ಹುಬ್ಬಳ್ಳಿ ತಾಲೂಕಿನ ಛಬ್ಬಿ ಗಣೇಶ ಉತ್ಸವ
ಕಳೆದ ಮೂರು ವರ್ಷಗಳ ಹಿಂದೆ ಮುನವಳ್ಳಿಯಲ್ಲಿರುವ ಶ್ರೀಪಾದ ಹಂದಿಗೋಳ ನನಗೆ ಒಂದು ಪತ್ರವನ್ನು ನೀಡಿ ಛಬ್ಬಿಗೆ ಬನ್ನಿ ಸರ್.ಅಲ್ಲಿ ವಾಹನಗಳ ನಿಲುಗಡೆಗೂ ಮುಂಚೆ ಗೇಟ್ ಒಂದರಲ್ಲಿ ಹಣ ಪಾವತಿಸಿ ಈ ಪತ್ರ ತೋರಿಸಿದರೆ ನಿಮಗೆ ಗ್ರಾಮದ ಒಳಗೆ ಬಿಡುವರು.ಇಲ್ಲವಾದರೆ ಸಾರ್ವಜನಿಕ ವಾಹನಗಳ ನಿಲುಗಡೆಯತ್ತ ತಮ್ಮ ವಾಹನವನ್ನು ಕಳಿಸುವರು.ಅಲ್ಲಿಂದ ನಡೆದು ಬರಬೇಕಾಗುತ್ತದೆ ಎಂದರು.ಬಹಳ ವರ್ಷಗಳಿಂದ ಛಬ್ಬಿ ಗಣಪತಿ ಕುರಿತು ಸ್ನೇಹಿತರು ಹೇಳಿದ್ದ ಸಂಗತಿ ಕೇಳಿದ್ದೆ. ಒಂದು ವರ್ಷ ಸ್ನೇಹಿತ ಪುಂಡಲೀಕ ಬಾಳೋಜಿಯವರ ಜೊತೆಗೆ ಹೋಗಿ ಅಲ್ಲಿನ ಜನಸಂದಣಿ ಕಂಡು ರಾತ್ರಿಯಿಡೀ ಸುತ್ತಾಡಿ ಬಂದಿದ್ದೆ. ಈ ಸಲ ಹಾಗಾಗಲಿಲ್ಲ ಬೆಳಿಗ್ಗೆ ಮನೆಯವರೆಲ್ಲ ನಮ್ಮ ಕಾರಿನಲ್ಲಿ ಹೋಗುವ ಯೋಚನೆ ಮಾಡಿದೆವು.ಜೊತೆಗೆ ಶ್ರೀಪಾದ ಹಂದಿಗೋಳ ಅವರು ನೀಡಿದ ಅನುಮತಿ ಪತ್ರ ಕೂಡ ದೊರಕಿತ್ತು.
ನನ್ನ ತಾಯಿ ಪತ್ನಿ ಮಕ್ಕಳೊಂದಿಗೆ ಹೊರಟೆ.ಛಬ್ಬಿ ಪ್ರವೇಶಿಸುತ್ತಲೇ ಹಣ ಪಾವತಿಸಿದೆ.ಅಲ್ಲಿ ಪೋಲಿಸಿನವರು ನಮಗೆ ವಾಹನ ನಿಲುಗಡೆಯತ್ತ ಹೋಗುವಂತೆ ಸೂಚಿಸಿದರು.ನಾನು ಕಾರಿನಿಂದ ಇಳಿದು ಈ ಅನುಮತಿ ಪತ್ರ ತೋರಿಸಿ ನನ್ನ ತಾಯಿ ವಯಸ್ಸಾದವರು ಅವರಿಗೆ ನಡೆಯಲು ಆಗದು ಎಂದು ವಿಷಯ ತಿಳಿಸಿ ಶ್ರೀಪಾದ ಅವರಿಗೆ ಕರೆ ಮಾಡಿದೆ.ಅವರೂ ಕೂಡ ತಿಳಿಸಿದರು.ಆಗ ನಮಗೆ ಶ್ರೀಪಾದ ಹಂದಿಗೋಳ ಅವರ ಮನೆಯವರೆಗೂ ಹೋಗಲು ಅವಕಾಶ ದೊರೆಯಿತು.ಛಬ್ಬಿ ಶ್ರೀಪಾದ ಹಂದಿಗೋಳ ಅವರ ಪತ್ನಿಯ ಮನೆ.ಅಂದರೆ ಮಾವನವರ ಮನೆ.ಊರು ಗ್ರಾಮೀಣ ಸೊಗಡನ್ನು ಹೊಂದಿದ್ದು.