ಲೇಖನ :-ಕೃಷ್ಣನ ಸ್ಮರಣೆಯಲೆ ಸರಿಯುವುದು ಸಂಕಷ್ಟ
ಶ್ರೀ ವ್ಯಾಸ ರಾಜರು ಹೇಳಿದಂತೆ ಕೃಷ್ಣ ಕೃಷ್ಣ ಕೃಷ್ಣ ಎಂದು ಮೂರು ಬಾರಿ ನೆನೆಯಿರಿ ಎಂದಿದ್ದಾರೆ.
ಏಕೆಂದರೆ “ಶ್ರೀ ಕೃಷ್ಣo ವಂದೇ ಜಗದ್ಗುರು”.
ಶ್ರೀ ಕೃಷ್ಣನ ಸ್ಮರಣೆ ಮಾತ್ರದಲೇ ತಾಪತ್ರಯಗಳು ಕಳೆದು ಜೀವನ ಹೂವಿನ ಹಾದಿಯಷ್ಟು ಸುಗಮವಾಗುತ್ತದೆ. ” ಕೃಷ್ಣ ” ಎಂಬ ಶಬ್ದದ ಅರ್ಥ
ಕೃಷ ಎಂದರೆ “ಭೂ” ಅಂದರೆ ಪೂರ್ಣನಾದವನು ಎಂದರ್ಥ, ಇನ್ನು “ಣ” ಎಂದರೆ ಸುಖ ನೀಡುವನು ಎಂದರ್ಥ. ಒಟ್ಟಾರೆ ಕೃಷ್ಣ ಪದದ ಅರ್ಥ ಪೂರ್ಣನಂದ,
ಆತ್ಮಾನಂದನು. ” ಕೃಷ್ಣ ” ಇನ್ನೊಂದು ಅರ್ಥ
ಕಪ್ಪು”, “ಕಡು” ಅಥವಾ “ಕಡು ನೀಲಿ” ಎಂಬರ್ಥದ ವಿಶೇಷಣವಾಗಿದೆ. ವಿಷ್ಣುವಿನ ಹೆಸರಂತೆ, ವಿಷ್ಣು ಸಹಸ್ರನಾಮದಲ್ಲಿ ಕೃಷ್ಣ 57 ನೇ ನಾಮವಾಗಿದೆ
ಪರಮಾತ್ಮನಾದ ಕೃಷ್ಣನ ಬಗ್ಗೆ ಅರಿವು ಮತ್ತು ವಾತ್ಸಲ್ಯ ಯೋಗ, ಜ್ಞಾನ, ಧ್ಯಾನ ಮತ್ತು ಆಧ್ಯಾತ್ಮಿಕತೆಯ ಎಲ್ಲಾ ಪ್ರಕಾರಗಳ ಪರಾಕಾಷ್ಠೆಯಾಗಿದೆ. ಕೃಷ್ಣ ಪ್ರಜ್ಞೆಯು ಪ್ರತಿಯೊಬ್ಬ ವ್ಯಕ್ತಿಯ ನೈಸರ್ಗಿಕ, ಮೂಲ ಮತ್ತು ಆನಂದದಾಯಕ ಸ್ಥಿತಿ ಹೊಂದಿ ಮಾಯೆ , ಭ್ರಮೆ ಆವರಿಸಿದಾಗ ಮಾತ್ರ ನಾವು ಯಾರು ಮತ್ತು ಪರಮ ಪುರುಷ ಯಾರು ಎಂಬುದನ್ನು ಮರೆತು ಬಿಡುತ್ತೇವೆ.
ಇಂತಹ ಸಂಸಾರ ಜಾಲದಲ್ಲಿ ಕಾರ್ಯ ಕಾರಣನಾಗಿ ಪ್ರೇರ್ಯ, ಪ್ರೇರಕನಾಗಿ ಬಂಧಿಸುವನೇ ಕಂಸಾರಿ ನಮ್ಮ ಕೃಷ್ಣ.
