ಮುನವಳ್ಳಿ ದೇಗುಲಗಳಲ್ಲಿ ಶ್ರಾವಣ ಸ್ವಾತಂತ್ರ್ಯ ದಿನ ದ ಸಂಭ್ರಮ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇತಿಹಾಸ ಪ್ರಸಿದ್ದ ಸ್ಥಳ ಮುನವಳ್ಳಿ. ಇಂದು ಆಗಸ್ಟ ೧೫ ಸ್ವಾತಂತ್ರ್ಯ ದಿನದ ಸಂಭ್ರಮ. ಈ ಸಂಭ್ರಮವನ್ನು ಮುನವಳ್ಳಿಯ ದೇಗುಲಗಳಲ್ಲಿ ಶ್ರಾವಣದ ವಿಶೇಷ ಪೂಜೆಯೊಂದಿಗೆ ಆಚರಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಇಲಾಖೆಯ ಸ್ವಾತಂತ್ರ್ಯ ದಿನವನ್ನು ಮುಗಿಸಿದಕೊಂಡು ಈ ದಿನ ಮುನವಳ್ಳಿಯ ದಾನಮ್ಮ ದೇವಿಗೆ ವಿಶೇಷ ಅಭಿಷೇಕ ಪೂಜೆಯನ್ನು ಮಾಡಲು ಕಳೆದ ವಾರ ಅರ್ಚಕರಿಗೆ ಹೇಳಿದ್ದೆ ಆ ಪ್ರಕಾರ ದಾನಮ್ಮ ದೇವಾಲಯಕ್ಕೆ ಬರುವಷ್ಟರಲ್ಲಿ ಮೊದಲು ವಸ್ತಿ ವೀರಭದ್ರ ದೇವರ ದೇವಾಲಯಕ್ಕೆ ಹೋದಾಗ ವೀರಭದ್ರ ದೇವರ ವಿಶೇಷ ಶ್ರಾವಣ ಸ್ವಾತಂತ್ರ್ಯ ಪೂಜೆ ಗಮನ ಸೆಳೆಯಿತು ದೇವರಿಗೆ ನಮಸ್ಕರಿಸಿ ಮುಂದೆ ಬರುವಷ್ಟರಲ್ಲಿ ಅರ್ಚಕ ವೇದಮೂರ್ತಿ ವೀರಯ್ಯ ಮಲ್ಲಿಕಾರ್ಜುನ ಮಠಪತಿ ಹಾಗೂ ವೇದಮೂರ್ತಿ ಶಿವಕುಮಾರ ಶ್ರೀಶೈಲ ಮಠಪತಿಯವರು ಭೇಟಿಯಾದರು.ಅವರ ಈ ಅಭಿಮಾನದ ಪೂಜೆ ಕುರಿತು ಮಾತನಾಡಿಸಿ ದಾನಮ್ಮ ದೇವಾಲಯಕ್ಕೆ ಬಂದೆನು.ಶಾಸ್ತ್ರಿಗಳಾದ ಈರಯ್ಯ ಹಾಗೂ ಕಾರ್ತಿಕ ಅವರ ಪೂಜೆ ಬಹಳ ವೈಶಿಷ್ಟ್ಯತೆಯಿಂದ ಕೂಡಿತ್ತು. ಅಭಿಷೇಕ ಪ್ರಸಾದ ತಗೆದುಕೊಂಡು ಮಾರ್ಗ ಮಧ್ಯದಲ್ಲಿ ಮಲಪ್ರಭಾ ನದಿ ತೀರದಲ್ಲಿರುವ ವಿಠೋಭಾ ಮಂದಿರಕ್ಕೆ ಪ್ರವೇಶಿಸಿದೆ. ನಿನ್ನೆ ಸುಧಾಕರ ರೇಣಕೆಯವರು ಪೋನ್ ಕರೆ ಮಾಡಿ ಬಂದು ಹೋಗಲು ತಿಳಿಸಿದ್ದರು.ವಿಠೋಭಾ ಹಾಗೂ ರುಕ್ಮಿಣಿಯವರ ಭವ್ಯ ಮೂರ್ತಿಗಳು ಕೂಡ ಶ್ರಾವಣ ಸ್ವಾತಂತ್ರ್ಯ ಪೂಜಾಲಂಕಾರದಲ್ಲಿ ಕಂಗೊಳಿಸುತ್ತಿದ್ದರು.ಮೋಹನ್ ಅಮಠೆ ಹಾಗೂ ಅವರ ಮಕ್ಕಳ ಈ ವಿಶೇಷ ಸೇವೆಯನ್ನು ಸ್ಮರಿಸುತ್ತ ಮೋಹನ ಅಮಠೆಯವರಿಗೆ ಈ ಪೂಜೆಯ ಅಲಂಕಾರ ಕುರಿತು ಅಭಿನಂದಿಸಿದೆ.
