ಮಕ್ಕಳು ಕಲಿಕೆಯಲ್ಲಿ ಹಿಂದುಳಿದ್ರೆ, ಶಿಕ್ಷಕರ ವೇತನ ಬಡ್ತಿ ಕಡಿತಕ್ಕೆ ಆದೇಶ!!
ಬಿ.ಆರ್.ಸಿ ಹಾಗೂ ಸಿ ಆರ್ ಪಿ ಗಳಿಗೆ ಮುಖ್ಯವಾದ ಮಾಹಿತಿ..
ಸರ್ಕಾರದ ಆದೇಶ ಪಾಲನೆ ಮಾಡಿ…
ತುಮಕೂರ:
ವಿಷಯ: ಮಕ್ಕಳು ಕಲಿಕೆಯಲ್ಲಿ ಹಿಂದುಳಿದರೆ ಶಿಕ್ಷಕರನ್ನು ಜವಾಬ್ದಾರರನ್ನಾಗಿ ಮಾಡಿ ಕ್ರಮವಹಿಸುವ ಬಗ್ಗೆ. ಉಲ್ಲೇಖ: 1) ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವರ ಸಭೆ ದಿನಾಂಕ:19/07/2024.
2) ‘ಬೆವರ ಹನಿ’ ಪತ್ರಿಕೆ ವರದಿ ತುಮಕೂರು ದಿನಾಂಕ:20/07/2024.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಮಕ್ಕಳ ಕಲಿಕೆ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ಕೈಗೊಂಡಿದ್ದು ಅಧಿಕಾರಿಗಳು ಮಕ್ಕಳಿಗೆ ಸವಲತ್ತುಗಳನ್ನು ನೀಡುವುದರೊಂದಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ಮಕ್ಕಳು ಕಲಿಕೆಯಲ್ಲಿ ಹಿಂದುಳಿದರೆ ಶಿಕ್ಷಕರನ್ನೇ ನೇರ ಹೊಣೆ ಮಾಡಿ ಅವರ ವೇತನ ಬಡ್ತಿಯನ್ನು ಕಡಿತಗೊಳಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಭೆಯಲ್ಲಿ ಎಚ್ಚರಿಕೆ ನೀಡಿರುತ್ತಾರೆ.
ಜಿಲ್ಲೆಯ ವಿವಿಧ ಶಾಲೆಗಳಿಗೆ ಮಾನ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಕ್ಕಳು ಕಲಿಕಲ್ಲಿ ಹಿಂದುಳಿದಿರುವುದು ಕಂಡು ಬಂದಿದ್ದು ಮಕ್ಕಳು ಕನ್ನಡ ಅಕ್ಷರಗಳನ್ನೇ ಗುರುತಿಸಲು ಕಷ್ಟಪಡುತ್ತಿದ್ದಾರೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅವರಿಗೆ ಪ್ರಾಥಮಿಕ ಶಾಲಾ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಅಗತ್ಯ. ಶಿಕ್ಷಕರು ಹೆಚ್ಚಿನ ಸಮಯವನ್ನು ಮಕ್ಕಳ ಕಲಿಕೆಯ ಬಗ್ಗೆ, ಪರೀಶೀಲನೆ ನಡೆಸಿ ಮಕ್ಕಳ ಕಲಿಕಾಸಕ್ತಿಯನ್ನು ಹೆಚ್ಚಿಸಬೇಕು ಹಾಗೂ ಜಿಲ್ಲೆಯ ಎಸ್.ಎಸ್. ಎಲ್.ಸಿ. ಫಲಿತಾಂಶವನ್ನು ಉತ್ತಮಗೊಳಿಸಲು ಶಿಕ್ಷಕರು ಶ್ರಮಿಸಬೇಕು ಎಂದು ತಿಳಿಸಿರುತ್ತಾರೆ.
ಈ ನಿಟ್ಟಿನಲ್ಲಿ ನಮ್ಮ ತಾಲ್ಲೂಕಿನ ಎಲ್ಲಾ 1 ರಿಂದ 10ನೇ ತರಗತಿ ಸರ್ಕಾರಿ/ಅನುದಾನಿತ/ಅನುದಾನ ರಹಿತ/ಕಿರಿಯ, ಹಿರಿಯ, ಪ್ರೌಢ ಶಾಲೆಯ ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಮಕ್ಕಳ ಮೂಲ ಕಲಿಕೆಗೆ (ಎಫ್.ಎಲ್.ಎನ್ ಬುನಾದಿ ಸಾಮಥ್ಯಗಳು) ಹೆಚ್ಚು ಒತ್ತು ನೀಡಿ ಪ್ರತಿ ವಿದ್ಯಾರ್ಥಿಯು ಅರ್ಹ ವಯಸ್ಸಿನ ಸಾಮರ್ಥ್ಯವನ್ನು ವೃದ್ಧಿಸಲು, ಶ್ರಮವಹಿಸಿ ಕಲಿಸಲು ತಿಳಿಸಿದೆ. ಮಗುವಿನ ಮೂಲ ಸಾಮರ್ಥ್ಯವನ್ನು ಸಾಧಿಸಲು ವಿಫಲವಾದಲ್ಲಿ ಇಲಾಖೆ ಕೈಗೊಳ್ಳುವ ಕ್ರಮಕ್ಕೆ ಎಲ್ಲರೂ ಜವಬ್ದಾರರೆಂದು ತಿಳಿಯುವುದು.
ಮಾರ್ಗದರ್ಶಿ ಅಧಿಕಾರಿಗಳಾದ ಬಿ.ಆರ್.ಸಿ, ಇ.ಸಿ.ಓ, ಬಿ.ಆರ್.ಪಿ, ಹಾಗೂ ಸಿ.ಆರ್.ಪಿ ರವರು ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ಮಗುವು ಮೂಲ ಸಾಮರ್ಥ್ಯವನ್ನು ಸಾಧಿಸಿರುವ ಬಗ್ಗೆ, ಮೌಲ್ಯಮಾಪನ ಮಾಡಿ ವಿದ್ಯಾರ್ಥಿವಾರು, ತರಗತಿವಾರು ಪ್ರತಿ 15 ದಿನಗಳಿಗೊಮ್ಮೆ ಬಿ.ಆರ್.ಸಿ ಕಛೇರಿಗೆ ವರದಿ ನೀಡುವುದು.
ಚಿಕ್ಕನಾಯಕನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಮಾಡಿರುತ್ತಾರೆ..