ವೇದ ವ್ಯಾಸರ ಸಭೆ ಸೇರಿದಾಗ, ಒಂದು ತಕ್ಕಡಿಯಲ್ಲಿ ಒಂದರ ಮೇಲೆ ಎಲ್ಲ ವೇದ ಗ್ರಂಥಗಳು ಇಟ್ಟರೆ ಇನ್ನೊಂದರ ಮೇಲೆ ಮಹಾಭಾರತ ಕೃತಿ ಇರಿಸಿದರು.
ಆಗ ಮಾಹಾಭಾರತ ಗ್ರಂಥ ಶ್ರೇಷ್ಠತೆ ಪಡೆದು ಅದು ಮೇಲೆ ತೂಗಿತು ಆಗ ಅದರ ಶ್ರೇಷ್ಠ ತೂಕ ಮತ್ತು ಅತ್ಯುನ್ನತ ಗುಣಮಟ್ಟದಿಂದಾಗಿ ಮಹಾಭಾರತ ಎಂದು ಕರೆಯಲಾಗುತ್ತದೆ. ಹೀಗೆ ಅದರ ಕೇವಲ ವ್ಯಾಖ್ಯಾನವನ್ನು ಅರ್ಥಮಾಡಿಕೊಳ್ಳುವವನು ಎಲ್ಲಾ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ. ಮಹಾಭಾರತ ಒಂದು ಅಂಗವೇ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಉಪದೇಶಿಸಿದ “ಶ್ರೀ ಭಗವದ್ಗೀತೆ” ಇದು ನಮ್ಮ ಸಮಸ್ತ ಮಾನವ ಕಲ್ಯಾಣಕ್ಕೆ ಭೋಧಿಸಿದ ಗ್ರಂಥವಾಗಿದೆ. ಯಾವ ವರ್ಣ,ಜಾತಿ
ಮತ ಎಣಿಸದೆ ಎಲ್ಲರಿಗೂ ಹಾಗೂ ಜೀವನದ ಎಲ್ಲ ಆಯಾಮಗಳಿಗೆ ಅನುಗುಣವಾಗಿ ಪ್ರತಿ ಮನುಷ್ಯನಿಗೆ
ನೀತಿ ಭೋಧೆ ಭೋಧಿಸಿದೆ. ಹೀಗಾಗಿಯೇ
“ಭವದ ಭಾರ ಇಳಿಸುವ ಭಗವದ್ಗೀತೆಯಾಗಿದೆ.
ಇಲ್ಲಿ ನಾವು ಇನ್ನೊಂದು ಅವಲೋಕಿಸಬೇಕೆಂದರೆ
ಕೃಷ್ಣ ಕೇವಲ ನಿಷ್ಕಲ್ಮಶ ಮನಸ್ಸು, ನಿಷ್ಕಾಮ ಭಕ್ತಿ ಭಗವಂತ ಬಯಸುವನು.
ನಿಷ್ಕಾಮ ಭಕ್ತ ಹೇಗಿರುತ್ತಾನೆ?,ಎಂದರೆ ಶ್ರೀ ಪುರಂದರ ದಾಸರ ಕೀರ್ತನೆಲ್ಲಿ ಹೇಳಿದಂತೆ
“ಏನಗೂ ಆಣೆ ರಂಗ ನಿನಗೂ ಆಣೆ / ಏನಗೂ ನಿನಗೂ ಇಬ್ಬರಿಗೂ ಭಕ್ತರಾಣೆ……ಹರಿ ನಿನ್ನಾಶ್ರಯ
ಮಾಡದಿದ್ದರೆ ಏನಗೂ ಆಣೆ ರಂಗ /ಪುರಂದರ ವಿಠ್ಠಲ್ ನೀನೊಲಿಯದಿದ್ದರೆ ನಿನಗೂ ಆಣೆ.”