ನಾವು ಗಣಪತಿ ಪ್ರತಿಷ್ಠಾಪಿಸುವ ದಿನದಂದೇ ಬೆಳಿಗ್ಗೆ ಬೇಗ ಬಂದಿದ್ದರಿಂದ ಅಷ್ಟೊಂದು ಜನಸಂದಣಿ ಇರಲಿಲ್ಲ.ನಮ್ಮ ವಾಹನ ಸರಾಗವಾಗಿ ಶ್ರೀಪಾದ ಅವರ ಮನೆಯವರೆಗೂ ಚಲಿಸಿತು.ಅವರು ತಮ್ಮ ಮನೆಯ ಹತ್ತಿರದ ಸ್ಥಳದಲ್ಲಿ ಅದಕ್ಕೆ ನಿಲುಗಡೆ ಕಲ್ಪಿಸಿದರು.ಅವರ ಮನೆಯಲ್ಲಿ ಅಲ್ಪೋಪಹಾರ ಸ್ವೀಕರಿಸಿ ಛಬ್ಬಿ ಗಣಪತಿಯ ಪ್ರತಿಷ್ಠಾಪನೆ ಸಡಗರ ನೋಡಲು ನನ್ನ ಕ್ಯಾಮರಾದೊಂದಿಗೆ ಹೊರಗೆ ಬಂದೆನು.
ನಾಡಿನಾದ್ಯಂತ ಗಣೇಶ ಉತ್ಸವವನ್ನು ಸಡಗರದಿಂದ ಆಚರಿಸುವುದನ್ನು ಕಾಣುತ್ತೇವೆ.ಅಲ್ಲಲ್ಲಿ ಹಲವು ಗಣೇಶ ಉತ್ಸವಗಳು ಪ್ರಸಿದ್ದಿ ಪಡೆದಿರುವಂತೆ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿನ ಕೆಂಪು ಗಣೇಶನ ಉತ್ಸವ ವಿಶಿಷ್ಟವಾದದ್ದು. ೩ ದಿನಗಳ ಕಾಲ ನಡೆಯುವ ಈ ಉತ್ಸವ ಭಕ್ತರ ಸಕಲ ಸಂಕಷ್ಟಗಳನ್ನು ನಿವಾರಿಸೋ ಕೆಂಪು ಗಣಪ ಎಂಬ ನಂಬಿಕೆ ಇದ್ದು ಇಲ್ಲಿನ ಕುಲಕರ್ಣಿ ಕುಟಂಬಸ್ಥರು ಕೆಂಪು ಗಣಪನನ್ನು ಪ್ರತಿಷ್ಠಾಪನೆ ಮಾಡುತ್ತಾರೆ.ಹುಬ್ಬಳ್ಳಿಯಿಂದ ೨೦ ಕಿ.ಮೀ ಅಂತರದಲ್ಲಿ ಇರುವ ಮಲೆನಾಡಿನ ಸೆರಗು ಗಡಿನಾಡಿನ ಬಯಲುಸೀಮೆಯನ್ನೊಳಗೊಂಡ ಸ್ಥಳ ಛಬ್ಬಿ..ಛಬ್ಬಿ ಹೆಸರಿನ ಮೂರು ಊರುಗಳಿವೆ.ಶಿರಹಟ್ಟಿ ತಾಲೂಕಿನ ಛಬ್ಬಿ. ಬಾಗಲಕೋಟೆಯ ಛಬ್ಬಿ ಹುಬ್ಬಳ್ಳಿಯ ಛಬ್ಬಿ. ಹೀಗೆ ಇತಿಹಾಸ ತಿಳಿಯುತ್ತ ಎಲ್ಲ ಮನೆಯವರು ಛಬ್ಬಿ ಗಣೇಶನ ಮೂರ್ತಿ ತರಲು ಸಕಲ ವಾದ್ಯಗಳೊಂದಿಗೆ ಹೊರಟು ಬರುವುದನ್ನು ಗಮನಸಿದೆ.ಅಲ್ಲಲ್ಲಿ ಪೋಟೋ ಕೂಡ ತಗೆದುಕೊಳ್ಳುತ್ತ ಸಾಗಿದೆ.ಇಂದಿಗೂ ನಮ್ಮ ದೇಶದಲ್ಲಿ ಸಂಸ್ಕೃತಿ ಉಳಿದಿರಲು ಕಾರಣ ನಮ್ಮ ಹಿರಿಯರು ಹಾಕಿಕೊಟ್ಟ ಸಂಸ್ಕಾರವನ್ನು ತಲತಲಾಂತರದಿಂದ ಉಳಿಸಿಕೊಂಡು ಬಂದಿರುವುದು ಎಂಬುದಕ್ಕೆ ಇಲ್ಲಿನ ಗಣೇಶ ಮೂರ್ತಿಯನ್ನು ತರುವ ರೀತಿಯನ್ನು ಕಂಡಾಗ ಅನಿಸುವುದು.