ಗುರುವಂದನೆ
ಜ್ಞಾನ ದಾಸೋಹಗೈದ ಗುರುವೇ
ತ್ರಿಮೂರ್ತಿಗಳು ಇಹರು ನಿನ್ನಲಿ
ಅಜ್ಜಾನದ ಕಡಲನು ಈಜಲು ಕಲಿಸಿ
ಸುಜ್ಞಾನದ ದಡ ಸೇರಿಸಿರುವೆ||
ಅಂದು ನಮಗೆ ತಿದ್ದಿ ತೀಡಿ
ಬುದ್ಧಿ ಮಾತ ನಮಗೆ ಹೇಳಿ
ನಿಸ್ವಾರ್ಥ ಸೇವೆಗೈದು
ಹೆಮ್ಮೆಯಿಂದ ಬೀಗಿದೆ||
ಆಟ ಪಾಠ ನೀತಿ ನಿಯಮ
ಎಲ್ಲವನು ಕಲಿಸಿ ನೀನು
ಬಾಳ ಪಯಣ ಸಾಗಿಸೆಂದು
ನಮಗೆ ಹರಿಸಿ ಕಳುಹಿದೆ||
ಮರೆಯಲೆಂತು ಓ ಗುರುವೇ
ಆ ನಿನ್ನ ವಾಣಿ ಇನ್ನೂ ಕೇಳುತಿದೆ
ಪ್ರತಿ ಕ್ಷಣವೂ ನಿನ್ನ ನೆನಪು
ಮನದಾಳದಿ ಮುದ ನೀಡಿದೆ||
ಹಾಗೆಯೇ ಇರಬಾರದೇ
ನೀನು ಗುರುವಾಗಿ ನಾನು ಶಿಷ್ಯೆಯಾಗಿ
ಯಾಕೆ ಕಾಲ ಓಡಿತು ಎಂದೆನಿಸುತಿದೆ
ನಿನ್ನ ಆದರ್ಶ ನನ್ನ ದಾರಿದೀಪವಾಗಿದೆ||
ನಿನ್ನಂತೆ ನಾನಾಗಲಾರೆ,
ಬಯಕೆ ನನ್ನದು ನಾನೂ
ನಿನ್ನಂತೆ ಆಗಬೇಕೆಂಬುದು
ದಯಪಾಲಿಸು ಗುರುವೇ||
ಗುರು ಎಮಗೆ ದಾರಿದೀಪ
ಗುರು ಎಮಗೆ ನಂದಾದೀಪ
ಗುರುವಿರದ ಎಮ್ಮ ಬಾಳು
ಗುರಿ ಸೇರದು ಎಂದಿಗೂ||
ತೀರಿಸಲಾರೆ ನಿನ್ನ ಋಣವ
ಸಾಗುವೆ ನೀ ತೋರಿದ ದಾರಿಯಲಿ
ನಿನ್ನ ನೆನೆದು ನಿನ್ನಾದರ್ಶದಿ ನಡೆದು
ಗುರುವೇ ಹರನೆಂದು ನಮಿಸುವೆ||
✍️ ಶ್ರೀಮತಿ ಜಿ ಎನ್ ಮಲಕಣ್ಣವರ
ಸಿ ಆರ್ ಪಿ ತಲ್ಲೂರ