾದ ವೀರಭದ್ರ, ನಂದಿ, ಭೃಂಗಿ, ವೃಷಭ ಹಾಗೂ ಸ್ಕಂದರು ವೀರಶೈವ ಧರ್ಮದ ಗೋತ್ರಪುರುಷರಲ್ಲಿ ಒಬ್ಬರಾಗಿದ್ದಾರೆ. ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಸ್ಕಂದ ಷಷ್ಠಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಭಾರತದ ಹೊರಗಡೆ ಶ್ರೀಲಂಕಾ, ಮಲೇಶಿಯಾ, ಸಿಂಗಾಪುರ, ಥೈಲ್ಯಾಂಡ್, ಇಂಡೋನೇಷಿಯಾ, ದಕ್ಷಿಣ ಆಫ್ರಿಕಾ, ಕೆನಡಾ, ಯುನೈಟೆಡ್ ಸ್ಟೇಟ್ಸ್ ಗಳಲ್ಲಿಯೂ ಸ್ಕಂದನ ಮಂದಿರಗಳಿದ್ದು ಅಲ್ಲಿಯೂ ಕೂಡ ಇವರ ಉಪಾಸನೆ ನಡೆಯುತ್ತದೆ. ಸ್ಕಂದನ ಉಪಾಸನೆಯಿಂದ ಸಾಮಾನ್ಯವಾದ ಸಾಂಸಾರಿಕ ಸಮಸ್ಯೆಗಳಾದ ವಧು-ವರರ ವಿವಾಹ, ಹೃದ್ಯವಾದ ವೈವಾಹಿಕ ಜೀವನ, ಸಂತಾನ ಪ್ರಾಪ್ತಿ, ಭೂ ವಿವಾದಗಳ ಪರಿಹಾರ ಎಲ್ಲವೂ ಸಾಧ್ಯವಾಗುತ್ತದೆ ಎಂದೂ ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ವಾರಾಣಾಸಿಯ ಬನಾರಸ್ ಹಿಂದೂ ವಿ.ವಿ. ಪ್ರಾಧ್ಯಾಪಕ ಡಾ. ಕಮಲೇಶ್ ಝಾ, ವಿಶ್ರಾಂತ ಪ್ರಾಧ್ಯಾಪಕ ಡಾ.ವಿನೋದರಾವ್ ಪಾಠಕ ಹಾಗೂ ಸಂಪೂರ್ಣಾನಂದ ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಪಂಡಿತ ಜಗನ್ನಾಥಶಾಸ್ತ್ರಿ ತೈಲಂಗ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
- ಕಾಶಿ ಪೀಠದಲ್ಲಿ ಆಚರಣೆ : ಕಾಶಿ ಜ್ಞಾನ ಪೀಠದಲ್ಲಿ ‘ಸ್ಕಂದ ಜಯಂತಿ’ ಮಹೋತ್ಸವದ ಅಂಗವಾಗಿ ಸ್ಕಂದಮೂರ್ತಿಗೆ 6 ದಿನಗಳ ಕಾಲ ರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸ್ವತಃ ಶ್ರೀಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪಾಲ್ಗೊಂಡು ಸ್ಕಂದ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳ ಭಕ್ತರು ಹಾಗೂ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಸಾಧಕರು ಸ್ಕಂದ ಜಯಂತಿ ಸಮಾರೋಪದಲ್ಲಿ ಪಾಲ್ಗೊಂಡು ವಿಶೇಷ ಪ್ರಾರ್ಥನೆ ಮತ್ತು ಪುಷ್ಪನಮನ ಸಲ್ಲಿಸಿದರು.