ಸಾಂಸ್ಕೃತಿಕ ನೆಲೆಗಳಿಂದ ಭಾವೈಕ್ಯದ ಬದುಕು : ಗುರುಮೂರ್ತಿ ಯರಗಂಬಳಿಮಠ
ಜೆ.ಎಸ್.ಎಸ್. ಪದವಿ-ಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ
ಧಾರವಾಡ : ಪೂರ್ವಾಗ್ರಹ ಪೀಡಿತ ಕುಬ್ಜ ಮನಸ್ಥಿತಿಯಿಂದ ಹೊರಬಂದು ಪ್ರತಿಭೆಗಳ ಅಭಿವ್ಯಕ್ತಿಗೆ ವೇದಿಕೆ ಒದಗಿಸುವ ಯುಕ್ತ ಮತ್ತು ಮುಕ್ತವಾದ ವಿಭಿನ್ನ ವಿಶಿಷ್ಟ ಜನಪರ ಚಟುವಟಿಕೆಗಳ ಸಾಂಸ್ಕೃತಿಕ ನೆಲೆಗಳಿಂದ ಭಾವೈಕ್ಯದ ಬದುಕು ಸಾಧ್ಯವಾಗುತ್ತದೆ ಎಂದು ಶತಮಾನೋತ್ತರ ಸುವರ್ಣ ಮಹೋತ್ಸವ ಆಚರಿಸಿರುವ ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕೆ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಹೇಳಿದರು.
ಅವರು ನಗರದ ಸವದತ್ತಿ ರಸ್ತೆಯ ಜೆ.ಎಸ್.ಎಸ್. ಪದವಿ-ಪೂರ್ವ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2024-25 ನೆಯ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮನುಕುಲದ ಬಾಳಪಥದ ಹೆಜ್ಜೆಗಳ ಸಾಂಸ್ಕೃತಿಕ ಪರಂಪರೆಯ ಸಂವರ್ಧನೆಗೆ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ರಾಷ್ಟ್ರದ ಐಕ್ಯತೆಯನ್ನು ಗಟ್ಟಿಗೊಳಿಸುವ, ಸಹೋದರತೆಯನ್ನು ಹುಟ್ಟು ಹಾಕುವ ಮತ್ತು ಮನಸ್ಸುಗಳನ್ನು ತಿಳಿಗೊಳಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ನಮ್ಮ ನೆಲದ ಹಿರಿಮೆ : ಭಾರತೀಯ ಧರ್ಮ, ಸಂಸ್ಕೃತಿ ಮತ್ತು ಪರಂಪರೆಗೆ ತನ್ನದೇ ಆದ ಘನತೆ ಇದೆ. ನಮ್ಮೊಳಗಿನ ಸರಳ ಶ್ರೇಷ್ಠ ಸಜ್ಜನಿಕೆ ತುಂಬಿದ ಜೀವನ ವಿಧಾನದ ಮೂಲಕ ಉತ್ಕೃಷ್ಟ ಕ್ರಿಯಾಪ್ರೇರಕ ಮಾನವ ಸಂಪನ್ಮೂಲವನ್ನು ಸಿದ್ಧಗೊಳಿಸಿ ಅದನ್ನು ರಾ಼ಷ್ಟ್ರಸೇವೆಗೆ ಸಮರ್ಪಿಸುವುದು ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಗುರಿಯಾಗಿದೆ. ಮನುಕುಲದ ಮೇರು ಮೌಲ್ಯಗಳನ್ನು ಮುಂದಿನ ಜನಾಂಗಕ್ಕೆ ಉಳಿಸಿ, ಬೆಳೆಸಿ, ರೂಢಿಸುವ ಮಹಾನ್ ಶಕ್ತಿ ಸಂಚಯ ನಮ್ಮ ಸಂಸ್ಕೃತಿಯಲ್ಲಿದೆ. ಭಾರತೀಯ ಸಂಸ್ಕೃತಿಯು ನಮ್ಮ ನೆಲದ ಹಿರಿಮೆಯಾಗಿದೆ ಎಂದೂ ಅವರು ಹೇಳಿದರು.
