ಲೇಖನ :- ಪತಿಯ ಆಯುಷ್ಯ ವರ್ಧಕ ಪೂಜೆ ಭೀಮನ ಅಮಾವಾಸ್ಯೆ
ಆಷಾಡ ಮಾಸದ ಅಮವಾಸ್ಯೆಯನ್ನು, ಭೀಮನ ಅಮವಾಸ್ಯೆ ಎಂದು ಕರೆಯುತ್ತಾರೆ.
ಅಂದು ಮಾಡುವ ಪೂಜೆಗೆ ಜ್ಯೋರ್ತಿಭೀಮೇಶ್ವರ ವೃತ ಅನ್ನುತ್ತಾರೆ. ಹಾಗೇ
ಉತ್ತರಕರ್ನಾಟಕದ ವಿಭಾಗದಲ್ಲಿ ಇದನ್ನು ನಾಗರ ಅಮವಾಸ್ಯೆ ಎಂದು ಕರೆಯುತ್ತಾರೆ. ಅಂದೇ “ದಿವಶಿ ಗೌರಿ” ಪೂಜೆ ಮಾಡುತ್ತಾರೆ.
ದಿವಶಿ ಗೌರಿ ಪೂಜೆಯು ಮತ್ತು ಜ್ಯೋರ್ತಿಭೀಮೇಶ್ವರನ ಪೂಜೆಯು
ಎರಡು ಒಂದೇ ಅಭಿಲಾಷೆ ಹೊಂದಿದ ಪೂಜೆಯಾಗಿದೆ. ಆದರೆ ಪೂಜೆ ಮಾಡುವ ವಿಧಿವಿಧಾನ ಬೇರೆ ಬೇರೆ ರೀತಿಯಾಗಿದೆ.
ಸುಮಂಗಲಿಯರು ತಮ್ಮ ಮಾಂಗಲ್ಯ ಸುಸ್ಥಿರವಾಗಿದ್ದು ಪತಿಯ ದೀರ್ಘಾಯು ಸಲುವಾಗಿ ಹಾಗೂ ಸಹ ಕುಟುಂಬ ಸುಖ ಸಂಸಾರ,
ಸಂಪತ್ತ ಸಮೃದ್ಧಿಯಾಗಲಿ ಎಂದು ಈ ವ್ರತವನ್ನಾಚರಿಸುತ್ತಾರೆ.
ಕುಮಾರಿಯರು ಮತ್ತು ಕನ್ಯಾಮಣಿಗಳು ತಮಗೆ ಉತ್ತಮವಾದ, ಸಕಲ ಗುಣ ಸಂಪನ್ನನಾದ ರಾಮನ ಹಾಗೇ ಮತ್ತು ಧೀರ್ಘಾಯು ಯೋಗ್ಯ ಪತಿ ದೊರಕಿ, ಸುಖೀ ದಾಂಪತ್ಯಕ್ಕಾಗಿ ಪೂಜಿಸುತ್ತಾರೆ.
ಈಶ್ವರನು ಕೈಲಾಸದಲ್ಲಿ ಸನತ್ಕುಮಾರರಿಗೆ ಉಪದೇಶಿಸಿದನು. ಅವರು ಭೂಲೋಕದ ಋಷಿಪತ್ನಿಯರಿಗೆ ತಿಳಿಸಿದರು. ಅವರ ಮೂಲಕ ಎಲ್ಲೆಡೆ
ಜ್ಯೋತಿರ್ಭೀಮೇಶ್ವರ ವ್ರತ ಮಾಡುವುದು ವ್ಯಾಪಿಸಿತು. ಕೃತಯುಗದಲ್ಲಿ ಮೃಕಂಡು ಮುನಿಯ ಪತ್ನಿ ಸೌಮಿತ್ರೆ ಈ ವೃತ ಮಾಡಿದಳು
ತ್ರೇತಾಯುಗದಲ್ಲಿ ಅತ್ರಿ ಮಹರ್ಷಿಯ ಪತ್ನಿ ಅನಸೂಯಾ ಈ ವೃತ ಮಾಡಿದಳು.
ದ್ವಾಪರದಲ್ಲಿ ಶ್ರೀಕೃಷ್ಣನ ಪತ್ನಿ ರುಕ್ಮಿಣಿ ಈ ವೃತ ಮಾಡಿದಳು.