ಪ್ರತಿ ಕುಟುಂಬದ ಎಲ್ಲ ಬಂಧುಗಳು ತಮ್ಮ ತಮ್ಮ ವಂಶಸ್ಥರ ಮನೆಗಳಿಗೆ ಈ ಸಂದರ್ಭ ನಾಡಿನ ವಿವಿದೆಡೆಯಿಂದ ಬಂದು ಸೇರುವುದು.ತಮ್ಮ ಮನೆಗೆ ತಮ್ಮ ಅತಿಥಿಗಳನ್ನು ಆಗಮಿಸುವಂತೆ ಕೋರುವುದು.ಅವರು ಬಂದಾಗ ಅವರಿಗೆ ನೀಡುವ ಆದರಾತಿಥ್ಯ (ಉದಾಹರಣೆ ನನ್ನ ಕುಟುಂಬದ ಎಲ್ಲರಿಗೂ ಶ್ರೀಪಾದ ಹಂದಿಗೋಳ ಮಾವನ ಮನೆಯವರು ನೀಡಿದ ಆತಿಥ್ಯ). ನಿಜಕ್ಕೂ ನಮ್ಮ ದೇಶ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎನ್ನುವ ಅಭಿಮಾನ ಮೂಡಿಸುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಇಂತಹ ಸ್ಥಳಗಳು ಇಂದಿಗೂ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ.
ಛಬ್ಬಿ ಗಣೇಶ ಉತ್ಸವದ ಹಿನ್ನಲೆ
ಛಬ್ಬಿ ಗ್ರಾಮದಲ್ಲಿ ಕುಲಕರ್ಣಿ ಮನೆತನ ಸುಮಾರು ಹತ್ತು ತಲೆಮಾರುಗಳಿಂದಲೂ ನೆಲೆಸಿದ್ದು ಈ ಮನೆತನದವರು ಸಾಧು ಸತ್ಪುರುಷರ ಸೇವೆಯಲ್ಲಿ ಇದ್ದವರು.ಅನೇಕ ಮಹಾಪುರುಷರ ಸಮಾಗಮ ಮತ್ತು ಅಶೀರ್ವಾದ ಈ ಮನೆತನದವರು ಪಡೆದುಕೊಳ್ಳುತ್ತ ಬದುಕುತ್ತಿದ್ದರು. ಈ ಮನೆತನಕ್ಕೆ ಶ್ರೀ ದತ್ತಾವತಾರಿ ಶ್ರೀ ಕೇಷ್ಣೆಂದ್ರ ಸ್ವಾಮಿಗಳು.ಶಿವಾಚಾರಿ ಶ್ರೀ ಚಿದಂಬರ ಮಹಾಸ್ವಾಮಿಗಳು.ಶ್ರೀ ಬ್ರಹ್ಮಾನಂದ ಮಹಾರಾಜರು ಬಂದು ಆಶೀರ್ವದಿಸಿ ಹೋಗಿರುವರು. ೧೮೨೭ ರಲ್ಲಿ ಶ್ರೀ ಕೃಷ್ಣೇಂದ್ರ ಸ್ವಾಮಿಗಳು ಒಂದು ದಿನ ನಸುಕಿನಲ್ಲಿ ವರೂರ ಗ್ರಾಮದ ಹತ್ತಿರ ಛಬ್ಬಿ ಗ್ರಾಮಕ್ಕೆ ಅಪ್ಪಣ್ಣ ಭಟ್ಟರೊಂದಿಗೆ ಬರುವರು.ಮಾರ್ಗ ಮಧ್ಯದಲ್ಲಿ ವರೂರದ ಶಾನುಭೋಗದ ಮನೆಯಲ್ಲಿ ಅಹ್ನಿಕವನ್ನು ತೀರಿಸಿಕೊಂಡು ಹೋಗೋಣವೆಂದು ಸಲಹೆಯನ್ನು ನಿರಾಕರಿಸಿ ಛಬ್ಬಿ ಗ್ರಾಮಕ್ಕೆ ಹೋಗುವಷ್ಟರಲ್ಲಿ ಹೊತ್ತು ಏರುತ್ತ ಬಂದಿತು,