ಮನವಳ್ಳಿ ಐತಿಹಾಸಿಕ ಕಾಲದಿಂದಲೂ ಋಷಿ ಮುನಿಗಳ ಪರಂಪರೆಯ ಮೂಲಕ ದೇವಗಿರಿ ಯಾದವ ಕಾಲದಲ್ಲಿ ಜೀರ್ಣೋದ್ದಾರಗೊಂಡ ಪಂಚಭೂತ ತತ್ವಗಳನ್ನು ಹೊಂದಿದ ಪಂಚಲಿಂಗೇಶ್ವರ ದೇವಾಲಯ.ಕೈವಲ್ಯಾಶ್ರಮ ಸ್ವಾಮಿ ಮಠ ಪರಂಪರೆ. ವಿಷ್ಣುತೀರ್ಥರ ಆರಾಧನೆ ತಾಣವಾಗಿ ಹಲವು ವೈಶಿಷ್ಟö್ಯಗಳನ್ನು ಹೊಂದಿದ ಹಾಗೆಯೇ ಸ್ವಾತಂತ್ರ್ಯ್ಯ ಹೋರಾಟದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರ ಪ್ರೋತ್ಸಾಹದ ಮೂಲಕ ಹೋರಾಟದ ನೆಲೆಯಲ್ಲಿ ಮಿಂದ ಮುನವಳ್ಳಿ ತಿಲಕರು ತಮ್ಮ ಹೋರಾಟದ ಫಲವಾಗಿ ಬ್ರಿಟಿಷರಿಗೆ ಸಂಶಯ ಮೂಡದ ಹಾಗೆ ಶಿವಾಜಿ ಉತ್ಸವ,ಗಣೇಶ ಉತ್ಸವ ಹಬ್ಬಗಳ ಆಚರಿಸುವ ಮೂಲಕ ಸ್ವಾತಂತ್ರ್ಯ ಹೋರಾಟ ನಡೆಸಿದರು. ೧೯೩೧ ರಲ್ಲಿ ಮುನವಳ್ಳಿಯಲ್ಲಿ ಗಜಾನನ ಉತ್ಸವ ಆಚರಿಸಿ ಗಜಾನನ ಮೂರ್ತಿಗೆ ಗಾಂಧಿ ಟೋಪಿಯನ್ನು ಹಾಕಿದರು.ಈ ಉತ್ಸವಕ್ಕೆ ಕರ್ನಾಟಕದ ಗಾಂಧಿಯೆಂದು ಹೆಸರುವಾಸಿಯಾದ ಹರ್ಡೇಕರ ಮಂಜಪಪ್ಪನವರು ಆಗಮಿಸಿದ್ದರು. ಇಂದಿಗೂ ಮುನವಳ್ಳಿಯಲ್ಲಿ ಗಾಂಧಿಚೌಕ ಗಣಪತಿ ಇರುವುದು ವಿಶೇಷ,
ಈ ರೀತಿ ತಿಲಕ್ರ ಸ್ವಾತಂತ್ರö್ಯ ಹೋರಾಟದ ಪ್ರಭಾವ ಇಲ್ಲಿನ ಜನರ ಮೇಲಾಯಿತು. ನಂತರದ ದಿನಗಳಲ್ಲಿ ಇದು ಉಗ್ರ ಸ್ವರೂಪ ಪಡೆಯುತ್ತ ಸಾಗಿತು.ಉಪ್ಪಿನ ಸತ್ಯಾಗ್ರಹವು ಸ್ವಾತಂತ್ರ್ಯ ಚಳುವಳಯ ಪ್ರಥಮ ಹಂತವಾಗಿದ್ದು ಸ್ವಾತಂತ್ರ್ಯ ದೊರೆಯುವವರೆಗೂ ಈ ಸತ್ಯಾಗ್ರಹ ವಿವಿಧ ರೂಪಗಳಲ್ಲಿ ಮುಂದುವರಿಯಿತು.ಈ ಉಪ್ಪಿನ ಸತ್ಯಾಗ್ರಹವನ್ನು ಮುನವಳ್ಳಿಯಲ್ಲಿ ಚನ್ನಬಸವ ಮರಿದೇವರು (ಸೋಮಶೇಖರ ಮಠದ ಹಿಂದಿನ ಪೂಜ್ಯರು) ಜಾಹೀರ ಸಭೆಯಲ್ಲಿ ಉಪ್ಪು ಲೀಲಾವು ಮಾಡಿದರು.ಅದನ್ನು ಶಿವಪ್ಪ ಬೆಳವಲಗಿಡದ.ಕಿಲ್ಲೇದಾರ.ಚಂದ್ರವ್ವ ನೀಲಗಾರ ಮುಂತಾದವರು ಕೊಂಡು ಕೊಂಡರು. ಇದಕ್ಕಾಗಿ ಬ್ರಿಟಿಷರು ಇವರನ್ನು ಬಂಧಿಸಿದರು,ಬಂಧಿತರಾದ ಸ್ವಾಮಿಗಳನ್ನು ಸನ್ಮಾನ ಮಾಡಿ ಕಳುಹಿಸಿದರು.
