ಅಮೇರಿಕಾದ ಮಿನ್ನೇಸೋಟ ಓದುಗರ ಕಟ್ಟೆ ಆಶ್ರಯದಲ್ಲಿ ‘ಸತ್ಕುಲ ಪ್ರಸೂತರು’ ಕಾದಂಬರಿ ಲೋಕಾರ್ಪಣೆ.
‘ಸತ್ಕುಲ ಪ್ರಸೂತರು’ ಶ್ರೇಣಿಕೃತ ಸಮಾಜದ ಕಥನ
ಹುಬ್ಬಳ್ಳಿ : ಅನಿವಾಸಿ ಭಾರತೀಯರಾಗಿರುವ ಸಾಹಿತಿ ಡಾ. ಗುರುಪ್ರಸಾದ ಕಾಗಿನೆಲೆ ಅವರ ನೂತನ ಕಾದಂಬರಿ ‘ಸತ್ಕುಲ ಪ್ರಸೂತರು’ ಶ್ರೇಣಿಕೃತ ಸಮಾಜ ವ್ಯವಸ್ಥೆಯ ಮನಸ್ಥಿತಿಯನ್ನು ಉಗ್ಗಡಿಸುವ ಕಥನವಾಗಿದೆ ಎಂದು ಬಳ್ಳಾರಿಯ ಹಿರಿಯ ಸಂಶೋಧಕ, ಸಾಹಿತಿ ಡಾ. ಚಿಕ್ಕ್ಯಾಟೆಮಠದ ವೀರಭದ್ರಯ್ಯ ಪ್ರತಿಪಾದಿಸಿದರು.
ಅವರು ಅಮೇರಿಕಾದ ಮಿನ್ನೆಸೋಟ ನಗರದ ಕನ್ನಡ ಓದುಗರ ಕಟ್ಟೆ ಹಮ್ಮಿಕೊಂಡಿದ್ದ ಕನ್ನಡ ಪುಸ್ತಕಾವಲೋಕನ ಮತ್ತು ಲೋಕಾರ್ಪಣೆ ಸಮಾರಂಭದಲ್ಲಿ ‘ಸತ್ಕುಲ ಪ್ರಸೂತರು’ ಕೃತಿ ಕುರಿತು ಮಾತನಾಡುತ್ತಿದ್ದರು. ‘ಸತ್ಕುಲ ಪ್ರಸೂತರು’ ಕೃತಿಯ ಶೀರ್ಷಿಕೆಯೇ ಸೂಚಿಸುವ ಹಾಗೆ ಉಚ್ಛ ಕುಲದಲ್ಲಿ ಮತ್ತು ನಿಮ್ನ ವರ್ಗದಲ್ಲಿ ಜನಿಸಿದವರ ಜೊತೆಗೆ ನಡೆದ ಅಂತರ್ಜಾತಿಯ ವಿವಾಹದ ಕಥಾವಸ್ತುವನ್ನು ಹೊಂದಿದೆ. ಕಾದಂಬರಿಯಲ್ಲಿ ಚಿತ್ರಿತವಾದ ಮೂರು ಧರ್ಮಗಳ ಅಂತರಂಗ-ಬಹಿರಂಗಗಳ ನಡುವಿನ ಸಂಘರ್ಷದ ಚಿತ್ರಣ ಇಲ್ಲಿ ಎದ್ದು ಕಾಣುತ್ತದೆ. ಭಾರತದ ಹೊರಗೆ ಕಟ್ಟಿಕೊಂಡ ಬದುಕಿನಲ್ಲಿ ನುಸುಳಿಕೊಂಡಿರಬಹುದಾದ ವಿಭಿನ್ನ ಧರ್ಮಗಳ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಆಚಾರ-ವಿಚಾರಗಳ ತೌಲನಿಕ ವಿದ್ಯಾಮನದ ವಿಶ್ಲೇಷಣೆ ಈ ಕಾದಂಬರಿಯಲ್ಲಿದೆ ಎಂದರು.
ಇನ್ನೋರ್ವ ಅತಿಥಿಯಾಗಿದ್ದ ಲೇಖಕ ಸ್ವಾಮಿ ಬೇಗೂರ್ ಮಾತನಾಡಿ, ‘ಸತ್ಕುಲ ಪ್ರಸೂತರು’ ಒಂದು ವಿಭಿನ್ನವಾದ ಕಾದಂಬರಿ. ಇದರಲ್ಲಿ ವಿವಿಧ ಧರ್ಮಗಳ ನಡುವಿನ ಸೂಕ್ಷ್ಮಸಂವೇದನೆಯ ಸಂಗತಿಗಳಿವೆ. ಮನುಷ್ಯ ಜಾತಿ, ಧರ್ಮ, ವರ್ಣ, ವರ್ಗದ ಚೌಕಟ್ಟನ್ನು ಮೀರಿ ಓರ್ವ ಶ್ರೇಷ್ಠ ಮನುಜನಾಗಿ ‘ಮಾನವ ಧರ್ಮ’ವನ್ನು ಎತ್ತಿ ಹಿಡಿಯಬೇಕೆನ್ನುವ ಅಂಶವು ಓದುಗರ ಅನುಭವಕ್ಕೆ ಬರುತ್ತದೆ ಎಂದರು.
