ರೆಡ್ ಹ್ಯಾಂಡ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ…
ನಂತರ ಲಂಚದ ಸಮೇತ ಪರಾರಿಯಾದ ಅಧಿಕಾರಿ…
ಅಧಿಕಾರಿಯನ್ನು ಹಿಡಿಯಲು ಬೆನ್ನತ್ತಿರುವ ಲೋಕಾಯುಕ್ತ ಪೋಲಿಸರು….
ದೇವನಹಳ್ಳಿ: ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ದೇವನಹಳ್ಳಿ ಕಂದಾಯ ಇಲಾಖೆಯ ಸಿಬ್ಬಂದಿಯೊಬ್ಬ ಬುಧವಾರ ಲೋಕಾಯುಕ್ತ ಪೊಲೀಸರನ್ನು ಕಂಡ ತಕ್ಷಣ ಹಣದ ಸಮೇತ ಪರಾರಿಯಾಗಿದ್ದಾನೆ.
ಲೋಕಾಯುಕ್ತ ಪೊಲೀಸರು ಆತನ ಬೆನ್ನಟ್ಟಿದ್ದರೂ ಅವರ ಕೈಗೂ ಸಿಗದೆ ತಪ್ಪಿಸಿಕೊಂಡು ಓಟ ಕಿತ್ತಿದ್ದಾನೆ.
ಆರೋಪಿಗಾಗಿ ಹುಡುಕಿ ವಾಪಸ್ ಆದ ಪೊಲೀಸರು ರಾತ್ರಿ 8 ಗಂಟೆಯವರೆಗೂ ಕಂದಾಯ ಇಲಾಖೆ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿದ ಅಗತ್ಯ ದಾಖಲೆಗಳನ್ನು ಕಲೆ ಹಾಕಿಕೊಂಡು ಹೋದರು.
ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆ ಬಳಿ ಪೆಟ್ರೋಲ್ ಬಂಕ್ ಆರಂಭಿಸಲು ಚಿಕ್ಕಬಳ್ಳಾಪುರದ ಜಯಸೂರ್ಯ ಎಂಬುವರು ಅಗತ್ಯ ಪರವಾನಗಿ ಪಡೆಯಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಕಂದಾಯ ಇಲಾಖೆಯ ವಿಷಯ ನಿರ್ವಾಹಕ ಅಧಿಕಾರಿ ಮಹೇಶ್, ಜಯಸೂರ್ಯ ಅವರಿಗೆ ₹2.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಜಯಸೂರ್ಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಜಯಸೂರ್ಯ ಬುಧವಾರ ಮುಂಗಡವಾಗಿ ನೀಡಲು ₹50 ಸಾವಿರ ಹಣದೊಂದಿಗೆ ಕಂದಾಯ ಇಲಾಖೆಗೆ ಬಂದಿದ್ದರು. ಮಹೇಶ್ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಇದು ಗೊತ್ತಾಗುತ್ತಲೇ ಮಹೇಶ್ ಹಣದ ಸಮೇತ ಕಚೇರಿಯಿಂದ ಓಡಿ ಹೋದರು.