ಸ. ಕಿ ಪ್ರಾ ಶಾಲೆ ರಂಭಾಪುರಿ ನಗರ ಲಕ್ಷ್ಮೇಶ್ವರ ಶಾಲೆಗೆ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ 2024
ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಚಿಕ್ಕಬಳ್ಳಾಪುರ ವತಿಯಿಂದ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಯನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಂಭಾಪುರಿ ನಗರ ಲಕ್ಷ್ಮೇಶ್ವರ ಶಾಲೆಗೆ ನೀಡಿ ಗೌರವಿಸಿದೆ. ಪ್ರಶಸ್ತಿಯು 10,000 ರೂಗಳ ನಗದು ಹಾಗೂ ಆಕರ್ಷಕ ಪಾರಿತೋಷಕ ಒಳಗೊಂಡಿದೆ. ಮತ್ತು ಶಾಲೆಯ ಆಕರ್ಷಕ ಪ್ರದರ್ಶನ ಫೋಟೋಗಳನ್ನು ಟ್ರಸ್ಟ್ ನ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಈ ಶಾಲೆ 1 ಎಕರೆ ಜಾಗವನ್ನು ಹೊಂದಿದ್ದು, ಅರಣ್ಯ ಇಲಾಖೆಯ ಸಹಾಯದಿಂದ 100 ಗಿಡಮರಗಳನ್ನು ನೆಟ್ಟಿದ್ದು ಹಸಿರಿನಿಂದ ಕಂಗೊಳಿಸುತ್ತಿದೆ. ಈ ಶಾಲೆಯಲ್ಲಿ 26 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಲ್ಲ ಕಲಿಕಾ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಹಾಗೂ ಕ್ರಿಯಾಶೀಲತೆಯಿಂದ ಪಾಲ್ಗೊಳ್ಳುತ್ತಾರೆ. ಇಲ್ಲಿ ಇಬ್ಬರು ಶಿಕ್ಷಕಿಯರು ಕಾರ್ಯ ನಿರ್ವಹಿಸುತ್ತಿದ್ದು ಬೋಧನೆ ಹಾಗೂ ಕಲಿಕೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ. 2023 24ನೇ ಸಾಲಿನಲ್ಲಿ ಹಲವು ಪ್ರತಿಭಾಕಾರಂಜಿ ಪ್ರಶಸ್ತಿಗಳು ಈ ಶಾಲೆಗೆ ದೊರೆತಿವೆ ಮತ್ತು ತಾಲೂಕು ಮಟ್ಟದಲ್ಲಿಯೂ ಕೂಡ ಇಲ್ಲಿನ ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಸಿರು ನೈರ್ಮಲ್ಯ ಅಭ್ಯುಧಯ ಶಾಲಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ ನಿಮಿತ್ಯ ಇತ್ತೀಚೆಗೆ ಶ್ರೀ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಖಂಡೋಜಿಯವರು ನೀಡಿದ ಎರಡು ತೆಂಗಿನ ಸಸಿಗಳನ್ನು ಶ್ರೀ ಸಂತೋಷ್ ಅಲ್ಲತ್ ಹಾಗೂ ಶ್ರೀ ರಾಜೀವ್ ಆರ್ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಇವರು ನೆಟ್ಟು ಶಾಲೆ ಬಗ್ಗೆ ಪ್ರಶಂಸಿಸಿದರು.
“ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್” ವತಿಯಿಂದ ಉತ್ತಮ 100 ಸರಕಾರಿ ಶಾಲೆಗಳಿಗೆ ರಾಜ್ಯ ಮಟ್ಟದಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ. ನಮ್ಮ ಶಾಲೆ ಆಯ್ಕೆ ಆಗಿದ್ದು ತುಂಬಾ ಸಂತಸ ತಂದಿದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಯ್ಯ ಕುಲಕರ್ಣಿ ಹೇಳಿದರು.
ಮುಖ್ಯ ಶಿಕ್ಷಕಿಯರಾದ ಜೆ ಎಫ್ ಹಬೀಬ ಮತ್ತು ಸಹ ಶಿಕ್ಷಕಿಯರಾದ ನಿರ್ಮಲಾ ಎನ್ ಮತ್ತು ಮಾರ್ಗದರ್ಶನ ನೀಡಿದ ಸಿ ಆರ್ ಪಿ ಸತೀಶ ಬೊಮಲೆ ರವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ ಎಚ್ ಎನ್ ನಾಯಕ ಅಭಿನಂದಿಸಿದರು.
ಪ್ರಶಸ್ತಿ ವಿತರಣೆ ಕಾರ್ಯಕ್ರಮವು ದಿನಾಂಕ 27 ರ ಜುಲೈ ಶನಿವಾರದಂದು ಸತ್ಯಸಾಯಿ ಗ್ರಾಮ ಮುದ್ದೇನಹಳ್ಳಿ ಚಿಕ್ಕಬಳ್ಳಾಪುರ ಇಲ್ಲಿ ಬೆಳಿಗ್ಗೆ 9 ಗಂಟೆಗೆ ಜರುಗಲಿದೆ.