ಅಧಿಕಾರಿ ಅಮಾನತ್ ತೆರವಿಗೆ ಮೂರು ತಿಂಗಳು ಗಡುವು,!!
ನೌಕರರ ಸಸ್ಪೆಂಡ್ ಶಿಕ್ಷೆ ಸಡಿಲ..
ಸರ್ಕಾರದ ಆದೇಶವೇನು?ಏನೆಲ್ಲ ಅನುಕೂಲ?
ಬೆಂಗಳೂರು: ಕರ್ತವ್ಯಲೋಪದಲ್ಲಿ ಇಲಾಖಾ ವಿಚಾರಣೆ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಲ್ಲಿ ಸೇವೆಯಿಂದ ಅಮಾನತುಗೊಳ್ಳುವ ಸರ್ಕಾರಿ ಅಧಿಕಾರಿ, ನೌಕರರಿಗೆ ಸರ್ಕಾರ ಬಿಗ್ ರಿಲೀಫ್ ಕೊಟ್ಟಿದೆ. 2 ವರ್ಷಗಳ ಸುದೀರ್ಘ ಅವಧಿವರೆಗೆ ಅಮಾನತಿನಲ್ಲೇ ಮುಂದುವರಿಸಿ ಮಾನಸಿಕ ಕಿರುಕುಳ ಕೊಡುವ ಪದ್ಧತಿಗೆ ಕಡಿವಾಣ ಹಾಕಿದ್ದು, ಇನ್ಮುಂದೆ ವಿಚಾರಣೆ ಪಕ್ರಿಯೆಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಿ ಸಸ್ಪೆಂಡ್ ಆದೇಶವನ್ನು ತೆರವುಗೊಳಿಸಬೇಕು ಎಂದು ಆದೇಶ ಹೊರಡಿಸಿದೆ.
ಒಳಾಡಳಿತ ಇಲಾಖೆಯ ಅಧೀನಕ್ಕೆ ಬರುವ ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಿದೆ. ಸದ್ಯ ಇಲಾಖಾ ವಿಚಾರಣೆ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು 6 ತಿಂಗಳಿಗೂ ಮೀರಿ 1 ರಿಂದ 2 ವರ್ಷಗಳ ಅವಧಿಗೆ ದೀರ್ಘ ಕಾಲದವರೆಗೆ ಅಮಾನತ್ತಿನಲ್ಲಿ ಮುಂದುವರಿಸುತ್ತಿರುವ ವಿಚಾರಕ್ಕೆ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರದಂಥ ಪ್ರಕರಣಗಳಲ್ಲಿ ಸಾಕಷ್ಟು ಅಧಿಕಾರಿ ಮತ್ತು ಸಿಬ್ಬಂದಿ ಅಮಾನತುಗೊಳ್ಳುತ್ತಲೇ ಇರುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಆರೋಪ ಸಾಬೀತಾಗದೆ ಖುಲಾಸೆಯಾಗುತ್ತಾರೆ. ಆದರೆ, 2 ವರ್ಷದವರೆಗೆ ಅಮಾನತು ಆದೇಶ ಮುಂದುವರಿಸಿ, ಕೊನೆಗೆ ಆರೋಪಮುಕ್ತರಾದರೆ ಅಂತಹ ಅಧಿಕಾರಿ ಮತ್ತು ಸಿಬ್ಬಂದಿಗೆ ಅಮಾನತಿನಲ್ಲಿದ್ದ ಅಷ್ಟೂ ಅವಧಿಗೆ ಪೂರ್ಣ ಪ್ರಮಾಣದ ವೇತನ ಮತ್ತು ಭತ್ಯೆ ಪಾವತಿಸಬೇಕಾಗುತ್ತದೆ. ಕೆಲಸ ಮಾಡದಿದ್ದರೂ ವೇತನ, ಭತ್ಯೆ ಪಾವತಿಯಿಂದ ಸರ್ಕಾರಕ್ಕೆ ಅನಗತ್ಯ ಆರ್ಥಿಕ ಹೊರೆಯಾಗುತ್ತಿದ್ದು, ಇದನ್ನು ತಪ್ಪಿಸಲು ಸರ್ಕಾರ ನಿರ್ಧರಿಸಿದೆ.
