ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗ : ಚರಂತಿಮಠ
ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಆಚರಣೆ
ಧಾರವಾಡ : ಪ್ರತಿಯೊಬ್ಬ ವಿದ್ಯಾರ್ಥಿ ಯಾವುದೇ ಒಂದು ಕ್ರೀಡೆಯಲ್ಲಾದರೂ ನೈಪುಣ್ಯತೆಯನ್ನು ಹೊಂದಿರಬೇಕು. ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗವಾಗಿವೆ ಎಂದು ಎ.ಆರ್.ಸಿ. ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮತ್ತು ಹಿರಿಯ ವಕೀಲ ಅರುಣ ಚರಂತಿಮಠ ಹೇಳಿದರು.
ಅವರು ನಗರದ ಕಾಮನಕಟ್ಟಿ ಬಳಿಯ ಚರಂತಿಮಠ ಗಾರ್ಡನ್ ಬಡಾವಣೆಯ ಲೀಲಾವತಿ ಚರಮತಿಮಠ ಪಬ್ಲಿಕ್ ಶಾಲೆಯಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂದ್ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ‘ಖೇಲೋ ಇಂಡಿಯಾ’ ಆಂದೋಲನವು ರಾಷ್ಟ್ರವ್ಯಾಪಿ ಹಬ್ಬಿದೆ. ಕೇಂದ್ರ ಸರಕಾರವು ಪ್ರತೀ ವರ್ಷ ಆಗಷ್ಟ್-29ರಂದು ಹೊಸ ಹೊಸ ಕ್ರೀಡಾ ಉಪಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಬರುವ ದಿನಗಳಲ್ಲಿ ಭಾರತವು ಎಲ್ಲಾ ಹಂತಗಳ ಕ್ರೀಡಾ ಸ್ಪರ್ಧೆಗಳಲ್ಲಿ ಹೆಚ್ಚಿನ ಚಿನ್ನದ ಪದಕಗಳನ್ನು ಗೆಲ್ಲುವಂತಾಗಲಿ ಎಂದು ಹಾರೈಸಿದರು.
ಒಲಿಂಪಿಕ್ಸದಲ್ಲಿ ಚಿನ್ನ: ಮೇಜರ್ ಧ್ಯಾನ್ಚಂದ್ ಅವರು ಸೇನೆಗೆ ಸೇರಿಸ ದಿನದಿಂದಲೇ ಹಾಕಿಯನ್ನು ಕೈಗೆತ್ತಿಕೊಂಡಿದ್ದು ದೇಶಕ್ಕೆ ವಿವಿಧ ಪ್ರಶಸ್ತಿಗಳನ್ನು ತಂದುಕೊಟ್ಟರು. 1928, 1932 ಮತ್ತು 1936 ರ ಒಲಿಂಪಿಕ್ಸದಲ್ಲಿ ಚಿನ್ನವನ್ನು ಸಂಪಾದಿಸಿದ ಭಾರತೀಯ ಹಾಕಿ ತಂಡದಲ್ಲಿ ಧ್ಯಾನ್ಚಂದ್ ಶ್ರಮ ಇದ್ದದ್ದನ್ನು ಮರೆಯುವಂತಿಲ್ಲ. 22 ವರ್ಷಗಳ ತಮ್ಮ ಕ್ರೀಡಾ ಬದುಕಿನಲ್ಲಿ 400 ಕ್ಕೂ ಹೆಚ್ಚು ಗೋಲುಗಳನ್ನು ಹೊಡೆದು ದಾಖಲೆ ನಿರ್ಮಿಸಿದ್ದಾರೆ ಎಂದೂ ಅರುಣ ಚರಂತಿಮಠ ಶ್ಲ್ಯಾಘಿಸಿದರು.
ಶಾಲೆಯ ಪ್ರಿನ್ಸಿಪಾಲ್ ಅಶ್ವಿನಿ ಚಿಕ್ಕಬಳ್ಳಾಪುರ ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು ತರಲು ಹಾಗೂ ಸೋಲು ಗೆಲುವುಗಳನ್ನು ಸಮರ್ಥವಾಗಿ ಎದುರಿಸಲು ಕ್ರೀಡಾ ಚಟುವಟಿಕೆಗಳ ಆಯೋಜನೆ ಸಹಕಾರಿಯಾಗಿದೆ. ಶಾಲೆಯ ವಿದ್ಯಾರ್ಥಿಗಳು ವಿಭಿನ್ನ ಕ್ರೀಡಾ ಸಾಧನೆ ಮಾಡುತ್ತಿರುವುದು ಶಾಲೆಯ ಗೌರವವನ್ನು ಹೆಚ್ಚಿಸಿದೆ ಎಂದರು.
ರಾಷ್ಟ್ರೀಯ ಕ್ರೀಡಾ ದಿನದ ನಿಮಿತ್ತ ಶಾಲೆಯಲ್ಲಿ ಟೇಕ್ವಾಂಡೊ ಕಲೆಯನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಪ್ರದರ್ಶನವನ್ನು ನೀಡಿದರು. ಈ ವಿಶೇಷ ದಿನದ ನಿಮಿತ್ತ ನಗರದ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಪಾಲಕರಿಗೆ ಉಚಿತ ಕಣ್ಣಿನ ತಪಾಸಣೆಯನ್ನು ಏರ್ಪಡಿಸಲಾಗಿತ್ತು. ಶಾಲೆಯ ದೈಹಿಕ ಶಿಕ್ಷಕ ಮಂಜುನಾಥ ಮುಂದಿನಮನಿ, ಸಂಜೀವ ಸಾವಕ್ಕನವರ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.