ಕಲಿಯುಗದಲ್ಲಿ ರತ್ನವೇಣಿ ಈ ವೃತ ಮಾಡಿದ್ದಾಳೆ
ಪೂಜೆಯ ವಿಧಿ ವಿಧಾನ:-
ಆಷಾಢ ಅಮವಾಸ್ಯೆಯಂದು,
ಗೋಧೂಳಿ ಸಮಯವಾದ ಸಂಜೆಯಲ್ಲಿ ,ಅಕ್ಕಿಯ ಮೇಲಿಟ್ಟ ಜೋಡಿ ಕಲಶಗಳ ಬಲಕ್ಕೆ ತುಪ್ಪದ, ಎಡಕ್ಕೆ ಎಣ್ಣೆಯ ದೀಪವನ್ನು ಹಚ್ಚಿಟ್ಟು ,ಅರಿಶಿನದ ನೀರಿನಲ್ಲಿ ನೆನಸಿದ ಹಸಿದಾರಕ್ಕೆ ೧೬ ಗಂಟು,
ಹಾಕಿ ವಿಳೆಯದೆಲೆ ಅಡಿಕೆಯೊಂದಿಗೆ ಕಲಶದ ಅಕ್ಕಿಯ ಮೇಲಿಟ್ಟು ಈಶ್ವರನ ಸ್ವರೂಪವಾದ ಭೀಮೇಶ್ವರನನ್ನು ಕಲಶ ಮತ್ತು ದೀಪಕ್ಕೆ ಆವಾಹನೆ ಮಾಡಿ,
ಅರ್ಘ್ಯಪಾದ್ಯಾದಿ ಷೋಡಶೋಪಚಾರ,
ಅಂಗಪೂಜೆ,ಪತ್ರ,ಪುಷ್ಪಗಳಿಂದ ಪೂಜೆ,೧೦೮ ನಾಮ ಪೂಜೆ ಮಾಡಿ,ದಾರದ ಗ್ರಂಥಿ (ಗಂಟು)ಗಳನ್ನೂ ಪೂಜಿಸಿ ನಂತರ ಧೂಪ,ದೀಪಾರತಿ ಮಾಡಿ, ಕಡುಬು,ಚಕ್ಕುಲಿ,ಪಾಯಸಾದಿ ಪಂಚಭಕ್ಷ್ಯಗಳು,
ವಿಧವಿಧವಾದ ಫಲಗಳನ್ನು,
ತಾಂಬೂಲ ಸಹಿತ ನೇವೇದ್ಯ ಮಾಡಿ,ಮಂಗಳಾರತಿ ನೆರವೇರಿಸಿ,ದಾರವನ್ನು
“ಮೃತ್ಯುಂಜಯ ನಮಸ್ತುಭ್ಯಂ
ತವಮೇ ಸೂತ್ರಧಾರಣಂ | ಸೌಭಾಗ್ಯಂ ಧನಧಾನ್ಯಂಚ
ಪ್ರಜಾವೃದ್ಧಿಂಸದಾಕುರು ||
ಎಂದು ಪ್ರಾರ್ಥಿಸಬೇಕು
ವ್ರತದ ಕಥೆ,
ನೈಮಿಷಾರಣ್ಯದಲ್ಲಿದ್ದ ಶೌನಕಾದಿ ಋಷಿಗಳು, ಸೂತಪುರಾಣಿಕರಿಗೆ ಹೇಳುತ್ತಾರೆ. “ಸ್ತ್ರೀಯರಿಗೆ ಯೋಗ್ಯ ಪತಿ ಪ್ರಾಪ್ತಿಗೆ,
ಧೀರ್ಘ ಮಾಂಗಲ್ಯಕ್ಕಾಗಿ ಮತ್ತು ಸುಖೀದಾಂಪತ್ಯಕ್ಕಾಗಿ ಆಚರಿಸಬಹುದಾದ ಉತ್ತಮ ವ್ರತ” ಒಂದನ್ನು ಹೇಳಬೇಕೆಂದು ಪ್ರಾರ್ಥಿಸಿದರು. ಆಗ ಆಷಾಢ ಮಾಸದ ಅಮವಾಸ್ಯೆಯಲ್ಲಿ ಜ್ಯೋತಿರ್ಭಿಮೇಶ್ವರ ವೃತ ಪುಣ್ಯದಾಯಕ ಎಂದು ಆ ವ್ರತ ಮಹಾತ್ಮ್ಯೆಯನ್ನು ಹೇಳುತ್ತಾರೆ
ಕಥೆ :-
ಬಹಳ ಹಿಂದೆ ಸೌರಾಷ್ಟ್ರ ದೇಶದಲ್ಲಿ ವಜ್ರಬಾಹುವೆಂಬ ಮಹಾಪರಾಕ್ರಮಿಯಾದ ರಾಜನಿದ್ದನು. ಅವನಿಗೆ ಜಯಶೇಖರ ಎಂಬ ಸುಗುಣಪೂರ್ಣಮಗನಿದ್ದನು.