ಬಲವಾದ ಕಾರಣವಿದ್ದರೆ ಬೇಡ: ಅಮಾನತಿನಲ್ಲಿರಿಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು 6 ತಿಂಗಳ ನಂತರವೂ ಅಮಾನತಿನಲ್ಲಿ ಮುಂದುವರಿಸುವ ಅನಿವಾರ್ಯ ಮತ್ತು ಅಗತ್ಯವಿದ್ದಲ್ಲಿ ಸಕ್ಷಮ ಪ್ರಾಧಿಕಾರಿಗಳ ಹಂತದಲ್ಲಿ ಕಡ್ಡಾಯವಾಗಿ ಪರಾಮರ್ಶನೆ ಸಮಿತಿ ಸಭೆ ನಡೆಸಬೇಕು. ಅಮಾನತಿನಲ್ಲೇ ಮುಂದುವರಿಸಬೇಕಾಗಿದ್ದಲ್ಲಿ ಸಮರ್ಥನೀಯ ಕಾರಣಗಳನ್ನು ದಾಖಲಿಸಿ. ಅಮಾನತು ಮುಂದುವರಿಸಲು ಹಾಗೂ ಅಮಾನತು ಭತ್ಯೆಯನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಇಲಾಖೆ ಮುಖ್ಯ ಸ್ಥರಿಗೆ ಸರ್ಕಾರ ಸ್ಪಷ್ಟ ಸೂಚನೆ ಕೊಟ್ಟಿದೆ.
ಜೈಲಿಂದ ಬಿಡುಗಡೆ ತಕ್ಷಣವೇ ತೆರವು: ಕ್ರಿಮಿನಲ್ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರುವ ಅಧಿಕಾರಿ ಮತ್ತು ಸಿಬ್ಬಂದಿಯ ಅಮಾನತನ್ನು ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡು ಜೈಲಿನಿಂದ ಬಿಡುಗಡೆಯಾದ ತಕ್ಷಣವೇ ಅಮಾನತು ಅದೇಶವನ್ನು ತೆರವು ಗೊಳಿಸಲ ಸೂಚನೆ ಕೊಡಲಾಗಿದೆ.
ಪೊಲೀಸ್ ಇಲಾಖೇಲಿ ಜಾಸ್ತಿ: ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ನಿಂದ ಡಿವೈಎಸ್ಪಿ ಹುದ್ದೆವರೆಗೆ 1 ಲಕ್ಷ ಅಧಿಕಾರಿ ಮತ್ತು ಸಿಬ್ಬಂದಿ ಇದ್ದಾರೆ. ದೊಡ್ಡ ಇಲಾಖೆ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗವಾಗಿರುವುದರಿಂದ ಭ್ರಷ್ಟಾಚಾರ, ಕರ್ತವ್ಯಲೋಪ ಆರೋಪ ಜಾಸ್ತಿ. ಹೀಗಾಗಿ ಅಮಾನತುಗೊಳ್ಳುವ ಅಧಿಕಾರಿ, ಸಿಬ್ಬಂದಿ ಪ್ರಮಾಣವೂ ಹೆಚ್ಚಿದೆ.
