ಶಿಕ್ಷಕರ ಕೌನ್ಸೆಲಿಂಗ್ ಗೂ ಮುನ್ನವೇ ವರ್ಗ!!
ಶಿಕ್ಷಕರ ಕೆಂಗಣ್ಣಿಗೆ ಗುರಿಯಾದ ನಡೆ | ಭ್ರಷ್ಟಾಚಾರದ ಅನುಮಾನ!!
ಬೆಂಗಳೂರು:
ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ಗೆ ಕೇವಲ 2 ದಿನಗಳು ಬಾಕಿ ಇರುವಾಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರ ಅನುಮೋದನೆ ಪಡೆದು 27 ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಹಾಗೂ 160ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರ ನಿಯೋಜನೆ (ಡೆಪ್ಯುಟೇಷನ್) ಮಾಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಶಿಕ್ಷಕರ ವರ್ಗಾವಣೆ ಕಾಯ್ದೆ ಉಲ್ಲಂಘನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಜು.4 ಹಾಗೂ 11ರಂದು ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಜು.15ರಂದು ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ವರ್ಗಾವಣೆ ಪ್ರಕ್ರಿಯೆ ಜಾರಿಯಲ್ಲಿರುವ ಸಮಯದಲ್ಲಿ ನಿಯೋಜನೆ ಮತ್ತು ವರ್ಗಾವಣೆಗೆ ಯಾವ ರೀತಿಯಲ್ಲಿ ಅನುಮತಿ ಕೊಡುತ್ತಾರೆ ಎಂಬುದು ಶಿಕ್ಷಕರ ಪ್ರಶ್ನೆಯಾಗಿದೆ..
ಒಂದು ವಾರದ ಅಂತರದಲ್ಲಿ 160ಕ್ಕೂ ಅಧಿಕ ಪ್ರಾಥಮಿಕ ಶಾಲಾ ಶಿಕ್ಷಕರನ್ನು ತಾಲೂಕು, ಜಿಲ್ಲಾ ಹಂತ ಹಾಗೂ ವಿವಿಧ ಜಿಲ್ಲೆಗಳಿಂದ ಮತ್ತೊಂದು ಜಿಲ್ಲೆಗೆ ನಿಯೋಜಿಸಿ ಆದೇಶಿಸಿದೆ. ವರ್ಗಾವಣೆ ಮುಗಿವ ಮುನ್ನವೇ ಯಾವ ಮಾನದಂಡ ಆಧರಿಸಿ ನಿಯೋಜಿಸಲಾಗಿದೆ ಎಂಬುದು ಶಿಕ್ಷಕರ ಪ್ರಶ್ನೆ. ಈ ಹಿಂದೆ ತಾಲೂಕು ಹಂತದಲ್ಲಿ ಬಿಇಒ, ಜಿಲ್ಲಾ ಮಟ್ಟದಲ್ಲಿ ಡಿಡಿಪಿಐ ಹಾಗೂ ವಿಭಾಗವಾರು ಅಪರ ಆಯುಕ್ತರು ನಿಯೋಜಿಸುತ್ತಿದ್ದರು. ಖಾಲಿ ಹುದ್ದೆ, ಹೆಚ್ಚುವರಿ ಶಿಕ್ಷಕರ ಮಾಹಿತಿ ಪಡೆದು ಅವಶ್ಯ ಎನಿಸದಲ್ಲಿ ಸರ್ಕಾರದ ಅನುಮತಿ ಪಡೆದು ಪ್ರಕ್ರಿಯೆ ನಡೆಸಲಾಗುತ್ತಿತ್ತು.
