ಎಸ್ ಎಸ್ ಎಲ್ ಸಿ ಸಂಕಲನಾತ್ಮಕ ಪರೀಕ್ಷೆ 1
ಇದಕ್ಕೂ ವೆಬ್ ಕಾಸ್ಟ್……
ಸರಕಾರದ ಈ ಯೋಜನೆಗೆ ಸ್ವಾಗತವೆನೋ ಸರಿ ಆದರೆ……….
ಸಂವಿಧಾನದ ಆಶಯದಂತೆ 1ರಿಂದ8 ನೇ ತರಗತಿ ಹಂತದಲ್ಲಿ ಉಚಿತ ಕಡ್ಡಾಯ ಶಿಕ್ಷಣ ನೀಡಿಕೆಯೇನೋ ಸರಿ. ಅಡಿಪಾಯ ಗಟ್ಟಿಗೊಳಿಸದೆ ಮೇಲಿನ ಹಂತದ ಕಟ್ಟಡಕ್ಕೆ ಶೃಂಗಾರವೇಕೆ?
ವಿಭಿನ್ನ ಪರಿಸರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೌಢಶಾಲಾ ಶಿಕ್ಷಕರು ವಿಭಿನ್ನ ರೀತಿಯ ಔದ್ಯೋಗಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಯಾವ ಕಠಿಣ ನಿಯಮಗಳಿಲ್ಲದೆಯೇ 7-8 ವರ್ಷಗಳ ಸರಳ ಕಲಿಕೆ ಪೂರ್ಣಗೊಳಿಸಿ ಉತ್ತೀರ್ಣರಾಗಿ ಪ್ರೌಢಶಾಲಾ ಹಂತಕ್ಕೆ ಬರುವ ವಿದ್ಯಾರ್ಥಿಗಳ ಕಲಿಕಾಮಟ್ಟವನ್ನೇ ಗಮನಿಸದೇ ಒಮ್ಮೆಲೇ ಸಿಸಿ ಕ್ಯಾಮೆರಾ ಬಳಸಿ ಪರೀಕ್ಷೆ ಬರೆಸಿ ಗುಣಮಟ್ಟ ಹೆಚ್ಚಿಸುವ ಈ ಕ್ರಮ ಎಷ್ಟರಮಟ್ಟಿಗೆ ಸರಿ?
ಸರ್ಕಾರದ ಕ್ರಮವನ್ನು ಪ್ರೌಢಶಾಲಾ ಶಿಕ್ಷಕರು ಸ್ವಾಗತಿಸುತ್ತೇವೆ. ಸರಕಾರ ಅಪೇಕ್ಷಿಸುವ ಗುಣಮಟ್ಟದ ಮೌಲಿಕ ಶಿಕ್ಷಣದ ಪ್ರಕ್ರಿಯೆ ಕೆಳ ಹಂತದಿಂದಲೇ ಪ್ರಾರಂಭವಾಗದರೆ ಮಾತ್ರ ಇದು ಯಶಸ್ವಿಯಾಗುತ್ತದೆ.
ಸದ್ಯದ ಶಿಕ್ಷಣ ವ್ಯವಸ್ಥೆ 1-5 ಹಾಗೂ 6-8.
5 ಹಾಗೂ 8ನೇ ತರಗತಿ ಹಂತದಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಆಧಾರಿತ ಪರೀಕ್ಷಾ ಪದ್ಧತಿ ಜಾರಿಯಾಗಲಿ. ಆಗ ಮಾತ್ರ ಪ್ರೌಢಶಾಲಾ ಹಂತದಲ್ಲಿ ಇದರ ಸಂಪೂರ್ಣ ಅಪೇಕ್ಷಿತ ಫಲ ನಿರೀಕ್ಷಿಸಬಹುದು.
ಮಕ್ಕಳ ಗೈರು ಹಾಜರಾತಿ ಸುಧಾರಣೆಗೆ ಕಟ್ಟು ನಿಟ್ಟಿನ ಕ್ರಮ ಜಾರಿಯಾಗಲಿ.
ಶಿಕ್ಷಕರ ಕಡೆಯಿಂದ ಅನೇಕ ಕಾರ್ಯಕ್ರಮಗಳನ್ನು ತಳಹಂತದಿಂದ ಮಾಡಿದರೂ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಮಾತ್ರ ಶೇಕಡ 10 ರಷ್ಟು ಕಡಿಮೆಯೇ.
