ತನ್ನ ಬಣ್ಣಿಸಬೇಡ
ಹೊತ್ತಿಗೊದಗದ ಮಾತು|
ಹತ್ತುಸಾವಿರ ವ್ಯರ್ಥ|
ಕತ್ತೆ ಕೂಗಿದರೆ ಫಲವುಂಟು|
ಬಹುಮಾತು|
ಕತ್ತೆಗೂ ಕಷ್ಟ ಸರ್ವಜ್ಞ|’
ಈ ಮೇಲಿನ ಸರ್ವಜ್ಞನ ವಚನ ಎಷ್ಟೊಂದು ಅರ್ಥಪೂರ್ಣ. ಮಾತಿಲ್ಲದೆ ಯಾರ ಜೀವನ ನಡೆಯುವುದು ಬಲು ಕಷ್ಟ. ನಮ್ಮ ದೈನಂದಿನ ಬದುಕಿನ ವ್ಯವಸ್ಥೆ ಸುಗಮವಾಗಿ ಮಾಡಿಕೊಳ್ಳಲು ನಾವು ಮಾಡಿಕೊಂಡಿರುವ ಯಾದೃಚ್ಛಿಕ ಧ್ವನಿ ಸಂಕೇತದ ವ್ಯವಸ್ಥೆ ಈ ಮಾತು. ನಮ್ಮ ಅಂತರಂಗ ಬಹಿರಂಗಗಳು ಶುದ್ಧವಾಗಿರಬೇಕಾದರೆ ನಾವು ಯಾವ ಮಾತು ಆಡುತ್ತೇವೆಯೋ ಅದರಂತೆ ನಮ್ಮ ಬದುಕು ಕೂಡ ಇರಬೇಕು.
‘ಮಾತು ಹೇಗಿದ್ದರೆ ಚೆನ್ನಾಗಿರುತ್ತದೆ ಎಂಬುದು ಸರ್ವಜ್ಞನ ವಚನದಿಂದ ತಿಳಿಯುತ್ತದೆ. ಅದೇ ಮಾತು ಅತಿಯಾದರೆ ಕತ್ತೆಗೂ ಕಷ್ಟ ಎಂಬ ಉಕ್ತಿ ಮಾನವ ಜನ್ಮದ ಪ್ರತಿಯೊಬ್ಬನಿಗೂ ಅನ್ವಯ’. ನಮ್ಮತನ ಕುರಿತು ಮತ್ತೊಬ್ಬರ ಮುಂದೆ ಹೇಳುವುದು. ಇನ್ನೊಬ್ಬರಿಂದ ನಮ್ಮನ್ನು ಹೊಗಳಿಸಿಕೊಳ್ಳುವುದು ‘ಆತ್ಮಪ್ರಶಂಸೆ’ ಇದು ಸರಿಯೇ?
ಸ್ವ ಪ್ರಶಂಸೆ ಮನುಷ್ಯನ ಸಹಜ ಪ್ರವೃತ್ತಿಯಾದರೂ ಕೂಡ ಇದು ಅತಿಯಾದರೆ ಇತರರ ನಿಂದನೆಗೆ ಗುರಿಯಾಗುತ್ತದೆ. ‘ಕೋಲ್ಟನ್’ ಎಂಬುವವರು ‘ಹೊಗಳಿಕೆ ವಿಷ ಹಾಕಿದ ಬಹುಮಾನ’ ಎಂದಿದ್ದಾರೆ. ಅಂದರೆ ಇನ್ನೊಬ್ಬರು ನಿಮ್ಮನ್ನು ಹೊಗಳುವ ದೃಷ್ಠಿಕೋನ ಈ ಮಾತಿಗೆ ಅನ್ವಯಿಸುತ್ತದೆ. ಇದು ಅವರ ಸ್ವಾರ್ಥವೂ ಇರಬಹುದು ಅಥವಾ ನಿಸ್ವಾರ್ಥವೂ ಇರಬಹುದು. ಅವರವರ ಭಾವನೆಗಳಿಗೆ ಈ ಮಾತು ಅನ್ವಯ.
ಈ ಆತ್ಮಪ್ರಶಂಸೆ ಅತಿಯಾದರೆ ಮನುಷ್ಯ ತನ್ನತನ ಕಳೆದುಕೊಳ್ಳುತ್ತಾನೆ. ಅವನು ಏನನ್ನು ಮಾಡುತ್ತಿರುವನೋ ಅದನ್ನು ಮರೆತು ಹೊಗಳಿಕೆಯ ಕೇಂದ್ರವಾಗುತ್ತಾನೆ. ತನ್ನನ್ನು ‘ಶ್ರೇಷ್ಠ’ ಎಂದು ಭಾವಿಸುತ್ತಾನೆ. ‘ನಾನು’ ಎಂಬ ‘ಅಹಂ’ ಆತನಲ್ಲಿ ಬರುವುದು. ಹೀಗಾಗಿ ಇದು ಸರಿಯಲ್ಲ.
ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ.
ತನ್ನ ಬಣ್ಣಿಸಬೇಡ|
ಇದಿರ ಹಳಿಯಲು ಬೇಡ|
ಅನ್ಯರಿಗೆ ಅಸಹ್ಯ ಪಡಬೇಡ|
ಇದೇ ಅಂತರಂಗ ಶುದ್ಧಿ|
ಇದೇ ಬಹಿರಂಗ ಶುದ್ಧಿ|
ಇದೇ ನಮ್ಮ ಕೂಡಲ ಸಂಗನೊಲಿಸುವ ಪರಿ ||
ಈ ವಚನ ಎಷ್ಟೊಂದು ಪ್ರಸ್ತುತ. ಹೊಗಳಿ, ಹೊಗಳಿ ಹೊನ್ನ ಶೂಲಕ್ಕೇರಿಸಿದಂತೆ ಎನ್ನುವ ಬಸವಣ್ಣನವರು “ಹೊಗಳಿಕೆ” ಬೇಡ ಎಂದಿರುವರು.ಬಸವಣ್ಣವರು ಹೀಗೆಲ್ಲ ಮಾಡಬೇಡ ಎಂದು ಹೇಳಿರುವರು.ಯಾವುದನ್ನು ಬೇಡ ಎಂದು ಅಂದಿನ ಕಾಲಘಟ್ಟದಲ್ಲಿ ಬಸವಣ್ಣವರು ಹೇಳಿದ್ದಾರೋ ಅದನ್ನು ಹೇಳಿ ಮತ್ತೆ ಮಾಡುವವರು ಈ ವಚನವನ್ನು ಎಷ್ಟರ ಮಟ್ಟಿಗೆ ಅರ್ಥೈಸಿಕೊಂಡಿರಬಹುದು ಎಂದು ಹಲವು ಮಹಾನ್ ವ್ಯಕ್ತಿಗಳ ಮಾತುಗಳನ್ನು ಕೇಳಿದಾಗ ಅನಿಸತೊಡಗುತ್ತದೆ.
ಇತ್ತೀಚಿಗೆ ಓರ್ವ ವ್ಯಕ್ತಿ ಇಲ್ಲಿ ಹೆಸರು ಅಪ್ರಸ್ತುತ. ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ.ಅವರಿಗೆ ನನ್ನದೊಂದು ಪುಸ್ತಕ ಕೊಟ್ಟೆ. ಅದರಲ್ಲಿ ಅವರ ಕುರಿತು ಕೂಡ ಒಂದು ಲೇಖನ ಬರೆದಿದ್ದೆ. ಅವರು ತಮ್ಮ ಬಗ್ಗೆ ನಾನೇನು ಬರೆದಿರಬಹುದು ಎಂದು ತಮ್ಮ ಕುರಿತ ಲೇಖನದ ಪುಟ ತಗೆದು ಓದಿ ನನ್ನ ಬಗ್ಗೆ ಚನ್ನಾಗಿ ಬರೆದಿದ್ದೀರಿ ಎಂದು ಖುಷಿಯಿಂದ ಹೇಳಿದರು.ವೇದಿಕೆಯ ಮೇಲೆ ತಮ್ಮ ಕುರಿತು ಹಾಗೆ ಹೀಗೆ ಎಂದೆಲ್ಲ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು.ಅವರು ವೇದಿಕೆಯಲ್ಲಿ ಮಾತನಾಡುತ್ತಿರುವಾಗ ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ಸ್ನೇಹಿತ “ಇವರನ್ನು ನಮ್ಮ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆಯಲು ಪೋನ್ ಮಾಡಿದಾಗ ಏನು ಹೇಳಿದ್ದರೆ ನಿನಗೆ ಗೊತ್ತಾ.? ಎಂದ. ಆಶ್ಚರ್ಯದಿಂದ ಏನು ಹೇಳಿದರು.ಎಂದೆನು. “ನಾನು ನಿಮ್ಮ ಊರಿಗೆ ಬರಬೇಕಾದರೆ ಟ್ರೆೈನ್ ಬುಕ್ ಮಾಡ್ತಿರೋ. ವಿಮಾನಯಾನ ಟಿಕೀಟು ಬುಕ್ ಮಾಡ್ತಿರೋ ಯಾವ ರೀತಿ ಹೇಳಿ ನಂತರ ಬರುವ ಬಗ್ಗೆ ಯೋಚಿಸುವೆ”ಎಂದಿದ್ದರು.ಎಂದಾಗ ‘ಯಪ್ಪಾ ಇಷ್ಟೊಂದು ಅದ್ದೂರಿ ವ್ಯವಸ್ಥೆಯಿಂದ ಇವರನ್ನು ಕರೆತರಬೇಕಾಗಿತ್ತಾ’.? ಎಂದು ಉದ್ಗರಿಸಿ ಸುಮ್ಮನಾದೆನು.
