.
ಮೈಸೂರು: ‘ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಜುಲೈ 29ರಿಂದ ನೌಕರರು ಕಚೇರಿ ಕೆಲಸಗಳಿಗೆ ಗೈರು ಹಾಜರಾಗಲಿದ್ದಾರೆ. ಮುಂದಿನ ಪರಿಣಾಮ ಎದುರಿಸಲು ಸರ್ಕಾರ ಸಿದ್ಧವಾಗಲಿ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಶನಿವಾರ ಸಂಘದ ಜಿಲ್ಲಾ ಶಾಖೆಯು ಏರ್ಪಡಿಸಿದ್ದ, ನೂತನ ಜನಪ್ರತಿನಿಧಿಗಳಿಗೆ ಅಭಿನಂದನೆ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ‘ದೇಶದಲ್ಲಿಯೇ ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯವನ್ನು 2 ನೇ ಸ್ಥಾನಕ್ಕೇರಿಸಿದ ಸಾಧನೆಯಲ್ಲಿ, ಗ್ಯಾರಂಟಿಗಳ ಅನುಷ್ಠಾನದಲ್ಲಿ ನೌಕರರ ಕೊಡುಗೆ ಅಪಾರ. ಆದರೆ ಶೇ 27.50 ಫಿಟ್ಮೆಂಟ್ ಕೊಡಲ್ಲ. ಆರ್ಥಿಕ ಸೌಲಭ್ಯಗಳನ್ನು ಮುಂದಿನ ವರ್ಷ ಏಪ್ರಿಲ್ನಿಂದ ಕೊಡಲಾಗುತ್ತದೆ ಎಂಬ ಮಾತುಗಳು ವಿಧಾನಸೌಧದ ಮೊಗಸಾಲೆಯಲ್ಲಿ ಕೇಳುತ್ತಿವೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು’ ಎಂದು ಅಬ್ಬರಿಸಿದರು.
‘ಸಂಘ ಮತ್ತು ಸರ್ಕಾರವನ್ನು ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ. ಷಡಕ್ಷರಿಯವರು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂದು ಆರೋಪಿಸುತ್ತಿದ್ದಾರೆ. ಇದನ್ನು ಕೇಳಲು ನಾನು ಸಿದ್ಧನಿಲ್ಲ. ಈಗಾಗಲೇ ಸಾಕಷ್ಟು ಅವಕಾಶ ನೀಡಿಯಾಗಿದೆ. ಓಪಿಎಸ್ ಜಾರಿ, ಆರೋಗ್ಯ ಸಂಜೀವಿನಿ ವಿಮೆ ಜಾರಿಯಲ್ಲೂ ಮೀನಾಮೇಷ ಎಣಿಸುತ್ತಿರುವುದು ಖಂಡನೀಯ. ಎಲ್ಲರೂ ಒಗ್ಗಟ್ಟಾಗಿ, ಸರ್ಕಾರವನ್ನು ಟೀಕಿಸದೇ, ಮೌನವಾಗಿ ಗೈರು ಹಾಜರಾಗಿ ಪ್ರತಿಭಟಿಸಬೇಕು. ಇಂದು ಸಂಘ ಬಲಿಷ್ಠವಾಗಿದೆ, ಯಾವುದೇ ಭಯ ಬೇಡ’ ಎಂದರು.
‘7ನೇ ವೇತನ ಆಯೋಗದ ವರದಿ ಬಂದರೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ನೌಕರರ ಸಮಾವೇಶದಲ್ಲಿ ಹೇಳಿದ್ದರು. ವರದಿ ಬಂದು 4 ತಿಂಗಳಾದರೂ ಭರವಸೆ ಈಡೇರಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.