ಅಂದರೆ ಕಾರ್ಯ ಕಾರಣನಾಗಿರುವನು. ಕರ್ಮನು ಭಗವಂತನೇ ಹಾಗೂ ಭಕ್ತನಲ್ಲಿದ್ದು ಕರ್ಮ ಮಾಡಿಸುವನು ಭಗವಂತನೇ ಹೀಗಾಗಿ ನಿಷ್ಕಾಮ ಭಕ್ತ ತಾನು ಮಾಡುವ ಕರ್ಮ ಕೃಷ್ಣ ಸಂಕಲ್ಪಿತ ಎಂದು ತಿಳಿದು ಅವನ ಜೊತೆ ಸಲುಗೆಯಿಂದ ಇರುತ್ತಾನೆ ಎಂದು ಈ ಕೀರ್ತನೆಯಲ್ಲಿ ಹೇಳಿದ್ದಾರೆ.
ಕೃಷ್ಣನ ಕೆಲವೇ ಕೆಲವು ಪ್ರಸಂಗ ಹೇಳಬೇಕೆಂದರೆ,
ಮುಷ್ಠಿ ಅವಲಕ್ಕಿ ತಂಡ ನಿಷ್ಕಲ್ಮಶ ಹೃದಯದ ಸ್ನೇಹಿತ ಸುಧಾಮನು.ಇನ್ನು ಪಾಂಡವರು ಕೌರವರು ಅವನ ಆದರ ಆತಿಥ್ಯಕ್ಕೆ ಕರೆದರೆ ವಿದುರನ ಮನೆಯ ಆತಿಥ್ಯಕ್ಕೆ ಹೋದನು. ಕುಬ್ಜೆಯ ನಿಷ್ಕಾಮ ಭಕ್ತಿಗೆ ಮೆಚ್ಚಿ ಅವಳು ಕೊಟ್ಟ ಗಂಧವನ್ನು ಸ್ವೀಕರಿಸಿದನು
ಹೀಗೆ ಸಾಕಷ್ಟು ಪ್ರಸಂಗಗಳು ಇವೆ.
ಮಾನವ ಜನ್ಮ ಸಿಕ್ಕಾಗ ಹೇಗ್ ಇರಬೇಕೆಂದು ಶ್ರೀ ಗೋಪಾಲ ದಾಸರು ಸಾಹಿತ್ಯವಾದ
“ಹ್ಯಾಂಗ ಮಾಡಲಯ್ಯ ಕೃಷ್ಣ ಪೋಗುತಿದೆ ಆಯುಷ್ಯ …….. ಎನ್ನುವ ಸಾಹಿತ್ಯದಲ್ಲಿ ಒಂದು ದಿನವು ನಿನ್ನ ಹರಿಕಥೆ ಕೇಳಲಿಲ್ಲ,, ಪುಣ್ಯ ಕ್ಷೇತ್ರ ಸಂಚಾರ ಮಾಡಲಿಲ್ಲ, ಗುರುಹಿರಿಯರ ಸೇವೆ ಮಾಡಲಿಲ್ಲ, ಉಪವಾಸ ನೇಮ ಮಾಡಲಾರದೇ ವ್ಯರ್ಥ ಜೀವನ ಕಳೆದರೆ ಅವನ ಕೃಪೆ ಸಿಗಲಾರದು ಎಂದು ಹೇಳಿದ್ದಾರೆ.
“ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ|
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ I”
ನಿಶ್ಚಿಂತಿಯಿಂದ, ದೃಢಭಕ್ತಿಯಿಂದ ಯಾರು ನನ್ನನ್ನು ಉಪಾಸಸೇ ಮಾಡುತ್ತಾರೋ, ಅಂತಹ ಭಕ್ತನ ಯೋಗ ಕ್ಷೇಮ ನನ್ನದಾಗಿದೆ ಎಂದು ಹೇಳಿದ್ದಾನೆ.
ಹೀಗಾಗಿ ಈ ಸಾಧನ ಶರೀರದಿಂದ ಸಾಧನೆ ಮಾಡುತ್ತಾ ಇಹಪರ ಸುಖ ಮೋಕ್ಷ ದೊರೆಯಬೇಕಾದರೆ ಕೃಷ್ಣ ಕೃಷ್ಣ ಕೃಷ್ಣ ಎಂದು ಸ್ಮರಣೆ ಮಾಡಬೇಕಲ್ಲವೇ.
✍️ ಪ್ರಿಯಾ ಪ್ರಾಣೇಶ ಹರಿದಾಸ