‘ಅರಿತು ಕಲಿಸಿದಾಗಲೇ ಕಲಿವಿನ ಫಲ’
ಧಾರವಾಡ : ಶಿಕ್ಷಕರು ತರಗತಿಯ ಪಠ್ಯದ ವಿಷಯಗಳನ್ನು ನಿಖರ ನೆಲೆಯಲ್ಲಿ ಅರಿತು ಕಲಿಸಿದಾಗಲೇ ವಿದ್ಯಾರ್ಥಿಗಳಲ್ಲಿ ಕಲಿವಿನ ಫಲದ ಸಂವರ್ಧನೆ ಸಾಧ್ಯ ಎಂದು ಕನ್ನಡದ ಹಿರಿಯ ನಿಯತಕಾಲಿಕೆ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಹೇಳಿದರು.
ಅವರು ಶನಿವಾರ ತಾಲೂಕಿನ ಅಮ್ಮಿನಬಾವಿ ಗ್ರಾಮದ ಸುಶಿಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಅಮ್ಮಿನಬಾವಿ ಸಮೂಹ ಸಂಪನ್ಮೂಲ ಕೇಂದ್ರದ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯಾ ನಂತರದ ಎಲ್ಲ ಶಿಕ್ಷಣ ಆಯೋಗಗಳು ಶಿಕ್ಷಕರು ‘ಅರಿತು ಕಲಿಸೋಣ’ ಎಂಬ ಸಂಕಲ್ಪ ಮಾಡಬೇಕೆಂದು ಸೂಚಿಸುತ್ತವೆ. ಶಿಕ್ಷಕ-ಶಿಕ್ಷಕಿಯರು ಬೋಧನಾ ವಿಷಯಗಳ ಆಳಕ್ಕಿಳಿದು ಪಡೆದುಕೊಳ್ಳುವ ಜ್ಞಾನದಿಂದ ತರಗತಿಗಳಲ್ಲಿ ಕ್ರಿಯಾಪ್ರೇರಕ ಬೋಧನೆ ಸಾಧ್ಯವಾಗುತ್ತದೆ ಎಂದರು.
‘ಅರಿತು ಕಲಿಸೋಣ’ ಎಂಬ ಮೂಲ ಪರಿಕಲ್ಪನೆಯಲ್ಲಿಯೇ ಸಿ.ಆರ್.ಸಿ.ಗಳ ರಚನೆಯಾಗಿದ್ದು, ಹಿಂದಿನ ಡಿ.ಪಿ.ಇ.ಪಿ. ಯೋಜನೆಯಿಂದ ಮೊದಲ್ಗೊಂಡು ಈ ತನಕ ಶಾಲಾ ಶಿಕ್ಷಣ ಇಲಾಖೆ ಅನುಷ್ಠಾನಗೊಳಿಸಿರುವ ಯೋಜನೆಗಳ ಹಿಂದಿನ ಮೂಲ ಆಶಯವೂ ಸಹ ಇದೇ ಆಗಿದೆ ಎಂದೂ ಯರಗಂಬಳಿಮಠ ಹೇಳಿದರು.
ಶ್ರೀಗುರುಶಾಂತಲಿಂಗ ಶಿವಾಚಾರ್ಯ ಶಿಕ್ಷಣ ಪ್ರತಿಷ್ಠಾನದ ಸದಸ್ಯ ಬಿ.ಸಿ. ಕೊಳ್ಳಿ ಅತಿಥಿಯಾಗಿದ್ದರು. ಮುಖ್ಯಾಧ್ಯಾಪಕಿ ಮಂಜುಳಾ ದೊಡಮನಿ ಅಧ್ಯಕ್ಷತೆವಹಿಸಿದ್ದರು. ಸಿ.ಆರ್.ಪಿ. ಬಸವರಾಜ ಕುರಗುಂದ ಸ್ವಾಗತಿಸಿದರು. ಶಿಕ್ಷಕ ಎಂ. ಆಂಜನೇಯ ನಿರೂಪಿಸಿದರು. ಟಿ. ಎಂ. ದೇಸಾಯಿ, ವಿನಾಯಕ ಹಿರೇಮಠ ಇತರರು ಇದ್ದರು. ಶಿಕ್ಷಕಿ ಲೀಲಾ ಬಾಗಲಕೋಟ ವಂದಿಸಿದರು. ಸಭೆಯಲ್ಲಿ 4 ರಿಂದ 8ನೇ ತರಗತಿಯ ಕೋರ್ ವಿಷಯಗಳ ಚಿಂತನೆಯಲ್ಲಿ ವಿವಿಧ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ಪಾಲ್ಗೊಂಡಿದ್ದರು.
—————————————-