ಅಂತರಂಗ-ಬಹಿರಂಗಗಳಲ್ಲಿ ಏಕತೆಯನ್ನು ಸಾಧಿಸಿ ಸತ್ಯ-ಶುದ್ಧ ನಡೆಯ ಪರಮೋತ್ಕೃಷ್ಟ ಪರಂಪರೆಯನ್ನು ವಿಸ್ತೃತವಾಗಿ ಬೆಳಸುವುದು ನಮ್ಮ ಸಾಂಸ್ಕೃತಿಕ ಆಯಾಮಗಳ ಮೂಲ ಆಶಯ. ನಡೆ-ನುಡಿಗಳಲ್ಲಿ ದ್ವಂದ್ವ-ವೈರುಧ್ಯಗಳನ್ನು ಹುಟ್ಟುಹಾಕದೆ, ಆದರ್ಶ ಪಥವನ್ನು ಬದುಕಿನ ಹೆಜ್ಜೆಗಳಲ್ಲಿ ತುಂಬುವುದು ಮತ್ತೊಂದು ಉದ್ದೇಶವಾಗಿದೆ. ವಿದ್ಯಾರ್ಥಿಗಳಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ತಕ್ಕುದಾದ ವೇದಿಕೆಗಳನ್ನು ಕಲ್ಪಿಸಿ ಎಲ್ಲ ಪ್ರತಿಭೆಗಳು ಬೆಳೆದು ಬಲಗೊಳ್ಳಲು ಸಾಂಸ್ಕೃತಿಕ ಚಟುವಟಿಕೆಗಳು ದಿಕ್ಸೂಚಿಯಾಗಬೇಕು. ರಾಷ್ಟ್ರದ ಘನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ಪ್ರಾಪ್ತವಾದಾಗ ಭಾರತ ವಿಶ್ವತೋಮುಖವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದೂ ಯರಗಂಬಳಿಮಠ ನುಡಿದರು.
ಅಧ್ಯಕ್ಷತೆವಹಿಸಿದ್ದ ಜೆ.ಎಸ್.ಎಸ್. ಅಭಿವೃದ್ಧಿ ಅಧಿಕಾರಿ ಡಾ.ಸೂರಜ್ ಜೈನ್ ಮಾತನಾಡಿ, ವಿದ್ಯಾರ್ಥಿಗಳು ಮೌಲ್ಯಾಧಾರಿತ ಜೀವನ ವಿಧಾನ, ಸಮಯ ಪ್ರಜ್ಞೆಯಲ್ಲಿ ಅಧ್ಯಯನದ ತನ್ಮಯತೆಯಿಂದ ವಿಶಿಷ್ಟ ಬೌದ್ಧಿಕ ಸಾಮರ್ಥ್ಯ ಸಂಪಾದಿಸಿ ವಿಶ್ವದ ಹೊಸತು ಅನ್ವೇಷಣೆಗಳಿಗೆ ತೆರೆದುಕೊಂಡು ಸ್ಪರ್ಧಾತ್ಮಕ ವಿಕಾಸದತ್ತ ಹೆಜ್ಜೆಹಾಕಬೇಕು. ಅಧ್ಯಯನದ ಶಿಸ್ತನ್ನು ರೂಢಿಸಿಕೊಂಡು ಐಎಎಸ್, ಕೆಎಎಸ್ ದಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ನಗೆ ಬೀರುವ ಗುರಿಗಳನ್ನು ಹೊಂದಬೇಕು. ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿವೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎನ್. ಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಎಸ್.ಎಸ್. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಆರ್. ತ್ರಿವೇಣಿ, ಕಾಲೇಜಿನ ಕ್ರೀಡಾ ನಿರ್ದೇಶಕ ನಾಗರಾಜ ತೋಟಿಗೇರ ಹಾಗೂ ವಿದ್ಯಾರ್ಥಿಗಳ ಸಂಘದ ವಿವಿಧ ಪದಾಧಿಕಾರಿಗಳು ಇದ್ದರು. ವಿನಾಯಕ ಇಂಗಳಗಿ ಸ್ವಾಗತಿಸಿದರು. ಭೂಮಿಕಾ ಸಿದ್ಧನಗೌಡರ ನಿರೂಪಿಸಿದರು. ಪ್ರಗತಿ ಕುಲಕರ್ಣಿ ವಂದಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಗತಿ ಕುಲಕರ್ಣಿ, ಸಂಜನಾ ಕೊಲ್ಲಾಪೂರ, ಭೂಮಿಕಾ ಸಿದ್ಧನಗೌಡ್ರ, ಸುಪ್ರಿಯಾ ಸಂಗಪ್ಪನವರ, ಲಕ್ಷ್ಮಿ ಕುರಿಹುಲಿ ಹಾಗೂ ಲಕ್ಷ್ಮಿಹಳ್ಳೂರ ಅವರನ್ನು ಗೌರವಿಸಲಾಯಿತು.