ಇವನು ಹೆಸರಿಗೆ ಅಷ್ಟೇ ಶಿಕ್ಷಕ!! ಕಲಿಯುಗದ ಕೀಚಕ…!!
ಶಿಕ್ಷಕನ ನಾಲ್ಕು ಪೋನ್ನಲ್ಲಿ 5 ಸಾವಿರ ಪೋಟೊ ಹಾಗೂ ವಿಡಿಯೋಗಳು ಪತ್ತೆ!!
ಕೋಲಾರ: ದೇಶದಾದ್ಯಂತ ಸುದ್ದಿಯಾಗಿದ್ದ ಕೋಲಾರದ ಮೊರಾರ್ಜಿ ದೇಸಾಯಿ ಶಾಲೆಯ ಪ್ರಕರಣಕ್ಕೆ ಸದ್ಯ ಹೊಸ ತಿರುವು ಸಿಕ್ಕಿದೆ. ವಸತಿ ಶಾಲೆಯಲ್ಲಿ ಬಗೆದಷ್ಟು ಅಕ್ರಮಗಳು ಬಯಲಾಗುತ್ತಿದ್ದು ಶಿಕ್ಷಕನ ಮೊಬೈಲ್ ನಲ್ಲಿ 5 ಸಾವಿರ ಫೋಟೋ ಹಾಗೂ ಸಾವಿರಾರು ವಿಡಿಯೋಗಳಿದೆ ಅನ್ನೋ ವಿಚಾರ ಅಧಿಕಾರಿಗಳ ನಿದ್ದೆ ಗೆಡಿಸಿದೆ..
ನ್ಯಾಯಾಲಯ (Court) ಶಿಕ್ಷಕನ ಕೇಸ್ ರದ್ದತಿಗೆ ನಕಾರ ವ್ಯಕ್ತಪಡಿಸಿದೆ, ಆತಂಕ ವ್ಯಕ್ತಪಡಿಸಿದೆ.
ಏನಿದು ಪ್ರಕರಣ?
ಹೌದು, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 17 ನೇ ಡಿಸೆಂಬರ್ 2023 ರಂದು ಮಕ್ಕಳಿಂದ ಮಲ ಗುಂಡಿ ಸ್ವಚ್ಚಗೊಳಿಸಿದ ಪ್ರಕರಣ ಇಡೀ ದೇಶದಲ್ಲಿ ಸಖತ್ ಸದ್ದು ಮಾಡಿತ್ತು. ದಲಿತ ವಿದ್ಯಾರ್ಥಿಗಳಿಂದ ಶೌಚಾಲಯ ಗುಂಡಿ ಸ್ವಚ್ಚ ಮಾಡಿದ ಫೋಟೋ ಹಾಗೂ ವಿಡಿಯೋಗಳನ್ನ ಸೆರೆ ಹಿಡಿದ ಹಿನ್ನೆಲೆ, ಅಂದೆ ಶಿಕ್ಷಕ ಮುನಿಯಪ್ಪ ವಿರುದ್ದ POCSO ಪ್ರಕರಣದಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಅಲ್ಲದೆ ಪ್ರಾಂಶುಪಾಲೆ ಸೇರಿದಂತೆ ನಾಲ್ಕು ಶಿಕ್ಷಕರು ಹಾಗು ಸಿಬ್ಬಂದಿ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲು ಮಾಡಲಾಗಿತ್ತು.
ಈ ಪ್ರಕರಣ ಸದ್ಯಕ್ಕೆ ಹೊಸ ರೂಪ ಪಡೆದಿದ್ದು, ಕಾಮುಕ ಶಿಕ್ಷಕನ ಬಳಿಯಿದ್ದ 4 ಫೋನ್ ಗಳಲ್ಲಿ ಸಾವಿರಾರು ಫೋಟೋ, ವಿಡಿಯೋ ಇರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕೋಲಾರದ ಚಿತ್ರಕಲಾ ಶಿಕ್ಷಕ ಮುನಿಯಪ್ಪ ಮೊಬೈಲ್ನಲ್ಲಿ ಹೆಣ್ಮಕ್ಕಳ ನಗ್ನ ದೃಶ್ಯಗಳು ಪತ್ತೆಯಾಗಿವೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಶಿಕ್ಷಕ ಮುನಿಯಪ್ಪ ತನ್ನ ವಿರುದ್ದ ಇರುವ ಪ್ರಕರಣ ರದ್ದತಿಗೆ ಹೈ ಕೋರ್ಟ್ ಮೊರೆ ಹೋಗಿದ್ದ, ಈ ಸಂಬಂಧ ವಿಚಾರಣೆ ನಡೆಸಿರುವ ನ್ಯಾಯಾಲಯ ಅರ್ಜಿ ರದ್ದು ಮಾಡಿ ಪ್ರಕರಣದ ರದ್ದು ಮಾಡಲು ವಿರೋಧ ವ್ಯಕ್ತಪಡಿಸಿದೆ.