ಆದರೆ ಅವನು ವಿಧಿವಶದಿಂದ ಅಕಾಲಮರಣಕ್ಕೀಡಾಗುತ್ತಾನೆ
ವಜ್ರಬಾಹುವಿಗೆ ಪುತ್ರಶೋಕ ಬಲವಾಗಿ, ತನಗೂ,ತನ್ನ ಪಿತೃಗಳಿಗೂ ತಿಲೋದಕ ಕೊಡುವವರೇ ಇಲ್ಲದಂತಾಯಿತಲ್ಲ ಎಂದು ದುಃಖಿಸುತ್ತ ಕೊನೆಗೊಂದು ನಿರ್ಧಾರಕ್ಕೆ ಬಂದು,
“ನನ್ನ ಮಗನ ಈ ಶವಕ್ಕೆ ಯಾರು ತನ್ನ ಮಗಳನ್ನು ಮದುವೆ ಮಾಡಿ ಕೊಡುತ್ತಾರೆಯೋ ಅವರಿಗೆ ಕೋಟಿ ನಾಣ್ಯವನ್ನು ಬಹುಮಾನವಾಗಿ ಕೊಡುತ್ತೇನೆ” ಎಂದು ಡಂಗುರ ಸಾರಿಸಿದನು.
ಅದೇ ಊರಿನಲ್ಲಿ ಸಕಲ ವೇದ ಶಾಸ್ತ್ರ ಪಾರಂಗತನಾದರೂ ಕಡುಬಡತನದಿಂದ ಸಂಸಾರ ಸಾಕುವುದೇ ಕಷ್ಟವಾಗಿದ್ದ ಮಾಧವಶರ್ಮನೆಂಬ ಬ್ರಾಹ್ಮಣನು ಇದನ್ನು ಕೇಳಿ,ತನ್ನ ಐವರು ಹೆಣ್ಣು ಮಕ್ಕಳಲ್ಲಿ ಹಿರಿಯವಳನ್ನು ಕೊಡುತ್ತೇನೆ,
ನಮಗಿರುವ ಹದಿನಾಲ್ಕು ಮಕ್ಕಳನ್ನು ಪೋಷಿಸುವುದು ಬಹಳ ಕಷ್ಟವಾಗಿದೆ ಎಂದು ತನ್ನ ಪತ್ನಿ ಸುಶೀಲೆಗೆ ತಿಳಿಸಿದನು.
ಸುಶೀಲೆಯು “ಪತಿಯೇ,ಲೋಕದಲ್ಲಿ ಮಗಳನ್ನು ಮದುವೆ ಮಾಡಿಕೊಡಲು ಬಹಳ ಆಲೋಚಿಸಿ,ಅತ್ಯುತ್ತಮ ಧನವಂತರ ಮನೆಗೆ ಬಡವರು ಹೆಣ್ಣು ಕೊಟ್ಟರೆ ಅವಮಾನ,ತಪ್ಪದು ಎಂದು ಕೊಡಲಿಚ್ಛಿಸುವುದಿಲ್ಲ.
ಇನ್ನು ನಪುಂಸಕ,
ಅಂಗಹೀನರಿಗೂ ಕನ್ಯೆಯನ್ನು ಕೊಡುವುದಿಲ್ಲ.
ಹೀಗಿರುವಾಗ ನೀವು ಮೃತನಾದವನಿಗೆ ಮಗಳನ್ನು ಕೊಡುತ್ತೇನೆ ಎನ್ನುವಿರಲ್ಲ!
ಅವಳು ವಿಧವೆಯಾಗಿಯೇ ಬಾಳಬೇಕೇ? ಇದು ಯುಕ್ತವಲ್ಲ” ಎಂದಳು.
“ನಿನಗೆ ಒಬ್ಬಳು ಮಗಳು ಕಡಿಮೆ ಎಂದು ಭಾವಿಸಿಕೋ,ನಾನು ಮೃತರಾಜಪುತ್ರನಿಗೆ ಹಿರಿಯ ಮಗಳು ಚಾರುಮತಿಯನ್ನು ಕೊಟ್ಟೇ ಕೊಡುತ್ತೇನೆ” ಎಂದು ಮದುವೆ ಮಾಡಿಕೊಟ್ಟನು.
ಮಾತಿನಂತೆ ರಾಜನು ಅವನಿಗೆ ಕೋಟಿ ಹೊನ್ನನ್ನು ಕೊಟ್ಟನು.ನಂತರ ಪುತ್ರನ ಶವವನ್ನು ಸ್ಮಶಾನಕ್ಕೆ ಸಾಗಿಸಿ,ಸೊಸೆಗೆ ಚಿತೆಗೆ ಅಗ್ನಿಸ್ಪರ್ಶ ಮಾಡಲು ಹೇಳಿದನು.
