ಶಾಲಾ ಅವಧಿಯಲ್ಲಿ ಮೊಬೈಲ್ ಫೋನ್ ಬಳಕೆ …ಶಿಕ್ಷಕಿಯನ್ನು ಅಮಾನತ್ ಮಾಡಿ ಆದೇಶ ಮಾಡಿದ್ರು DDPI..
ಮಾಗಡಿ: ಮಾಗಡಿ ತಾಲೂಕಿನ ಕಾಗಿಮಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸಹೋದ್ಯೋಗಿಗಳೊಂದಿಗೆ ಆಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿ.ಸಿ. ಬಸವರಾಜೇಗೌಡ ಆದೇಶ ಹೊರಡಿಸಿದ್ದಾರೆ.
ಪರಿಮಳ ಅಮಾನತುಗೊಂಡ ಶಿಕ್ಷಕಿಯಾಗಿದ್ದಾರೆ. ಸಹೋದ್ಯೋಗಿಗಳೊಂದಿಗೆ ಅಸಭ್ಯವಾಗಿ ವರ್ತನೆ, ಅಶ್ಲೀಲ ಪದ ಬಳಕೆ, ಶಾಲಾ ಅವಧಿಯಲ್ಲಿ ಮೊಬೈಲ್ ಬಳಕೆ, ಅಡುಗೆ ಸಿಬ್ಬಂದಿಯೊಂದಿಗೆ ಜಗಳ ಮಾಡಿದ್ದಾರೆನ್ನಲಾಗಿದೆ. ಇತ್ತೀಚೆಗೆ ಶಾಲೆಯ ಹಿಂದಿ ಶಿಕ್ಷಕಿ ಯಶೋದಮ್ಮ ಮೇಲೆ ರೌಡಿಯಂತೆ ವರ್ತಿಸಿ ಅವಾಚ್ಯ ಪದಗಳಿಂದ ನಿಂದಿಸಿ ಕೈಗೆ ಪೆಟ್ಟು ಮಾಡಿದ್ದ ಹಿನ್ನೆಲೆಯಲ್ಲಿ ಯಶೋದಮ್ಮ 10 ದಿನ ಚಿಕಿತ್ಸೆ ಪಡೆದಿದ್ದರು.
ಈ ಕಾರಣಗಳಿಂದ ಪರಿಮಳ ಅವರ ವಿರುದ್ಧ ಎಸ್ಡಿಎಂಸಿ ಸದಸ್ಯರು, ಪೋಷಕರು, ಕಾಗಿಮಡು ಗ್ರಾಮಸ್ಥರು ಕ್ರಮಕ್ಕೆ ಒತ್ತಾಯಿಸಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಮಾಗಡಿ ಬಿಇಒ ತನಿಖೆ ನಡೆಸಿ ವರದಿ ನೀಡಿದ್ದು, ಅನುಚಿತವಾಗಿ ಶಿಕ್ಷಕಿ ಪರಿಮಳ ವರ್ತಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕ್ರಮಕ್ಕೆ ಶಿಫಾರಸು ಮಾಡಿದ್ದರು. ಹೀಗಾಗಿ ಡಿಡಿಪಿಐ ಬಸವರಾಜೇಗೌಡ ಅವರು ಶಿಕ್ಷಕಿ ಪರಿಮಳ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.