ನನಗೋ ಅವರ ಬಗ್ಗೆ ತುಂಬ ಗೌರವ. ಕಾರ್ಯಕ್ರಮ ಮುಗಿಯಿತು.ಅವರು ತಮ್ಮ ವಾಸಸ್ಥಳಕ್ಕೆ ಹೊರಟು ಹೋದರು.ಸುಮಾರು ಹದಿನೈದು ದಿನಗಳು ಕಳೆದವು.ಒಂದು ರವಿವಾರ ಸಹಜವಾಗಿ ಅವರಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತ ಪುಸ್ತಕ ಗಮನಿಸಿದಿರಾ,? ಎಂದು ಸಹಜವಾಗಿ ಕೇಳಿದೆನು.ಅವರ ಉತ್ತರ ನಾನು ನಿರೀಕ್ಷಿಸಿರದ ರೀತಿಯಲ್ಲಿ ಬಂದಿತ್ತು. ಯಾವ ವ್ಯಕ್ತಿ ಇವತ್ತು ಶರಣ ತತ್ವಗಳ ಪ್ರಕಾರ ಮಾತನಾಡುತ್ತಾನೋ ತನ್ನ ತಾನು ಹಾಗೆ ಹೀಗೆ ಎಂದು ತನ್ನ ವ್ಯಕ್ತಿತ್ವದ ಮುಖ ದರ್ಶನ ಮಾಡಿಕೊಂಡು ವೇದಿಕೆಯಲ್ಲಿ ಇದ್ದವರ ಜೊತೆ ಮುಗುಳ್ನಗುತ್ತ ಪೋಟೋ ತಗೆಸಿಕೊಂಡು ತನ್ನ ಮನೆಗೆ ಹೋಗುವನೋ ಆತನ ಇನ್ನೊಂದು ಮುಖ ದರ್ಶನ ನನಗಾಗಿತ್ತು.ಆತನ ಆದರ್ಶ ಕುರಿತು ಎರಡು ಕಟು ಸತ್ಯಗಳನ್ನು ನಾನು ಅನುಭವಿಸಿದ್ದೆ. ಆ ಕೂಡಲೇ ಆ ವ್ಯಕ್ತಿಯ ನಂಬರ ತಗೆದು ಬಿಟ್ಟೆನು. ಯಾಕೆ ಇಂತವರು ಸಮಾಜದಲ್ಲಿ ಮುಂಚೂಣಿಯಲ್ಲಿ ಬರುವುದಿಲ್ಲ ಅನ್ನುವುದಕ್ಕೆ ಇದೊಂದು ನಿದರ್ಶನ. ತನ್ನ ಬಣ್ಣಿಸಬೇಡ ಎಂದು ಬಸವಣ್ಣವರು ಹೇಳಿದ್ದು ಅಕ್ಷರಶಃ ಸತ್ಯ. ನಾನು ಹಾಗೆ ನಾನು ಹೀಗೆ ಎಂದೆಲ್ಲ ಮಾತನಾಡುವವರು ಮಾತಿಗಷ್ಟೇ ಸೀಮಿತವಾಗಿದ್ದರೆ ಸಾಲದು. ನುಡಿದಂತೆ ನಡೆಯಬೇಕು.
ಮಹಾಭಾರತದಲ್ಲಿ ಉತ್ತರ ಕುಮಾರನು ಬೃಹನ್ನಳೆಯ ಎದುರು ತನ್ನ ಪೌರುಷವನ್ನೆಲ್ಲ ಹೇಳುವನು. ಕೊನೆಗೆ ಯುದ್ಧ ಭೂಮಿಗೆ ಹೋದಾಗ ಹೇಡಿಯಂತೆ ಓಡಿ ಹೋಗುವನು ಇಲ್ಲಿ ಕೂಡ ‘ಆತ್ಮಪ್ರಶಂಸೆ’ ಅತಿಯಾದಾಗ ಅದರ ಪರಿಣಾಮ ಏನಾಗುತ್ತದೆ ಎಂಬುದು ಕಂಡು ಬಂದಿದೆ.
ಚಿಕ್ಕವರಿಂದ ಹಿಡಿದು ಮುದುಕರವರೆಗೆ ಜನ ‘ನಾನು’ ‘ನನ್ನದು’ ಎಂಬ ಮಾತುಗಳನ್ನಾಡುವುದು ಸಾಮಾನ್ಯ. ತನ್ನ ಬಗೆಗೆ ತನ್ನದೇ ಕಲ್ಪನೆ ತನ್ನನ್ನು ಕುರಿತು ತಾನೇ ಬೆಳೆಸಿಕೊಂಡ ಅಹಮಿಕೆ. ತನ್ನ ದೇಹವನ್ನು ಇತರ ವಸ್ತು ಮತ್ತು ವ್ಯಕ್ತಿಗಳಿಂದ ಬೇರೆಯಾಗಿ ಗುರುತಿಸುವುದು, ತನ್ನ ಕ್ರಿಯೆಗಳನ್ನು ಬೇರೆಯವರ ಕ್ರಿಯೆಗಳಿಂದ ಬೇರೆಯಾಗಿ ಕಾಣುವುದು ಇವು ಎಷ್ಟೋ ಸಲ ಆತ್ಮಪ್ರಶಂಸೆಗೆ ಗುರಿ ಮಾಡುತ್ತವೆ. ಕಾರಣ ಇದು ವ್ಯಕ್ತಿತ್ವವನ್ನು ರೂಪಿಸಬೇಕೇ? ವಿನಃ ವ್ಯಕ್ತಿತ್ವವನ್ನು ಅಧಃಪತನಕ್ಕೆ ತಳ್ಳುವ ಮಟ್ಟಕ್ಕೆ ಇರಬಾರದು.
ಇಂದಿನ ದಿನಗಳಲ್ಲಿ ವ್ಯಕ್ತಿ ಹೊಗಳಿಕೆಯ ಬೆನ್ನು ಹತ್ತುತ್ತಿರುವುದು ವ್ಯಕ್ತಿತ್ವದ ಅಧಃಪತನಕ್ಕೆ ಸೂಚಕವಾಗಿದೆ., ತನ್ನ ತಾ ತಿಳಿದು ಬದುಕುವ ಪ್ರಕ್ರಿಯೆ ತುಂಬ ವಿರಳವಾಗುತ್ತಿದೆ.ಆತ್ಮ ಪ್ರಶಂಸೆ ಎಂದಿಗೂ ಉತ್ತಮವಾದುದನ್ನು ಮಾಡದು.ತನ್ನಷ್ಟಕ್ಕೆ ತಾನು ಪ್ರಾಮಾಣಿಕವಾಗಿ ಬದುಕಿದರೆ ಜನ ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಯಾವಾಗಲೂ ಮಹತ್ವ ಕೊಟ್ಟೇ ಕೊಡುವರು.
ಆತ್ಮಪ್ರಶಂಸೆ ಇಂಥ ಸಂದರ್ಭ ತನ್ನಿಂದ ತಾನೇ ಸಿಗುವುದು.ಅದು ಮುಖಸ್ಥುತಿ ಆಗದೇ ಪ್ರಾಮಾಣಿಕ ಮಾತುಗಳ ಮೂಲಕ ಹೊರಹೊಮ್ಮಿರುತ್ತದೆ. ಭಾರತದ ಪುರಾಣ ಇತಿಹಾಸಗಳನ್ನು ಗಮನಿಸಿದಾಗ ಇಂಥ ವಿಚಾರಗಳಿಗೆ ಸಂಬಂಧಿಸಿದಂತೆ ಅನೇಕ ಘಟನೆಗಳನ್ನು ನಾವು ಕಾಣುತ್ತೇವೆ.ರಾಜ ಮಹಾರಾಜರ ಕಾಲದಲ್ಲಂತೂ “ಬಹುಪರಾಕ್” ಎಂದು ಹೊಗಳಿಸಿಕೊಳ್ಳುವ “ ರಾಜಾಧಿರಾಜ,ಮಹಾಪ್ರತಾಪ.” ಹೀಗೆ ಬಿರುದಾವಳಿಗಳ ಮೂಲಕ ಹೊಗಳಿಕೆಗಳು ಜರುಗುತ್ತಿದ್ದವು.