ಸುಪ್ರೀಂ ತೀರ್ಪಿನಲ್ಲೂ ಉಲ್ಲೇಖ: ಸುಖಾಸುಮ್ಮನೆ ಅಮಾನತು ಆದೇಶ ಮುಂದುವರಿಸುವುದರಿಂದ ಸರ್ಕಾರಕ್ಕೆ ಅನಗತ್ಯ ಆರ್ಥಿಕ ಹೊರೆಯಾಗುತ್ತದೆ ಎಂದು ಸುಪ್ರೀಂಕೋರ್ಟ್ ಸಹ ಹೇಳಿದೆ. ಆಜಯ್ ಕುಮಾರ್ ಚೌಧರಿ ಪ್ರಕರಣದ ತೀರ್ಪಿನಲ್ಲಿ ಅಮಾನತ್ತು ಆದೇಶಗಳನ್ನು ಸಕ್ಷಮ ಪ್ರಾಧಿಕಾರಗಳು ಪ್ರತಿ 3 ತಿಂಗಳಿಗೊಮ್ಮೆ ಪರಮಾಶಿಸುವುದು ಕಡ್ಡಾಯ ಎಂದು ಹೇಳಿದೆ. ಅಲ್ಲದೆ ಕೆಎಸ್ಪಿ (ಡಿಪಿ) ನಿಯಮ 1965/89 ಮತ್ತು 2021 ತಿದ್ದುಪಡಿನಿಯಮ 5(6)ರಲ್ಲಿ ಮತ್ತು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10ರಲ್ಲೂ ಅಮಾನತು ಪ್ರಕ್ರಿಯೆಯ ಬಗ್ಗೆ ಸ್ಪಷ್ಟವಾಗಿದೆ.
ಸರ್ಕಾರದ ಆದೇಶವೇನು?
ಅಮಾನತಿನಲ್ಲಿಟ್ಟ ಪ್ರಕರಣಗಳಲ್ಲಿ ಕಡ್ಡಾಯವಾಗಿ 3 ತಿಂಗಳೊಳಗೆ ಇಲಾಖಾ ವಿಚಾರಣೆ ಮುಗಿಸಲು ದೋಷಾರೋಪಣಾ ಪಟ್ಟಿ ಸಲ್ಲಿಸಬೇಕು.
ಕ್ರಿಮಿನಲ್ ಪ್ರಕರಣಗಳಲ್ಲಿ ತುರ್ತಾಗಿ ತನಿಖೆ ಮುಗಿಸಿ, 3 ರಿಂದ 4 ತಿಂಗಳೊಳಗೆ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಬೇಕು.
ದೋಷಾರೋಪಣಾ ಪಟ್ಟಿ ಜಾರಿ ಮತ್ತು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ ತಕ್ಷಣ ಅಮಾನತು ಆದೇಶ ತೆರವಿಗೆ ಕಡ್ಡಾಯವಾಗಿ ಕ್ರಮ ವಹಿಸಬೇಕು.
ಸಸ್ಪೆಂಡ್ ತೆರವು ನಂತರ ಆ ಅಧಿಕಾರಿ ಯನ್ನು ಘಟನೆ ನಡೆದ ಸ್ಥಳ/ಹುದ್ದೆ ಮತ್ತು ಕಾರ್ಯಕಾರಿ ಹುದ್ದೆಗಳಿಗೆ ನೇಮಿಸುವಂತಿಲ್ಲ.
ತನಿಖೆ ಹಾಗೂ ವಿಚಾರಣೆಯಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲದಿರುವಂತಹ ಕಾರ್ಯಕಾರಿಯೇತರ ಹುದ್ದೆಗೆ ನಿಯುಕ್ತಿ ಗೊಳಿಸಬೇಕು.
ಏನೆಲ್ಲ ಅನುಕೂಲ?
ಅಮಾನತು ಅವಧಿಯಲ್ಲಿ ಅರ್ಧ ವೇತನ ಕೊಡಲಾತ್ತದೆ. ಜತೆಗೆ ಆರೋಪಮುಕ್ತವಾದರೆ ಪೂರ್ಣ ವೇತನ ಕೊಡುವುದರಿಂದ ಆರ್ಥಿಕ ಹೊರೆ. ಅದು ತಪ್ಪುತ್ತದೆ.
ಕಡಿಮೆ ಅವಧಿಯಲ್ಲೇ ಅಮಾನತು ತೆರವುಗೊಂಡರೆ ಸಾಮಾಜಿಕ ನಿಂದನೆ ಹಾಗೂ ಮಾನಸಿಕ ಹಿಂಸೆಯಿಂದ ಅಧಿಕಾರಿ ಹೊರಬರುತ್ತಾರೆ.
ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಉಳಿದಿವೆ. ಅಮಾನತು ಶೀಘ್ರ ತೆರವಿನಿಂದ ಸಾರ್ವಜನಿಕ ಸೇವೆ ಲಭ್ಯ.