ಮೇತ್ರಿ ಗುರುಗಳ ನಿವೃತ್ತಿ ಬದುಕು ಸುಖಕರವಾಗಿರಲಿ.
ಪ್ರೊ ಕೆ ಎಂ ಮೇತ್ರಿ ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿ. ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಎರಡು ವರೆ ದಶಕಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತಿದ್ದಾರೆ. ನಾನು ಕಂಡಂತೆ ಅವರದು ವಿಶೇಷ ವ್ಯಕ್ತಿತ್ವ. ಬುಡಕಟ್ಟು ಬುಡಕಟ್ಟು ಸಮುದಾಯಗಳ ಆರಾಧ್ಯ ದೈವವೆಂದೆ ಕರೆಯಲ್ಪಡುವ ನನ್ನ ಗುರುಗಳು ನೀವು ಎಂಬುದು ಮತ್ತೊಂದು ಖುಷಿಯ ಸಂಗತಿ. ಕರ್ನಾಟಕದ 49ಬುಡಕಟ್ಟುಗಳಲ್ಲಿ ಹಲವು ಗುರುತಿಸುವಲ್ಲಿ ನಿಮ್ಮ ಕಾಯಕ ಶ್ಲಾಘನೀಯ. ನನ್ನ ವಿದ್ಯಾಭ್ಯಾಸದ ಜೋಳಿಗೆಯಲ್ಲಿ ಸಾಕಷ್ಟು ಪುಸ್ತಕ ಮತ್ತು ವಿಚಾರಗಳನ್ನು ತುಂಬಿಸಿಕೊಂಡಿದ್ದೇನೆ. ನಿಮ್ಮಂತಹ ವ್ಯಕ್ತಿತ್ವ ಮತ್ತೆ ನಾನು ಯಾರಲ್ಲೂ ಕಂಡಿಲ್ಲ. ಅವರಿಗೀಗ 60 ವರ್ಷ. ಆದರೆ ಅದನ್ನು ಗೌಪ್ಯವಾಗಿಡಿ sir ಎನ್ನುತ್ತಿರುತ್ತೇನೆ. ಅವರು ಇನ್ನು ಬರೆಯಬೇಕಿದೆ, ಸಾಕಷ್ಟು ಸಮುದಾಯಗಳು ಉಸಿರಾಡಬೇಕಿದೆ. ಒಂದು ಪೆನ್ನಿಗೆ ಎಷ್ಟು ಶಕ್ತಿ ಇದೆಯೆಂದು ತೋರಿಸಿಕೊಟ್ಟವರು ನೀವು.
ನಾಡಿನ ಅಲೆಮಾರಿ, ಅರೆಅಲೆಮಾರಿ ಸಮುದಾಯಗಳ ಅಭಿವೃದ್ಧಿ, ಸಂಘಟನೆಗಾಗಿ ಕಳೆದ ಮೂರು ದಶಕಗಳಿಂದ ಶ್ರಮಿಸುತ್ತಿದ್ದಾರೆ.ಅಷ್ಟೇ ಅಲ್ಲದೆ ದರೋಜಿಯ ಕಂಚಿನ ಕಂಠದ ಕೋಗಿಲೆಯೆಂದೇ ಪ್ರಸಿದ್ದಿ ಪಡೆದಿದ್ದ, ಎಲೆ ಮರೆ ಕಾಯಿಯಂತಿದ್ದ ಬುರ್ರಕಥೆಯ ಈರಮ್ಮ ಅವರನ್ನು ಬೆಳಕಿಗೆ ತರುವಲ್ಲಿ ಇವರ ಶ್ರಮ ಅವಿಸ್ಮರಣೀಯವಾದುದು.