ಕನ್ನಡ ಓದುಗರ ಕಟ್ಟೆಯ ಹರೀಶ ಕೃಷ್ಣಪ್ಪ ಮಾತನಾಡಿ, ಇಲ್ಲಿ ಲೇಖಕರೇ ಒಂದು ಪಾತ್ರವಾಗಿ , ಆ ಪಾತ್ರವೇ ಸಂಪೂರ್ಣ ಕಾದಂಬರಿಯ ನಿರೂಪಣೆಯನ್ನು ಮಾಡುತ್ತದೆ. ಓದಿದಷ್ಟೂ ಅದರಲ್ಲಿರುವ ವಿಷಯಗಳು , ಪಾತ್ರಗಳು ಹಾಗು ಸನ್ನಿವೇಶಗಳು ಗಮನಸೆಳೆಯುತ್ತವೆ ಎಂದರು.
ಕಾದಂಬರಿಯ ಲೇಖಕ ಡಾ. ಗುರುಪ್ರಸಾದ್ ಮಾತನಾಡಿ ‘ಸತ್ಕುಲ ಪ್ರಸೂತರು’ ಸಂಪೂರ್ಣ ಕಾಲ್ಪನಿಕ ಕಾದಂಬರಿ. ಇಲ್ಲಿ ಲೇಖಕನೇ ನಿರೂಪಕನಾಗಿ ಕಥೆಯನ್ನು ಕೊನೆಯವರೆಗೆ ತೆಗೆದುಕೊಂಡು ಹೋಗುತ್ತಾನೆ. ಓದುಗನ ತನ್ಮಯತೆಯಲ್ಲಿ ಅದು ತನ್ನದೇ ಕಥೆ ಎಂಬ ಅನುಭವವಾಗುತ್ತದೆ. ಕಾದಂಬರಿಯ ಎಲ್ಲ ಪಾತ್ರ ಮತ್ತು ಸನ್ನಿವೇಶಗಳನ್ನು ಕಾಲ್ಪನಿಕವಾಗಿ ಹೆಣೆಯಲಾಗಿದೆ ಎಂದರು.
ಮಿನ್ನೆಸೊಟ ಸಂಗೀತ ಕನ್ನಡ ಕೂಟದ ಅಧ್ಯಕ್ಷ ರಮೇಶ್ ಮುನಿಸ್ವಾಮಿ ಮಾತನಾಡಿದರು. ಅನಿತಾ ಮೋಹನ್ ಮಠದ ನಿರೂಪಿಸಿದರು. ಕನ್ನಡ ಬಳಗದ ಅಧ್ಯಕ್ಷ ಅರವಿಂದ ಝಳಕಿ ಅವರು ಲೇಖಕರುಗಳಾದ ಡಾ. ಗುರುಪ್ರಸಾದ್ ಕಾಗಿನೆಲೆ ಮತ್ತು ಡಾ. ಚಿಕ್ಕ್ಯಾಟೆಮಠದ ವೀರಭದ್ರಯ್ಯ ಅವರನ್ನು ಸನ್ಮಾನಿಸಿದರು. ಕನ್ನಡ ಓದುಗರ ಕಟ್ಟೆ ಹಿರಿಯ ಸದಸ್ಯ ಮೋಹನ್ ಮಠದ ವಂದಿಸಿದರು. ಉಮಾ ಹರೀಶ್ ಕೃಷ್ಣಪ್ಪ, ನಳಿನಿ ಸ್ವಾಮಿ ಬೇಗೂರು, ಅನಿತಾ ಮೋಹನ ಮಠದ, ಆಶೀಶ್ ಲೀಲಾ ಕುಂಬಾರ, ಪದ್ಮನಾಭನ್ ಗೋವಿಂದನ್, ಸುರೇಶ್ ನಿಜಗುಣ, ದಿನೇಶ್ ಪಟ್ಟಣಶೆಟ್ಟಿ, ಮಮತಾ ಸುರೇಶ್ ಪೂಜಾರಿ ಇದ್ದರು.