ಶಾಲೆಯ ಮೆಲ್ಛಾವಣಿ ಕುಸಿತ ವಿದ್ಯಾರ್ಥಿಗಳಿಗೆ ಗಂಭೀರ ಗಾಯ…
ಶಾಲೆಯ ಮುಖ್ಯ ಶಿಕ್ಷಕರನ್ನು ತಕ್ಷಣವೇ ಅಮಾನತ್ ಮಾಡಿ ಆದೇಶ ಮಾಡಿದ್ರು ಜಿಲ್ಲಾಧಿಕಾರಿ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲೂಕಿನ ಕುಂತೂರು ಸರ್ಕಾರಿ ಶಾಲೆ ಮೇಲ್ಛಾವಣಿ ಕುಸಿದು ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಈ ಶಾಲೆಯಲ್ಲಿ ದುರಸ್ತಿ ಕಾರ್ಯಗಳು ನಡೆಯುತ್ತಿದ್ದವು. ಈ ಮಧ್ಯೆ ಇಂದು ಏಕಾಏಕಿ ಗೋಡೆ ಮತ್ತು ಮೇಲ್ಛಾವಣಿಗಳು ಕುಸಿದಿವೆ. ಶಾಲೆಯಲ್ಲಿ ಮಕ್ಕಳಿದ್ದ ವೇಳೆಯಲ್ಲೇ ಅನಾಹುತ ಆಗಿದ್ದು, ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾಗಿ ವರದಿಯಾಗಿದೆ.
ಘಟನೆ ನಡೆದ ಬೆನ್ನಲ್ಲೇ ಪುತ್ತೂರು ಬಿಇಒ ಲೋಕೇಶ್ ಎಸ್.ಆರ್.ಅವರು ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಅನೇಕ ಮಕ್ಕಳು ಶಾಲೆಯ ಹೊರಗೆ ಇದ್ದರು. ಒಳಗೆ ಕೆಲವೇ ಮಕ್ಕಳಿದ್ದರು. ಅದರಲ್ಲಿ ನಾಲ್ವರು ಹೆಣ್ಣುಮಕ್ಕಳಿಗೆ ಗಾಯಗಳಾಗಿವೆ ಎಂದು ಬಿಇಒ ತಿಳಿಸಿದ್ದಾರೆ.
ಅಷ್ಟೇ ಅಲ್ಲ ʼಈ ಸರ್ಕಾರಿ ಶಾಲೆ ಸುಮಾರು 74 ವರ್ಷಗಳಷ್ಟು ಹಳೇದು. ಇದನ್ನ ದುರಸ್ತಿ ಮಾಡುವ ಸಲುವಾಗಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿತ್ತು. ಕಾಮಗಾರಿ ನಡೆಯುತ್ತಲೇ ಇತ್ತು. ಅಡಿಪಾಯವನ್ನ ಭದ್ರ ಪಡಿಸುವ ಕೆಲಸ ಆಗುತ್ತಿದ್ದಾಗ, ಇತ್ತ ಶಾಲೆಯ ಗೋಡೆ ಮತ್ತು ಮೇಲ್ಛಾವಣಿ ಕುಸಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಭೇಟಿ..
ಶಾಲೆಯಲ್ಲಿ ನಡೆದ ಅನಾಹುತವನ್ನ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಆ ಶಾಲೆಯ ಮುಖ್ಯ ಶಿಕ್ಷಕರನ್ನ ಮತ್ತು ಕಾಮಗಾರಿ ಹೊಣೆ ಹೊತ್ತಿದ್ದ ಜ್ಯೂನಿಯರ್ ಎಂಜಿನಿಯರ್ನನ್ನ ವಿಚಾರಣೆಗಾಗಿ ಅಮಾನತುಗೊಳಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ಅವರು ʼಕಾಮಗಾರಿ ನಡೆಯುತ್ತಿದೆ ಎಂದ ಮೇಲೆ ಮುಖ್ಯ ಶಿಕ್ಷಕರು ಹೆಚ್ಚು ಎಚ್ಚರಿಕೆ ವಹಿಸಬೇಕು. ಸ್ಥಳಕ್ಕೆ ಮಕ್ಕಳು ಹೋಗದಂತೆ ನೋಡಿಕೊಳ್ಳಬೇಕು. ಕಾಮಗಾರಿ ಶುರುಮಾಡುವುದಕ್ಕೂ ಮೊದಲೇ ಈ ಬಗ್ಗೆ ಜಿಲ್ಲಾಡಳಿತದಿಂದ ಎಚ್ಚರಿಕೆ ಕೊಟ್ಟಿದ್ದೇವೆ. ಮಕ್ಕಳು ಕೊಠಡಿಯಲ್ಲಿ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡೇ ಕೆಲಸ ಶುರು ಮಾಡಬೇಕು. ಇದು ಶಿಕ್ಷಕರದ್ದೇ ಹೊಣೆ ಎಂದು ನಾವು ಹೇಳಿದ್ದೆವುʼ ಎಂದು ತಿಳಿಸಿದ್ದಾರೆ. ಹಾಗೇ, ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿಯೂ ತಿಳಿಸಿದ್ದಾರೆ..