ಕಲ್ಯಾಣ ಕರ್ನಾಟಕದ ಬೀದರ್ ಮೂಲದ ಡಾ ಕೆ ಎಂ ಮೇತ್ರಿ ಅವರು ಕಳೆದ ಎರಡೂವರೆ ದಶಕಗಳಿಂದ ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾಗಿ, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ, ಡೀನ್ ರಾಗಿ ಕಾರ್ಯನಿರ್ವಹಿಸಿದ್ದಾರೆ. ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ
ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾಕಷ್ಟು ಲೇಖನಗಳು ತಮ್ಮ ಹರಿತವಾದ ಲೇಖನಿಯಿಂದ ಹೊರಬಂದಿದ್ದು ಕೇವಲ ಲೇಖನಗಳಾಗಲಿಲ್ಲ ಅವುಗಳು ತಳ ಸಮುದಾಯದ ಜನರ ಬದುಕನ್ನು ಬೆಳಗಿದವು. ಹರಿದ ಜೋಪಡಿಯೊಳಗೆ ನಕ್ಷತ್ರಗಳನ್ನು ಎಣಿಸುವವರ ಮತ್ತು ನಾಗರಿಕ ಸಮಾಜದಿಂದ ದೂರ ಉಳಿಯಲ್ಪಟ್ಟ ಬುಡಕಟ್ಟು ಸಮುದಾಯಗಳಿಗೆ ಹೊಸ ಚೈತನ್ಯ ತುಂಬಿದವರು. ಅಲ್ಲದೆ ನೆನೆಗುದಿಗೆ ಬಿದ್ದ ಅವರ ಆಸೆ ಆಕಾಂಕ್ಷೆಗಳಿಗೆ ಆಸರೆಯಾದವರು.
ನಾಡು ಕಂಡ ಶ್ರೇಷ್ಠ ಚಿಂತಕರು. ವಿದ್ವಾಂಸರು ಹಾಗೂ
ವಾಗ್ಮಿಗಳು. ವಯೋಸಹಜ ನಿವೃತ್ತಿ ಹೊಂದುತ್ತಿರುವ ನಿಮ್ಮ ಮುಂದಿನ ಬದುಕು ಸುಖಕರವಾಗಿರಲಿ. ಮತ್ತಷ್ಟು ಭಗವಂತ ನಿಮಗೆ ಆಯುಷ್ಯ, ಆರೋಗ್ಯ ಭಾಗ್ಯ ಕರುಣಿಸಲಿ. ಸದಾ ಕಾಲ ಗುರುಗಳ ಬೆರಳ್ ತುದಿಯಲ್ಲಿ ಲೇಖನಿ ಆಡುತ್ತಲೇ ಇರಬೇಕು. ಅದರಿಂದ ಇನ್ನೂ ನೋವುಂಡು ಬದುಕುತ್ತಿರುವ ಅದೆಷ್ಟೋ ಅಲೆಮಾರಿ ಸಮುದಾಯಗಳು ಉಸಿರಾಡಬೇಕಿದೆ. ನಾನು ಕಂಡ ಕೆಲವೇ ಹೃದಯವಂತರಲ್ಲಿ ನೀವು ಒಬ್ಬರು ಮೊದಲಿಗರು. ಅದೆಷ್ಟೋ ತಳಸಮುದಾಯದ ಮಕ್ಕಳು ನಿಮ್ಮಂತಹ ಮಾರ್ಗದರ್ಶಕರ ಸಹಕಾರದಿಂದ ಪಿ ಎಚ್ ಡಿ ಪದವಿ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ನಿಮ್ಮಂತಹ ಅದ್ಭುತ ವ್ಯಕ್ತಿತ್ವ ಹೊಂದಿದ ನಿಮ್ಮ ಮಾರ್ಗದರ್ಶನದಲ್ಲಿ ನಾನು ಪಿ ಎಚ್ ಮಾಡಿದ್ದೂ ನನ್ನ ಅದೃಷ್ಟವೇ ಸರಿ. ಪ್ರತಿ ವ್ಯಕ್ತಿಯ ಪರಿಚಯವು ಸಹ ಒಂದೊಂದು ಕಥೆಯನ್ನು ಹೇಳುತ್ತದೆ ಅಂತಹ ಕಥೆಗೆ ನೀವು ಸಾಕ್ಷಿ. ಸಾಕಷ್ಟು ಅಲೆಮಾರಿ ಸಮುದಾಯಗಳಿಗೆ ಐಡೆಂಟಿಟಿ ಇರಲಿಲ್ಲ ಅವರ ಬದುಕಿಗೆ ಅರ್ಥ ಕೊಟ್ಟು ಬೆಳಕು ಚೆಲ್ಲಿದವರು ನೀವು. ಇನ್ನೂ ನಿಮ್ಮ ಮುಂದಿನ ಬದುಕು ಸುಖಕರವಾಗಿರಲಿ ಮತ್ತು ಭಗವಂತ ನೆಮ್ಮದಿ ಕರುಣಿಸಲಿ. ನೀವು ವಿಶ್ವವಿದ್ಯಾಲಯದಿಂದ ನಿವೃತ್ತಿ ಹೊಂದುತ್ತಿರುವಿರಿ ಆದರೆ ವಿಚಾರ, ಚಿಂತನೆಗಳಿಂದಲ್ಲ ಹಾಗಾಗಿ ನಿಮ್ಮ ಮಾರ್ಗದರ್ಶನ ನನ್ನ ಕೊನೆಯ ಉಸಿರಿನವರೆಗೂ ಇರಲಿ.
ನಿಮ್ಮಂತವರಿನ್ನೊಬ್ಬ ಗುರುಗಳನ್ನು ನಾನು ಕಾಣುತ್ತೆನೋ ಇಲ್ಲವೋ ಗೊತ್ತಿಲ್ಲ ಆದರೆ ನಿಮ್ಮ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕಿದೆ. ನಿಮ್ಮ ನಡತೆಗೆ ಮತ್ತು ನಿಮ್ಮಲ್ಲಿನ ನಿರಪೇಕ್ಷ ಗುಣಕ್ಕೆ ನಾನು ಋಣಿ. ಗುರುಗಳೆಂದರೆ ಭಯದಿಂದ ನೋಡುವ ವಿದ್ಯಾರ್ಥಿಗಳ ನಡುವೆ ವಿಚಾರಗಳನ್ನು ಹಂಚಿಕೊಳ್ಳಲು ವೇದಿಕೆ ರೂಪಿಸಿಕೊಟ್ಟವರು. ಸರಿಯಾದ ವಿಚಾರವನ್ನು ಹಂಚಿಕೊಳ್ಳುವಾಗ ಅದು ನಾನಾದರೂ ಸರಿ ಯಾರಾದರೂ ಸರಿ ಹೆದರುವ ಅವಶ್ಯಕತೆ ಇಲ್ಲವೆಂದು ಭೌತಿಕವಾದ ಆತ್ಮಸ್ಥೈರ್ಯ ತುಂಬಿದವರು. ಮಾತನಾಡಲು ಭಯ ಪಡುವಂತೆ ಇರುವ ಕೆಲವರ ನಡುವೆ ಎಷ್ಟೋ ಬಾರಿ ನನ್ನ ಮಾತುಗಳಿಗೆ ನೀನು ವರ್ಷಧಾರೆಯಂತೆ ಮುಗುಳ್ ನಕ್ಕಿರುವಿರಿ. ನೀವು ಮಾತ್ರ ಅಲ್ಲ ನಿಮ್ಮ ಧರ್ಮತ್ನಿಯ ಗುಣಗಳು ಹಾಗೆಯೇ ಇವೆ. ಡಾ ದಾಕ್ಷಾಯಣಿ ಮೇಡಂ ರವರ ಗುಣಗಳು ಸಹ ಕನ್ನಡಿಯಂತೆ ನಿಮ್ಮನ್ನೇ ಅನುಕರಿಸುತ್ತವೆ. ನಾನಂತೂ ಅವರ ಪ್ರೀತಿಯ ಮಾತುಗಳಿಗೆ ಕಟ್ಟುಬೀಳುವಂತೆ ನೋಡಿಕೊಂಡು ಮಾತನಾಡಿಸುವ ಪರಿ ನಿಮ್ಮಿಬ್ಬರಲ್ಲೂ ನಾನು ಕಂಡಿದ್ದೇನೆ. ಏನಾದರೂ ಮಾಡುತ್ತಲೇ ಇರಿ ಸುಮ್ಮನೆ ಮಾತ್ರ ಕುಳಿತುಕೊಳ್ಳಬೇಡಿ ನಮ್ಮೊಳಗಿನ ವಿಚಾರಗಳೊಂದಿಗೆ ಗುದ್ದಾಡಿ ಅವುಗಳನ್ನು ಹೊರಹಾಕಬೇಕು. ನಮ್ಮಲ್ಲಿನ ವಿಚಾರಗಳನ್ನು ನಮ್ಮೊಂದಿಗೆ ಯಾವತ್ತೂ ಮಣ್ಣಾಗಬಾರದು. ನಾವು ಈ ಸಮಾಜದಿಂದ ಎದ್ದು ಹೊರಡುವ ಕಾಲಕ್ಕೆ ನಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು, ನಾವು ಮಾತನಾಡುವುದಕ್ಕಿಂತ ಹೆಚ್ಚಾಗಿ ನಮ್ಮ ಕೆಲಸ ಮಾತನಾಡಬೇಕು ಎಂದು ಹೇಳಿದ ಮಾತುಗಳು ಆಗಾಗ ಕಿವಿಗೆ ಬಡಿಯುತ್ತಲೇ ಇರುತ್ತವೆ.
ಸಾಕಷ್ಟು ಪ್ರಶಸ್ತಿ ಪ್ರಶಂಸೆಗಳು ಬಂದಿದ್ದರು ಕಿಂಚಿತ್ ನಾನೇನೋ ಸಾಧಿಸಿದ್ದೇನೆ ಎಂಬ ಹಮ್ಮು, ಆತ್ಮರತಿಯಂತೂ ಅವರಲ್ಲಿ ಮೊದಲೇ ನಾನು ನೋಡಿಲ್ಲ. ಅವರೊಂದು ತುಂಬಿದ ಕೊಡ ಇದ್ದ ಹಾಗೆ ಯಾರು ಎಷ್ಟೇ ಅಲುಗಾಡಿಸಿದರು ಅದು ತುಳುಕುವುದಿಲ್ಲ. ಮತ್ತೇನು ಹೇಳಲಿ? ನನ್ನೆಲ್ಲ ಹರಕೆ-ಹಾರೈಕೆ ನಿನ್ನ ಬದುಕನ್ನು ಚೆನ್ನಾಗಿಡಲಿ. ಬದುಕಿನ ಎಲ್ಲಾ ಸಾಹಸಗಳಿಗೂ ತೆರೆದುಕೊಳ್ಳುತ್ತಾ ಹೋದವರು ನೀವು. ಯಶಸ್ಸು ನಿಮ್ಮನ್ನು ತುಂಬಿಕೊಳಂಡು ತಬ್ಬಿಕೊಂಡಿತ್ತಾದರೂ ಅದನ್ನು ಎಲ್ಲಿಯೂ ತೋರಿಸಿಕೊಳ್ಳಲಿಲ್ಲ. ಮೌನವಾಗಿ ಕೆಲಸ ಮಾಡಿ ಮರೆಯಲ್ಲಿ ಅದನ್ನು