ಬೆಳಗಾವಿ ವಿಭಾಗ ಮಟ್ಟದ ಪ್ರೌ. ಶಾ. ಚಿತ್ರಕಲಾ ಶಿಕ್ಷಕರ ಕಲಾಕೃತಿ ರಚನಾ ಶಿಬಿರ ಆರಂಭ
‘ಮಕ್ಕಳ ಅಧ್ಯಯನ ಭಾಷೆಯೇ ಚಿತ್ರಕಲೆ’
ಧಾರವಾಡ : ಪ್ರತೀ ಮಗುವೂ ವಿಭಿನ್ನ ಶೈಲಿಗಳಲ್ಲಿ ತನ್ನ ಮನದಾಳದ ಕಲ್ಪನೆಗಳಿಗೆ ಅನುಸಾರವಾಗಿ ಗೀಚುವುದರಲ್ಲಿಯೇ ಆನಂದವನ್ನು ಅನುಭವಿಸುತ್ತದೆ. ನಂತರ ಶಾಲಾ ಕಲಿಕೆಯಲ್ಲಿ ಶಿಕ್ಷಕರು ಚಿತ್ರಗಳ ಮೂಲಕವೇ ಅಕ್ಷರಾಭ್ಯಾಸ ಆರಂಭಿಸುತ್ತಾರೆ. ಹಾಗಾಗಿ ಮಕ್ಕಳ ಅಧ್ಯಯನ ಭಾಷೆಯೇ ಚಿತ್ರಕಲೆಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಪ್ರತಿಪಾದಿಸಿದರು.
ಅವರು ನಗರದ ಸರಕಾರಿ ಆರ್ಟ ಗ್ಯಾಲರಿಯಲ್ಲಿ ತಮ್ಮ ಕಚೇರಿಯ ವತಿಯಿಂದ ಹಮ್ಮಿಕೊಂಡಿರುವ ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರ 5 ದಿನಗಳ ಕಲಾಕೃತಿ ರಚನಾ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ಚಿತ್ರಕಲೆಯು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಗೆ ಸ್ವಾಭಾವಿಕ ಸಾಧನವಾಗಿದೆ. ಮಕ್ಕಳಲ್ಲಿ ಸೃಜನಶೀಲತೆ ಮತ್ತು ಭಾವನೆಗಳ ಅಭಿವ್ಯಕ್ತಿಯ ಕಲ್ಪನಾಶಕ್ತಿ ಅಧಿಕಗೊಳ್ಳಲು ಚಿತ್ರಕಲೆ ನೆರವಾಗುತ್ತದೆ ಎಂದರು.
ಈ ಹಿಂದೆ ‘ಗಾಂಧೀಜಿ-150 : ಕುಂಚ ನಮನ’ ಹಾಗೂ ‘ನಕಲು ಮುಕ್ತ ಪರೀಕ್ಷಾ ವ್ಯವಸ್ಥೆ’ ಎಂಬ ಪ್ರಧಾನ ಪರಿಕಲ್ಪನೆಗಳಲ್ಲಿ ನಮ್ಮ ಆಯುಕ್ತಾಲಯದಿಂದಲೇ ಎರಡು ಭಾರಿ ಯಶಸ್ವೀ ಶಿಬಿರಗಳನ್ನು ಸಂಘಟಿಸಲಾಗಿದೆ. ಪ್ರಸ್ತುತ 2024-25ರ ಶೈಕ್ಷಣಿಕ ಬಲವರ್ಧನೆ ವರ್ಷದ ಅಂಗವಾಗಿ ‘ನಮ್ಮ ಶಾಲೆ-ನಮ್ಮ ಜವಾಬ್ದಾರಿ’ ಎಂಬ ಪ್ರಧಾನ ಆಶಯದ ಅಡಿಯಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ವಿಕಾಸದ ಪರಿಕಲ್ಪನೆಗಳೊಂದಿಗೆ ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಹಾವೇರಿ, ಗದಗ, ಶಿರಸಿ ಹಾಗೂ ಚಿಕ್ಕೋಡಿ ಜಿಲ್ಲೆಗಳ 50 ಜನ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರು ವಿಶಿಷ್ಟ ಕಲಾಕೃತಿಗಳನ್ನು ಸಿದ್ಧಪಡಿಸಲಿದ್ದಾರೆ ಎಂದೂ ಜಯಶ್ರೀ ಶಿಂತ್ರಿ ಹೇಳಿದರು.
ಇಲಾಖೆಯ ಜಂಟಿ ನಿರ್ದೇಶಕ ಈಶ್ವರ ನಾಯಕ ಮಾತನಾಡಿ, ಮಕ್ಕಳ ಚಿತ್ರಗಳಲ್ಲಿ ಒಂದು ಶಕ್ತಿ ಇದೆ. ಕಾರಣ ಮಕ್ಕಳ ಚಿತ್ರಕಲೆ ಶುದ್ಧವಾದ ಕಲೆ. ಹಾಗಾಗಿ ಮಕ್ಕಳ ಚಿತ್ರಗಳು ಅಮೂಲ್ಯವಾದವು. ಅವರು ತಮ್ಮದೇ ಆದ ಕಲ್ಪನೆಯಿಂದಲೇ ಚಿತ್ರಿಸುತ್ತಾರೆ. ಅವರ ಚಿತ್ರಗಳೆಂದರೆ ಅನುಭವ ಪರಂಪರೆಯ ಅಭಿವ್ಯಕ್ತಿಯಾಗಿದೆ ಎಂದರು.
ಆಯುಕ್ತರ ಕಚೇರಿಯ ಆಡಳಿತ ಡಿಡಿಪಿಐ ಸಂಜೀವ ಬಿಂಗೇರಿ, ಸರಕಾರಿ ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಕುರಿಯವರ ಹಾಗೂ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ, ಎಸ್.ಎ. ಕೇಸರಿ, ಗುರುರಾಜ ಅಂಬೇಕರ, ರವಿ ಗೋಡಕೆ, ಗೋಪಾಲ ಚಲವಾದಿ, ಇಸೂಫ್ಅಲಿ ಖಲಾಸಿ, ವಿಜಯಕುಮಾರ ಶಿಂಗೆ, ಹೇಮಂತ ಲಮಾಣಿ ಇದ್ದರು.
ಯೋಜನಾ ಸಹಾಯಕ ಪ್ರವೀಣ ಬಿರಾದಾರ ಸ್ವಾಗತಿಸಿದರು. ಹಿರಿಯ ಸಹಾಯಕ ನಿರ್ದೇಶಕ ಬಿ.ವೈ. ಭಜಂತ್ರಿ ವಂದಿಸಿದರು. ಚಿತ್ರಕಲಾ ಶಿಕ್ಷಕ ಡಾ. ಸಂಗಮೇಶ ಬಗಲಿ ಸ್ವತಃ ಸಿದ್ಧಪಡಿಸಿ ತಂದಿದ್ದ ಆಯುಕ್ತರ ಭಾವಚಿತ್ರವನ್ನು ಜಯಶ್ರೀ ಶಿಂತ್ರಿ ಅವರಿಗೆ ಸಲ್ಲಿಸಿದರು.