7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಕುರಿತು ಮಾನ್ಯ ಮುಖ್ಯಮಂತ್ರಿಗಳ ಹೇಳಿಕೆ.
1) ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆ, ಪಿಂಚಣಿ ಪರಿಷ್ಕರಣೆಯ ಬೇಡಿಕೆಗಳನ್ನು ಪರಿಷ್ಕರಿಸಲು ದಿನಾಂಕ: 19.11.2022ರಂದು 7ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿತ್ತು. ಅದರಂತೆ, ವೇತನ ಆಯೋಗವು 24.03.2024ರಂದು ವರದಿಯನ್ನು ಸಲ್ಲಿಸಿರುತ್ತದೆ.
2) 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆ, ಪಿಂಚಣಿಯನ್ನು ದಿನಾಂಕ: 01.07.2022ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ ದಿನಾಂಕ: 01.08.2024ರಿಂದ ಅನುಷ್ಠಾನಗೊಳಿಸಲು ದಿನಾಂಕ: 15.07.2024ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ. ಅದರಂತೆ, ದಿನಾಂಕ: 01.07.2022ಕ್ಕೆ ನೌಕರರ ಮೂಲ ವೇತನಕ್ಕೆ ಶೇಕಡ 31ರಷ್ಟು ತುಟ್ಟಿ ಭತ್ಯೆ ಮತ್ತು ಶೇ. 27.50 ರಷ್ಟು ಫಿಟ್ಮೆಂಟ್ ಸೇರಿಸಿ ವೇತನ ಮತ್ತು ಪಿಂಚಣಿಯನ್ನು ಪರಿಷ್ಕರಿಸಲಾಗುವುದು. ಇದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇ 58.50 ರಷ್ಟು ಹೆಚ್ಚಳವಾಗುತ್ತದೆ. ಮನೆಬಾಡಿಗೆ ಭತ್ಯೆಯಲ್ಲಿ ಶೇ. 32ರಷ್ಟು ಹೆಚ್ಚಳವಾಗುತ್ತದೆ.
3) ನೌಕರರ ಕನಿಷ್ಟ ಮೂಲವೇತನವು ರೂ. 17,000/- ರಿಂದ ರೂ. 27,000-/ಕ್ಕೆ ಗರಿಷ್ಟ ವೇತನವು ರೂ. 1,50,600/- ರಿಂದ ರೂ. 2,41.200/-ಗಳಿಗೆ ಪರಿಷ್ಕರಣೆಯಾಗುತ್ತದೆ. ನೌಕರರ ಕನಿಷ್ಠ ಪಿಂಚಣಿಯು ರೂ.8,500/-ರಿಂದ ರೂ.13,500/-ಕ್ಕೆ ಮತ್ತು ಗರಿಷ್ಠ ಪಿಂಚಣಿಯು ರೂ.75,300/- ರಿಂದ ರೂ. 1,20,600ಕ್ಕೆ ಪರಿಷ್ಕರಣೆಗೊಳ್ಳುತ್ತದೆ. ಈ ಪರಿಷ್ಕರಣೆಯು, ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಅನ್ವಯವಾಗುತ್ತದೆ.
4) ನೌಕರರ ವೇತನ ಪರಿಷ್ಕರಣೆಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ರೂ.20.208/- ಕೋಟಿಗಳಷ್ಟು ಹೆಚ್ಚುವರಿ ವೆಚ್ಚ ಉಂಟಾಗುತ್ತದೆ. ಈ ಹೆಚ್ಚುವರಿ ವೆಚ್ಚಕ್ಕೆ 2024-25ರ ಆಯವ್ಯಯದಲ್ಲಿ ಅಗತ್ಯ ಅನುದಾನವನ್ನು ಮೀಸಲಿಡಲಾಗಿದೆ.