ಸಂಭ್ರಮಿಸಿದವರು ನೀವು. ಮತ್ತೊಬ್ಬರ ನೋವುಗಳಿಗೆ ಮಿಡಿಯುವ ವ್ಯಕ್ತಿತ್ವವನ್ನು ನಿಮ್ಮಲ್ಲಿ ನಾನು ಕಂಡಿದ್ದೇನೆ. ಯಾರಿಂದಲೂ ಏನೂ ಬಯಸದ ಜೀವ ನಿಮ್ಮದು. ಯಾರಾದರೂ ಒಂದು ಸಣ್ಣ ಕೆಲಸ ಮಾಡಿದರು ಅವರನ್ನು ಪ್ರಶಂಸಿಸಿ ಹುರಿದುಂಬಿಸುವ ಪರಿ ಎಲ್ಲರಿಗೂ ಇರುವುದಿಲ್ಲ ಆದರೆ ಅದನ್ನು ನಿಮ್ಮಲ್ಲಿ ನಾನು ಕಂಡಿದ್ದೇನೆ. ಅಷ್ಟು ಮಾತ್ರವಲ್ಲ ತಾಳ್ಮೆಯ ಪ್ರತೀಕವಾಗಿಯೂ ನಿಮ್ಮನ್ನು ನೋಡಿದ್ದೇನೆ. ಪ್ರತಿ ವಿಚಾರವನ್ನು ತಿಳಿ ಹೇಳಿ ತಿದ್ದಿ ಸ್ಥಪತಿಯೊಬ್ಬನು ಕಲ್ಲನ್ನು ಶಿಲೆ ಮಾಡಿದಂತೆ ಏನೂ ಗೊತ್ತಿಲ್ಲದವರು ನಿಮ್ಮ ಬಳಿ ಕಲಿತರೆ ಕೊಂಚ ಮಟ್ಟಿಗೆಯಾದರು ಮಾತನಾಡುವ ಮತ್ತು ಬರೆಯುವ ಹಾಗೂ ವಿಚಾರಗಳ ಒಳಗೆ ಇಳಿಯುವ ವ್ಯಕ್ತಿಯಾಗಿ ಬದುಕು ಕಟ್ಟಿಕೊಳ್ಳಬಲ್ಲನೆಂಬ ಭರವಸೆ ನಾನು ಕಂಡಿದ್ದೇನೆ. ನಾನು ಕಂಡಂತೆ ಕೋಪ ಅಥವಾ ಅತಿಯಾದ ಕೋಪ ಇವೆರಡನ್ನು ನಿಮ್ಮಲ್ಲಿ ನೋಡಲಿಲ್ಲ, ಮೊಗದಲ್ಲೊಂದು ಸಣ್ಣ ನಗೆಯನ್ನಿರಿಸಿಕೊಂಡು ಇಲ್ಲಿಯವರೆಗೂ ಬದುಕು ಸವೆಸಿದ ನಿಮ್ಮ ವೃತ್ತಿ ಜೀವನದಲ್ಲಿ ಈಗ ಸಣ್ಣದೊಂದು ಬದಲಾವಣೆ. ನೀವು ಬದುಕಿನುದ್ದಕ್ಕೂ ಖುಷಿ ಕಾಣಬೇಕು. ಸಾಕಷ್ಟು ಕಷ್ಟಗಳನ್ನು ಸವೆಸಿ ಯಶಸ್ಸೆಂಬ ಶಿಖರವನ್ನೇರಿದವರು ನೀವು ನಿಮ್ಮ ಬಗ್ಗೆ ನಾನು ಮಾತನಾಡಲು ಚಿಕ್ಕವಳು ಆದರೂ ನಾನು ನಿಮ್ಮ ಕುರಿತು ಅಕ್ಷರಾಭಿಷೇಕ ಮಾಡಬಹುದಷ್ಟೇ. ಮತ್ತೇನು ಹೇಳಲಿ? ನನ್ನೆಲ್ಲ ಹರಕೆ-ಹಾರೈಕೆ ನಿಮ್ಮ ಬದುಕನ್ನು ಚೆನ್ನಾಗಿಡಲಿ. ನಿಮ್ಮ ಕುಟುಂಬಕ್ಕೆ ಒಳಿತಾಗಲಿ ನಿವೃತ್ತಿ ಬದುಕು ಸುಖಕರವಾಗಿರಲಿ sir.
ಡಾ ಮೇಘನ ಜಿ
ಉಪನ್ಯಾಸಕರು