ಈ ಹಿಂದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನಿಯೋಜನೆ ಮಾಡಿದ ಉದಾಹರಣೆಗಳಿಲ್ಲ. ಈಗ ಅದ್ಯಾವುದನ್ನು ಲೆಕ್ಕಿಸದೆ ನೇರವಾಗಿ ಶಿಕ್ಷಣ ಸಚಿವರ ಆಣತಿಯಂತೆ ನಿಯೋಜಿಸಲಾಗುತ್ತಿದೆ. ಸದ್ಯ 160ಕ್ಕೂ ಅಧಿಕ ಶಿಕ್ಷಕರ ನಿಯೋಜನೆ ಆದೇಶ ಹೊರಡಿಸಿದ್ದು, ಒಟ್ಟು ಒಂದು ಸಾವಿರ ಶಿಕ್ಷಕರ ನಿಯೋಜಿಸುವ ಯೋಜನೆ ಇದೆ ಎಂಬ ಆರೋಪ ಕೇಳಿ ಬಂದಿದೆ. ಶಿಕ್ಷಕರು ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರ ಶಿಫಾರಸು ಪತ್ರಗಳನ್ನು ಹಿಡಿದು ನಿಯೋಜನೆ ಮಾಡಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಮೊದಲೇ ರಾಜ್ಯದಲ್ಲಿ ಕಳೆದ ವರ್ಷದ ಫಲಿತಾಂಶ ಕುಸಿದಿದೆ. ಶಿಕ್ಷಕರ ಕೊರತೆಯೂ ಒಂದು ಕಾರಣವೆಂಬುದು ಇಲಾಖೆ ಗಮನಕ್ಕಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ನೀಗಿಲ್ಲ. ರಾಜ್ಯಾದ್ಯಂತ 53 ಸಾವಿರ ಹುದ್ದೆ ಖಾಲಿ ಇವೆ. ಹೀಗಿದ್ದರೂ ಕಕ ಭಾಗದ ಜಿಲ್ಲೆಗಳು ಸೇರಿ ಎಲ್ಲ ಜಿಲ್ಲೆಗಳಿಗೆ ಇಷ್ಟುದೊಡ್ಡ ಸಂಖ್ಯೆಯಲ್ಲಿ ಶಿಕ್ಷಕರನ್ನು ನಿಯೋಜಿಸಿರುವುದು ಅಪಸ್ವರಕ್ಕೆ ದಾರಿ ಮಾಡಿಕೊಟ್ಟಿದೆ.
3-4 ಶಾಲೆಗಳ ಆಯ್ಕೆಗೆ ಅವಕಾಶ:
ರಾಜ್ಯದಲ್ಲಿ 2023-24ನೇ ಸಾಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳು ಪ್ರಗತಿಯಲ್ಲಿದ್ದು, ಇದೇ 19ರಿಂದ ಜಿಲ್ಲಾ ಹಂತದ ವರ್ಗಾವಣೆ ಕೌನ್ಸೆಲಿಂಗ್ ಆರಂಭವಾಗಲಿದ್ದು, ಸಾವಿರಾರು ಶಿಕ್ಷಕರು ವರ್ಗಾವಣೆಗಾಗಿ ಕಾಯುತ್ತಿದ್ದಾರೆ. ಆದರೆ, ಇದರ ಮಧ್ಯೆ ಸರ್ಕಾರ ಸದ್ದಿಲ್ಲದೆ ಬೇರೆ ಬೇರೆ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸುತ್ತಿದೆ. ನಿಯೋಜನೆ ಸಮಯದಲ್ಲಿ ಕೆಲವು ಶಿಕ್ಷಕರಿಗೆ ಮೂರು ಅಥವಾ ನಾಲ್ಕು ಶಾಲೆಗಳನ್ನು ಆಯ್ಕೆ ಮಾಡಲು ಅವಕಾಶ ನೀಡಿರುವುದು ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಅನೇಕ ಶಿಕ್ಷಕರನ್ನು ಒಂದೇ ಜಿಲ್ಲೆಯೊಳಗೆ ಒಂದು ತಾಲೂಕಿನಿಂದ ಇನ್ನೊಂದಕ್ಕೆ ನಿಯೋಜಿಸಲಾಗಿದೆ ಮತ್ತು ಕೆಲವು ಶಿಕ್ಷಕರನ್ನು ಅದೇ ತಾಲೂಕಿನಲ್ಲಿರುವ ವಿವಿಧ ಶಾಲೆಗಳಿಗೆ ನಿಯೋಜಿಸಲಾಗಿದೆ.