ಗ್ರಾಮೀಣ ಹಂತದಲ್ಲಿ ಇದು ಇನ್ನೂ ಹೆಚ್ಚು..ಮಕ್ಕಳ ಉತ್ತಮ ಭವಿಷ್ಯಕ್ಕೆ ಕಾಲಕಾಲಕ್ಕೆ ಸರಕಾರ ಜಾರಿಗೊಳಿಸುವ ಅನೇಕ ಯೋಜನೆಗಳಿಗೆ ನಮ್ಮ ಪ್ರೌಢಶಾಲಾ ಶಿಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರಲ್ಲದೇ ಅನುಷ್ಠಾನ ಹಂತದಲ್ಲಿ ಬರುವ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮನೆ ಭೇಟಿ ಯೋಜನೆಯಲ್ಲಂತೂ ಮಹಿಳಾ ಶಿಕ್ಷಕಿಯರು ಅನುಭವಿಸಿದ ಕಷ್ಟ ಹೇಳತೀರದು. ಇದು ಉದಾಹರಣೆಯಷ್ಟೇ. ..
ಇನ್ನು ಸಣ್ಣ ವಯಸ್ಸಿನಲ್ಲಿ ದುಡಿತಕ್ಕೆ ಅಂಟಿಕೊಂಡು ಹಣದ ರುಚಿ ಕಂಡ ಕೆಲವು ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲ. ಎಷ್ಟೇ ತಿಳಿ ಹೇಳಿದರೂ ಶಾಲೆಗೆ ಬರದಿರುವುದು ಶಿಕ್ಷಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಇನ್ನು ಮಕ್ಕಳಿಗೆ ಶಿಕ್ಷೆಯೇ ಇಲ್ಲದೆ ಶಿಕ್ಷಣ ನೀಡುವ ಪದ್ಧತಿಯೂ ಗುಣಮಟ್ಟದ ಕುಸಿತಕ್ಕೆ ಕಾರಣವಾಗಿದೆ.
ಛಡಿ ಛಮ್ ಛಮ್ ವಿದ್ಯಾ ಘಮ್ ಘಮ್ ಎನ್ನುವಂತೆ ಕೆಲವು ಹಂತದಲ್ಲಿ ಸ್ವಲ್ಪ ಮಟ್ಟಿಗೆ ಶಿಕ್ಷೆ ಬೇಕು.
ಇಂದಿನ ಪರಿಸ್ಥಿತಿಯಲ್ಲಿ ಸಮೂಹ ಮಾಧ್ಯಮಗಳ ಮೋಡಿಗೆ ಒಳಗಾದ ಮಕ್ಕಳಿಗೆ ಒಮ್ಮೆಲೇ ಪ್ರೌಢ ಹಂತದಲ್ಲಿ
ಬಿಗಿ ಕ್ರಮ ಜಾರಿಗೊಳಿಸಿದರೆ ಅವರಿಗೂ ಗೊಂದಲವುಂಟಾಗಿ ಒತ್ತಡಕ್ಕೆ ಸೀಲುಕುತ್ತಿದ್ದಾರೆ.
ಇದರಿಂದ ಉತ್ತಮ ನಿರೀಕ್ಷಿತ ಫಲ ಸಾಧ್ಯವಿಲ್ಲ.
ಕೇವಲ ಮಕ್ಕಳಷ್ಟೇ ಅಲ್ಲ ಪ್ರೌಢ ಶಾಲಾ ಶಿಕ್ಷಕರೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
ನಿಜ,..ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹಾಗೂ ಅದರ ಫಲಿತಾಂಶಕ್ಕೆ ನಾವು ಎಲ್ಲವನ್ನು ಸವಾಲಾಗಿ ತೆಗೆದುಕೊಳ್ಳಬೇಕು.
ಆದರೆ ಅದಕ್ಕೆ ತಕ್ಕ ಸಿದ್ಧತೆ ಕೆಳ ಹಂತದಿಂದಲೇ ಆಗಲಿ.
ಕೇವಲ ಮನವೊಲಿಸುವ ತಂತ್ರವೊಂದೇ ಫಲ ನೀಡದು.