ಅದಕ್ಕೆಂದೇ ಅರಮನೆಯಲ್ಲಿ ರಾಜನ ಆಗಮನವಾಗುವ ಸಂದರ್ಭದಲ್ಲಿ ಹೂಮಳೆಗರೆಯುತ್ತ ರಾಜನನ್ನು ಹೊಗಳುವ ಪರಂಪರೆ ಇತ್ತು. ಇಂದು ಅದನ್ನೇ ತಮ್ಮದೇ ಆದ ಶೈಲಿಯಲ್ಲಿ ಕೆಲವರು ಮಾಡುತ್ತಿರುವುದು.ಆಧುನಿಕ ರಾಜರಾಗುತ್ತಿರುವುದು ಸಾಕ್ಷಿ.ತಮ್ಮನ್ನು ಹೊಗಳಿಸಿಕೊಳ್ಳಲೆಂದೇ ಹಲವು ವಿಚಿತ್ರ ಕಾರ್ಯಗಳಲ್ಲಿ ತೊಡಗಿದ್ದು ಕಂಡು ಬರುತ್ತಿದೆ.ಜನರು ಜಯಕಾರ ಹಾಕಲೆಂದು ಬಸ್,ಲಾರಿಗಳಲ್ಲಿ.ವಿವಿಧ ವಾಹನಗಳಲ್ಲಿ ಕರೆತಂದು ತಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳುವವರು ಇಂದಿನ ದಿನಗಳಲ್ಲಿ ಹೆಚ್ಚಿದ್ದಾರೆ. ಅದು ಶಾಶ್ವತವಲ್ಲ ತಮ್ಮ ಕರ್ಮಾನುಸಾರ ಜಯಕಾರ ಪಡೆದರೆ ಜೀವನ ಸಾರ್ಥಕ. ಅದರ ಹಿಂದಿನ ಮರ್ಮ ಅರಿತರೆ ತಾವು ಪ್ರಾಮಾಣಿಕವಾಗಿ ಬದುಕಿದರೆ ಅಂತಹ ಬಹು ಪರಾಕ್ ಅವಶ್ಯಕತೆ ಇಲ್ಲ ಎಂಬುದನ್ನು ಮನಗಾಣಬಹುದು. ಇಲ್ಲವಾದರೆ ಅದರಿಂದ ಬೇರೆಯವರಿಗೆ ಕಿರಿಕಿರಿಯಾಗುವುದಷ್ಟೇ ಅಲ್ಲ ಹಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೂಡ ಅನುಕೂಲವಾಗುವುದು.
ಯಾವಾಗ ಐಹಿಕ ಸುಖದ ಲಾಲಸೆಗಳನ್ನು ಕಳಚಿಕೊಳ್ಳುತ್ತ ನಿಸರ್ಗ ತತ್ವವನ್ನು ಅರಿತುಕೊಳ್ಳುತ್ತ ಬಯಕೆಯಿಂದ ಬಯಲಿನೆಡೆಗೆ ಸಾಗುತ್ತೇವೆಯೋ ಆಗ ಮನಗೆ ಸುಳ್ಳು ಮಾತನಾಡುವವರನ್ನು ಕಂಡರೆ ಅಸಹ್ಯವೆನಿಸತೊಡಗುತ್ತದೆ.ಕಳವು ಕೆಟ್ಟದ್ದು ಅನಿಸತೊಡಗುತ್ತದೆ.ಸ್ವರತಿ ಬೇಡವಾದ ವಿಷಯವಾಗುತ್ತದೆ.ಬಸವಣ್ಣನವರ ಮೇಲಿನ ವಚನ ನಮ್ಮ ಅಂತರಂಗ ಬಹಿರಂಗ ನಿರ್ಮಲವಾಗಿರುವ ಸ್ಥಿತಿಯನ್ನು ನಾವು ತಲುಪಿದಾಗ ಮಾತ್ರ ಸಾಧ್ಯವಾಗುತ್ತದೆ.ಸಲ್ಲದ ಸಂಗತಿಗಳನ್ನು ನಾವು ಬಿಟ್ಟಾಗ ಮಾತ್ರ ಇದು ಸಾಧ್ಯ.
ವೈ.ಬಿ.ಕಡಕೋಳ
(ಶಿಕ್ಷಕರು)
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕ ಬೆಳಗಾವಿ ಜಿಲ್ಲೆ
೯೪೪೯೫೧೮೪೦೦.೮೯೭೧೧೧೭೪೪೨