ಸರ್ಕಾರಿ ನೌಕರರು ತಮ್ಮ ವೇತನ ಹೆಚ್ಚಳ ಆಗಿರುವುದನ್ನು ಚೆಕ್ ಮಾಡುವುದುದೇ ಹೇಗೆ?
ವೇತನ ಶ್ರೇಣಿ ಲೆಕ್ಕ ಹಾಕುವುದು ಹೇಗೆ?
ಏಳನೇ ವೇತನ ಆಯೋಗ ಅಪಡೆಟ್ ಸುದ್ದಿ.
ಬೆಂಗಳೂರು, ಜುಲೈ 25: ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ನೌಕರರ ವೇತನ ಎಷ್ಟು ಏರಿಕೆಯಾಗಲಿದೆ? ಎಂದು ಮಾಹಿತಿ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೆ ಅನುಮೋದನೆ ನೀಡಲಾಗಿತ್ತು. ಎಲ್. ಅತೀಕ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಆರ್ಥಿಕ ಇಲಾಖೆ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.
.ವೇತನ ಆಯೋಗದ ಸಂಪುಟ-1ರ ವರದಿಯಲ್ಲಿನ ಶಿಫಾರಸ್ಸುಗಳನ್ನು ಸರ್ಕಾರವು ಪರಿಗಣಿಸಿ, ಮುಖ್ಯ ವೇತನ ಶ್ರೇಣಿ ಮತ್ತು ಸ್ಥಾಯಿ ವೇತನ ಶ್ರೇಣಿಗಳ ಪರಿಷ್ಕರಣೆ ಬಗ್ಗೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಿದೆ. ಆದ್ದರಿಂದ 7ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುವ ಮುಖ್ಯ ವೇತನ ಶ್ರೇಣಿ ಮತ್ತು ಪರಿಷ್ಕೃತ 25 ಸ್ಥಾಯಿ ವೇತನ ಶ್ರೇಣಿಗಳನ್ನು ಪ್ರಕಟಿಸಲಾಗಿದೆ.
ವೇತನ ಶ್ರೇಣಿ ಲೆಕ್ಕ ಹಾಕುವುದು ಹೇಗೆ?: ದಿನಾಂಕ 01/07/2022ರಲ್ಲಿದ್ದಂತೆ ಮೂಲ ವೇತನ. ದಿನಾಂಕ 01/07/2022ರಲ್ಲಿದ್ದಂತಹ ಬೆಲೆ ಸೂಚ್ಯಂಕ ಹಂತ 361.704ಕ್ಕೆ ಸಂವಾದಿಯಾಗಿ ಲಭ್ಯವಿದ್ದ 31% ತುಟ್ಟಿ ಭತ್ಯೆ. ದಿನಾಂಕ 01/07/2022ರಲ್ಲಿ ಲಭ್ಯವಿದ್ದ ಮೂಲ ವೇತನದ ಮೇಲೆ 27.50% ರಷ್ಟು ಫಿಟ್ಮೆಂಟ್ ಸೌಲಭ್ಯ ಒಟ್ಟುಗೂಡಿಸಿ ಲೆಕ್ಕ ಹಾಕಿದಾಗ ಬರುವ ಮೊತ್ತದ ನಂತರದ ಹಂತದಲ್ಲಿ ವೇತನವನ್ನು ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸಲಾಗಿದೆ.
ಪರಿಷ್ಕೃತ ವೇತನ ಶ್ರೇಣಿಗಳ ಅನುಷ್ಠಾನದ ಆರ್ಥಿಕ ಸೌಲಭ್ಯವು 1ನೇ ಆಗಸ್ಟ್ 2024ರಿಂದ ಪ್ರಾಪ್ತವಾಗತಕ್ಕದ್ದು ಎಂದು ಸರ್ಕಾರದ ಆದೇಶ ಹೇಳಿದೆ. ಸರ್ಕಾರಿ ಆದೇಶದಲ್ಲಿ 25 ಸ್ಥಾಯಿ ಶ್ರೇಣಿಯ ವೇತನ ನೀಡಲಾಗಿದೆ. ಅಲ್ಲದೇ ಸರ್ಕಾರಿ ನೌಕರರ ಅನುಕೂಲಕ್ಕಾಗಿ ಆನ್ಲೈನ್ನಲ್ಲಿಯೂ ಚೆಕ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಅನುಷ್ಠಾನಗೊಂಡ ಬಳಿಕ ಆಗುವ ವೇತನ ಏರಿಕೆಯನ್ನು ಆನ್ಲೈನ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಇದಕ್ಕಾಗಿಯೇ ವೆಬ್ಸೈಟ್ ತಯಾರು ಮಾಡಲಾಗಿದೆ.
ಸರ್ಕಾರಿ ನೌಕರರು https://karpay.calculator.cafe/?utm_source=DH-MoreFromPub&utm_medium=DH-app&utm_campaign=DH ವೆಬ್ಸೈಟ್ ಮೂಲಕ ವೇತನ ಎಷ್ಟು ಹೆಚ್ಚಳ? ಎಂದು ಲೆಕ್ಕ ಹಾಕಬಹುದು.
ಸರ್ಕಾರ ಆದೇಶದಲ್ಲಿ ಭತ್ಯೆಗಳಾದ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆಗಳ ಪರಿಷ್ಕರಣೆಯ ಶಿಫಾರಸ್ಸು ಮತ್ತು ಪರಿಷ್ಕೃತ ವೇತನ ಹಾಗೂ ಪರಿಷ್ಕೃತ ಪಿಂಚಣಿಯಲ್ಲಿ ತುಟ್ಟಿ ಭತ್ಯೆ ಲೆಕ್ಕಾಚಾರ ಮಾಡಲು ಶಿಫಾರಸ್ಸು ಮಾಡಲಾದ ಪರಿಷ್ಕೃತ ಸೂತ್ರಕ್ಕೆ ಸಂಬಂಧಿಸಿದ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ ಎಂದು ಹೇಳಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಭಾರ ಭತ್ಯೆ ಮಂಜೂರಾತಿಯ ಪ್ರಸ್ತುತ ದರಗಳು ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಮುಂದುವರೆಯುತ್ತದೆ. ಸಾಮೂಹಿಕ ವಿಮಾ ಯೋಜನೆಗೆ ನೌಕರರ ವಂತಿಗೆ ಹೆಚ್ಚಳದ ಪರಿಷ್ಕರಣೆಯ ಶಿಫಾರಸ್ಸುಗಳನ್ನು ಅಂಗೀಕರಿಸಲಾಗಿದೆ. ಅನ್ವಯಿಸುವ ಬದಲಾವಣೆಯೊಂದಿಗೆ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ನೌಕರರು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೂ ಸಹ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು ದಿನಾಂಕ 01/08/2024ರಿಂದ ನಗದಾಗಿ ಪಾವತಿ ಮಾಡತಕ್ಕದ್ದು. ದಿನಾಂಕ 01/07/2022 ರಿಂದ 31/07/2024ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ನೌಕರರ ಪ್ರಕರಣಗಳಲ್ಲಿ, ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸತಕ್ಕದ್ದು ಎಂದು ತಿಳಿಸಿದೆ.