ಒಮ್ಮುಖವಾಗಿ ಶಿಕ್ಷಕರಷ್ಟೇ ಪ್ರಯತ್ನಿಸಿದರೆ ಸಾಲದು. ಶಾಲೆಗೆ ಮಕ್ಕಳನ್ನು ನಿಯಮಿತವಾಗಿ ಕಳಿಸದ ಪಾಲಕರ ಕೆಲ ಉಚಿತ ಯೋಜನೆಗಳನ್ನು ಕಡಿತಗೊಳಿಸುವ ದಿಟ್ಟ ನಿರ್ಧಾರ ಸರಕಾರವು ಕೈಗೊಳ್ಳಲಿ.
ಮಕ್ಕಳಿಗೆ ಮಾನಸಿಕವಾಗಿ ಹೊರೆಯಾಗುತ್ತಿರುವ ಕೆಲವು ಯೋಜನೆಗಳನ್ನು ಕೈ ಬಿಡಲಿ.
ಸರಕಾರದ ಎಲ್ಲ ಯೋಜನೆಗಳನ್ನು ಪ್ರಾಮಾಣಿಕ ವಾಗಿ ಪಾಲಿಸುತ್ತಿದ್ದರೂ ಪಾಲಕರ ಉದಾಸಿನತೆ, ಮಕ್ಕಳ ಅನಾಸಕ್ತಿ,ಕಟ್ಟುನಿಟ್ಟಿನ ಕ್ರಮಗಳ ಕೊರತೆ ಇವೆಲ್ಲ
ಪ್ರೌಢ ಶಾಲಾ ಹಂತದ ನಿರೀಕ್ಷಿತ ಫಲಿತಾಂಶಕ್ಕೆ ಅಡ್ಡಿಯಾಗಿವೆ.
ಕೊನೆಯ ಹನಿ:
ಸರಕಾರವು ಗುಣಮಟ್ಟದ ಶಿಕ್ಷಣ ನೀಡುವ ಮಹದಾಸೆ ಇಟ್ಟುಕೊಂಡು ಕಾಲ-ಕಾಲಕ್ಕೆ ಜಾರಿಗೊಳಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಾವು ಬದ್ಧರಾಗಿದ್ದೇವೆ.ಆದರೆ ಆ ಯೋಜನೆಗಳು ತಳಹಂತದಿಂದ ಪೂರ್ವ ತಯಾರಿಯೊಂದಿಗೆ ಜಾರಿಯಾಗಲಿ ಎಂಬುದೊಂದೇ ನಮ್ಮ ಆಶಯ.
ಪ್ರೌಢ ಶಿಕ್ಷಣ ವ್ಯವಸ್ಥೆಯಲ್ಲಿ ತುರ್ತಾಗಿ ವಿಷಯ ಶಿಕ್ಷಕರ ಕೊರತೆ,ಶಾಲಾ ಕೊಠಡಿಗಳ ಕೊರತೆ ಹೀಗೆ ಅನೇಕ ಮೂಲಭೂತ ಸೌಲಭ್ಯಗಳನ್ನು ಪೂರೈಸಿ ಗುಣಮಟ್ಟದ ಶಿಕ್ಷಣ ಕ್ಕೆ ನಮ್ಮನ್ನು ಪ್ರೋತ್ಸಾಹಿಸಲಿ.
ಸರಕಾರಿ ನೌಕರರಾದ ನಾವು ಸರಕಾರದ ಯೋಜನೆಗಳ ಅನುಪಾಲಕರು.ಆದರೆ ಯೋಜನೆ ಪೂರ್ವ ತಯಾರಿಯೊಂದಿಗೆ ನಿಗದಿತ ಹಂತದಿಂದ ಜಾರಿಗೊಂಡು ನಿರೀಕ್ಷಿತ ಫಲ ನೀಡಿ ಶಿಕ್ಷಕರ ಶ್ರಮ ಸಾರ್ಥಕವಾಗಲಿ ಎಂಬುದೇ ಈ ಲೇಖನದ ಉದ್ದೇಶ.
“ಉತ್ತಮ ಅಡಿಪಾಯ ಉತ್ತಮ ಗುಣಮಟ್ಟದ ನಿರ್ಮಾಣಕ್ಕೆ ಸಹಾಯ ಅಲ್ಲವೇ”????
ಲೇಖಕಿ,
ಶ್ರೀಮತಿ ಮೀನಾಕ್ಷಿ ಸೂಡಿ
ಪ್ರೌಢಶಾಲಾ ಶಿಕ್ಷಕಿ ಚನ್ನಮ್ಮನಕಿತ್ತೂರು
ಬೆಳಗಾವಿ ಜಿಲ್ಲೆ