ಹೆಣ್ಣು ಮಕ್ಕಳ ಫೋಟೋ ಸೆರೆ ಹಿಡಿದಿರುವ ಶಿಕ್ಷಕನ ಕೃತ್ಯ ಭಯಾನಕ, ಅಸಭ್ಯ ಎಂದ ಹೈಕೋರ್ಟ್ ಚೀಮಾರಿ ಹಾಕಿದೆ. ಇನ್ನೂ ವಸತಿ ಶಾಲೆಯಲ್ಲಿ ಬಾಲಕಿಯರು ಬಟ್ಟೆ ಬದಲಿಸುವ ಸಮಯದ 5 ಸಾವಿರಕ್ಕೂ ಹೆಚ್ಚು ಫೋಟೋ ಹಾಗೂ ನೂರಾರು ವಿಡಿಯೋ ಸೆರೆಹಿಡಿದ್ದಾರೆ ಅನ್ನೋದು ಆರೋಪ ತಿಳಿದು ಬಂದಿದೆ. ಅಲ್ಲದೆ ವಸತಿ ಶಾಲೆಯಲ್ಲಿ ಬಗೆದಷ್ಟು ಅಕ್ರಮಗಳು ಬಯಲಾಗಿದ್ದರ ಕುರಿತು, ಹೆಣ್ಣು ಮಕ್ಕಳ ವಿಡಿಯೋ ಗಳ ಬಗ್ಗೆ ಅಂದೆ ನ್ಯೂಸ್ 18 ವರದಿ ಪ್ರಸಾರ ಮಾಡಿತ್ತು. ಬಳಿಕ ಎಚ್ಚೆತ್ತುಕೊಂಡ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಶಿಕ್ಷಕನ ವಿರುದ್ದ ಮಾಸ್ತಿ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ದೂರು ದಾಖಲು ಮಾಡಿದ್ದರು.
ಇನ್ನೂ ವಸತಿ ಶಾಲೆಯ ಹೆಣ್ಣುಮಕ್ಕಳು ಬಟ್ಟೆ ಬದಲಿಸುವಾಗ ಫೋಟೋ, ವಿಡಿಯೋ ಸೆರೆಹಿಡಿದಿದ್ದ ಬಗ್ಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್, ಮಾಸ್ತಿ ಪೊಲೀಸರಿಗೆ ದೂರು ನೀಡಿದ್ದರು. ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ ವಿರುದ್ಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ಎಫ್.ಐ.ಆರ್ ಕೂಡ ದಾಖಲಾಗಿತ್ತು. ಈ ಸಂಬಂಧ ಪ್ರಕರಣದ ರದ್ದು ಮಾಡುವಂತೆ ಹೈ ಕೋರ್ಟ್ ಮೊರೆ ಹೋಗಿದ್ದ ಶಿಕ್ಷಕನಿಗೆ ಹೈ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡು ಇದು ಕ್ಷಮಿಸಲಾರದ ಕೃತ್ಯ ಎಂದು ಚೀಮಾರಿ ಹಾಕಿದೆ.
ಪೊಲೀಸ್ ತನಿಖೆಯ ವೇಳೆ ಆರೋಪಿ ಬಳಿಯಿದ್ದ 4 ಮೊಬೈಲ್ನಲ್ಲಿ ಸಾವಿರಾರು ವಿಡಿಯೋಗಳು ಪತ್ತೆಯಾಗಿದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಸಾರಾಸಗಟಾಗಿ ಇಂತಹ ಪ್ರಕರಣವನ್ನು ರದ್ದುಪಡಿಸಲಾಗದು ಎಂದ ನ್ಯಾಯಾಲಯ ನಿರ್ದೇಶನ ನೀಡಿದೆ. ಪೋಕ್ಸೋ ಕಾಯ್ದೆ ಸೆಕ್ಷನ್ 11 ಪ್ರಕಾರ, ಮಕ್ಕಳ ದೇಹ ಅಥವಾ ದೇಹದ ಯಾವುದೇ ಭಾಗವನ್ನು ಅಸಭ್ಯ ರೀತಿಯಲ್ಲಿ ಪ್ರದರ್ಶಿಸುವುದು ಲೈಂಗಿಕ ಕಿರುಕುಳವಾಗಿರುತ್ತದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿರುವ ಕೋಲಾರ ಎಸ್ಪಿ ಬಿ ನಿಖಿಲ್, ಪ್ರಕರಣದ ವಿಚಾರಣೆ ಇನ್ನು ನಡೆಯುತ್ತಿದೆ, ಆರೋಪಿ ಸ್ತಾನದ ವ್ಯಕ್ತಿ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ ಎಂದರು.
ಒಟ್ಟಿನಲ್ಲಿ ಕೋಲಾರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಲದ ಗುಂಡಿ ಸ್ವಚ್ಚಗೊಳಿಸಿದ ವಿಚಾರವೇ ದೊಡ್ಡ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು. ಆದರೆ ಈಗ ಹೆಣ್ಣು ಮಕ್ಕಳ ವಿಡಿಯೋಗಳಿರುವ ಕುರಿತು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿರೋದಂತೂ ಸುಳ್ಳಲ್ಲ.