ಏಕೀಕೃತ ಪಿಂಚಣಿ ಯೋಜನೆ ಬಗ್ಗೆ ತಮಗೆ ಸಮಾಧಾನ ಇಲ್ಲ. ಹಳೆಯ ಒಪಿಎಸ್ ಸ್ಕೀಮ್ ಅನ್ನೇ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಒತ್ತಾಯಿಸಿದ್ದಾರೆ. ಈ ಯೂನಿಫೈಡ್ ಪೆನ್ಷನ್ ಸ್ಕೀಮ್ ಮೂಲಕ ಎನ್ಪಿಎಸ್ನಲ್ಲಿ ಸುಧಾರಣೆ ತರಲಾಗಿದೆ ಅಷ್ಟೇ. ಒಪಿಎಸ್ ಕಡೆಗೆ ಶೇ. 60ರಷ್ಟು ಬಂದಿದ್ದಾರೆ. ಇನ್ನೂ ಶೇ. 40ರಷ್ಟು ಬರಬೇಕಿದೆ ಎಂದು ಷಡಾಕ್ಷರಿ ತಿಳಿಸಿದ್ದಾರೆ.
ಬೆಂಗಳೂರು:
ನ್ಯಾಷನಲ್ ಪೆನ್ಷನ್ ಸಿಸ್ಟಂ ಬದಲು ಹಿಂದಿನ ಓಲ್ಡ್ ಪೆನ್ಷನ್ ಸ್ಕೀಮ್ ಅನ್ನು ಜಾರಿಗೆ ತರುವುದಾಗಿ ಹೇಳಿದ್ದ ಕರ್ನಾಟಕ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರ್ಕಾರಿ ನೌಕರರ ಒತ್ತಾಯದ ಮೇರೆಗೆ ಓಲ್ಡ್ ಪೆನ್ಷನ್ ಸ್ಕೀಮ್ ಜಾರಿಗೆ ತರಲು ಐವರು ಸದಸ್ಯರ ಸಮಿತಿ ರಚಿಸಿತ್ತು. ಅದಿನ್ನೂ ಮುಂದುವರಿದಿಲ್ಲ. ಇನ್ನು ಈ ಬಗ್ಗೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮಾತನಾಡಿ, ಹಳೆಯ ಪಿಂಚಣಿ ಜಾರಿ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಏಕೀಕೃತ ಪಿಂಚಣಿ ಯೋಜನೆ ಬಗ್ಗೆ ಸಿಎಸ್ ಷಡಾಕ್ಷರಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಹಳೆಯ ಪೆನ್ಷನ್ ಸಿಸ್ಟಂ ಅನ್ನೇ ಜಾರಿ ತರಬೇಕೆಂದು ಆಗ್ರಹಿಸಿದ್ದಾರೆ. ಎನ್ಪಿಎಸ್ ಸ್ಕೀಮ್ನಲ್ಲಿ ಸುಧಾರಣೆ ತರಲಾಗಿದೆಯಾದರೂ ಓಲ್ಡ್ ಪೆನ್ಷನ್ ಸಿಸ್ಟಂನ ಮಟ್ಟಕ್ಕೆ ಇದು ಶೇ. 60ರಷ್ಟು ಮುಟ್ಟಿದೆ ಎಂಬುದು ಅವರ ಅನಿಸಿಕೆ.