ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಗುಡ್ನ್ಯೂಸ್ ನೀಡಿದೆ. ಈಗಾಗಲೇ 7ನೇ ವೇತನ ಆಯೋಗ ಜಾರಿ ವಿಷಯದಲ್ಲಿ ದೊಡ್ಡ ಅಪ್ಡೇಟ್ ನೀಡಿರುವ ಸರ್ಕಾರವು ಇದೀಗ ರಾಜ್ಯ ಸರ್ಕಾರದ ಸಿ ಮತ್ತು ಡಿ ವೃಂದದ ನೌಕರರ ಕಡೆಯೂ ಗಮನಹರಿಸಿದೆ. ರಾಜ್ಯದ ಸರ್ಕಾರಿ ಉದ್ಯೋಗದಲ್ಲಿದ್ದು, ತಳ ಹಂತದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಉದ್ಯೋಗಿಗಳ ಆರೋಗ್ಯದ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಿದ್ದು.
ಇದೀಗ ರಾಜ್ಯದ ಸಿ ಮತ್ತು ಡಿ ವೃಂದದ ನೌಕರರ ಆರೋಗ್ಯ ಭತ್ಯೆಯನ್ನು ಹೆಚ್ಚಳ ಮಾಡಿದೆ.
ರಾಜ್ಯ ಸರ್ಕಾರದ ಸಿ ಮತ್ತು ಡಿ ವೃಂದದ ನೌಕರರಿಗೆ ನೀಡಲಾಗುವ ತಿಂಗಳ ವೈದ್ಯಕೀಯ ಭತ್ಯೆಯನ್ನು 200 ರೂಪಾಯಿಯಿಂದ 500 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಬರುವವರೆಗೆ ಈ ವೈದ್ಯಕೀಯ ಸೌಲಭ್ಯ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಹಿನ್ನೆಲೆ ?
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು 2021ರಲ್ಲಿ ಪರಿಚಯಿಸಲಾಗಿತ್ತು. ಕರ್ನಾಟಕ ರಾಜ್ಯ ಸಚಿವ ಸಮಿತಿ ಈ ಯೋಜನೆಗೆ ಅನುಮತಿ ನೀಡಿದ ಮೇಲೆ ಈ ಯೋಜನೆ ಜಾರಿಯಾಗಿತ್ತು. ಈ ಉದ್ದೇಶಿತ ಯೋಜನೆಯ ಅಡಿಯಲ್ಲಿ ಸರ್ಕಾರಿ ನೌಕರರು ಹಾಗೂ ಸರ್ಕಾರಿ ನೌಕರರ ಕುಟುಂಬದವರಿಗೆ ನಗದು ರಹಿತ ವೈದ್ಯಕೀಯ ಸೇವೆ ನೀಡುವುದು ಇದರ ಉದ್ದೇಶವಾಗಿದೆ. ಅಲ್ಲದೇ ಸರ್ಕಾರಿ ನೌಕರರ ಆರೋಗ್ಯ ಕಾಳಜಿ ವಹಿಸುವ ಹಾಗೂ ಸಮತೋಲನ ಜೀವನ ನಡೆಸುವ ಉದ್ದೇಶ ಈ ಯೋಜನೆಯ ಹಿಂದಿದೆ.
ಈ ಯೋಜನೆಯ ಮತ್ತೊಂದು ವಿಶೇಷವೆಂದರೆ ಈ ಯೋಜನೆಯ ಮೂಲಕ ಸರ್ಕಾರಿ ನೌಕರರ ಮೇಲೆ ಅವಲಂಬಿತರಾಗಿರುವವರಿಗೂ ಈ ಯೋಜನೆಯ ಲಾಭ ಸಿಗಲಿದೆ. ಅಂದರೆ, ದತ್ತು ಪಡೆದಿರುವ ಮಕ್ಕಳು ಹಾಗೂ ಮಲ ಮಕ್ಕಳನ್ನೂ ಸಹ ಈ ಯೋಜನೆಯ ವ್ಯಾಪ್ತಿಗೆ ಸೇರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಚೆಗಷ್ಟೇ ಪರಿಷ್ಕೃತ ಕಾರ್ಯನೀತಿಯನ್ನು ಸಹ ಪ್ರಕಟಿಸಲಾಗಿತ್ತು. ಇದರ ಅನ್ವಯ. ಸರ್ಕಾರಿ ನೌಕರರ (ಪತಿ, ಪತ್ನಿ, ತಂದೆ – ತಾಯಿ ಹಾಗೂ ಮಕ್ಕಳಿಗೆ) ಕುಟುಂಬದವರಿಗೂ ಈ ಯೋಜನೆ ಅನ್ವಯಿಸುತ್ತದೆ. ಆದರೆ, ಈಗಾಗಲೇ ಆರೋಗ್ಯ ಭಾಗ್ಯ ಸೇವೆಯ ಅಡಿಯಲ್ಲಿ ಆರೋಗ್ಯ ಸೌಲಭ್ಯವನ್ನು ಪಡೆಯುತ್ತಿರುವ ಸಿಬ್ಬಂದಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಹೇಳಿತ್ತು.
ಜ್ಯೋತಿ ಸಂಜೀವಿ: ಖಾಸಗಿ ಆಸ್ಪತ್ರೆ ಇಷ್ಟ!
2014-15ನೇ ಸಾಲಿನಲ್ಲಿ ರಾಜ್ಯದಲ್ಲಿ ಜಾರಿ ಮಾಡಲಾಗಿದ್ದ ಜ್ಯೋತಿ ಸಂಜೀವಿನಿ ಯೋಜನೆಗೆ ಸರ್ಕಾರಿ ನೌಕರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಈ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿ ಸರ್ಕಾರಿ ನೌಕರರು ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆಗಳತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಯೋಜನೆಯಲ್ಲಿ ಈಗಾಗಲೇ 272 ಆಸ್ಪತ್ರೆಗಳನ್ನು ನೊಂದಾಯಿಸಿಕೊಳ್ಳಲಾಗಿದೆ. ಅದರಲ್ಲಿ ಹೊರರಾಜ್ಯದ ಆಸ್ಪತ್ರೆಗಳ ಸಂಖ್ಯೆಯೇ 27 ಇದೆ. ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಮೂಲಕ ಸರ್ಕಾರಿ ಉದ್ಯೋಗಿಗಳು ಹಾಗೂ ಅವರ ಕುಟುಂಬದವರು ಚಿಕಿತ್ಸೆ ಪಡೆಯುವುದಕ್ಕೆ ಆಸಕ್ತಿ ತೋರುತ್ತಿರುವುದು ವರದಿಯಾಗಿದೆ.