ಆಕೆಯು ಶುಚಿರ್ಭೂತಳಾಗಿ,
ಸರ್ವಾಭರಣ ಧರಿಸಿ,
ಯಥೇಚ್ಛ ಮಂಗಳದ್ರವ್ಯಗಳನ್ನು ದಾನಮಾಡಿ,ಭಕ್ತಿಯಿಂದ ಪರಮೇಶ್ವರನನ್ನು ಧ್ಯಾನಿಸುತ್ತ ,
ಶಾಂತ ಮನಸ್ಸಿನಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿದಳು.
ಕೂಡಲೇ ಇದ್ದಕ್ಕಿದ್ದಂತೆ ವರ್ಷಧಾರೆಯಾಗಿ ಚಿತೆಯ ಬೆಂಕಿಯು ಆರಿಹೋಯಿತು.
ಸೂರ್ಯನೂ ಮುಳುಗಿ ಕತ್ತಲಾಗಿ ಸ್ವಲ್ಪ ಸಮಯದಲ್ಲಿಯೇ ಗಾಢಾಂಧಕಾರವು ಆವರಿಸಿತು.
ರಾಜ ಪರಿವಾರವು ಅವಳನ್ನು ಅಲ್ಲಿಯೇ ಬಿಟ್ಟು ಹಿಂದಿರುಗಿತು.
ಸ್ಮಶಾನದಲ್ಲಿ ಏಕಾಂಗಿಯಾಗಿದ್ದ ಚಾರುಮತಿಯು ಭಯಗ್ರಸ್ತಳಾಗಿ ನಡುಗುತ್ತ ,
ದೈರ್ಯತಂದುಕೊಂಡು ದುಃಖಾತಿಶಯದಿಂದ
“ಭಗವಂತ ಕಾಪಾಡು,
ಕಾಪಾಡು” ಎಂದು ದೀನಳಾಗಿ ಪ್ರಾರ್ಥಿಸುತ್ತ ,
“ನೀನು ಹಿಂದೆ ಮಾರ್ಕಂಡೇಯ,
ಸತ್ಯವಾನ,ಚ್ಯವನ,ಮನ್ಮಥ,ಶ್ವೇತವಾಹನ ಮೊದಲಾದ ಅಲ್ಪಾಯುಗಳಿಗೆ ದೀರ್ಘಾಯುವನ್ನು ಕರುಣಿಸಿದವನು.
ನಾನೇನು ಅಪರಾಧ ಮಾಡಿದ್ದೇನೆಂದು ನನಗೀ ಶಿಕ್ಷೆ ? ಕೃಪೆ ಮಾಡು ದೇವ” ಎಂದು ಪ್ರಾರ್ಥಿಸುತ್ತ ಅಳುತ್ತಲೇ ಪ್ರಜ್ಞಾಹೀನಳಾದಳು.
ಪರಶಿವನು ಪಾರ್ವತಿಯೊಂದಿಗೆ ವೃಷಭಾರೂಢನಾಗಿ ಪ್ರತ್ಯಕ್ಷನಾಗಿ,
“ಎದ್ದೇಳು ಪುತ್ರಿ.ಬೇಕಾದ ವರವನ್ನು ಕೇಳು” ಎಂದಾಗ ಎಚ್ಚೆತ್ತು ಶಿವನ ಪಾದದ ಮೇಲೆ ತಲೆ ಇಟ್ಟು ,
“ಸ್ವಾಮಿಯೇ,ಸೌಮಂಗಲ್ಯ, ಸೌಭಾಗ್ಯ,ಸುಖ ಸಂಪತ್ಸಮೃದ್ಧಿಯನ್ನು ಕೊಡುವ ವ್ರತವನ್ನು ನನಗೆ ಉಪದೇಶಿಸು” ಎಂದು ಬೇಡಿದಳು.ಈಶ್ವರನು ತಥಾಸ್ತು ಎಂದು “ಜ್ಯೋತಿರ್ಭೀಮೇಶ್ವರ ವ್ರತವನ್ನು” ಉಪದೇಶಿಸಿ,ವ್ರತವಿಧಿಯನ್ನು ತಿಳಿಸಿ,
ಒಂಬತ್ತು_ವರ್ಷ ವ್ರತವನ್ನಾಚರಿಸಿ ನಂತರ ಉದ್ಯಾಪನೆ ಮಾಡಬೇಕು.