ಅಲ್ಲಿ ಶಾನುಭೋಗ ತಮ್ಮಪ್ಪ(ಕುಲಕರ್ಣಿ)ಯವರು ಗುರುಗಳನ್ನು ಬಹು ಆದರದಿಂದ ಬರಮಾಡಿಕೊಂಡು ಪತ್ನಿ ಸಮೇತರಾಗಿ ಗುರುಗಳ ಪಾದಪೂಜೆ ಮಾಡಿ ಭೋಜನ ಮಾಡಿಸಿ ಆಶೀರ್ವಾದ ಪಡೆದುಕೊಂಡರು.ಗುರುಗಳು ಸಂಪ್ರೀತರಾಗಿ ಶಾನುಭೋಗರಿಗೆ “ ವಿಘ್ನಹಾರಕನಾದ ಶ್ರೀ ಗಣಪತಿಯನ್ನು ಭಾದ್ರಪದ ಶುದ್ಧ ಚತುರ್ಥಿ ದಿವಸ ಭಕ್ತಿಯಿಂದಲೂ ವೈಭವದಿಂದಲೂ ಪೂಜೆ ಮಾಡುತ್ತ ನಡೆಯಿರಿ.ನಿಮಗೆ ಸಂತತಿ ಸಂಪತ್ತು ನಿರ್ವಿಘ್ನವಾಗಿ ಒದಗುವವು” ಎಂದು ಆಶೀರ್ವದಿಸಿ ಅಲ್ಲಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು.
ಶ್ರೀ ತಮ್ಮಪ್ಪನವರಿಗೆ ಸಂತಾನವಿರಲಿಲ್ಲ. ಅವರು ಗುರುಗಳ ಆಜ್ಞೆಯನ್ನು ಶಿರಸಾವಹಿಸಿ ಗಣೇಶ ಉತ್ಸವವನ್ನು ವೈಭವದಿಂದ ನೆರವೇರಿಸತೊಡಗಿದರು. ಈ ಉತ್ಸವ ಆಚರಣೆ ಪ್ರಾರಂಭಿಸಿದ ನಂತರ ಅವರಿಗೆ ಮಕ್ಕಳಾದವು.ಹಾಗೂ ಅವರ ಉತ್ತರೋತ್ತರ ಅಭಿವೃದ್ಧಿಯಾಯಿತು.ಇಂದಿಗೂ ಈ ವಂಶದವರೆಲ್ಲರೂ ಛಬ್ಬಿಯಲ್ಲಿ ಗಣೇಶ ಉತ್ಸವವನ್ನು ಸಡಗರದಿಂದ ಆಚರಿಸುತ್ತ ಬರುತ್ತಿರುವರು. ಕುಲಕರ್ಣಿ ಮನೆತನದಲ್ಲಿ ಮೊದಲು ನಾಲ್ಕು ಕುಟುಂಬಗಳಲ್ಲಿ ಮೂರು ದಿನ ಕೆಮ್ಮಣ್ಣಿನ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಕುಟುಂಬಗಳ ವಿಘಟನೆಯ ನಂತರ ಈಗ ಕುಲಕರ್ಣಿ ಮನೆತನದ ಒಟ್ಟು ಏಳು ಅಣ್ಣತಮ್ಮಂದಿರು ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಾರೆ.ಕಾಲಮಾನಕ್ಕೆ ತಕ್ಕಂತೆ ಮನೆಗಳು ಬೇರೆ ಬೇರೆಯಾಗಿರಬಹುದು.ಆದರೆ ಕುಲಕರ್ಣಿ ಮನೆತನದ ಮನಸ್ಸುಗಳು ಒಂದೇ.