ಗುರು ಶಿಷ್ಯರ ಭಾಂದ್ಯವ್ಯ ಜನುಮ ಜನುಮದ ಅನುಭಂಧ!!
ವಿದ್ಯಾರ್ಥಿಗಳ ಪ್ರೀತಿಗೆ ಕಣ್ಣಿರು ಹಾಕಿದ ಶಿಕ್ಷಕ…
ಸರ್ಕಾರಿ ಶಾಲೆಗಳಲ್ಲಿ ನಡೆಯಿತು ಮನಕಲಕುವ ಘಟನೆ..
ಬೀದರ್: ಕೌಡಗಾಂವ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ 11 ವರ್ಷ ಸೇವೆ ಸಲ್ಲಿಸಿದ್ದ ಶಿಕ್ಷಕ ಗೋಪಾಲ ರೆಡ್ಡಿ, ಬಗದಲ್ ಪ್ರೌಢ ಶಾಲೆಗೆ ವರ್ಗಾವಣೆಯಾಗುತ್ತಿದ್ದಾರೆ ಎಂಬ ಸುದ್ದಿ ತಿಳಿದಿದ್ದೇ ತಡ ಅಲ್ಲಿನ ಶಾಲಾ ವಿದ್ಯಾರ್ಥಿಗಳು ಬಿಕ್ಕಿಬಿಕ್ಕಿ ಅತ್ತಿದ್ದು, ಒಲ್ಲದ ಮನಸ್ಸಿನಿಂದ ಬೀಳ್ಕೊಟ್ಟ ಘಟನೆ ಬೀದರ್ನ ಔರಾದ್ ತಾಲೂಕಿನಲ್ಲಿ ನಡೆದಿದೆ.
ಶಾಲೆಯ ಮುಖ್ಯ ಗುರು ಬಾಲಿಕಾ ಕೇದಾರೆ ಅವರು ಸದಾ ದೈಹಿಕ ಶಿಕ್ಷಕ ಗೋಪಾಲರೆಡ್ಡಿ ಅವರಿಗೆ ತನ್ನ ಮಗನಂತೆ ಪ್ರೇರೇಪಿಸಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕೆಂದು ಹೇಳುತ್ತಿದ್ದರು. ಈ ಮಾತನ್ನು ನೆನಪಿಸಿಕೊಂಡು ಭಾವುಕಾರದ ಗೋಪಾಲ್, ತಾಯಿಯಲ್ಲಿ ಅಡಗಿರುವ ಶಕ್ತಿ ಎಂತಹದ್ದು ಎಂಬುದನ್ನು ಇವರಿಂದ ಕಲಿತೆ ಎಂದು ತಾಯಿ ಸಮಾನರಾದ ಮುಖ್ಯಗುರುಗಳ ಕಾಲಿಗೆ ಬಿದ್ದು, ನಮಸ್ಕರಿಸಿದರು.
ತನ್ನ ಜೊತೆ ಇಷ್ಟು ದಿನ ಸೇವೆ ಸಲ್ಲಿಸಿದ ಇನ್ನಿತರ ಶಿಕ್ಷಕರಿಗೆ ಸಲಾಂ ಎಂದ ದೈಹಿಕ ಶಿಕ್ಷಕರು, ಆತ್ಮೀಯ ಮಕ್ಕಳು ಉತ್ತಮ ರೀತಿಯಿಂದ ಓದಬೇಕು. ಭವಿಷ್ಯದಲ್ಲಿ ನೀವೆಲ್ಲಾ ವಿದ್ಯಾವಂತರಾಗಿ ಬೆಳೆದು, ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡಬೇಕು. ಹೆಚ್ಚೆಚ್ಚು ಯಶಸ್ಸು ಗಳಿಸಬೇಕು ಎನ್ನುತ್ತಿದ್ದಂತೆ ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿಗಳು, ನಮ್ಮನ್ನು ಬಿಟ್ಟುಹೋಗಬೇಡಿ ಸರ್, ಪ್ಲೀಸ್ ಎಂದು ಕಣ್ಣೀರಿಟ್ಟಿದ್ದಾರೆ.
ಮನಕಲಕುವ ಘಟನೆ ನೋಡುತ್ತಿದ್ದಂತೆ ಒಂದು ಕ್ಷಣ ಮೌನಕ್ಕೆ ಜಾರಿದ ಶಾಲಾ ಆಡಳಿತ ಮಂಡಳಿ, ಕಂಬನಿ ಮಿಡಿಯುತ್ತಲೇ ಶಿಕ್ಷಕ ಗೋಪಾಲರೆಡ್ಡಿ ಅವರಿಗೆ ಶಾಲಾ ವತಿಯಿಂದ ಬೀಳ್ಕೊಡುಗೆ ನೀಡಿದರು. ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನೋಡುವವರ ಕಣ್ಣಂಚಲ್ಲಿ ನೀರು ತರಿಸುವಂತಿದೆ.