ನಾಳೆಯೇ ಆಷಾಢ ಅಮವಾಸ್ಯೆ.
ಅಂದು ಇಲ್ಲಿ ಸಿಕ್ಕುವ ವಸ್ತುಗಳನ್ನೇ ವ್ರತಕ್ಕೆ ಬೇಕಾದ ಸಾಮಗ್ರಿಗಳೆಂದು ಮನಸ್ಸಿನಲ್ಲಿ ಭಾವಿಸಿ ವ್ರತ ಆಚರಿಸು.ನಿನ್ನ ಪತಿಯು ನಿದ್ದೆಯಿಂದೆಚ್ಚತ್ತವನಂತೆ ಮೇಲೆದ್ದು ನವತಾರುಣ್ಯದೊಂದಿಗೆ ನಿನ್ನೊಂದಿಗೆ ಇರುತ್ತಾನೆ” ಎಂದು ಹೇಳಿ,
ಪರಮೇಶ್ವರನು ಅಂತರ್ಧಾನನಾದನು.
ಚಾರುಮತಿಯು ಅಮವಾಸ್ಯೆಯ ದಿನ, ಪರಮೇಶ್ವರನು ಹೇಳಿದಂತೆಯೇ ಸ್ಮಶಾನದ ಮರಗಳ ಪತ್ರೆ,ಪುಷ್ಪ, ಫಲಾದಿಗಳನ್ನೇ ವೃತ ಸಾಮಗ್ರಿಯಾಗಿ ಭಾವಿಸಿ,ಶುಚಿರ್ಭೂತಳಾಗಿ,ಮಣ್ಣಿನಿಂದ ದೀಪಸ್ತಂಭ ರಚಿಸಿ,ಅಗ್ನಿಯನ್ನಾವಾಹಿಸಿ,
ಸಂಜೆ ಭಕ್ತಿಯಿಂದ ವ್ರತ ಮಾಡಿದಳು.
ವ್ರತಪೂಜಾ ಮಹಿಮೆಯಿಂದ ರಾಜಪುತ್ರನು ಕಣ್ತೆರೆದು ಎದ್ದು,ಆಶ್ಚರ್ಯ ಚಕಿತನಾಗಿ,
ಅಲ್ಲಿಯವರೆಗಿನ ವೃತ್ತಾಂತವನ್ನು ಚಾರುಮತಿಯಿಂದ ಕೇಳಿ ತಿಳಿದು ಆನಂದಭರಿತನಾದನು.
ಬೆಳಗಾಗುತ್ತಲೇ ರಾಜಭಟರಿಂದ ವಿಷಯ ತಿಳಿದ ರಾಜ ವಜ್ರಬಾಹುವು ಆಗಮಿಸಿ,
ಚಾರುಮತಿಯಿಂದ ವಿಷಯ ತಿಳಿದು ಸಂತೋಷಗೊಂಡು ಅವಳನ್ನು ಸಮಾಧಾನ ಪಡಿಸಿ,ಇಬ್ಬರನ್ನೂ ಮೆರವಣಿಗೆಯ ಮೂಲಕ ಅರಮನೆಗೆ ಕರೆತಂದು, ಚಾರುಮತಿಯ ಕೈಯಿಂದ ಯಥೇಚ್ಛ ದಾನಧರ್ಮ ಮಾಡಿಸುತ್ತ , ಸಂತೋಷದಿಂದ ಇದ್ದನು.”
ಹೀಗೆ ಸೂತಪುರಾಣಿಕರು ಹೇಳಿದ ಕತೆ ಕೇಳಿದ ಶೌನಕಾದಿ ಋಷಿಗಳೂ ಭಕ್ತಿಯಿಂದ ವ್ರತವನ್ನು ಆರಂಭಿಸಿದರು.
ಈ ಕಥೆಯನ್ನು ಯಾರು ಹೇಳುತ್ತಾರೆಯೋ,
ಯಾರು ವ್ರತವನ್ನು ಆಚರಿಸಿ ಈ ಕಥೆಯನ್ನು ಕೇಳುತ್ತಾರೆಯೋ ಅವರೆಲ್ಲ ಇಹದಲ್ಲಿ ಸುಖ ಸಂಪತ್ತನ್ನು ಹೊಂದಿ,ಪರದಲ್ಲಿ ಮುಕ್ತಿ ಪಡೆಯುತ್ತಾರೆ ಎಂದು ಸ್ಕಂದ ಪುರಾಣದಲ್ಲಿ ಹೇಳಿದೆ.
✍️ ಪ್ರಿಯಾ ಪ್ರಾಣೇಶ ಹರಿದಾಸ