ಆದ್ದರಿಂದಲೇ ಏಳು ಕುಟುಂಬಗಳ ಗಣೇಶ ಮೂರ್ತಿಗಳನ್ನುಗಣೇಶ ಹಬ್ಬದ ದಿನ ಏಕಕಾಲಕ್ಕೆ ಮೆರವಣಿಗೆಯಲ್ಲಿ ತಗೆದುಕೊಂಡು ಹೋಗಿ ಅವರವರ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುವರು.ಎಲ್ಲ ಮನೆಗಳಲ್ಲಿಯೂ ರಾತ್ರಿ ಕಾರ್ಯಕ್ರಮಗಳು ಜರಗುತ್ತಿರುವುದು ವಿಶೇಷ.ಇಲ್ಲಿಗೆ ಬರುವ ಭಕ್ತರು ಎಲ್ಲ ಮನೆಗಳಿಗೆ ಹೋಗಿ ಗಣೇಶ ದರ್ಶನ ಪಡೆದು ಹೋಗುತ್ತಿರುವುದನ್ನು ಕಾಣಬಹುದು. ಈ ಮನೆತನಗಳೆಂದರೆ ವಿನಾಯಕ ಕುಲಕರ್ಣಿ (ಕಾಶೀನಾಥ ರಾಯರ ಮನೆ). ಮೋಹನರಾವ ಕುಲಕರ್ಣಿ (ಹನುಮಂತರಾಯರ ಮನೆ) ರಾಮಚಂದ್ರ ಕುಲಕರ್ಣಿ (ಅನಂತಪ್ಪನವರ ಮನೆ) ಸೋಮರಾಯಪ್ಪ ಕುಲಕರ್ಣಿ ಮತ್ತು ಗಣೇಶ ಕುಲಕರ್ಣಿ ಸಹೋದರರು ಸೇರಿ ಒಂದೇ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ (ಗಣಪ್ಪನವರ ಮನೆ) ವಿಶ್ವನಾಥ ಕುಲಕರ್ಣಿ (ಗಣಪ್ಪನವರ ಮನೆ) ಮಾಲತೇಶ ಕುಲಕರ್ಣಿ (ಗಣಪ್ಪನವರ ಮನೆ) ನಾರಾಯಣ ಕುಲಕರ್ಣಿ (ವಿಟ್ಟಪ್ಪನವರ ಮನೆ) ಹೀಗೆ ೧೮೨೭ ರಿಂದ ಆರಂಭಗೊಂಡ ಛಬ್ಬಿ ಮನೆತನದ ಗಣಪತಿಗಳು ಈಗ ಆರನೇ ತಲೆಮಾರಿನಲ್ಲಿ ಏಳು ಮನೆಗಳಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವುದು. ಇಲ್ಲಿಗೆ ಬರುವ ಭಕ್ತಾದಿಗಳು ಈ ಎಲ್ಲ ಮನೆಗಳಲ್ಲಿ ಗಣೇಶ ದರ್ಶನ ಸರತಿಯಲ್ಲಿ ನಿಂತು ದರ್ಶನ ಪಡೆಯುವರು.ಎಂಬ ಮಾಹಿತಿಯನ್ನು ಪವನ ಮೋಹನರಾವ ಕುಲಕರ್ಣಿ ನೀಡಿದರು.ಈ ಸಂದರ್ಭದಲ್ಲಿ ಈ ಮನೆತನದಿಂದ ಬೇರೆ ಬೇರೆ ಊರುಗಳಲ್ಲಿ ಉದ್ಯೋಗ ನಿಮಿತ್ತ ಹೋದವರು ಕೂಡ ಛಬ್ಬಿಗೆ ಆಗಮಿಸಿ ಸಕಲ ಬಂಧುಬಾಂಧವರೆಲ್ಲ ಸೇರಿ ಮೂರು ದಿನಗಳ ಕಾಲ ಸಡಗರದಿಂದ ಗಣೇಶ ಉತ್ಸವವನ್ನು ಆಚರಿಸುತ್ತ ಬಂದಿದ್ದು ಇಂದಿಗೂ ಈ ಬಾಂಧವ್ಯವನ್ನು ಈ ಕುಟುಂಬಗಳಲ್ಲಿ ಕಾಣಬಹುದು.
