ನೆನಪುಗಳು
ಕಳೆದ ಕ್ಷಣಗಳ ಮಳಿಗೆಯಲಿ,
ನೆನಪುಗಳ ಮಾಳಿಗೆಯಲಿ,
ಹುಡುಕುತಿರುವೆ ನಿನ್ನೊಡನೆ ಕಳೆದ ರಸ ನಿಮಿಷಗಳ,
ಹೃದಯದ ಕನ್ನಡಿಯ ಮೇಲೆ ಅಳಿಯದೇ ಉಳಿದಿರುವ ಕೆಲ ಬಿಂಬಗಳ,
ಸಾಗರದ ತೀರದಲಿ ಮರಳಿನ ಮೇಲೆ ಗೀಚಿದ ಹೆಸರುಗಳ,
ಮರಳು ಮನದಂಗಳದಿ ರಿಂಗಣಿಸುತಿರುವ ಪಿಸುಮಾತುಗಳ..
ಕಳೆದ ದಿನಗಳು ಬಾರದೇ ಇರಬಹುದು,
ಹಳೆಯ ಓಣಿಗಳು ಇರದೇ ಇರಬಹುದು,
ಇಂದಿಗೂ ಸಾಗುತಿರುವೆ ನಾವು ಸಾಗಿದ ದಾರಿಯಲಿ,
ಹುಡುಕುತ ಹೆಜ್ಜೆ ಗುರುತುಗಳ,
ನೀ ಮುಡಿದ ಮಲ್ಲಿಗೆಯ ಪರಿಮಳದ ಜಾಡುಗಳ,
ನೀ ನಕ್ಕಾಗ ಮೂಡಿದ ಬೆಳದಿಂಗಳು ರಾತ್ರಿಗಳ,
ನೀ ಮುನಿದಾಗ ಕೆಂಪಾದ ಸಂಜೆಗಳ,
ನೀನಾವರಿಸಿದ ಮೋಡಗಳ..
ಹನಿಗಳಾಗಿ ತಟಪಟಿಸುತಿವೆ ನಿನ್ನ ನೆನಪುಗಳು,
ಮನದಂಗಳವ ಹಸಿರಾಗಿಸಿವೆ ಕಳೆದ ಕ್ಷಣಗಳು…
ಪ್ರಸನ್ನ ಜಾಲವಾದಿ ವಾಸ್ತುಶಿಲ್ಪಿ(architecture)
ಕಲಬುರಗಿ