ಇನ್ನು ಡಾ:ಸರೋಜನಿ ಚವಲಾರ ಇವರ “ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು” ಸಂಶೋಧನಾ ಪ್ರಬಂಧದಲ್ಲಿ ಶ್ರೀ ಶಿವಮೂರ್ತಯ್ಯ ಪರವಯ್ಯಸ್ವಾಮಿ ಹಿರೇಮಠ ಇವರ ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ತಿಳಿಸಿರುವರು. ಶಿವಮೂರ್ತಯ್ಯ ಸ್ವಾಮಿಗಳು ೨೬-೮-೧೯೧೩ ರಲ್ಲಿ ಮುನವಳ್ಳಿಯಲ್ಲಿ ಜನಿಸಿದರು.೧೯೨೮-೨೯ ರಲ್ಲಿ ಡಾಃಜೋಶಿ, ಪಾಶ್ಚಾಪೂರ ಇವರಲ್ಲಿಯೂ.೧೯೩೨ ರಲ್ಲಿ ಸ್ವಪ್ರಯತ್ನದಿಂದ ಹಾಗೂ ಡಾಃಎನ್.ಎಸ್.ಹರ್ಡಿಕರ ಇವರಲ್ಲಿಯೂ ಮಲ್ಲಪ್ಪ ಕೋಳೂರ.ಆರ.ಬಿ.ಯಡವಿ. ಚನ್ನಪ್ಪ ವಾಲಿ.ಎಸ್.ಆರ್.ಕಂಠಿ.ತಲ್ಲೂರು ರಾಯನಗೌಡರು ಇವರೆಲ್ಲರ ದುರೀಣತ್ವದಲ್ಲಿ ಮತ್ತು ಮಹಾಲಿಂಗಪ್ಪ ಮುರಗೋಡ ಇವರೆಲ್ಲರ ಸಂಗಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.ಇತಿಹಾಸದ ಘಟನೆಗಳನ್ನು ನೆನೆಪಿಗೆ ತಂದರೆ ಮುನವಳ್ಳಿ ಸ್ವಾತಂತ್ರ್ಯ ಹೋರಾಟದ ಪುಟಗಳದ್ದೇ ಒಂದು ಅಧ್ಯಾಯವಾಗುತ್ತದೆ. ಈ ಘಟನೆಗಳನ್ನು ನೆನಪಿಸುತ್ತ ಶ್ರಾವಣ ಮಾಸದಲ್ಲಿ ಮುನಿ ಪರಂಪರೆ ಹೊಂದಿದ ಮುನವಳ್ಳಿಯ ದೇಗುಲಗಳಲ್ಲಿ ವಿಶೇಷ ಪೂಜೆ ಜರುಗಿರುವುದನ್ನು ನೋಡಿದಾಗ ಸ್ವಲ್ಪ ಮಟ್ಟಿಗೆ ಇತಿಹಾಸವನ್ನು ಅವಲೋಕನ ಮಾಡುವುದು ಸೂಕ್ತ ಎನಿಸಿತು. ಮುನವಳ್ಳಿಯ ಪ್ರತಿಯೊಂದು ದೇಗುಲಗಳಲ್ಲಿನ ಅರ್ಚಕರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ಸ್ವಾತಂತ್ರ್ಯ ದ ಹಣತೆಯನ್ನು ಬೆಳಗಿಸಿದ್ದು ನಿಜಕ್ಕೂ ಅಭಿನಂದನಾರ್ಹ ಈ ದಿಸೆಯಲ್ಲಿ ಮುನವಳ್ಳಿ ಸಮಸ್ತ ದೇಗುಲಗಳ ಅರ್ಚಕರುಗಳಿಗೆ ಧನ್ಯವಾದಗಳನ್ನು ಅರ್ಪಿಸುವೆ.ಉದಾಹರಣೆಗಾಗಿ ದಾನಮ್ಮ ದೇವಾಲಯ.ವೀರಭದ್ರೇಶ್ವರ ದೇವಾಲಯ.ವಿಠೋಭಾ ಮಂದಿರಗಳ ಪೂಜೆಯನ್ನು ಇಲ್ಲಿ ನೀಡಿರುವೆ.ಸರ್ವರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು
ವೈ.ಬಿ.ಕಡಕೋಳ
ಶಿಕ್ಷಕರು
ಮುನವಳ್ಳಿ