ಉತ್ಸವ ಆಚರಣೆ
ಪ್ರತಿ ದಿನ ಭಾದ್ರಪದ ಚೌತಿಯ ದಿನ ಎಲ್ಲ ಮನೆಯವರು ಕೆಂಪು ಬಣ್ಣದ ಗಣೆಶ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ವಾದ್ಯಗೋಷ್ಠಿಯಲ್ಲಿ ವೈಭವದೊಂದಿಗೆ ಛತ್ರಿ ಚಾಮರಗಳೊಂದಿಗೆ ತಮ್ಮ ಮನೆಗೆ ತಂದು ವಿಶೇಷವಾಗಿ ನಿರ್ಮಿಸಿದ ಮಂಟಪಗಳಲ್ಲಿ ಪ್ರತಿಷ್ಠಾಪಿಸುತ್ತಾರೆ.ಮನೆಯ ಯಜಮಾನನು ಪುಣ್ಯಾವಾಚನ ಮಾಡಿಸಿಕೊಂಡು ವಿದ್ಯುಕ್ತವಾಗಿ ಶಾಸ್ತ್ರೋಕ್ತವಾಗಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುವರು.ಮನೆಯ ಯಜಮಾನರಿಂದ ಋತ್ವಿಕರು ಪಶರಾಯಣದ ಅಧಿಕಾರ ಪಡೆದು ವೈದಿಕ ಬ್ರಾಹ್ಮಣರು ಪ್ರತಿದಿನ ಗಣಪತಿಗೆ ಅಭಿಷೇಕ ಪಾರಾಯಣ ನೈವೇದ್ಯ ಆರತಿ ಮಂತ್ರ ಪುಷ್ಪಗಳೊಂದಿಗೆ ಪೂಜೆ ನೆರವೇರಿಸುವರು.
ಪ್ರತಿ ದಿನ ರಾತ್ರಿ ವೇದೋಕ್ತ ಮಂತ್ರ ಪುಷ್ಪವಾದ ನಂತರ ಗಾಯನ ಕೀರ್ತನೆಗಳು ನಡೆಯುತ್ತವೆ.ಇತ್ತೀಚಿನ ವರ್ಷಗಳಲ್ಲಿ ಕೆಲ ಮನೆತನದವರು ಗಣಹೋಮ ಮತ್ತು ಹುತಾತ್ಮರ ಪ್ರವಚನವನ್ನು ಏರ್ಪಡಿಸುತ್ತಾ ಬಂದಿರುವುದು ಕೂಡ ವಿಶೇಷ.ತಾವು ಪಾರಾಯಣ ಮಾಡಿದ ಪುಣ್ಯವನ್ನು ಆಶೀರ್ವಾದ ರೂಪದಲ್ಲಿ ಮನೆಯ ಯಜಮಾನರಿಗೆ ಸಮರ್ಪಿಸುವರು. ಇದು ಇಲ್ಲಿಯ ವಿಶೇಷ.ಬ್ರಾಹ್ಮಣರ ಮತ್ತು ಯಜಮಾನರ ಪೂಜೆಯು ಇಲ್ಲಿಯ ಮೂರನೆಯ ದಿನದ ವೈಶಿಷ್ಯವಾಗಿದೆ. ಮೂರನೆಯ ದಿನ ರಾತ್ರಿ ೧೨ ಗಂಟೆಯ ನಂತರ ಮನೆಯಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜಿಸಿ ಶ್ರೀ ಗಣೇಶನನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ವೈಭವದಿಂದ ಮೆರವಣಿಗೆ ಮಾಡಿ ಕೆರೆಯಲ್ಲಿ ವಿಸರ್ಜಿಸುವರು.