ವರ್ಗಾವಣೆ ಕೌನ್ಸೆಲಿಂಗ್ ಸಮಯದಲ್ಲಿ ಸಂಬಂಧಪಟ್ಟ ತಾಲೂಕು ಅಥವಾ ಜಿಲ್ಲೆಯ ವ್ಯಾಪ್ತಿಯಲ್ಲಿ ಒಂದು ಶಾಲೆಯನ್ನು ಮಾತ್ರ ಆಯ್ಕೆ ಮಾಡಲು ನಮಗೆ ಅವಕಾಶವಿದೆ. ಆದರೆ, ಕೊಪ್ಪಳ ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ನಿಯೋಜನೆಗೊಂಡಿರುವ ಶಿಕ್ಷಕರೊಬ್ಬರು ತಿ.ನರಸೀಪುರ ತಾಲೂಕಿನಲ್ಲಿ ನಾಲ್ಕು ಶಾಲೆಗಳನ್ನುಆಯ್ಕೆ ಮಾಡಲು ಅವಕಾಶ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಿಕಿನಿಂದ ನೆಲಮಂಗಲ ತಾಲೂಕಿಗೆ ನಿಯೋಜನೆಗೊಂಡಿರುವ ಶಿಕ್ಷಕರಿಗೆ ಮೂರು ಶಾಲೆಗಳ ಆಯ್ಕೆ ನೀಡಲಾಗಿದೆ.
ಹೀಗಾಗಿ ಜುಲೈ 19 ನಡೆಯಲಿರುವ ವರ್ಗಾವಣೆ ಕೌನ್ಸೆಲಿಂಗ್ ವೇಳೆ ನಿಯೋಜನೆಗೊಂಡ ಶಿಕ್ಷಕರು ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತೋರಿಸುತ್ತಾರಾ? ಬಾಲಿ ತೋರಿಸುತ್ತೋ ಇಲ್ಲವೋ ಗೊತ್ತಿಲ್ಲ’ ಎಂಬುದು ವರ್ಗಾವಣೆ ಬಯಸಿರುವ ಶಿಕ್ಷಕರೊಬ್ಬರ ಆತಂಕವಾಗಿದೆ.
ಕಾಯ್ದೆ ಏನು ಹೇಳುತ್ತದೆ?
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ)
ಅಧಿನಿಯಮ-2020ರ ಅಧಿಸೂಚನೆಯಂತೆ ವರ್ಗಾವಣೆ ಪ್ರಕ್ರಿಯೆಗಳನ್ನು ನಡೆಸಬೇಕು. ಅರ್ಜಿ ಸಲ್ಲಿಕೆ, ಕೌನ್ಸೆಲಿಂಗ್, ಸ್ಥಳ ನಿಯುಕ್ತಿ ಸೇರಿ ಪ್ರತಿ ಹಂತ ಕೂಡ ಆನ್ಲೈನ್ ಮೂಲಕವೇ ನಡೆಸಬೇಕಿದೆ ಎಂಬ ನಿಯಮವಿದೆ. ಆದರೆ, ಸಚಿವರ ಅನುಮೋದನೆ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂಬ ಆದೇಶ ಹೊರಡಿಸಲಾಗಿದೆ
ಶಿಕ್ಷಕರ ವರ್ಗಾವಣೆ ಕಾಯ್ದೆ ಅನುಸಾರವೇ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ನಿಯೋಜನೆ ನಮ್ಮ ಹಂತದಲ್ಲಿ ಆಗಿಲ್ಲ. ಸರ್ಕಾರದ ಮಟ್ಟದಲ್ಲಿ ಆಗಿದೆ. ಶಿಕ್ಷಕರ ಸಂಖ್ಯೆ, ಖಾಲಿ ಹುದ್ದೆಗಳ ಮಾಹಿತಿ ನೀಡಲಾಗಿದೆ.
| ಡಾ. ಎಸ್.ಆಕಾಶ ಅಪರ ಆಯುಕ್ತ, ಶಿಕ್ಷಣ ಇಲಾಖೆ ಕಲಬುರಗಿ
ಶಿಕ್ಷಕರ ವರ್ಗಾವಣೆಗೆ ಕಾಯ್ದೆ ರೂಪಿಸಲಾಗಿದೆ. ನಿಯಾಮವಳಿಯಂತೆಯೇ ವರ್ಗಾವಣೆ ನಡೆಯಬೇಕು. ಹೀಗಿರುವಾಗ ನೂರಾರು ಶಿಕ್ಷಕರನ್ನು ಶಾಸಕ, ಸಚವರ ಶಿಫಾರಸ್ಸು ಪತ್ರದ ಮೇಲೆ ಯಾವುದೇ ನಿಯಮಾವಳಿ ಪಾಲಿಸದೇ ನಿಯೋಜಿಸಲಾಗುತ್ತಿದೆ.
| ಹೆಸರು ಹೇಳಲಿಚ್ಛಿಸದ ಶಿಕ್ಷಕ