ಸಾಗರೋಪಾದಿಯಲ್ಲಿ ಜನರ ಆಗಮನ
ಛಬ್ಬಿಯ ಗಣಪತಿಯು ಜಾಗೃತನು ಭಕ್ತಾದಿಗಳ ಕೋರಿಕೆಯನ್ನು ನೆರವೇರಿಸುವವನು,ಕೇಳಿದ್ದನ್ನೆಲ್ಲ ದಯಪಾಲಿಸುವವನು ಎಂಬ ಖ್ಯಾತಿ ಇದೆ.ಭಕ್ತಾದಿಗಳು ತಮ್ಮ ಕೋರಿಕೆ ನೆರವೇರಿದ ಮೇಲೆ ಇಲ್ಲಿ ಬಂದು ಹರಕೆ ಸಲ್ಲಿಸುವುದು ವಾಡಿಕೆ. ಭಕ್ತರು ಇಲ್ಲಿ ಅಡಿಕೆ ಬೆಟ್ಟ ರುದ್ರಾಕ್ಷಿ ಇಲ್ಲವೇ ಪೂರ್ಣ ಫಲಗಳನ್ನು ತಾವೃ ತಂದು ಗಣಪತಿಗೆ ಅರ್ಪಿಸಿ.ಪೂಜಿಸಿ ನಂತರ ಪಡೆದುಕೊಳ್ಳುವುದು ಇಲ್ಲಿ ಸಾಮಾನ್ಯ.ಅದನ್ನು ತಂದು ತಮ್ಮ ಮನೆಯಲ್ಲಿ ಪೂಜಿಸಿದರೆ ಅಥವ ತಮ್ಮಲ್ಲಿ ಇಟ್ಟುಕೊಂಡು ಶ್ರದ್ಧೆ ಭಕ್ತಿಯಿಂದ ತಮ್ಮ ಕರ್ತವ್ಯದಲ್ಲಿ ತೊಡಗಿದರೆ ಕೋರಿಕೆಗಳು ಈಡೇರುವವು ಎಂಬ ನಂಬಿಕೆ.ಹೀಗಾಗಿ ಮೂರೂ ದಿನವೂ ಇಲ್ಲಿ ಜನಸಂದಣಿ ನಿಯಂತ್ರಿಸಲು ಪೋಲಿಸ್ ಬಂದೋಬಸ್ತ ವ್ಯವಸ್ಥೆ ಏರ್ಪಟ್ಟಿರುತ್ತದೆ.ಅಷ್ಟೇ ಅಲ್ಲ ಊರ ಹೊರಗೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.ಜನ ರಾತ್ರಿಯಿಡೀ ಸಾಲಾಗಿ ನಿಂತು ಎಲ್ಲ ಗಣಪತಿಗಳ ದರ್ಶನ ಪಡೆಯುವುದು ನಿಜಕ್ಕೂ ಒಂದು ವೈಶಿಷ್ಟö್ಯವೇ ಸರಿ.
ಒಮ್ಮೆ ಛಬ್ಬಿಗೆ ಬಂದು ಅಡಿಕೆ ಫಲ ಪಡೆದು ಹೋಗಿ ನಿರಂತರವಾಗಿ ಮೂರು ವರ್ಷ ಬರಬೇಕೆನ್ನುವುದು ಜನರ ಪ್ರತೀತಿ.ಆದರೆ ಅದು ಕಡ್ಡಾಯವೇನಲ್ಲ.ಅವರವರ ಭಕ್ತಿ.ನಂಬುಗೆ ಇದಕ್ಕೆ ಪುಷ್ಟಿ ನೀಡುವಂತೆ ಮೂರು ವರ್ಷಗಳವರೆಗೆ ಸತತವಾಗಿ ಬಂದು ಹೋಗುವವರ ಸಂಖ್ಯೆ ಇಲ್ಲಿ ಹೆಚ್ಚುತ್ತಿರುವುದು.ಅವರಿಂದ ಬೇರೆಯವರಿಗೂ ಇಲ್ಲಿನ ಗಣೇಶನ ಮಹಿಮೆ ಹರಡುವ ಮೂಲಕ ವರ್ಷವರ್ಷಕ್ಕೂ ಇಲ್ಲಿ ಜನಸಂದಣಿ ನಿಯಂತ್ರಸಲಾಗದಷ್ಟು ಬೆಳೆಯುತ್ತಲೇ ಇರುವುದು ವಿಶೇಷ.
ವೈ.ಬಿ.ಕಡಕೋಳ
ಸಂಪನ್ಮೂಲ ಶಿಕ್ಷಕರು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦ ೮೯೭೧೧೧೭೪೪೨